ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

Source: SOnews | By Staff Correspondent | Published on 26th March 2024, 6:06 PM | Coastal News |

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿದ್ದೇವೆ. ಈಗ ಐದು ಗ್ಯಾರಂಟಿ ಜಾರಿಗೆ ತಂದು ತೋರಿಸಿದ್ದೇವೆ. ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮವರೇ ಪ್ರಧಾನಿ, ಕೆನರಾ ಲೋಕಾಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಂತ್ರಿಯಾಗುತ್ತಾರೆ ಎಂದು ರಾಜ್ಯ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಸಚಿವ ಮಾಂಕಾಳ್ ವೈದ್ಯ ಹೇಳಿದರು.

ಅವರು ಮಂಗಳವಾರ ಭಟ್ಕಳದ ಅರ್ಬನ್ ಬ್ಯಾಂಕ್ ನಲ್ಲಿರುವ ಹಫಿಝ್ಕಾ ಸಭಾಂಗಣದಲ್ಲಿ ಉ.ಕ.ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು.

ನಾವು ನಮ್ಮ ಸಾಧನೆ ಹಾಗೂ ಕೆಲಸಗಳನ್ನು ಮುಂದಿಟ್ಟುಕೊಂಡು ಮತವನ್ನು ಕೇಳುತ್ತೇವೆ. ಆದರೆ ಬಿಜೆಪಿಯವರು ಹಾಗಲ್ಲ. ಅವರು ಸುಳ್ಳನ್ನು ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ಬೇಡಾಗಿದ್ದನ್ನು ಮಾಡಿಕೊಳ್ಳುತ್ತ, ಬೇಡಾಗಿದ್ದನ್ನು ಆಡಿಕೊಳ್ಳುತ್ತ ಉ.ಕ. ಜಿಲ್ಲೆಯನ್ನು ಎಲ್ಲಿಗೆ ತಲುಪಿಸಿದ್ದಾರೆ ಎನ್ನುವುದು ಗೊತ್ತಿದೆ. ನಮ್ಮಲ್ಲಿ ಅನೇಕಾರು ಸಮಸ್ಯೆಗಳಿವೆ.ಇದಕ್ಕೆ ಪರಿಹಾರ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಮಾತ್ರ ಸಾಧ್ಯ ಎಂದರು.

15 ಲಕ್ಷ 92 ಸಾವಿರ ಮತಗಳು ಕೆನರಾ ಲೋಕಸಭಾ ಕ್ಷೇತ್ರದಲ್ಲಿವೆ. 20 ವರ್ಷಗಳ ಕಾಲ ನಮ್ಮ ಪಕ್ಷವನ್ನು ಈ ಕ್ಷೇತ್ರದಲ್ಲಿ ಕಳೆದುಕೊಂಡಿದ್ದೇವೆ. ಖಾನಾಪುರದಲ್ಲಿ ಕಾಂಗ್ರೆಸ್ಸಿನಿಂದ ಗೆದ್ದಿದ್ದು ಡಾ. ಅಂಜಲಿ ಅವರೇ ಮೊದಲಿಗರು. ಮಹಿಳೆಯರಿಗೆ 60 ಬೆಡ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಖಾನಾಪುರದಲ್ಲಿ ಆರಂಭಿಸಿದ್ದು ಡಾ.ಅಂಜಲಿ ಅವರ ಸಾಧನೆ ಇದೆ. ನನಗೆ ಒಂದು ಲಕ್ಷ ಮತ ನೀಡಿದ್ದೀರಿ. ಅದರಂತೆ ಈ ಬಾರಿ ಲೋಕಸಭೆಗೂ ಅತ್ಯಧಿಕ‌ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಗ್ಯಾರೆಂಟಿ ಕಾರ್ಡ ತೋರಿಸಿ ಲಕ್ಷ ಮತ ನೀಡಿದ್ದಾರೆ. ಈಗ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಗ್ಯಾರೆಂಟಿ ಯೋಜನೆ ಹಣಗಳು ಜನರ ಮನೆಗೆ ತಲುಪಿಸಿದ್ದೇವೆ. ಇದು ನಮ್ಮ ಸಾಧನೆ. ನನಗೆ ನನ್ನ ಕ್ಷೇತ್ರದ ಜನರ ಮೇಲೆ ನಂಬಿಕೆ ಇದೆ ಎಂದರು.

ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಮಾತನಾಡಿ, ‘ ನಿಮ್ಮ ಧ್ವನಿಗೆ ನಾನು ಕೆಲಸ ಮಾಡಲು ಸಿದ್ದರಿದ್ದೇನೆ. ಸಂವಿಧಾನವನ್ನು ದೇಶ ಕೊಟ್ಟು ಜನರು ಸುಭದ್ರವಾಗಿರುವಂತೆ ಕಾಂಗ್ರೆಸ್ ಪಕ್ಷ ಮಾಡಿದೆ. ಬಿಜೆಪಿ ಸರಕಾರ ಎಲ್ಲಾ ಸುಳ್ಳು ಭರವಸೆಯಲ್ಲಿಯೇ ಕಾಲ ಕಳೆದಿದೆ. 10 ವರ್ಷದಲ್ಲಿ ಯಾವುದೇ ಭರವಸೆ ಜಾರಿಗೆ ಬಂದಿಲ್ಲ ಎಂದರು. ಮನ ಕೀ ಬಾತ್ ನಲ್ಲಿ ಮನೆಯಲ್ಲಿ ಎ.ಸಿ. ರೂಮ್ ನಲ್ಲಿ ಕುಳಿತು ಜನರನ್ನು ಮೋಸ ಮಾಡುತ್ತಿದ್ದ ಬಿಜೆಪಿ ಅವರ ವಿರುದ್ದ ಈ ಬಾರಿ ಚುನಾವಣಾ ಎದುರಿಸಬೇಕಿದೆ. ಜನರಿಗೆ ಅನ್ಯಾಯವೆಸಗಿದ ಮೋಸದ ಜನರ ವಿರುದ್ದ ದೇಶವನ್ನು ರಕ್ಷಿಸುವ ನ್ಯಾಯ ಕೊಡಿಸುವವರ ಕಾಂಗ್ರೆಸ್ ಪಕ್ಷದ ಚುನಾವಣೆ ಆಗಿದೆ. ಬೂತ್ ಮಟ್ಟದಲ್ಲಿ ನಮ್ಮ ಸರ್ಕಾರ ತಂದಿರುವ 5 ಗ್ಯಾರಂಟಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರೆ ಸಾಕು ನಾವು ಸುಲಭವಾಗಿ ಗೆಲ್ಲುತ್ತೇವೆ ಎಂಬ ಭರವಸೆ ನಮಗೆ ಇದೆ ಎಂದರು.

ಕಳೆದ 10 ವರ್ಷದಿಂದ ಬಿಜೆಪಿ ಸರ್ಕಾರ ಜೀರೋ ಬ್ಯಾಲೆನ್ಸ್ ಖಾತೆ ಮಾಡಿ ಪ್ರತಿ ಒಬ್ಬರಿಗೆ 15 ಸಾವಿರ ಖಾತೆಗೆ ಜಮಾ ಮಾಡುತ್ತೇವೆ ಎಂದು ಸುಳ್ಳು ಭರವಸೆ ಕೊಟ್ಟು ಜನರಿಗೆ ಮೋಸ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಈ ರೀತಿ ಸುಳ್ಳು ಭರವಸೆ ಯಾರಿಗೂ ನೀಡಿಲ್ಲ. ಮುಂದೆ ಸಹ ನೀಡುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರ ಬಂದ ಮೇಲೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಯಾರಿಗೂ ಉದ್ಯೋಗ ದೊರೆತಿಲ್ಲ ಎಂದು ಡಾ. ಅಂಜಲಿ ನಿಂಬಾಳ್ಕರ ಹೇಳಿದರು.

ಕೆ‌.ಪಿ.ಸಿ.ಸಿ. ಶಿಸ್ತು ಸಮಿತಿ ಸಂಚಾಲಕ ನಿವೇದಿತ್ ಆಳ್ವಾ ಮಾತನಾಡಿ ‘ದೇಶದಲ್ಲಿ ಸದ್ಯ 10 ವರ್ಷದಿಂದ ನಡೆಯುತ್ತಿರುವ ವಿಚಾರಗಳನ್ನು ಗಮನಿಸಿ. ಚುನಾವಣೆಯಲ್ಲಿ ಬಿಜೆಪಿ ಪಕ್ಷ ನೀಡಿದ ಆಶ್ವಾಸನೆಗಳೆಲ್ಲವೂ 10 ವರ್ಷ ಆದರೂ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅಂಜಲಿ ಅವರಿಗೆ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸದ ಬಗ್ಗೆ ಅರಿವಿದೆ. ಈ ಬಾರಿ 30 ದಿನ ಪ್ರಚಾರಕ್ಕೆ ಅವಕಾಶವನ್ನು ಪಕ್ಷ ನೀಡಿದೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದಾಗಿದೆ. ಬಿಜೆಪಿಯಲ್ಲಿ ಮಾತು ಜಾಸ್ತಿ ಆಡಿದವರಿಗೆ ಈ ಬಾರಿ ಟಿಕೆಟ್ ನೀಡದೇ ಕೆಳಗಿಸಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಚುನಾವಣೆಯ ತಯಾರಿಗೆ ಯಾವೆಲ್ಲ ರೀತಿ ಸಿದ್ದರಾಗಬೇಕು ಎಂಬ ಮಾರ್ಗದರ್ಶನ ನಮ್ಮ ಉಸ್ತುವಾರಿ ಸಚಿವರಿಂದ ಹಾಗೂ ಹಿರಿಯರಿಂದ ಸಿಗಲಿದೆ. ನಮ್ಮ ಲೋಕಸಭಾ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿ‌ದ್ದಾರೆ. ಜನಪರ ಚಿಂತನೆಯುಳ್ಳವರಾಗಿದ್ದಾರೆ. ಖಾನಾಪುರದ ಮೂಲದವರಾದ ಡಾ.ಅಂಜಲಿ ನಿಂಬಾಳ್ಕರ್ ನಮ್ಮ ಕೆನರಾ ಕ್ಷೇತ್ರದವರಾಗಿದ್ದು ನಮ್ಮ ಸೌಭಾಗ್ಯ ಎಂದರು.

ವೇದಿಕೆಯಲ್ಲಿ ನಾಮಧಾರಿ ಸಮಾಜದ ಹಿರಿಯ ಮುಖಂಡ ಎಲ್.ಎಸ್.ನಾಯ್ಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರಾಮಾ ಮೋಗೇರ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಅಲ್ಬರ್ಟ ಡಿಕೋಸ್ತಾ,  ಮುಖಂಡರಾದ ಅಬ್ದುಲ್ ರವೂಫ್ ನಾಯ್ತೆ, ಹಿರಿಯ ಮುಖಂಡ ವೆಂಕಟಯ್ಯ ಬೈರುಮನೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ
ಆರ್.ಎಚ್. ನಾಯ್ಕ ಉಪಸ್ಥಿತರಿದ್ದರು.

Read These Next