ಭಟ್ಕಳ: ಮಾವಳ್ಳಿ2 ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಸಭೆಗೆ 12 ಸದಸ್ಯರು ಹಾಜರು ; ಹುದ್ದೆಯಿಂದ ಕೆಳಗಿಳಿದ ಮಹೇಶ

Source: S O News | By I.G. Bhatkali | Published on 12th January 2023, 6:26 PM | Coastal News |

ಭಟ್ಕಳ: ಕಳೆದ 2020ರಲ್ಲಿ ಹೆಚ್ಚಿನ ಕಾಂಗ್ರೆಸ್ ಪರ ಸದಸ್ಯರ ಬೆಂಬಲವನ್ನು ಪಡೆದು ಮಾವಳ್ಳಿ2 ಗ್ರಾಮ ಪಂಚಾಯತ ಅಧ್ಯಕ್ಷ ಹುದ್ದೆಗೆ ಏರಿದ್ದ ಬಿಜೆಪಿ ಬೆಂಬಲಿತ ಮಹೇಶ ನಾಯ್ಕ, ಅಧ್ಯಕ್ಷ ಹುದ್ದೆಯ ಅವಧಿ ಮುಗಿಯಲು 7 ತಿಂಗಳು ಬಾಕಿ ಇರುವಾಗಲೇ ಹುದ್ದೆಯಿಂದ ನಿರ್ಗಮಿಸಿದ್ದಾರೆ. 

ಬುಧವಾರ ನಿಗದಿಯಾಗಿದ್ದ ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾದ ಕಾಂಗ್ರೆಸ್ ಬೆಂಬಲಿತ ಮಾದೇವಿ ಮಾದೇವ ನಾಯ್ಕ, ಸುಧಾ ಗೋವಿಂದ ಗೊಂಡ, ಅನುರಾಧಾ ಅಶೋಕ ಡಿಕೋಸ್ತಾ, ಮಮತಾ ಮಾದೇವ ನಾಯ್ಕ, ರವಿ ಕನ್ನ ಹರಿಕಾಂತ, ಬಿಜೆಪಿ ಬೆಂಬಲಿತರಾದ ಪಂಚಾಯತ ಉಪಾಧ್ಯಕ್ಷೆ ನಾಗರತ್ನಾ ಮೊಗೇರ, ಸದಸ್ಯರಾದ ಅನಂತ ಶನಿಯಾರ ನಾಯ್ಕ, ಕಮಲಾ ಸೀತಾರಾಮ ದೇವಡಿಗ, ಉದಯ ಸುರೇಂದ್ರ ನಾಯಕ, ಶ್ರೀಧರ ಜಟ್ಟ ನಾಯ್ಕ, ರಾಘವೇಂದ್ರ ಮಾದೇವ ನಾಯ್ಕ, ರಾಘವೇಂದ್ರ ಗೋಯ್ದಪ್ಪ ನಾಯ್ಕ ಹಾಜರಾಗಿ ಅವಿಶ್ವಾಸ ಪರ ಮತ ಚಲಾಯಿಸಿದರು.

ಅಧ್ಯಕ್ಷ ಮಹೇಶ ನಾಯ್ಕ ಹಾಗೂ ಅವರ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾದ ಕಾಂಗ್ರೆಸ್ ಬೆಂಬಲಿತ ಪಂಚಾಯತ ಸದಸ್ಯೆ ನಾಗರತ್ನಾ ಪಡಿಯಾರ, ಹೆಲನ್, ಬಿಜೆಪಿ ಬೆಂಬಲಿತ ದುರ್ಗಿ ನಾಯ್ಕ, ಕಿರಣ ನಾಯ್ಕ ಸಭೆಗೆ ಹಾಜರಾಗಲಿಲ್ಲ.

ಒಟ್ಟೂ 17 ಸದಸ್ಯ ಬಲದ ಪಂಚಾಯತನಲ್ಲಿ ಅವಿಶ್ವಾಸ ನಿರ್ಣಯ ಯಶಸ್ವಿಯಾಗಲು ಮೂರನೇ 2ರಷ್ಟು ಅಂದರೆ ಕನಿಷ್ಠ 12 ಸದಸ್ಯರ ಬೆಂಬಲ ಅಗತ್ಯ ಇತ್ತು. ಕಳೆದ ಒಂದು ತಿಂಗಳ ಹಿಂದಿನಿಂದಲೇ 12 ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಅಧ್ಯಕ್ಷ ಮಹೇಶ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಸತತ ಪ್ರಯತ್ನ ನಡೆಸಿದ್ದ ವಿರೋಧಿ ಬಣ ಕೊನೆಗೂ ಹಠ ಸಾಧಿಸಿ ಬಿಟ್ಟಿದೆ.

ಸಹಾಯಕ ಆಯುಕ್ತೆ ಮಮತಾದೇವಿ ಬುಧವಾರ ನಡೆದ ಅವಿಶ್ವಾಸ ನಿರ್ಣಯ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತ ಅಭಿವೃದ್ಧಿ ಅಧಿಕಾರಿ ಕುಮಾರ ನಾಯ್ಕ, ಕಾರ್ಯದರ್ಶಿ ಮಾರುತಿ ದೇವಡಿಗ ಉಪಸ್ಥಿತರಿದ್ದರು. ಡಿವಾಯ್‍ಎಸ್ಪಿ ಶ್ರೀಕಾಂತ, ಸಿಪಿಐ ಮಹಾಬಲೇಶ್ವರ ನಾಯ್ಕ ನೇತೃತ್ವದಲ್ಲಿ ಪಂಚಾಯತ ಕಚೇರಿಯ ಸುತ್ತ ಬಿಗಿಯಾದ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. 

ಕಾಂಗ್ರೆಸ್, ಬಿಜೆಪಿ ಸಂಭ್ರಮ :
ಮಾವಳ್ಳಿ2 ಗ್ರಾಮ ಪಂಚಾಯತ ಅಧ್ಯಕ್ಷ, ಶಾಸಕ ಸುನಿಲ್ ನಾಯ್ಕ ಆಪ್ತ ಮಹೇಶ ನಾಯ್ಕ ವಿರುದ್ಧ ಅವಿಶ್ವಾಸ ನಿರ್ಣಯ ಯಶಸ್ವಿಯಾಗುತ್ತಿದ್ದಂತೆಯೇ ಪಂಚಾಯತ ಕಚೇರಿಯ ಹೊರಗೆ, ಕೆಲ ಬಿಜೆಪಿ ಮುಖಂಡರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮುಖಂಡರಾದ ಗೋಪಾಲ ನಾಯ್ಕ, ರಾಜು ನಾಯ್ಕ, ತಿಮ್ಮಪ್ಪ ನಾಯ್ಕ, ಸಂದೀಪ ನಾಯ್ಕ, ಚಂದ್ರಕಾಂತ ನಾಯ್ಕ, ನಾಗಪ್ಪ ನಾಯ್ಕ, ಸತೀಶ ನಾಯ್ಕ, ನಾಗೇಶ ನಾಯ್ಕ, ಗಜು ನಾಯ್ಕ, ಭಟ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಬಿಜೆಪಿ ಮುಖಂಡರಾದ ಮಂಜಪ್ಪ ನಾಯ್ಕ, ಶಶಿಕಾಂತ ನಾಯ್ಕ, ವೆಂಕಟೇಶ ನಾಯ್ಕ ಮತ್ತಿತರರು ಸ್ಥಳದಲ್ಲಿ ಉಪಸ್ಥಿತರಿದ್ದು, ಅವಿಶ್ವಾಸ ನಿರ್ಣಯ ಪರ ಸದಸ್ಯರಿಗೆ ಶುಭಾಶಯ ಕೋರಿದರು. 

 ಪಕ್ಷದೊಳಗಿನ ಒಡಕು ಜಗಜ್ಜಾಹೀರು:
ಮಾವಳ್ಳಿ2 ಗ್ರಾಮ ಪಂಚಾಯತ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಎನ್ನುವುದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಒಳಗಿನ ಒಡಕನ್ನು ಬಹಿರಂಗಗೊಳಿಸಿದೆ.  ಕಳೆದ 2020ರಲ್ಲಿ ಕಾಂಗ್ರೆಸ್ ಸದಸ್ಯರ ಬೆಂಬಲವನ್ನು ಪಡೆದಿದ್ದಲ್ಲದೇ, ಚೀಟಿ ಎತ್ತುವ ಮೂಲಕ ಅದೃಷ್ಟ ಬಲದಿಂದಲೇ ಅಧ್ಯಕ್ಷ ಹುದ್ದೆಗೆ ಏರಿದ್ದ ಮಹೇಶ ನಾಯ್ಕ, ಕಾಲ ಕಳೆದಂತೆ ಶಾಸಕ ಸುನಿಲ್ ಆಪ್ತ ಬಳಗವನ್ನು ಸೇರಿಕೊಂಡಿದ್ದರು. ಪಂಚಾಯತ ಆಡಳಿತವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಅವರು ಅಂಗಡಿ ಮಳಿಗೆ ಹರಾಜು ವಿಷಯವನ್ನು ಕೈಗೆತ್ತಿಕೊಂಡು ಸುದ್ದಿಯಾಗಿದ್ದರು. ಈ ನಡುವೆ ಪಂಚಾಯತ ಕಾಮಗಾರಿ, ಅಭಿವೃದ್ಧಿ ವಿಷಯದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಎಲ್ಲದಕ್ಕೂ ಉಡಾಫೆ ಮಾಡುತ್ತಾರೆ, ಅಹಂಕಾರದಿಂದ ವರ್ತಿಸುತ್ತಾರೆ ಎನ್ನುವ ಆರೋಪ ಮಹೇಶರನ್ನು ಆವರಿಸಿಕೊಂಡು ಬಿಟ್ಟಿತು.

4-5 ಸದಸ್ಯರ ಹೊರತಾಗಿ ಉಳಿದ ಎಲ್ಲ ಸದಸ್ಯರೂ ಪಕ್ಷಭೇದ ಮರೆತು ಅಧ್ಯಕ್ಷರ ವಿರುದ್ಧ ತಿರುಗಿ ಬಿದ್ದರು. ಹೆಚ್ಚಿನ ಬಿಜೆಪಿ ಬೆಂಬಲಿತ ಪಂಚಾಯತ ಸದಸ್ಯರು ಸ್ಥಳೀಯ ಮುಖಂಡ ಮಂಜಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಮುಂದಾದರು. ಇದಕ್ಕೆ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.

ಶಾಸಕ ಸುನಿಲ್ ನಾಯ್ಕ ತೆರೆಮರೆಯಲ್ಲಿ ಅವಿಶ್ವಾಸ ನಿರ್ಣಯ ಯಶಸ್ವಿಯಾಗದಂತೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಿದರಾದರೂ ಫಲ ನೀಡಲಿಲ್ಲ. ಇದು ಅವರಿಗೆ ಆದ ಹಿನ್ನೆಡೆ ಎಂದೇ ತರ್ಕಿಸಲಾಗುತ್ತಿದೆ. ಅಂತೂ ಎಲ್ಲರೂ ಒಟ್ಟಾಗಿ ಅಧ್ಯಕ್ಷರನ್ನು ಹುದ್ದೆಯಿಂದ ಕೆಳಗಿಳಿಸಲು ಯಶಸ್ವಿಯಾಗಿದ್ದಾರೆ. ಇತ್ತ ಕಾಂಗ್ರೆಸ್ ಬೆಂಬಲಿತ ಇಬ್ಬರು ಪಂಚಾಯತ ಸದಸ್ಯರು ಅಧ್ಯಕ್ಷ ಮಹೇಶ ನಾಯ್ಕ ಪರ ಬೆಂಬಲಕ್ಕೆ ನಿಂತಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿತು. ಕೊನೆ ಗಳಿಗೆಯಲ್ಲಿಯೂ ಆ ಇಬ್ಬರು ಸದಸ್ಯರು ಸಭೆಗೆ ಹಾಜರಾಗದೇ ಕಾಂಗ್ರೆಸ್ ಒಳಗೂ ಸಣ್ಣ ರಂಧ್ರ ಬಿದ್ದಿರುವುದನ್ನು ಎತ್ತಿ ತೋರಿಸಿದರು! 
 

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...