ಕರ್ನಾಟಕ ಗೋಹತ್ಯೆ ತಡೆ ಕಾಯ್ದೆ; ಅನಧಿಕೃತ ವ್ಯಕ್ತಿ ಮಾಂಸದ ಮಾದರಿ ಸಂಗ್ರಹಿಸಿದರೆ ಅದಕ್ಕೆ ಮಾನ್ಯತೆಯಿಲ್ಲ: ಸುಪ್ರೀಂ ಕೋರ್ಟ್

Source: Vb | By I.G. Bhatkali | Published on 6th March 2024, 7:59 AM | National News |

ಹೊಸದಿಲ್ಲಿ: ಅನಧಿಕೃತ ಅಧಿಕಾರಿಯು ಮಾಂಸದ ಮಾದರಿಯನ್ನು ಸಂಗ್ರಹಿಸಿದ್ದಾಗ ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯ್ದೆ, 1964ರಡಿ ಪ್ರಕರಣವು ಸಮರ್ಥನೀಯವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಅಭಯ ಎಸ್.ಓಕಾ ಮತ್ತು ಉಜ್ವಲ್ ಭುಯಾನ್ ಅವರ ಪೀಠವು, ಅನಧಿಕೃತ ಅಧಿಕಾರಿ ಮಾಂಸದ ಮಾದರಿಯನ್ನು ವಶಪಡಿಸಿಕೊಂಡಿದ್ದರಿಂದ ಕರ್ನಾಟಕ ಗೋಹತ್ಯೆ ಕಾಯ್ದೆಯಡಿ ದಾಖಲಾಗಿದ್ದ ಎಫ್‌ಐಆರ್ ನ್ನು ರದ್ದುಗೊಳಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.

ಮಾಹಿತಿದಾರರು ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ್ದರು.ಅಧಿಕೃತ ವ್ಯಕ್ತಿಯ ಅಧಿಕಾರವು ಸ್ಥಳಕ್ಕೆ ಪ್ರವೇಶ ಮತ್ತು ಪರಿಶೀಲನೆಗೆ ಸೀಮಿತವಾಗಿದೆ. ಆದರೆ ಈ ಪ್ರಕರಣದಲ್ಲಿ ಅಧಿಕೃತ ವ್ಯಕ್ತಿಯಾದ ಸಹಾಯಕ ನಿರ್ದೇಶಕರು ಮಾಂಸದ ಮಾದರಿಯನ್ನು ಸಂಗ್ರಹಿಸಿದ್ದು ಮಾತ್ರವಲ್ಲ,ಅದನ್ನು ವಿಶ್ಲೇಷಣೆಗೂ ಕಳುಹಿಸಿದ್ದರು. ಹಾಗೆ ಮಾಡಲು ಅವರಿಗೆ ಕಾನೂನಿನಡಿ ಯಾವುದೇ ಅಧಿಕಾರವಿಲ್ಲ. ಮಾಂಸದ ಮಾದರಿಯನ್ನು ಸಂಗ್ರಹಿಸುವ ಮುನ್ನ ಅವರು ಒಂದರಿಂದ ಮೂರನೇ ಪ್ರತಿವಾದಿಗಳಿಗೆ ನೋಟಿಸನ್ನು ಕಳುಹಿಸಿರಲಿಲ್ಲ. ಮುಖ್ಯವಾಗಿ ಮಾಂಸದ ಮಾದರಿಯನ್ನು ಪೊಲೀಸ್‌ ಅಧಿಕಾರಿ ವಶಪಡಿಸಿಕೊಂಡಿರಲಿಲ್ಲ ಮತ್ತು ಆ ಕಾರ್ಯವನ್ನು ಸಹಾಯಕ ನಿರ್ದೇಶಕರು ಮಾಡಿದ್ದರು. ಕಾಯ್ದೆಯಡಿ ಸಹಾಯಕ ನಿರ್ದೇಶಕರು ಅಧಿಕೃತ ವ್ಯಕ್ತಿ ಎಂದು ಭಾವಿಸಿದರೂ ಅವರಿಗೆ ಮಾಂಸದ ಮಾದರಿಯನ್ನು ವಶಪಡಿಸಿಕೊಳ್ಳುವ ಯಾವುದೇ ಅಧಿಕಾರವಿಲ್ಲ. ಹೀಗಾಗಿ ಸಹಾಯಕ ನಿರ್ದೇಶಕರು ಮಾಂಸದ ಮಾದರಿಯನ್ನು ಸಂಗ್ರಹಿಸಿದ್ದು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಉಚ್ಚ ನ್ಯಾಯಾಲಯವು ಎಫ್‌ಐಆರ್‌ನ್ನು ರದ್ದುಗೊಳಿಸಿದ್ದು ಸರಿಯಾಗಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿರುವ ಪೀಠವು ಮೇಲ್ಮನವಿಯನ್ನು ವಜಾಗೊಳಿಸಿದೆ.

ಗೌರವ ಪಶು ಕಲ್ಯಾಣ ಅಧಿಕಾರಿ ಎಂದು ಹೇಳಿಕೊಂಡಿದ್ದ ಮೇಲ್ಮನವಿದಾರರು ಪ್ರತಿವಾದಿಗಳ ಗೋದಾಮಿನಲ್ಲಿ ಗೋಮಾಂಸ ಅಕ್ರಮ ದಾಸ್ತಾನಿನ ಕುರಿತು ಪಶು ವೈದ್ಯಕೀಯ ಮತ್ತು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಕೋಲ್ಡ್ ಸ್ಟೋರೇಜ್‌ ನಿಂದ ಸಂಗ್ರಹಿಸಲಾಗಿದ್ದ ಮಾದರಿಯನ್ನು ಡಿಎನ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಗೋಮಾಂಸ ಎನ್ನುವುದನ್ನು ಪರೀಕ್ಷಾ ವರದಿಯು ದೃಢಪಡಿಸಿತ್ತು ಎಂದು ಮೇಲ್ಮನವಿದಾರರು ಸರ್ವೋಚ್ಚ ನ್ಯಾಯಾಲಯದಲ್ಲಿ ವಾದಿಸಿದ್ದರು.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...