ಜಿಲ್ಲೆಯಲ್ಲಿ ಹೆಚ್ಚುವರಿ ಮತಗಟ್ಟೆಗಳಿಲ್ಲ: ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

Source: SOnews | By Staff Correspondent | Published on 12th March 2024, 7:31 PM | Coastal News |

ಕಾರವಾರ: ಬಾರಿಯ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ 1435 ಮತಗಟ್ಟೆಗಳ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಹೆಚ್ಚುವರಿ ಮತಗಟ್ಟೆಗಳನ್ನು ಮಾಡುವ ಅವಶ್ಯಕತೆ ಕಂಡು ಬಂದಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ , ಜಿಲ್ಲೆಯ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 1435 ಮತ್ತು ಕಿತ್ತೂರು ಮತ್ತು ಖಾನಾಪುರ ಮತಕ್ಷೇತ್ರಗಳಲ್ಲಿ 542 ಸೇರಿದಂತೆ ಒಟ್ಟು 1977 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಒಟ್ಟು 16,22,857 ಮತದಾರರಿದ್ದಾರೆ. ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ಕೂಡಲೇ ರಾಜಕೀಯ ಪಕ್ಷಗಳ ಸಭೆ ಕರೆದು ನಾಮಪತ್ರದ ಜೊತೆಗೆ ಸಲ್ಲಿಸಬೇಕಾದ ದಾಖಲಾತಿಗಳ ಬಗ್ಗೆ ಚುನಾವಣಾ ಆಯೋಗ ನೀಡುವ ನಿರ್ದೇಶನಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು ಎಂದರು.

ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೂತ್ ಲೆವೆಲ್ ಏಜೆಂಟ್ ಗಳನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಚುನಾವಣಾ ಆಯೋಗ ಹೊರಡಿಸುವ ಎಲ್ಲಾ ನಿರ್ದೇಶನಗಳನ್ನು ತಮಗೆ ಕಾಲ ಕಾಲಕ್ಕೆ ತಿಳಿಸುವ ಮೂಲಕ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದ್ದು, ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಾಜಪೂತ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಾಯಿ ಗಾಂವಕರ್, ಉಪಾಧ್ಯಕ್ಷ ಶಂಭು ಶೆಟ್ಟಿ, ಬಿ.ಜೆ.ಪಿ. ಪಕ್ಷದ ಕಾರ್ಯದರ್ಶಿ ಸಂದೇಶ್ ಶೇಟ್ ಉಪಸ್ಥಿತರಿದ್ದರು.

Read These Next