ನೂತನ ಸಂಸತ್ ಭವನದ ಲೋಕಾರ್ಪಣೆ

Source: Vb | By I.G. Bhatkali | Published on 29th May 2023, 4:28 PM | National News |

ಹೊಸದಿಲ್ಲಿ: ವಿರೋಧ ಪಕ್ಷಗಳ ಟೀಕೆ, ಬಹಿಷ್ಕಾರಗಳ ನಡುವೆ ನೂತನ ಸಂಸತ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿಯವರು ವೈದಿಕ ವಿಧಿವಿಧಾನಗಳ ಜೊತೆಗೆ ರವಿವಾರ ಇಲ್ಲಿ ಉದ್ಘಾಟಿಸಿದರು.

ಬೆಳಗ್ಗೆ ಸಾಂಪ್ರದಾಯಿಕ ಉಡುಪಿನಲ್ಲಿ ಗೇಟ್ ನಂ.1ರ ಮೂಲಕ ಸಂಸತ್ ಆವರಣವನ್ನು ಪ್ರವೇಶಿಸಿದ ಮೋದಿಯವರನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸ್ವಾಗತಿಸಿದರು.

20 ಪ್ರತಿಪಕ್ಷಗಳಿಂದ ಬಹಿಷ್ಕಾರ: ಸುಮಾರು 25 ರಾಜಕೀಯ ಪಕ್ಷಗಳು ಸಮಾರಂ 'ಭದಲ್ಲಿ ಪಾಲ್ಗೊಂಡಿದ್ದವು. ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದೌಪದಿ ಮುರ್ಮು ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸೇರಿದಂತೆ ಸುಮಾರು 20 ಪ್ರತಿಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿದ್ದವು.

ಕರ್ನಾಟಕದ ಶೃಂಗೇರಿ ಮಠದ ಪುರೋಹಿತರ ವೇದಘೋಷಗಳ ನಡುವೆ ದೈವಿಕ ಆಶೀರ್ವಾದಗಳನ್ನು ಪಡೆದುಕೊಳ್ಳಲು ಮೋದಿ 'ಗಣಪತಿ ಹೋಮ'ವನ್ನು ನೆರವೇರಿಸಿದರು. 'ಸೆಂಗೊಲ್'ನ ಮುಂದೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿದ ಮೋದಿ ಪವಿತ್ರ ರಾಜದಂಡವನ್ನು ಕೈಯಲ್ಲಿ ಹಿಡಿದುಕೊಂಡು ತಮಿಳುನಾಡಿನ ವಿವಿಧ ಅಧೀನಗಳ ಪ್ರಧಾನ ಅರ್ಚಕರಿಂದ ಆಶೀರ್ವಾದಗಳನ್ನು ಪಡೆದುಕೊಂಡರು. ನಂತರ ಮೋದಿ ನಾದಸ್ವರ ಮತ್ತು ವೇದಮಂತ್ರಗಳ ಪಠಣಗಳ ನಡುವೆ 'ಸೆಂಗೊಲ್'ನ್ನು ಮೆರವಣಿಗೆಯಲ್ಲಿ ನೂತನ ಸಂಸತ್ ಭವನಕ್ಕೆ ಕೊಂಡೊಯ್ದರು ಮತ್ತು ಲೋಕಸಭಾ ಚೇಂಬರ್‌ನಲ್ಲಿ ಸ್ಪೀಕರ್‌ ಪೀಠದ ಬಲಗಡೆಯ ವಿಶೇಷ ಆವರಣದಲ್ಲಿ ಅದನ್ನು ಸ್ಥಾಪಿಸಿದರು.

ನೂತನ ಸಂಸತ್ ಕಟ್ಟಡದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಕೆಲವು ಕಾರ್ಮಿಕರಿಗೆ ಪ್ರಧಾನಿ ಶಾಲುಗಳನ್ನು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಟಾಟಾ ಪ್ರಾಜೆಕ್ಟ್ ಲಿ.ನಿಂದ ನಿರ್ಮಾಣಗೊಂಡಿರುವ ನೂತನ ಸಂಸತ್ ಕಟ್ಟಡವು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯ ಸಂವಿಧಾನ ಸಭಾಂಗಣ, ಸಂಸದರಿಗಾಗಿ ವಿಶ್ರಾಂತಿ ಸ್ಥಳ, ಗ್ರಂಥಾಲಯ,ಬಹು ಸಮಿತಿ ಕೊಠಡಿಗಳು, ಊಟದ ಸ್ಥಳ ಮತ್ತು ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶವನ್ನು ಹೊಂದಿದೆ.

ತ್ರಿಕೋನಾಕಾರದ ನಾಲ್ಕಂತಸ್ತುಗಳ ಕಟ್ಟಡವು 64,500 ಚ.ಮೀ. ವಿಸ್ತೀರ್ಣವನ್ನು ಹೊಂದಿದೆ. ಜ್ಞಾನ ದ್ವಾರ,ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಹೀಗೆ ಮೂರು ಮುಖ್ಯ ಪ್ರವೇಶ ದ್ವಾರಗಳನ್ನು ಕಟ್ಟಡವು ಹೊಂದಿದೆ.ಮೋದಿಯವರು 2020,ಡಿ.10ರಂದು ನೂತನ ಸಂಸತ್ ಕಟ್ಟಡಕ್ಕೆ ಶಿಲಾನ್ಯಾಸವನ್ನು ನೆರವೇರಿಸಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...