ನೀಟ್ ಪರೀಕ್ಷಾವಂಚನೆ ಜಾಲ ಬಯಲಿಗೆ; ಅಸಲಿ ಅಭ್ಯರ್ಥಿಗಳ ಬದಲಿಗೆ ನಕಲಿ ವ್ಯಕ್ತಿಗಳಿಂದ ಪರೀಕ್ಷೆ ಬರೆಸಿದ ವಂಚಕ ಜಾಲ; 8 ಮಂದಿಯ ಬಂಧನ

Source: Vb | By I.G. Bhatkali | Published on 20th July 2022, 10:03 AM | National News |

ಹೊಸದಿಲ್ಲಿ: ವೈದ್ಯಕೀಯ ಶಿಕ್ಷಣದ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸುವ ವಂಚಕ ಜಾಲವೊಂದನ್ನು ಭೇದಿಸಿರುವುದಾಗಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸೋಮವಾರ ಘೋಷಿಸಿದೆ.

ವಿವಿಧ ರಾಜ್ಯಗಳಲ್ಲಿ ಸಕ್ರಿಯವಾಗಿರುವ ಈ ಜಾಲವು ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳಲ್ಲಿ ಅಪೇಕ್ಷಿತರಿಗೆ ಸೀಟುಗಳನ್ನು ದೊರಕಿಸಿಕೊಡುವ ಆಮಿಷವೊಡ್ಡಿ ಲಕ್ಷಾಂತರ ರೂ.ಗಳನ್ನು ವಸೂಲಿ ಮಾಡುತ್ತಿತ್ತು. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಸಿಬಿಐ ಅಧಿಕಾರಿಗಳು ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ ಹಾಗೂ ಹರ್ಯಾಣ ರಾಜ್ಯಗಳಲ್ಲಿ ವ್ಯಾಪಿಸಿದ್ದ ಈ ವಂಚಕ ಜಾಲವುಡ್‌ ಜನಪ್ರಿಯ ಬಾಲಿವುಡ್ ಚಿತ್ರ ಮುನ್ನಾಭಾಯಿ ಎಂಬಿಬಿಎಸ್‌ನಲ್ಲಿ ತೋರಿಸಲಾದ ಮಾದರಿಯಲ್ಲಿ ಕಾರ್ಯಾಚರಿಸುತ್ತಿತ್ತು. ನೀಟ್ ಅಭ್ಯರ್ಥಿಗಳಿಂದ ಭಾರೀ ಮೊತ್ತದ ಹಣವನ್ನು ಪಡೆದು, ಅವರ ಹೆಸರಿನಲ್ಲಿ ನಕಲಿ ವಿದ್ಯಾರ್ಥಿಗಳಿಂದ ಪರೀಕ್ಷೆಯನ್ನು ಬರೆಸಲಾಗುತ್ತಿತ್ತು.

ಈ ಜಾಲವು ಪ್ರತಿ ಸೀಟಿಗೂ 20 ಲಕ್ಷ ರೂ. ಹಣವನ್ನು ವಸೂಲಿ ಮಾಡುತ್ತಿತ್ತು. ಇದರಲ್ಲಿ 5 ಲಕ್ಷ ರೂ.ಗಳನ್ನು, ಅಸಲಿ ವಿದ್ಯಾರ್ಥಿಯ ಹೆಸರಿನಲ್ಲಿ ಪರೀಕ್ಷೆ ಬರೆದ ನಕಲಿ ವ್ಯಕ್ತಿಗೆ ನೀಡುತ್ತಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ. ಉಳಿದ ಹಣವನ್ನು ಮಧ್ಯವರ್ತಿಗಳು ಹಾಗೂ ಇತರರರೊಂದಿಗೆ ಹಂಚಿಕೊಳ್ಳಲಾಗುತ್ತಿತ್ತು.

ಈ ಹಗರಣಕ್ಕೆ ಸಂಬಂಧಿಸಿ ಸೋಮವಾರ ಸಿಬಿಐ ದಿಲ್ಲಿಯಲ್ಲಿ ಎಂಟು ಮಂದಿಯನ್ನು ಬಂಧಿಸಿತ್ತು. ಅವರಲ್ಲಿ ಆರು ಮಂದಿ ನೀಟ್ ಪ್ರಶ್ನಾಪತ್ರಿಕೆಗಳಿಗೆ ಉತ್ತರಿಸಿದ ನಕಲಿ ಅಭ್ಯರ್ಥಿಗಳಾಗಿದ್ದರು. ಈ ಜಾಲದ ಸೂತ್ರಧಾರಿಗಳಲ್ಲೊಬ್ಬನಾದ ದಿಲ್ಲಿಯ ಸಪ್ಪರ್‌ಜಂಗ್‌ ಪ್ರದೇಶದ ನಿವಾಸಿ ಸುಶೀಲ್ ರಂಜನ್, ಪ್ರಶ್ನಾಪತ್ರಿಕೆಗಳಿಗೆ ಉತ್ತರ ಬರೆಯುವ ನಕಲಿ ಅಭ್ಯರ್ಥಿಗಳನ್ನು ನಿಯೋಜಿಸುತ್ತಿದ್ದ ಮತ್ತು ಇದಕ್ಕಾಗಿ ಅಸಲಿ ಅಭ್ಯರ್ಥಿಗಳಿಂದ ಹಣವನ್ನು ಪಡೆದುಕೊಳ್ಳುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ, ಅಸಲಿ ಅಭ್ಯರ್ಥಿಗಳನ್ನೂ ವಿಚಾರಣೆಯನ್ನು ನಡೆಸುತ್ತಿದೆ. ಈ ಹಗರಣದಲ್ಲಿ ನೀಟ್ ಪರೀಕ್ಷಾ ಕೋಚಿಂಗ್ ಸಂಸ್ಥೆಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆಯೆಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...