ಆರ್.ಎನ್.ಎಸ್. ನಿಧನ; ಅನಾಥವಾಗಿರುವ ಮುರುಡೇಶ್ವರ

Source: sonews | By Staff Correspondent | Published on 17th December 2020, 6:16 PM | Coastal News | Special Report |

ಭಟ್ಕಳ: ನವ ಮುರ್ಡೇಶ್ವರದ ನಿರ್ಮಾತೃ ತಮ್ಮ ವಿಶಿಷ್ಟ ಸಾಧನೆಯಿಂದಾಗಿ ವಿಶ್ವದಲ್ಲಿಯೇ ಗುರುತಿಸಿಕೊಂಡಿರುವ ರಾಮನಾಗಪ್ಪ ಶೆಟ್ಟಿ (ಡಾ. ಆರ್. ಎನ್. ಶೆಟ್ಟಿ) ಗುರುವಾರ ನಸುಕಿನ ವೇಳೆ ಹೃದಯಾಘಾತದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿದನರಾಗಿದ್ದಾರೆ.    

ಮೃತರು ಪತ್ನಿ ಇಬ್ಬರು ಪುತ್ರಿಯರು, ಮೂವರು ಪುತ್ರರು ಹಾಗೂ ಅಪಾಯ ಬಂಧು, ಬಳಗವನ್ನು ಅಗಲಿದ್ದಾರೆ. 

ಮುರ್ಡೇಶ್ವರ ದೇವಸ್ಥಾನವನ್ನು ಅಮರ ಶಿಲ್ಪಿಯಂತೆ 1978ರಿಂದಲೂ ಕಟ್ಟಿದ್ದ ಅವರು ಇಂದು ಮುರ್ಡೇಶ್ವರ ಕ್ಷೇತ್ರವನ್ನು ವಿಶ್ವಕ್ಕೆ ಪರಿಚಯಿಸುವುದರೊಂದಿಗೆ ತಾವೂ ಕೂಡಾ ವಿಶ್ವದ ಗಮನ ಸೆಳೆಯುವ ವ್ಯಕ್ತಿಯಾಗಿ ಬೆಳೆದರು. 

ಇವರ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದ್ದು ಇವರ ಸಾಧನೆಗೊಂದು ಸಾಕ್ಷಿಯಾಗಿದೆ. ಆರ್. ಎನ್. ಶೆಟ್ಟಿಯವರು ಉಧ್ಯಮಿಯಾಗಿ, ದಾನಿಯಾಗಿ, ದೈವ ಭಕ್ತನಾಗಿ, ಓರ್ವ ಸಾಧಕನಾಗಿ  ದೇಶ-ವಿದೇಶದಲ್ಲಿ ಚಿರಪರಿಚಿತರಾಗಿದ್ದ ಅವರು ಮುರ್ಡೇಶ್ವರವನ್ನು ಕಟ್ಟಲು ಆರಂಭ ಮಾಡಿದ ದಿನಗಳಲ್ಲಿ ಸ್ವತಹ ನಿಂತು ಯಾವುದು ಹೇಗೆ ಎನ್ನುವುದನ್ನು ಸ್ವತಹ ಇಂಜಿನಿಯರ್‍ಗಳಿಗೆ ಬೆರಗಾಗುವ ರೀತಿಯಲ್ಲಿ ವಿವರಿಸುತ್ತಿದ್ದ ಇವರು ಎಲ್ಲಾ ರಂಗದಲ್ಲಿಯೂ ಎತ್ತಿದ ಕೈ ಎನಿಸಿಕೊಂಡು ತಮ್ಮ ವಿಶಿಷ್ಟ ಸಾಧನೆಯಿಂದ ಪ್ರಪಂಚಕ್ಕೇ ಪರಿಚಿತರಾದರು. 

ಆರ್. ಎನ್. ಶೆಟ್ಟಿಯವರ ನಿದನದಿಂದ ಉತ್ತರ ಕನ್ನಡ ಜಿಲ್ಲೆಯು ಓರ್ವ ಮುತ್ಸದ್ಧಿಯನ್ನು ಕಳೆದುಕೊಂಡಂತಾಗಿದೆ. 

ಕರ್ಮಯೋಗಿಯನ್ನು ಕಳೆದುಕೊಂಡ ಕರ್ನಾಟಕ:  ಕರ್ಮಯೋಗಿ ಮುರ್ಡೇಶ್ವರದ ನಿರ್ಮಾತೃ ಆರ್. ಎನ್. ಶೆಟ್ಟಿಯವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಶತಮಾನದ ಮೇರು ವೃಕ್ತಿ, ಶ್ರಮ ಜೀವಿ ಶೂನ್ಯದಿಂದ  ಎನನ್ನಾದರೂ ಸೃಷ್ಟಿಸುವ ಶಕ್ತಿಯನ್ನು ಹೊಂದಿದ್ದ ಶೆಟ್ಟಿಯವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಮಾವಳ್ಳಿ ಗ್ರಾಮದ ಮುರ್ಡೇಶ್ವರದಲ್ಲಿ 1928ರ ಅಗಸ್ಟ್ 15ರಂದು ಬಡ ಕುಟುಂಬವೊಂದರಲ್ಲಿ  ಜನಿಸಿದರು. ಚಿಕ್ಕಂದಿನಿಂದ ಬಡವರು, ದೀನ ದಲಿತರ ಕುರಿತು ಅತ್ಯಂತ ಪ್ರೀತಿ, ಕಾಳಜಿ ಹೊಂದಿದ್ದ ಅವರು ದಿನಕ್ಕೆ 18 ತಾಸು ದುಡಿಯುತ್ತಾ ಕಾಯಕವೇ ಕೈಲಾಸ ಎಂದು ನಂಬಿ ದುಡಿದು ವಿಶ್ವ ಮಟ್ಟಕ್ಕೆ ಬೆಳೆದವರು. ಅನೇಕ ಉದ್ಧಿಮೆಗಳನ್ನು ಸ್ಥಾಪಿಸಿ, ಸಾವಿರಾರು ಜನರಿಗೆ ಉದ್ಯೋಗ ನೀಡಿದರು. ಮುರ್ಡೇಶ್ವರ ದೇವಸ್ಥಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ಅವರು ಉತ್ತರ ಕನ್ನಡ ಜಿಲ್ಲೆಯನ್ನು ಪ್ರವಾಸೋದ್ಯಮ ಜಿಲ್ಲೆಯನ್ನಾಗಿಲು ನೀಡಿದ ಕೊಡುಗೆ ಅಪಾರವಾದದ್ದು. ರೈತ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಲ್ಲೇ ದುಡಿಮೆಗೆ ಗಮನ ಹರಿಸಿದರು. ಗುತ್ತಿಗೆದಾರರಾಗಿ ದುಡಿಮೆ ಆರಂಭಿಸಿ ಪಡೆದ ಲಾಭಾಂಶದಲ್ಲಿ ಶೇ.60ರಷ್ಟನ್ನು ದಾನ, ಧರ್ಮಕ್ಕೆ ವೆಚ್ಚ ಮಾಡುತ್ತಾ ಬಂದ ಅವರು ಧಾರ್ಮಿಕ ಶೃದ್ಧೆಯನ್ನು ಹೊಂದಿದವರು. ಶಿರಸಿಯಿಂದ ತಮ್ಮ ಗುತ್ತಿಗೆದಾರ ವೃತ್ತಿಯನ್ನು ಆರಂಭಿಸಿದ ಆರ್.ಎನ್.ಎಸ್. ನೀಲೆಕಣಿಯಲ್ಲಿ ಮನೆ ಮಾಡಿದ್ದರು. ಆಧಾರ ಕಾರ್ಡಿನ ಜನ್ಮದಾತ ಇನ್ಫೊಸಿಸ್ ಮುಖ್ಯಸ್ಥ ನಂದನ ನಿಲೇಕಣಿಯ ತಂದೆಯವರು ಅಂದು ಇವರ ಜೊತೆಗಿದ್ದರು. ಅಂದು ಅವರು ನಿರ್ಮಿಸಿದ್ದ ಸೇತುವೆಗಳು ಇಂದಿಗೂ ಗಟ್ಟಿಯಾಗಿ ನಿಂತಿವೆ ಎಂದರೆ ಅವರ ಸಿವಿಲ್ ಜ್ಞಾನಕ್ಕೆ ಒಂದು ಉದಾಹರಣೆ. ಆರ್.ಎನ್.ಶೆಟ್ಟಿಯವರು ಮಾಡಿದ ಪ್ರತಿಯೊಂದು ಕೆಲಸಗಳೂ ಕೂಡಾ ಉತ್ತಮ ಗುಣಮಟ್ಟದ್ದಾಗಿರುವುದಲ್ಲದೇ ನಿಗದಿತ ಅವಧಿಯೊಳಗೆ ಕೆಲಸ ಮಾಡಿ ಮುಗಿಸುವುದು ಅವರ ಕಾರ್ಯಶೃದ್ದೆಗೆ ಸಾಕ್ಷಿ.  ರಾಜ್ಯದ ಎರಡನೇ ರಾಜಧಾನಿಯಾದ ಹುಬ್ಬಳ್ಳಿಗೆ ಹೊರಟ ಅವರು 1961ರಲ್ಲಿ ಆರ್.ಎನ್.ಶೆಟ್ಟಿ ಮತ್ತು ಕಂಪನಿ ಸ್ಥಾಪಿಸಿದರು. ರಾಜ್ಯದಲ್ಲಿ ಆರಂಭವಾದ ನೀರಾವರಿ ಯೋಜನೆಗಳ ಗುತ್ತಿಗೆ ಪಡದ ಅವರು ಆಣೆಕಟ್ಟು, ನೀರಾವರಿ ಯೋಜನೆ, ಹೀಗೆ ನವಕರ್ನಾಟಕದ ನಿರ್ಮಾಣಕ್ಕೆ ಸರ್ಕಾರದ ಯೋಜನೆಗೆ ಸಹಕಾರಿಯಾದರು.  ರಾಜ್ಯದಲ್ಲಿ ದೊಡ್ಡದಾದ ನೀರಾವರಿ ಯೋಜನೆ ಅಪ್ಪರ್ ಭದ್ರಾ ನೀರಾವರಿ ಯೋಜನೆ ಪ್ರೋಜೆಕ್ಟ್, ಅಪ್ಪರ್ ಕೃಷ್ಣಾ, ಲಿಂಗನಮಕ್ಕಿ ಆಣೆಕಟ್ಟು, ವಾರಾಹಿ ಭೂಗತ ಜಲವಿದ್ಯುತ್ ಯೋಜನೆ, ಶರಾವತಿ ಟೇಲ್‍ರೇಸ್ ಆಣೆಕಟ್ಟುಗಳನ್ನು ಕಂಪನಿ ನಿರ್ಮಿಸಿದ್ದ ರಾಜ್ಯದಲ್ಲಿ ದಾಖಲೆಯಾಯಿತು. 

ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಪಡೆದುಕೊಂಡ ಕಂಪನಿ ಪಣಜಿ-ಮಂಗಳೂರು, ಧಾರವಾಡ-ಬೆಳಗಾಂ ಹೈವೆ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿತು. ಕಟ್ಟಡ ನಿರ್ಮಾಣ ಆರಂಭಿಸಿ ಬೆಳಗಾವಿ ಕೆ.ಎಲ್.ಇ. ಆಸ್ಪತ್ರೆ, ಬೆಂಗಳೂರಿನ ತಾಜ್ ಹೋಟೇಲ್ ನಿರ್ಮಿಸಿತು. ಕೊಂಕಣ ರೇಲ್ವೆ ಆರಂಭವಾದಾಗ ತುಂಬ ಕಠಿಣವಾದ 18 ಸುರಂಗಗಳನ್ನು ನಿಗದಿತ ಸಮಯಕ್ಕೆ ಮುಗಿಸಿಕೊಟ್ಟ ಕೀರ್ತಿ ಕಂಪೆನಿಯದು. ನಾರಾಯಣಪುರ ಆಣೆಕಟ್ಟಿನಿಂದ ಹೊರಬರುವ ನೀರನ್ನು ಬಳಸಿಕೊಂಡು ಮುರ್ಡೇಶ್ವರ ಪವರ್ ಪ್ರೊಜೆಕ್ಟ್‍ನ್ನು ಸ್ವಂತವಾಗಿ ಆರಂಭಿಸಿ 12 ಮೆಗಾ ವ್ಯಾಟ್ ವಿದ್ಯುತ್‍ನ್ನು ಸರ್ಕಾರಕ್ಕೆ ಕೊಡತೊಡಗಿತು. ರಾಜ್ಯದಲ್ಲಿ ವಿದ್ಯುತ್ ಅಭಾವವನ್ನು ಮನಗಂಡು ಗದಗನಲ್ಲಿ ಆರ್.ಎನ್.ಎಸ್. ಗಾಳಿ ವಿದ್ಯುತ್ ಯೋಜನೆ ಮತ್ತು ಪಾವಗಡದಲ್ಲಿ ಆರ್.ಎನ್.ಎಸ್. ಸೌರಶಕ್ತಿ ವಿದ್ಯುತ್ ಯೋಜನೆ ಆರಂಭಿಸಿತು. 1977ರಲ್ಲಿ ಹೊಟೇಲ್ ಉದ್ಯಮ ಆರಂಭಿಸಿ ಹುಬ್ಬಳ್ಳಿಯಲ್ಲಿ ನವೀನ್ ಹೊಟೇಲ್, ಮುರ್ಡೇಶ್ವರದಲ್ಲಿ ಆರ್.ಎನ್.ಎಸ್. ರೆಸಿಡೆನ್ಸಿ, ಮತ್ತು ಆರ್.ಎನ್.ಎಸ್. ಗಾಲ್ಫ್ ಹೊಟೇಲ್ ಆರಂಭಿಸಿದರು.  

ತಮ್ಮ ಚಿತ್ತವನ್ನು ಶಿಕ್ಷಣದತ್ತ ಹೊರಳಿಸಿದ ಶೆಟ್ಟರು ಆರ್.ಎನ್.ಎಸ್. ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ, ಉನ್ನತ ಶಿಕ್ಷಣ ಸಮಾಜಕ್ಕೆ ದೊರೆಯುವಂತಹ ಪ್ರತಿಷ್ಠಿತ ಗುಣಮಟ್ಟದ ಸಂಸ್ಥೆಯನ್ನು ಕಟ್ಟಿದರು. ಈ ಮಧ್ಯೆ ಬೆಂಗಳೂರಿನಲ್ಲಿ ಆರ್.ಎನ್.ಎಸ್. ಸಮೂಹ ಸಂಸ್ಥೆಗಳ ಮುಖ್ಯ ಕಛೇರಿ ಆರಂಭವಾಯಿತು. ಆರ್.ಎನ್.ಎಸ್. ಹೆಸರಿನಲ್ಲಿ ಇಂಜಿನಿಯರಿಂಗ್ ಕಾಲೇಜು, ಪಿಯು ಕಾಲೇಜು, ಆರ್ಕಿಟೆಕ್ಚರ್ ಕಾಲೇಜು, ಪದವಿ ಕಾಲೇಜುಗಳು ರಾಷ್ಟ್ರ ಮಟ್ಟದ ಶಿಕ್ಷಣ ಸಂಸ್ಥೆಗಳಾಗಿ ಬೆಳೆದು ಉನ್ನತ ಶಿಕ್ಷಣ ನೀಡುತ್ತಿವೆ. ಶಿಕ್ಷಣ ಸಂಸ್ಥೆಯ ಆಸುಪಾಸಿನಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಿಸಲು ದೇವಾಲಯಗಳನ್ನು ನಿರ್ಮಿಸಿದರು. 

ತನ್ನ ಊರಿಗಾಗಿ, ಆರಾಧ್ಯ ದೈವ ಮುರ್ಡೇಶ್ವರನಿಗಾಗಿ ಸಮಗ್ರ ಮುರ್ಡೇಶ್ವರದ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರು. ಸ್ವತಃ ನಿಂತು ಸ್ವಂತ ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚಮಾಡಿದರು. ನಾಡಿನಲ್ಲಿ ಉದ್ಯಮಿಗಳಾಗಿ ಶ್ರೀಮಂತರಾದವರು ಸಾಕಷ್ಟು ಜನರಿದ್ದಾರೆ, ಆದರೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ ಶಿಕ್ಷಣ, ಪ್ರವಾಸೋದ್ಯಮ, ಮೊದಲಾದ ಯೋಜನೆಗಳಿಗೆ ಸ್ವಂತ ಹಣವನ್ನು ಬಳಸಿ, ನಾಡಿಗೆ ಕೊಡುಗೆಯಾದವರು ಇನ್ನೊಬ್ಬರಿಲ್ಲ. ಇನ್ನು ನೂರಾರು ವರ್ಷ ಕಳೆದರೂ ಆರ್.ಎನ್.ಎಸ್. ಹೆಸರು ಜನಮನದಲ್ಲಿ ಚಿರಸ್ಥಾಯಿಯಾಗಿರುವಂತಹ ಕೊಡುಗೆಗಳನ್ನು ಅವರು ನೀಡಿದ್ದಾರೆ.

1978ರ ಸುಮಾರು ಮುರ್ಡೇಶ್ವರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ತೊಡಗಿಕೊಂಡ ಅವರು ಮದ್ರಾಸಿನಿಂದ ಎಸ್.ಕೆ.ಆಚಾರಿ ಎಂಬ ಪ್ರಸಿದ್ಧ ಶಿಲ್ಪಿಯನ್ನು ಕರೆಸಿ ಮುರ್ಡೇಶ್ವರ ದೇವಸ್ಥಾನವನ್ನು ಸಂಪೂರ್ಣ ಶಿಲಾಮಯ ದೇವಾಲಯವನ್ನಾಗಿಸಿದರು. ಮುರ್ಡೇಶ್ವರ ಹಂಚಿನ ಕಾರ್ಖಾನೆ, ಆರ್.ಎನ್.ಎಸ್. ಪಾಲಿಟೆಕ್ನಿಕ್, ಆರಂಭಿಸಿದರು. ಜಿಲ್ಲೆಯ ಜನರ ಆರೋಗ್ಯದ ಕುರಿತು ಕಾಳಜಿ ತೋರುತ್ತಿದ್ದ ಅವರು ಆರ್.ಎನ್.ಎಸ್. ಆಸ್ಪತ್ರೆಯನ್ನು ಆರಂಭಿಸಿದರು.  

ಮುರ್ಡೇಶ್ವರ ಅವರಿಗೆ ಖ್ಯಾತಿ ತಂದಿದ್ದರಿಂದ ಮತ್ತಷ್ಟು ದೈವೀಕ ಕಾರ್ಯಗಳನ್ನು ಮಾಡಿದ ಅವರು ನಾಡಿನಲ್ಲೇ ಅತಿ ಎತ್ತರದ ಈಶ್ವರ ಮೂರ್ತಿಯನ್ನು ಪ್ರತಿಷ್ಠಾಪಿದರು. ಹೆಸರಾಂತ ಸಿಮೆಂಟ್ ಶಿಲ್ಪಿ ಕಾಶಿನಾಥ 123 ಅಡಿ ಎತ್ತರದ ಪದ್ಮಾಸನಾರೂಢ ಶಿವನನ್ನು ರಚಿಸಿದರು. ಬಲಗೈ ವರದ ಹಸ್ತ, ತ್ರಿಶೂಲ, ಢಮರು, ರುದ್ರಾಕ್ಷಿಧಾರಿ, ಸರ್ಪ ಕೊರಳಲ್ಲಿ ಸುತ್ತಿದ ಮಂದಸ್ಮಿತ ಶಿವನ ಜಟೆಯಿಂದ ಗಂಗೆ ಜಿಗಿದು ಭಕ್ತರಿಗೆ ರೋಮಾಂಚನವಾಯಿತು. ಪಕ್ಕದಲ್ಲಿಯೇ ಶನೀಶ್ವರ ಹಾಗೂ ರಾಮೇಶ್ವರ ದೇವಾಲಯಗಳನ್ನು ನಿರ್ಮಿಸಿದರು. 

 

ದೇಶದಲ್ಲಿ ಅಪರೂಪವಾದ 249 ಅಡಿ ರಾಜಗೋಪುರವನ್ನು ಮುರ್ಡೇಶ್ವರಕ್ಕೆ ಆರ್.ಎನ್. ಶೆಟ್ಟಿಯವರು ಸಮರ್ಪಿಸಿದ್ದಾರೆ. ದೇವರಿಗೆ ಚಿನ್ನದ ಸಕಲ ಆಭರಣ, ಧ್ವಜಸ್ತಂಭಕ್ಕೆ ಚಿನ್ನದ ಲೇಪನ, ಉತ್ಸವ ಮೂರ್ತಿಗೆ ಚಿನ್ನದ ರಥ ಹೀಗೆ ಮುರ್ಡೇಶ್ವರ ಭಕ್ತರ ಮತ್ತು ಪ್ರವಾಸಿಗರ ಪಾಲಿಗೆ ಪಾವನ ಕ್ಷೇತ್ರವನ್ನಾಗಿಸಿದ್ದಾರೆ. ಭಕ್ತರಿಗಾಗಿ ವಸತಿಗೃಹ, ಹವಾನಿಯಂತ್ರಿತ ಪ್ರಸಾದಭೊಜನ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗಾಗಿ ಎರಡು ಕಲ್ಯಾಣ ಮಂಟಪಗಳನ್ನು ನಿರ್ಮಿಸಿದ್ದಾರೆ.  ತಾವು ಕಲಿತ ಪ್ರಾಥಮಿಕ ಶಾಲೆಗೆ ನೂತನ ಭವ್ಯ ಕಟ್ಟಡ ನಿರ್ಮಿಸಿಕೊಟ್ಟ ಅವರ ಶಿಕ್ಷಣ ಪ್ರೇಮ ಅಪಾರವಾದದ್ದು. 

ನಿತ್ಯ 40-50 ಸಾವಿರ ಭಕ್ತರು ಬರುವ ಮುರ್ಡೇಶ್ವರಕ್ಕೆ ಕುಡಿಯುವ ನೀರಿನ ಅಭಾವ ಉಂಟಾದಾಗ 35 ಕಿಲೋ ಮೀಟರ್ ದೂರದಿಂದ 3 ಕೋಟಿ ರೂಪಾಯಿ ಸರ್ಕಾರದ ನೆರವು ಮತ್ತು 1 ಕೋಟಿ ರೂಪಾಯಿ ಆರ್.ಎನ್.ಎಸ್. ಟ್ರಸ್ಟ್ ನೆರವು ಸೇರಿಸಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಶರಾವತಿಯಿಂದ ಕುಡಿಯುವ ನೀರನ್ನು ತರಲಾಯಿತು. 

ಮುರ್ಡೇಶ್ವರ ಅಭಿವೃದ್ಧಿಯಾಗುತ್ತಿದ್ದಂತೆ ದೇಶದ ಗಣ್ಯರೆಲ್ಲಾ ಬಂದು ನೋಡಿ ಆರ್.ಎನ್.ಶೆಟ್ಟಿಯವರನ್ನು ಅಭಿನಂದಿಸಿದ್ದಾರೆ. ರವಿಶಂಕರ ಗುರೂಜಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಹಲವು ಬಾರಿ ಬಂದಿದ್ದಾರೆ. ಸ್ವರ್ಣವಲ್ಲಿ, ರಾಮಚಂದ್ರಾಪುರ ಮಠದ ಹಿಂದಿನ ಮತ್ತು ಇಂದಿನ ಶ್ರೀಗಳು, ಪರ್ತಗಾಳಿ ಶ್ರೀಗಳು, ಶೃಂಗೇರಿಯ ಹಿಂದಿನ, ಇಂದಿನ ಶ್ರೀಗಳು, ಚಿತ್ರಾಪುರ ಶ್ರೀಗಳು, ಪೇಜಾವರ ಶ್ರೀಗಳು, ಸಿದ್ಧಗಂಗಾ ಸ್ವಾಮಿಗಳು, ಸಿದ್ಧರಾಮ ಸ್ವಾಮಿಗಳು, ಬಾಲಗಂಗಾಧರನಾಥ ಸ್ವಾಮಿಗಳು, ಕಾಂಚಿ ಜಯೇಂದ್ರ ಸರಸ್ವತಿ ಸ್ವಾಮಿಗಳು, ಆನಂದ ಗುರೂಜಿ, ರಾಷ್ಟ್ರೀಯ ಧುರೀಣರಾದ ಎಲ್.ಕೆ. ಅಡ್ವಾಣಿ, ಮಾರ್ಗರೇಟ್ ಆಳ್ವಾ, ದೇವರಾಜ ಅರಸು, ಗುಂಡುರಾವ್, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ರತನ್ ಟಾಟಾ, ನಾರಾಯಣ ಮೂರ್ತಿ, ನ್ಯಾ. ವೆಂಕಟಾಚಲಯ್ಯ, ವಿಜಯ ಮಲ್ಯಾ, ನ್ಯಾ. ಸಂತೋಷ ಹೆಗಡೆ, ಗುರುರಾಜ್ ದೇಶಪಾಂಡೆ, ಬಿ.ಆರ್. ಶೆಟ್ಟಿ ದುಬೈ ಹೀಗೆ ಅಸಂಖ್ಯ ಗಣ್ಯರು ಮುರ್ಡೇಶ್ವರವನ್ನು ಕಂಡು ಸಂತೋಷಪಟ್ಟಿದ್ದಾರೆ. 

ಆರ್.ಎನ್.ಶೆಟ್ಟಿಯವರ ಸಾಧನೆಯನ್ನು ಶಿಖರವನ್ನು ನೋಡಿದ ಬೆಂಗಳೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅನೇಕ ಉತ್ತಮ ಕಾರ್ಯಗಳಿಂದ ಅವರ ಹೆಸರು ಅಜರಾಮರವಾಗಿ ಉಳಿದಿದೆ. 

 

 


 

Read These Next

ಕಾರವಾರ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೂಚನೆ

ಮುಂದಿನ ಎರಡು ವರ್ಷದೊಳಗಾಗಿ ಜಿಲ್ಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದ್ದು, ...

ಭಟ್ಕಳ: ತೆವಳುತ್ತಲೇ ಸಾಗಿದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಉದ್ಘಾಟನೆ ಮುಗಿದರೂ ಕೆಲಸ ಮುಗಿಯಲೇ ಇಲ್ಲ

ಯಾವುದೇ ದೇಶ, ರಾಜ್ಯ ಆಗಿರಲಿ, ಸುಸಜ್ಜಿತ ರಸ್ತೆ ಎನ್ನುವುದು ಅಭಿವೃದ್ಧಿಯ ಸಂಕೇತವಾಗಿದೆ. ಅದರಲ್ಲಿಯೂ ಹೆದ್ದಾರಿಗಳು ಆಧುನಿಕತೆಯ ...

ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ

ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ...

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು

ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ...

ರಾಜ್ಯದಲ್ಲಿ ಕೊರೊನಾ, ಲಸಿಕೆ ಪೂರೈಕೆ ಸಂಕಟದ ನಡುವೆ ಡಯಾಲಿಸೀಸ್ ರೋಗಿಗಳಿಗೂ ಆತಂಕ ತಂದ ಸರಕಾರ; ಸೇವೆಯಿಂದ ಹಿಂದೆ ಸರಿಯಲು ಬಿ.ಆರ್.ಶೆಟ್ಟಿ ಫೌಂಡೇಶನ್ ನಿರ್ಧಾರ

ಸರಿಯಾದ ಪೂರ್ವ ತಯಾರಿ, ವ್ಯವಸ್ಥಿತ ಕಾರ್ಯಯೋಜನೆ ಇಲ್ಲದೇ ಕೊರೊನಾ ಸೋಂಕು ನಿಯಂತ್ರಣ, ಲಸಿಕೆ ಪೂರೈಕೆ ಕೆಲಸ ಕಾರ್ಯಗಳ ನಡುವೆ ಬಿದ್ದು ...