ಮುಂಡಗೋಡ: ಕೆರೆಯಲ್ಲಿ ಬೈಕ್ ಸಹಿತ ಮೆಹಬೂಬಲಿ ಶವ ಪತ್ತೆ ಪ್ರಕರಣ; ಅನೈತಿಕ ಸಂಬಂಧ ಬೆಸೆದ ಬಡ್ಡಿ ದಂಧೆ; 2 ಕೊಲೆಗೈದು ಕೆರೆಗೆಸೆದ ಮೂವರ ಬಂಧನ

Source: S O News | By I.G. Bhatkali | Published on 3rd January 2022, 8:34 AM | Coastal News |

ಮುಂಡಗೋಡ: ತಾಲೂಕಿನ ಹನುಮಾಪೂರ್  ರಸ್ತೆಯ ಕಲ್ಲೊಳ್ಳಿ ಸೇತುವೆ ಬಳಿ ಡಿಸೆಂಬರ 31 ರಂದು ಕೆರೆಯಲ್ಲಿ ಬೈಕ್ ಸಹಿತ ವ್ಯಕ್ತಿಯ ಶವ ಪತ್ತೆಯಾದ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಇದೊಂದು ಯೋಜಿತ ಕೊಲೆ ಎನ್ನುವುದು ಬೆಳಕಿಗೆ ಬಂದಿದೆ.

ಪಟ್ಟಣದ ನೆಹರುನಗರ ನಿವಾಸಿ ಮೆಹಬೂಬಲಿ ಜಮಖಂಡಿಯ ಶವ ಕೆರೆಯಲ್ಲಿ ಪತ್ತೆಯಾದ ಪ್ರಕರಣದ ಕ್ಷಿಪ್ರ ತನಿಖೆಗೆ ಇಳಿದ ಪೊಲೀಸರು ಅಲ್ಪ ಸಮಯದಲ್ಲಿಯೇ ಕೊಲೆ ಆರೋಪದ ಮೇಲೆ ಸಹೋದರರಿಬ್ಬರನ್ನು ಹಾಗೂ ಮಹಿಳೆಯೊಬ್ಬಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಹನುಮಾಪುರ ರಸ್ತೆಯ ಕಲ್ಲೊಳ್ಳಿ ಸೇತುವೆಯ ಕೆರೆಯಲ್ಲಿ ಬುಲೆಟ್ ಬೈಕ್ ಸಮೇತ ಮೃತ ಸ್ಥಿತಿಯಲ್ಲಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಮೆಹಬೂಬಲಿ ಶವ ಪತ್ತೆಯಾಗಿತ್ತು. ಮುಂಡಗೋಡ ಪೊಲೀಸ್ ಇನ್ ಪೆಕ್ಟರ್ ಸಿದ್ದಪ್ಪ ಸಿಮಾನಿ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಪಡೆದು, ತಕ್ಷಣ ಕಾರ್ಯಪ್ರವೃತ್ತರಾಗಿ ಕೊಲೆ ಆರೋಪಿಗಳಾದ, ತಾಲೂಕಿನ ಲಕ್ಕೊಳ್ಳಿಯ ಇಬ್ರಾಹಿಂ ಮಹಮ್ಮದ್ ಸಾಬ ಶಿಗ್ಗಾಂವಿ ಮತ್ತು ಆತನ ಅಣ್ಣ ಶರೀಫ್ ಮಹಮ್ಮದ್ ಸಾಬ ಶಿಗ್ಗಾಂವಿ ಹಾಗೂ ನಾಜಿಯಾ ಕೋಂ ಇಬ್ರಾಹಿಂ ಶಿಗ್ಗಾಂವಿ ಇವರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಪ್ರಕರಣ ಭೇದಿಸಿದ ತಂಡದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್‌ಐ ಬಸವರಾಜ ಮಬನೂರ, ಪಿಎಸ್‌ಐ ನಿಂಗಪ್ಪ ಜಕ್ಕಣ್ಣವರ್, ಪ್ರೊಬೇಷನರಿ ಪಿಎಸ್‌ಐ ಮಲ್ಲಿಕಾರ್ಜುನ ಸಿಬ್ಬಂದಿಗಳಾದ ಗಣಪತಿ ಹುನ್ನಳ್ಳಿ, ಧರ್ಮರಾಜ ನಾಯ್ಕ, ವಿನೋದಕುಮಾರ, ಅರುಣಕುಮಾರ, ಅಣ್ಣಪ್ಪ ಬಡೀಗೇರ, ಶರತ ದೇವಾಳಿ, ರಾಘು ಪಟಗಾರ, ತಿರುಪತಿ ಚೌಡಣ್ಣನವರ್‌, ಮಹೇಶ ಹತ್ತಳ್ಳಿ ಭಾಗವಹಿದ್ದರು.

ಘಟನೆಯ ವಿವರ: ಮೆಹಬೂಬಲಿ ಬಡ್ಡಿ 
ವ್ಯವಹಾರ ಸ್ಥನಾಗಿದ್ದನಲ್ಲದೆ ಚೀಟಿ ವ್ಯವಹಾರ ನಡೆಸುತ್ತಿದ್ದ. ಹುಬ್ಬಳ್ಳಿಯಲ್ಲಿಯೂ ತನ್ನ ವ್ಯವಹಾರವನ್ನು ಹೊಂದಿದ್ದ ಎನ್ನಲಾಗುತ್ತಿದೆ. ಹೀಗೆ ಚೀಟಿ ವ್ಯವಹಾರದಲ್ಲಿ ಪರಿಚಯವಾದ ಇಬ್ರಾಹಿಂ ಜಮಖಂಡಿಯ ಖಾಸಾ ಮನುಷ್ಯನಾಗಿ ವ್ಯವಹಾರದಲ್ಲಿ ಸಾಥ್ ನೀಡುತ್ತಿದ್ದ ಎನ್ನಲಾಗಿದ್ದು, ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಆರೋಪಿ ಇಬ್ರಾಹಿಂ ತಾಯಿ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಾಗ ಜಮಖಂಡಿಯ ನಾಲೈದು ಚೀಟಿಯ ಹಣವನ್ನು ಆರೋಪಿ ಇಬ್ರಾಹಿಂ ಬಳಸಿಕೊಂಡಿದ್ದು, ನಂತರ ದಿನಗಳಲ್ಲಿ ಹಣ ಮರಳಿ ನೀಡಲು ಸಾಧ್ಯವಾಗದಿದ್ದಾಗ ಜಮ ಖಂಡಿ, ಇಬ್ರಾಹಿಂ ಮನೆಯ ಬಳಿ ಸಾಲ ವಸೂಲಾತಿಗೆ ಬರಲಾರಂಭಿಸಿದ.ಹೀಗೆ ಮತ್ತೆ ವಸೂಲಾತಿಯ ನೆಪದಲ್ಲಿ ಮನೆಯ ಬಳಿ ಬರಲಾರಂಭಿಸಿದ ಜಮ ಖಂಡಿ, ಆರೋಪಿ ಇಬ್ರಾಹಿಂ ಹೆಂಡತಿಯ ಮೇಲೆ ಕಣ್ಣು ಹಾಕಿ ಬಲೆಯಲ್ಲಿ ಬೀಳಿಸಿಕೊಂಡ. ಕೆಲ ದಿನಗಳ ಹಿಂದೆ ಇಬ್ರಾಹಿಂ ತನ್ನ ಹೆಂಡತಿಯ ನಿಜ ರೂಪ ದರ್ಶನಪಡೆದು ಕುಪಿತಗೊಂಡು ಹೇಗಾದರೂ ಜಮಖಂಡಿಯನ್ನು ಮುಗಿಸಿ ಬಿಡುವ ವಿಚಾರಕ್ಕೆ ಬಂದು ಲಕ್ಕೊಳ್ಳಿ ಗ್ರಾಮದ ಹೊರಗಿರುವ ತಮ್ಮ ಮನೆಗೆ ಕರೆಸಿ ಮಾತಿಗೆ ಮಾತು ಬೆಳೆದು ಇಬ್ರಾಹಿಂ ಮತ್ತು ಜಮಖಂಡಿಯ ಜಗಳವಾಗಿ ಇಬ್ರಾಹಿಂ ಸುತ್ತಿಗೆ ಮತ್ತು ಒಲೆ ಊದುವ ಕಬ್ಬಿಣದ ಕೊಳವೆಯಿಂದ ಮಾರಣಾಂತಿಕವಾಗಿ ಹಲ್ಲೆಗೈದಾಗ ಮೆಹಬೂಬಲಿ ಜಮಖಂಡಿ ಸ್ಥಳದಲ್ಲಿಯೇ ಮರಣ ಹೊಂದಿದ.

ಕೊಲೆಗೈದ ಇಬ್ರಾಹಿಂ ನಂತರ ಮುಂಡಗೋಡದಲ್ಲಿರುವ ತನ್ನ ಅಣ್ಣ ಶರೀಫ್ ಶಿಗ್ಗಾಂವ್ ನನ್ನು ಸಂಪರ್ಕಿಸಿ ವಿಷಯವನ್ನು ತಿಳಿಸಿ ತನ್ನ ಮನೆಯಿಂದ ಇಬ್ಬರೂ ಸೇರಿ ಶವವನ್ನು ಮೃತ ಜಮಖಂಡಿಯ ಬೈಕ್ ಮೇಲೆಯೇ ಲಕ್ಕೊಳ್ಳಿಯ ಮನೆಯಿಂದ ಕಲ್ಲೊಳಿಯ ಕೆರೆಯ ಹತ್ತಿರ ಒಯ್ದು ಕೆರೆಯಲ್ಲಿ ಹಾಕಿ ಅಪಘಾತದಲ್ಲಿ ಮೃತಪಟ್ಟಂತೆ ಬಿಂಬಿಸಲು ಪ್ರಯತ್ನಿಸಿದ್ದರು. ಹೀಗೆ ಬಡ್ಡಿ ವ್ಯವಹಾರ ಅನೈತಿ ಸಂಬಂಧಕ್ಕೆ ತಿರುಗಿ ಒಬ್ಬನ ಜೀವ ಹೋಯಿತಲ್ಲದೆ ಇನ್ನು ಮೂವರು ಜೈಲು ಸೇರುವಲ್ಲಿಗೆ ಪ್ರಕರಣ ಅಂತ್ಯವಾಗಿದೆ.

Read These Next