ಹಿಂಸೆಯ ಬಹು ವ್ಯಾಖ್ಯಾನಗಳು

Source: sonews | By Staff Correspondent | Published on 26th December 2019, 5:23 PM | Special Report |

* ಗೋಪಾಲ್ ಗುರು

ಪೌರತ್ವ ತಿದ್ದುಪಡಿ ಕಾಯಿದೆಯ ಬಗ್ಗೆ ನಡೆದ ಪ್ರತಿಭಟನೆಗಳಿಗೆ ಕೇಂದ್ರ ಸರ್ಕಾರ ಮತ್ತವರ ಬೆಂಬಲಿಗರು ತೋರಿದ ಪ್ರತಿಕ್ರಿಯೆಗಳು ಹಿಂಸೆಯ ಸಂಕೀರ್ಣ ಸ್ವರೂಪವನ್ನು ಮುನ್ನೆಲೆಗೆ ತಂದಿದೆ. ಹಾಲಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಸರ್ಕಾರವು ಶಾಂತಿಯ ಸಾಮಾಜಿಕ ಮಹತ್ವವನ್ನು ಒತ್ತಿ ಹೇಳುವ ಸಲುವಾಗಿ ಹಿಂಸೆಯನ್ನು ಖಂಡಿಸುತ್ತದೆ. ಹೀಗಾಗಿ ಶಾಂತಿಯನ್ನು ಕಾಪಾಡಬೇಕಾದ ಪೂರ್ವ ತೀರ್ಮಾನವೇ ಹಿಂಸೆಯ ಅರ್ಥದಲ್ಲಿ ಅದರ ಅಮಾನ್ಯತೆಯನ್ನೂ ಬೆಸೆದುಬಿಡುತ್ತದೆ. ಅಂದರೆ ಯಾವುದೇ ಕಾರಣಕ್ಕೂ ಹಿಂಸೆಯನ್ನು ಒಪ್ಪಲು ಸಾಧ್ಯವೇ ಇಲ್ಲದ್ದರಿಂದ ಹಿಂಸೆಯನ್ನು ಅಮೂಲಾಗ್ರವಾಗಿ ತಿರಸ್ಕರಿಸಬೇಕು. ಅಂತಹ ಒಂದು ಪರಿಪೂರ್ಣ ಅಹಿಂಸಾತ್ಮಕ ಪ್ರತಿಭಟನೆಗಳ ಆಶಯದಲ್ಲಿ  ಕೆಲವರು ಅರ್ಥವನ್ನೂ ಕಾಣಬಹುದು. ಆದರೆ ಹೆಚ್ಚೂ-ಕಡಿಮೆ ಶಾಂತಿಯುತವಾಗಿಯೇ ನಡೆದ ಇತ್ತೀಚಿನ ವಿದ್ಯಾರ್ಥಿ ಪ್ರತಿರೋಧಗಳಿಗೆ ಹಿಂಸೆಯನ್ನು ಅಂಟಿಸಿ ಮಾತನಾಡುವುದು ನಿಜಕ್ಕೂ ಸಮಂಜಸವಲ್ಲ.

ಯಾವುದೇ ಪ್ರತಿಭಟನೆಗಳು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಆಧರಿಸಿರುತ್ತದೆ ಎಂದು ವಾದಿಸಬಹುದು. ಪ್ರತಿಭಟನಾಕಾರರ ಮಟ್ಟಿಗೆ ವಾಸ್ತವ ಮತ್ತು ಭರವಸೆಗಳೆರಡೂ ಒಂದು ನಕಾರಾತ್ಮಕ ಅರ್ಥದಲ್ಲಿ ಮಾರ್ಗದರ್ಶಿಗಳಾಗಿರುತ್ತವೆ. ಅದು ಯಾವ ಭರವಸೆಯನ್ನು ಒದಗಿಸುತ್ತದೆ? ಆತಂಕ, ಅನಿಶ್ಚತೆ ಮತ್ತು ಅಭದ್ರತೆ? ವಾಸ್ತವವೇನೆಂದರೆ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರೌರ್ಯ ಮತ್ತು ಪೊಲೀಸ್ ಹಿಂಸಾಚಾರ. ಒಂದು ಸಕಾರಾತ್ಮಕ ಅರ್ಥದಲ್ಲಿ ಮಾರ್ಗದರ್ಶಿ ಸೂತ್ರಗಳು ಈ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ: ಪ್ರಭುತ್ವವು ಯಾವ ಭರವಸೆಗಳನ್ನು ನೀಡಬೇಕು? ಬಹುತ್ವ, ಸ್ಥಿರತೆ ಮತ್ತು ಜನರಲ್ಲಿ ವಿಶ್ವಾಸ? ಈ ಮಾರ್ಗದರ್ಶಿ ಸೂತ್ರಗಳು ಸಂಸತ್ತು ಅಂಗೀಕರಿಸಿದ ಮಸೂದೆಯ ಸಾಂವಿಧಾನಿಕ ಮಾನ್ಯತೆಯನ್ನು ಕಾನೂನಾತ್ಮಕವಾಗಿ ಅಂದಾಜು ಮಾಡುವ ಗುರಿಯನ್ನು ಹೊಂದಿವೆ ಎಂದು ಹೇಳಬಹುದು. ಮತ್ತು ಅಂತಹ ಒಂದು ಕಾಯಿದೆಯು ವೈವಿಧ್ಯತೆ ಮತ್ತು ಪ್ರಾಯಶಃ ಧರ್ಮ ನಿರಪೇಕ್ಷ ತತ್ವಕ್ಕೂ ಮಾಡಬಹುದಾದ ಪರಿಣಾಮಗಳ ಬಗ್ಗೆ ಜನರನ್ನು ಜಾಗೃತಗೊಳಿಸುವ ಉದ್ದೇಶವನ್ನೂ ಸಹ ಈ ಪ್ರತಿಭಟನೆಗಳು ಹೊಂದಿದ್ದವು.

ಹಿಂಸೆಯನ್ನು ಏಕಪಕ್ಷೀಯವಾಗಿ ಮಾತ್ರ ಅರ್ಥಮಾಡಿಕೊಳ್ಳುತ್ತಿರುವ ಇವತ್ತಿನ ಈ ಸಂದರ್ಭದಲ್ಲಿ ಹಿಂಸೆಯನ್ನು ಐತಿಹಾಸೀಕರಿಸುವ ಅಗತ್ಯ ಮಾತ್ರವಲ್ಲದೆ ಹಿಂಸೆಯನ್ನು ಒಂದು ಉದ್ದಿಶ್ಯಪೂರ್ವಕ ಸೇರ್ಪಡೆಯನ್ನಾಗಿಯೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಹಿಂಸೆಯನ್ನು ಐತಿಹಾಸೀಕರಿಸುವುದಲ್ಲದೆ ಅದರ ಅರ್ಥ ವ್ಯಾಖ್ಯಾನದಲ್ಲಿ ಗುಂಪುಕೊಲೆಗಳನ್ನು, ದಲಿತರ ಮೇಲೆ ವಿಧಿಸುವ ಸಾಮಾಜಿಕ ಬಹಿಷ್ಕಾರಗಳನ್ನೂ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನೂ, ರೈತರ ಆತ್ಮಹತ್ಯೆಗಳನ್ನೂ, ಅಭಿವೃದ್ಧಿಯ ಹೆಸರಲ್ಲಿ ನಿರಾಶ್ರಿತರಾದವರನ್ನೂ, ಗ್ರಾಮೀಣ ಹಾಗೂ ನಗರ ಪ್ರದೇಶಗಳೆರೆಡರಲ್ಲೂ ಅತ್ಯಂತ ಕಳಪೆ ಮಟ್ಟದ ಜೀವನವನ್ನು ನಡೆಸುತ್ತಿರುವ ವಿಶಾಲ ಜನಸಮುದಾಯವನ್ನೂ ಜೋಡಿಸಿ ಹಿಂಸೆಯ ಅರ್ಥವನ್ನು ಸಮಗ್ರೀಕರಿಸಿಕೊಳ್ಳಬೇಕಿದೆ. ತಮಗೇ ತಾವೇ ಮಾಡಿಕೊಳ್ಳುವ ಹಿಂಸೆಯೂ ಸಹ ಗುಣಮಟ್ಟದ ಜೀವನ ಮಟ್ಟವನ್ನು ಒದಗಿಸಲು ಅಸಾಧ್ಯವಾದ ಪರಿಸ್ಥಿತಿಯ ಪರಿಣಾಮವೇ ಎಂದು ಈಗಲಾದರೂ ಒಪ್ಪಿಕೊಳ್ಳೋಣ. ಹೀಗೆ ವಿವಿಧ ಪದರಗಳಲ್ಲಿರುವ ಹಿಂಸೆಯಿಂದ ಮುಕ್ತರಾಗುವುದೇ ಪ್ರತಿಭಟನಾಕಾರರ ಹಿಂದಿದ್ದ ಮಾರ್ಗದರ್ಶಿ ಶಕ್ತಿಯಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಸಂಬಂಧಗಳಲ್ಲಿ ಹಿಂಸೆಯನ್ನು ಬೆರೆಸುವ ಪ್ರಯತ್ನಗಳು ಹೆಚ್ಚಾಗುತ್ತಿವೆ. ಇದು ಪ್ರತಿಭಟನೆಗಳನ್ನು ಅದರಲ್ಲೂ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಖಂಡಿಸಲು ಬಳಸುತ್ತಿರುವ ಹಿಂಸಾತ್ಮಕ ಅಭಿವ್ಯಕ್ತಿಗಳಲ್ಲಿ ಸ್ಪಷ್ಟವಾಗಿದೆ. ಇಲ್ಲಿಯೂ ಕೂಡ ಹಿಂಸೆಯನ್ನು ಅದರ ಸಮಗ್ರ ಅರ್ಥದಲ್ಲಿ ಬಳಸದೆ ಕೇವಲ ಅದರ ಒಂದು ಅರ್ಥದಲ್ಲಿ ಮಾತ್ರ ಬಳಸುತ್ತಾ ಅದನ್ನು ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಅನ್ವಯಿಸುವುದು ತರವಲ್ಲ. ಹಿಂಸೆಯು ಹೇಗೆ ಹರಡುತ್ತದೆಂಬುದರ ಬಗ್ಗೆ ನಮಗೆ ಅರಿವಿರಬೇಕು; ಜನರು ನಾಗರಿಕ ಅಭದ್ರತೆ, ನಿರುದ್ಯೋಗ, ಅಸಮಾನತೆ ಮತ್ತು ಅನ್ಯಾಯಗಳನು ಉತ್ಪಾದಿಸುವ ರಚನೆಗಳಲ್ಲಿ ಬಹುಬಗೆಯಲ್ಲಿ ಸಿಲುಕಿಕೊಂಡಿರುವುದರಿಂದ ಉತ್ಪಾದಿತವಾಗುವ ಹಿಂಸೆಯ ಬಗ್ಗೆಯೂ ಅರಿವಿರಬೇಕು. 

ವಾಸ್ತವದಲ್ಲಿ ಬಲಪಂಥೀಯ ರಾಜಕೀಯವನ್ನು ಬೆಂಬಲಿಸುವಲ್ಲಿ ಮುಂಚೂಣಿಯಲ್ಲಿರುವ ಶಕ್ತಿಗಳೇ ಹಲವಾರು ಬಾರಿ ಹೋರಾಟಗಳಲ್ಲಿ ಹಿಂಸೆಯನ್ನು ಬೆರೆಸುವುದು ಮಾತ್ರವಲ್ಲದೆ ಸಾಮಾಜಿಕ ಸಂಬಂಧಗಳಲ್ಲಿ ಹಿಂಸೆಯನ್ನು ಬೆರೆಸುವಲ್ಲಿಯೂ ಮುಂದಿರುತ್ತಾರೆ. ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಮತ್ತು ಸಂಚು ಸಿದ್ಧಾಂತಗಳನ್ನು ಬಾಯಿಂದಬಾಯಿಗೆ  ಹರಡುವ ಮೂಲಕ ಅಥವಾ ಸಮುದಾಯಗಳ ಬಳಕೆಯಲ್ಲಿರುವ ಸಾಮಾಜಿಕ ಮಾಧ್ಯಮಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ. ಅಂತಹ ಸಾಮಾಜಿಕ ಮಾಧ್ಯಮ ಜಾಲಗಳಲ್ಲಿ ದ್ವೇಷ ಪ್ರಚಾರವು ತಾರಕವನ್ನು ಮುಟ್ಟಿರುತ್ತದೆ. ಹೀಗೆ ಹೊರಗಿನಿಂದ ತೂರಿಬರುವ ಹಿಂಸೆಯು ತದನಂತರದಲ್ಲಿ ಸಂಭವಿಸುವ ಹಿಂಸೆಯ ಅಭಿವ್ಯಕ್ತಿಯಾಗಿದೆ. ಸುಳ್ಳೂಸುದ್ದಿಗಳ ಜಾಲವನ್ನೇ ನಿರ್ಮಿಸುವ ಮೂಲಕ ಬಲಪಂಥೀಯ ಶಕ್ತಿಗಳು ತಮ್ಮ ಬೆಂಬಲಿಗರನ್ನು ಸೃಷ್ಟಿಸಿಕೊಳ್ಳುತ್ತಾರೆ. ಅಂತಹ ಜಾಲದಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳು ಮತ್ತೊಂದು ಸಮುದಾಯದ ಬಗ್ಗೆ ಮತ್ತು ಮಾನವೀಯ ತತ್ವಗಳನ್ನು ಎತ್ತಿಹಿಡಿಯುವವರ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವುದು ತಮ್ಮ ಕರ್ತವ್ಯವೆಂದೇ ಭಾವಿಸುತ್ತಾರೆ. ಜನಸಮುದಾಯದ ಕೆಲವಿಭಾಗಗಳು ತಮ್ಮ ತೀರ್ಮಾನಗಳು ಸಮಾಜದಲ್ಲಿ ಮಾನವೀಯ ತತ್ವಗಳನ್ನು ಆಧರಿಸಿದ ಸಾಮಾಜಿಕ ಸಂಬಂಧಗಳನ್ನು ಸೃಷ್ಟಿಸಬೇಕೆಂಬ  ನೈತಿಕ ಅಥವಾ ತಾತ್ವಿಕ ಹೊಣೆಗಾರಿಕೆಯನ್ನು ಹೊರಲು ಸಿದ್ಧರಿಲ್ಲದಿರುವುದರಿಂದಲೇ ಅವರು ಅಂಥಾ ದ್ವೇಷ ಜಾಲತಾಣಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಹೊರಗಿನಿಂದ ತೂರಿಸುವ  ಈ ಹಿಂಸಾಭಾವದಿಂದ ಆಗುವ ಪರಿಣಾಮಗಳೇನು? ಅದು ಪರಸ್ಪರ ಪರಕೀಯತೆಯ ಸಾಮಾಜಿಕ ಉತ್ಪಾದನೆಯನ್ನು ಮಾಡುತ್ತದೆ; ಅದು ಒಂದು ಆಳವಾದ ಅಭದ್ರತೆ, ಬೇಹುಗಾರಿಕೆ ಮತ್ತು ಅತಂತ್ರತೆಗಳ ಭಾವದಿಂದ ಸುತ್ತವರೆಯಲ್ಪಟ್ಟ ಸಾಮಾಜಿಕ ಸಂಬಂಧವನ್ನು ಸೃಷ್ಟಿಸುತ್ತದೆ. ಮುಖ್ಯವಾದ ಪ್ರಶ್ನೆಯೇನೆಂದರೆ: ಅಂತಹ ಸುಳ್ಳುಸುದ್ದಿಗಳ ಜಾಲದಿಂದ ಜನರನ್ನು ಹೊರತರುವುದು ಹೇಗೆ? ಜನರು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯಂತಹ ಬಹುಜನರ ಒಳಿತನ್ನು ಗಮನದಲ್ಲಿರಿಸಿಕೊಂಡು ತೀರ್ಮಾನವನ್ನು ತೆಗೆದುಕೊಳ್ಳಬಲ್ಲ ತಮ್ಮ ನೈತಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಮಾತ್ರ eನರನ್ನು ಇಂಥ ದ್ವೇಷ ಜಾಲದಿಂದ ಹೊರತರಬಹುದು.

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ದಸರಾ ರಜೆಗೆ ಮುರುಡೇಶ್ವರವನ್ನು ತುಂಬಿಕೊಂಡ ಪ್ರವಾಸಿಗರು; ಕಡಲತಡಿಯಲ್ಲಿ ಜನವೋ ಜನ; ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಸಾಹಸ

ಸರಣಿ ರಜೆಯಿಂದಾಗಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಪ್ರವಾಸಿಗರಿಂದ ತುಂಬಿ ಹೋಗಿದೆ. ಕಡಲ ತಡಿಯಲ್ಲಿ ಕಣ್ಣು ...

ಭಟ್ಕಳ: 100 ಬೆಡ್ಡಿನ ಸರಕಾರಿ ಆಸ್ಪತ್ರೆಯಲ್ಲಿ ಬೆಡ್ಡು ಇದೆ ಕೋಣೆ ಇಲ್ಲ! ಮೀಟಿಂಗ್ ಹಾಲ್‍ನಲ್ಲಿ ರೋಗಿಗಳು ; ಕಟ್ಟಡಕ್ಕಾಗಿ ದಾನಿಗಳತ್ತ ಮುಖ

ತಾಲೂಕಿನ ಸರಕಾರಿ ಆಸ್ಪತ್ರೆ ಸುಧಾರಣೆ ಕಾಣುತ್ತಿದ್ದಂತೆಯೇ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಅಕ್ಕಪಕ್ಕದ ...

ಭಟ್ಕಳ: ತೆವಳುತ್ತಲೇ ಸಾಗಿದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ; ಉದ್ಘಾಟನೆ ಮುಗಿದರೂ ಕೆಲಸ ಮುಗಿಯಲೇ ಇಲ್ಲ

ಯಾವುದೇ ದೇಶ, ರಾಜ್ಯ ಆಗಿರಲಿ, ಸುಸಜ್ಜಿತ ರಸ್ತೆ ಎನ್ನುವುದು ಅಭಿವೃದ್ಧಿಯ ಸಂಕೇತವಾಗಿದೆ. ಅದರಲ್ಲಿಯೂ ಹೆದ್ದಾರಿಗಳು ಆಧುನಿಕತೆಯ ...

ಭಟ್ಕಳ ಮಿನಿ ವಿಧಾನಸೌಧದಲ್ಲಿ ಕಲ್ಲೇರಿ ನಿಂತರಷ್ಟೇ ಕೆಲಸ ! ಮರಿಪುಢಾರಿಗಳ ಕಾಟ ತಾಳಲಾರದೆ ಒಳಗಡೆಗೂ ಬಿದ್ದಿದೆ ಬೀಗ; ಸದ್ದಿಲ್ಲದೇ ಸೊರಗುತ್ತಿದೆ ಕನಸಿನ ಸೌಧ

ಇದು ಜನರ ಅಲೆದಾಟವನ್ನು ತಪ್ಪಿಸಿ ಒಂದೇ ಸೂರಿನಡಿ ಜನರಿಗೆ ಸೇವೆ ನೀಡಲು ರು.10ಕೋ.ಗೂ ಅಧಿಕ ಹಣವನ್ನು ವ್ಯಯಿಸಿ ಕಟ್ಟಲಾದ ಭಟ್ಕಳ ಮಿನಿ ...

ಜಾನುವಾರು ಸಾಗಾಟಕ್ಕೆ ನಿರಂತರ ತಡೆ ಹಿನ್ನೆಲೆ; ಬಕ್ರೀದ್ ಹಬ್ಬಕ್ಕಾಗಿ ಭಟ್ಕಳಕ್ಕೆ ಬಂದ ಸಾವಿರಾರು ಕುರಿಗಳು; ಭಟ್ಕಳದಲ್ಲಿ ಬೀಡುಬಿಟ್ಟ ಪರ ಜಿಲ್ಲೆಗಳ ಕುರಿಗಾಹಿಗಳು

ಇಸ್ಲಾಮ್ ಧರ್ಮೀಯರ ಪವಿತ್ರ ಹಬ್ಬ ಬಕ್ರೀದ್‍ಗೆ 3 ದಿನಗಳಷ್ಟೇ ಬಾಕಿ ಇದೆ. ಜಾನುವಾರು ಸಾಗಾಟಕ್ಕೆ ಪೊಲೀಸರು ನಿರಂರವಾಗಿ ತಡೆಯೊಡ್ಡಿರುವ ...