ಭಟ್ಕಳದ ತಂಝೀಮ್ ವತಿಯಿಂದ ಮಾರ್ಚ್ 30 ಮತ್ತು 31 ರಂದು ಮೆಗಾ ವೋಟರ್ ಐಡಿ ಶಿಬಿರ

Source: SOnews | By Staff Correspondent | Published on 26th March 2024, 6:20 PM | Coastal News |

ಭಟ್ಕಳ: ಮುಂಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಅರ್ಹ ಮತದಾರರನ್ನು ನೋಂದಾಯಿಸಲು ಮತ್ತು ಮತದಾರರ ಗುರುತಿನ ಚೀಟಿ ನೀಡಲು ಭಟ್ಕಳದ ಸಾಮಾಜಿಕ ರಾಜಕೀಯ ಸಂಘಟನೆಯಾದ ಮಜ್ಲಿಸ್ ಇ ಇಸ್ಲಾಹ್ ವ ತಂಝೀಮ್ (ಎಂಐಟಿ) ಮಾರ್ಚ್ 30 ಮತ್ತು 31 ರಂದು (ಶನಿವಾರ ಮತ್ತು ಭಾನುವಾರ) ಭಟ್ಕಳದ ನಾಲ್ಕು ವಿವಿಧ ಸ್ಥಳಗಳಲ್ಲಿ ಮತದಾರರ ಗುರುತಿನ ಚೀಟಿ ಮೆಗಾ ಶಿಬಿರವನ್ನು ಏಕಕಾಲದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಹಾಗೂ ವಿವಿಧ ಕ್ರೀಡಾ ಕೇಂದ್ರಗಳ ಸಹಯೋಗದಲ್ಲಿ ತೆಂಗನಗುಂಡಿಯ ಸೈಯದಿನಾ ಇಬ್ರಾಹಿಂ ಮಸೀದಿ, ನವಾಯತ್ ಕಾಲೋನಿಯ ಖುಷ್-ಹಲ್ ಶಾದಿ ಹಾಲ್, ಬಂದರ್ ರಸ್ತೆಯ ಅಲ್-ಅಫರಾ ಶಾದಿ ಹಾಲ್ ಹಾಗೂ ತಂಝೀಮ್ ಸಂಸ್ಘೆಯ ಸಭಾಂಗಣದಲ್ಲಿ ಮೆಗಾ ಶಿಬಿರ ನಡೆಯಲಿದೆ.

ಜಾಲಿ ಪಟ್ಟಣ ಪಂಚಾಯತ್ ಮತ್ತು ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿ ಸೇರಿದಂತೆ  ಭಟ್ಕಳ ಪುರಸಭಾ ವ್ಯಾಪ್ತಿಯ ನಿವಾಸಿಗಳಿಗಾಗಿ ಈ ಶಿಬಿರ ಆಯೋಜಿಸಲಾಗಿದೆ. ವೋಟರ್ ಐಡಿ ಮೆಗಾ ಕ್ಯಾಂಪ್ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಕಾರ್ಯನಿರ್ವಹಿಸಲಿದೆ.

ಮಾರ್ಚ್ 31, 2024 ರ ಮೊದಲು 18 ವರ್ಷ ತುಂಬಿದ ವ್ಯಕ್ತಿಗಳು, ಚುನಾವಣಾ ಪಟ್ಟಿಯಲ್ಲಿ ಸೇರಿಸಲು ಮುಂಗಡ ಅರ್ಜಿಗಳನ್ನು ಸಲ್ಲಿಸಬಹುದು. ಇದಲ್ಲದೆ, ಮತದಾರರ ಪಟ್ಟಿಗೆ ವಿವರಗಳನ್ನು ಅಪ್‌ಲೋಡ್ ಮಾಡಲಾಗಿದ್ದರೂ ತಮ್ಮ ಮತದಾರರ ಗುರುತಿನ ಚೀಟಿಯನ್ನು ಸ್ವೀಕರಿಸದ ವ್ಯಕ್ತಿಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ 12 ಸರ್ಕಾರಿ ಪ್ರಮಾಣೀಕೃತ ಗುರುತಿನ ಪುರಾವೆಗಳಲ್ಲಿ ಯಾವುದಾದರೂ ಒಂದನ್ನು ಪ್ರಸ್ತುತಪಡಿಸುವ ಮೂಲಕ ತಮ್ಮ ಮತವನ್ನು ಚಲಾಯಿಸಬಹುದು.

ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಉದ್ದೇಶಿಸಿರುವ ಅಭ್ಯರ್ಥಿಗಳು ಮೂರು ದಾಖಲೆಗಳ ಮೂಲ ಮತ್ತು ಜೆರಾಕ್ಸ್ ಪ್ರತಿಗಳನ್ನು - ಗುರುತಿನ ಪುರಾವೆ, ವಿಳಾಸ ಪುರಾವೆ ಮತ್ತು ವಯಸ್ಸಿನ ಪುರಾವೆ - ಜೊತೆಗೆ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ ಶಿಬಿರಕ್ಕೆ ತರುವುದು ಅವಶ್ಯಕ.

ಭಟ್ಕಳ ಹಾಗೂ ಅಕ್ಕಪಕ್ಕದ ಪ್ರದೇಶಗಳಾದ ಮುರ್ಡೇಶ್ವರ, ಮಂಕಿ, ವಲ್ಕಿ, ಗೇರ್ಸುಪ್ಪ, ಹೊನ್ನಾವರ ಮುಂತಾದ ಕಡೆಯ ನಿವಾಸಿಗಳು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಎಂಐಟಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಕೀಬ್ ಎಂ.ಜೆ.ನದ್ವಿ ಕೋರಿದ್ದಾರೆ. ಮತದಾರರ ಗುರುತಿನ ಚೀಟಿ ಇಲ್ಲದ 18 ವರ್ಷ ಮೇಲ್ಪಟ್ಟವರು ಶಿಬಿರದಲ್ಲಿ ಭಾಗವಹಿಸಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಬೇಕು ಎಂದು ಅವರು ಒತ್ತಿ ಹೇಳಿದರು.

ಭಟ್ಕಳ ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ಅಝೀಝುರ್ ರಹ್ಮಾನ್ ರುಕ್ನುದ್ದೀನ್ ನದ್ವಿ ಮಾತನಾಡಿ, ಎಲ್ಲಾ ಕ್ರೀಡಾ ಕೇಂದ್ರಗಳ ಸದಸ್ಯರು ತಮ್ಮ ತಮ್ಮ ಪ್ರದೇಶದಲ್ಲಿನ ನಿವಾಸಿಗಳು ಮತದಾರರ ಗುರುತಿನ ಚೀಟಿಯನ್ನು ಹೊಂದಿದ್ದು ಮತದಾರರ ಪಟ್ಟಿಯಲ್ಲಿ ದಾಖಲಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...