ಮಂಗಳೂರು ಸೇರಿ ಜಿಲ್ಲೆಯ ವಿವಿಧೆಡೆ ದರೋಡೆ, ಸುಲಿಗೆ ಪ್ರಕರಣ 9 ಮಂದಿ ಆರೋಪಿಗಳ ಬಂಧನ: ಕಮಿಷನರ್

Source: VB | By S O News | Published on 4th April 2021, 1:19 PM | Coastal News |

ಮಂಗಳೂರು: ನಗರದ ಮೂಡುಬಿದಿರೆ, ಮುಲ್ಕಿ, ಬಜ್ಜೆ ಪೊಲೀಸ್ ಠಾಣಾ ಸರಹದ್ದು ಸೇರಿದಂತೆ ದ.ಕ. ಹಾಗೂ ಉಡುಪಿ ಜಿಲ್ಲೆ ವಿವಿಧ ಕಡೆ ಹಲವಾರು ಮನೆ ಕಳ್ಳತನ, ದರೋಡೆ, ಸುಲಿಗೆ ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ವಿವಿಧ ಜಿಲ್ಲೆಗಳ ಹಾಗೂ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಭಾಗಿ ಯಾಗಿರುವ ಈ ಆರೋಪಿಗಳು ಮೂರಾಲ್ಕು ತಂಡಗಳೊಂದಿಗೆ ಕಾರ್ಯಾಚರಿಸುತ್ತಿದ್ದರು ಎಂದು ಅವರು ಹೇಳಿದರು.

ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ

ರಾತ್ರಿ ಹೊತ್ತು ಕಳ್ಳತನ, ದರೋಡೆ!

ಬ೦ಧಿತರು 2020ರಲ್ಲಿ ಉಪ್ಪಿನಂಗಡಿಯಲ್ಲಿ ನಡೆದ ದರೋಡೆ, ಅರೆಹಳ್ಳಿ ಹಾಸನದಲ್ಲಿ ಮನೆಗಳ್ಳತನ, ಪುಂಜಾಲಕಟ್ಟೆಯಲ್ಲಿ ತಾಯಿ ಮಗನಿದ್ದ ಮನೆಯಲ್ಲಿ ಕಳ್ಳತನ, ಕೊಕ್ಕಡದಲ್ಲಿ ದರೋಡೆ ವೇಳೆ ಮಹಿಳೆಯೊಬ್ಬರು ಒಬ್ಬಾತನನ್ನು ಹಿಡಿಯಲು ಯತ್ನಿಸಿದಾಗ ಹಲ್ಲೆ ನಡೆಸಿದ ಪ್ರಕರಣ, ಮೂಡುಬಿದಿರೆಯಲ್ಲಿನ ದರೋಡೆ, ಬೆಂಗಳೂರು ವಿಜಯನಗರ, ಮುಲ್ಕಿ, ಬಜೆಗಳಲ್ಲಿ ಮಾರ್ಚ್  27ರಿಂದ 31ವರೆಗೆ ನಡೆದ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.

ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ದಿನೇಶ್ ಕುಮಾರ್ ಮತ್ತು ಸಿಬ್ಬಂದಿ ಎಪ್ರಿಲ್ 1ರಂದು ಮುಲ್ಕಿ  ನಿವಾಸಿ ಅಬ್ದುಲ್ ರವೂಫ್ (24), ಆನೆಕಲ್ಲು ನಿವಾಸಿ ರಾಮಮೂರ್ತಿ (23) ಎಂಬವರನ್ನು ಬಂಧಿಸಿದ್ದರು. ಎ.2ರಂದು ಕಾಶಿಪಟ್ಲ ಅಶ್ರಫ್ (27), ಬೆಂಗಳೂರಿನ ಸಂತೋಷ್ (24), ಮಂಗಳೂರಿನ ಸಿದ್ದೀಕ್ (27), ಬೆಂಗಳೂರಿನ ಸಿದ್ದೀಕ್ (27), ಮೂಡುಬಿದಿರೆ ನಿವಾಸಿ ರಮಾನಂದ ಶೆಟ್ಟಿ (40), ಭದ್ರಾವತಿ ನಿವಾಸಿ ಅಲಿಕೋಯಾ (30), ನವೀನ್ ಬೆಳ್ತಂಗಡಿ (35) ಎಂಬವರನ್ನು ಬಂಧಿಸಲಾಗಿದೆ. ಇವರೆಲ್ಲರ ವಿರುದ್ಧ ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಎಂದವರು ಹೇಳಿದರು.

ಬಂಧಿತರಿಂದ ಇನ್ನೋವಾ ಕಾರು, ಟಾಟಾ ಜೆಸ್ಟ್ ಕಾರು, ಮಾರುತಿ ಸ್ವಿಫ್ಟ್ ಕಾರು, ಆಟೊ ರಿಕ್ಷಾ, 11 ಮೊಬೈಲ್‌ಗಳು, 4 ದ್ವಿಚಕ್ರ ವಾಹನ, ಒಂದ ಏರ್‌ಗನ್, ಚಿನ್ನದಂತಿರುವ ಒಡವೆಗಳು  ಸೇರಿದಂತೆ ಒಟ್ಟು 32.22 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು  ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಆರೋಪಿಗಳಿಂದ 2 ತಲವಾರುಗಳು, ಕಬ್ಬಿಣದ ರಾಡು, ಲಿವರ್, ಉದ್ದನೆಯ ಚಾಕು, ಒಂದು ಪ್ಯಾಕೆಟ್ ಖಾರದ ಹುಡಿ, ಮರದ ದೊಣ್ಣೆಯಂತಹ
ಮಾರಕಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇನ್ನೂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಕಮಿಷನರ್ ತಿಳಿಸಿದರು.

ನಾಲ್ವರು ಪ್ರಮುಖ ಆರೋಪಿಗಳು ಸೇರಿದಂತೆ ಇನ್ನೂ 15ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿರುವ ಮಾಹಿತಿ ಇದ್ದು, ಆರೋಪಿಗಳಿಗೆ ಕೃತ್ಯವೆಸಗಲು ವಾಹನ ನೀಡಿದವರು, ಹಣಕಾಸಿನ ಸಹಾಯ ಮಾಡಿದವರು, ಸಂಚು ರೂಪಿಸಲು ಭಾಗಿಯಾದವರು  ತಲೆಮರೆಸಿಕೊಳ್ಳಲು ಆಶ್ರಯ ನೀಡಿದವರ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅವರು ಹೇಳಿದರು.

ಆರೋಪಿಗಳಲ್ಲಿ ಕೆಲವರು ಬೇರೆ ಬೇರೆ ಜಿಲ್ಲೆಯವರಾಗಿದ್ದು ತಮ್ಮ ತಮ್ಮ ವ್ಯಾಪ್ತಿಯಲ್ಲಿರುವ ದೊಡ್ಡ ಮಟ್ಟದ ಅಡಿಕೆ ಕೃಷಿಕರು, ವ್ಯಾಪಾರಿಗಳು, ಫಾರ್ಮ್ ಹೌಸ್, ಕಾಫಿ ಎಸ್ಟೇಟ್, ಉದ್ಯಮಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಧಾನ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದರು. ಸಮಗ್ರ ಮಾಹಿತಿ ಕಲೆ ಹಾಕಿದ ಬಳಿಕ ನಿರ್ದಿಷ್ಟ ದಿನ ಗೊತ್ತುಪಡಿಸಿ ರಾತ್ರಿ ಹೊತ್ತು ಗ್ಯಾಂಗ್ ಕಾರ್ಯಾಚರಣೆ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ತಂಡಗಳಿಗೆ ಕೊರೋನ-ಲಾಕ್‌ಡೌನ್ ಸಂದರ್ಭದಲ್ಲಿ ವಾಹನಗಳ ಸಂಚಾರ ವಿರಳವಾಗಿದ್ದ ಕಾರಣ, ಚೆಕ್‌ಪಾಯಿಂಟ್‌ಗಳು ಅಧಿಕವಾಗಿದ್ದ ಕಾರಣ ಮನೆಕಳ್ಳತನ ಕಷ್ಟವಾಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ.

ಬಂಧಿತರು ಶೋಕಿ ಜೀವನದ ಜತೆಗೆ ಗಾಂಜಾ ವ್ಯಸನಿಗಳೂ ಆಗಿ ರುವ ವಿವಿಧ ಜಿಲ್ಲೆಯ ಈ ಆರೋಪಿಗಳು ಜೈಲು ವಾಸ ಹಾಗೂ ವಿವಿಧ ರೀತಿಯ ಕಾರ್ಯಾಚರಣೆಯ ವೇಳೆ ಒಬ್ಬರಿಗೊಬ್ಬರು ಸಂಪರ್ಕಕ್ಕೆ ಬಂದು ತಂಡಗಳ ರೂಪದಲ್ಲಿ ಈ ಕೃತ್ಯಗಳನ್ನು ಎಸಗುತ್ತಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಅವರು ಹೇಳಿದರು.

ರವೂಫ್ ಮೇಲೆ 12, ರಾಮಮೂರ್ತಿ ಮೇಲೆ 8, ಅಶ್ರಫ್ ಮೇಲೆ 9, ಸಂತೋಷ್ 9, ಸಿದ್ದೀಕ್ 7, ಸುಮನ್ 7, ರಮಾನಂದ ಶೆಟ್ಟಿ 7, ಅಲಿಕೋಯ 8, ನವೀದ್ ಮೇಲೆ 1  ಪ್ರಕರಣ ಈಗಾಗಲೇ ದಾಖಲಾಗಿದೆ.

ಸುಮಾರು 4ವರ್ಷಗಳಿಂದ ತಂಡ ಸಕ್ರಿಯವಾಗಿದ್ದು, ಯಾವುದಾದರೂ ವಾಹನವನ್ನು ಒಂದು ತಿಂಗಳ ಮಟ್ಟಿಗೆ ಬಾಡಿಗೆ ಪಡೆಯುವುದು, ನಂಬರ್ ಪ್ಲೇಟ್ ಬದಲಾಯಿಸಿ ಕೃತ್ಯ ನಡೆಸುವುದು, ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನಕ್ಕೆ ಅಡ್ಡ ಬಂದು ತಗಾದೆ ತೆಗೆದು, ವಾಹನಗಳನ್ನು ಪುಡಿಗಟ್ಟಿ ದರೋಡೆ ನಡೆಸುವುದು. ಒಂಟಿ ಮನೆಗಳಲ್ಲಿ ದರೋಡೆಗೆ ತೆರಳುವ ಸಂದರ್ಭ ಹೊರಗಿನಿಂದ ಭಾರೀ ಶಬ್ದಮಾಡಿ, ಆತಂಕದಿಂದ ಮನೆಯವರು ಹೊರಗೆ ಬಂದಾಗ ಮಾರಕಾಯುಧದೊಂದಿಗೆ ಏಕಾಏಕಿ ಮನೆಗೆ ನುಗ್ಗಿ ದರೋಡೆ, ಮನೆ ಕಳ್ಳತನ ನಡೆಸುವ ಕೃತ್ಯಗಳನ್ನು ಈ ತಂಡಗಳು ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ಹೇಳಿದರು.

ಬೆಳ್ತಂಗಡಿಯ ಕೊಕ್ಕಡದ ನೂಜೆ ತುಕ್ರಪ್ಪ ಶೆಟ್ಟಿ ಎಂಬವರ ಮನೆಗೆ 2020ರ ಡಿಸೆಂಬರ್ 21ರ ನಸುಕಿನ ಜಾವ ನುಗ್ಗಿದ 8ಮಂದಿ ಮುಸುಕುಧಾರಿ ದರೋಡೆಕೋರರ ತಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಲ್ಲದೆ, ದರೋಡೆ ಸಂದರ್ಭ ಮನೆಯೊಡತಿ ಗೀತಾ ಶೆಟ್ಟಿ ಅವರಿಗೆ ಚೂರಿಯಿಂದ ಹಲ್ಲೆ ನಡೆಸಿತ್ತು. ಇಷ್ಟು ಮಾತ್ರವಲ್ಲದೆ ಪ್ರತಿರೋಧವೊಡ್ಡಿದಾಗ ಮಕ್ಕಳ ಮೇಲೆ ಹಲ್ಲೆ ನಡೆಸುವ ಬೆದರಿಕೆ ಹಾಕಿದ್ದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವರ್‌, ಎಸಿಪಿ ಮಹೇಶ್ ಕುಮಾರ್, ಮೂಡುಬಿದಿರೆ ಇನ್ ಸೆಕ್ಟರ್ ದಿನೇಶ್ ಕುಮಾರ್ ಉಪಸ್ಥಿತರಿದ್ದರು.
 

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...