ಲೋಕಸಭಾ ಚುನಾವಣೆ ಘೋಷಣೆ; ಎಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ; ಜೂ.4ರಂದು ಫಲಿತಾಂಶ ಪ್ರಕಟ

Source: Vb | By I.G. Bhatkali | Published on 17th March 2024, 6:42 AM | National News |

ಹೊಸದಿಲ್ಲಿ: ದೇಶದ ಜನತೆ ಕಾತರದಿಂದ ಕಾಯುತ್ತಿದ್ದ 18ನೇ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ಎಪ್ರಿಲ್ 19ರಂದು ಆರಂಭಗೊಂಡು ಜೂನ್ 1ರವರೆಗೆ 7 ಹಂತಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿವೆಯೆಂದು ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ತಿಳಿಸಿದ್ದಾರೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ನೂತನವಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಹಾಗೂ ಸುಖ್‌ಬೀರ್ ಸಿಂಗ್ ಸಂಧು ಅವರೊಂದಿಗೆ ಹೊಸದಿಲ್ಲಿಯ ವಿಜ್ಞಾನಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದ ಅತಿ ದೊಡ್ಡ ಪ್ರಜಾಪ್ರಭುತ್ವದ ಆಚರಣೆಗೆ ಚುನಾವಣಾ ಆಯೋಗ ಸಂಪೂರ್ಣ ಸಿದ್ದವಾಗಿದೆ ಎಂರು ರಾಜೀವ್ ಕುಮಾರ್ ತಿಳಿಸಿದರು. ಮೊದಲ ಹಂತದ ಚುನಾವಣೆ ಎಪ್ರಿಲ್ 19ರಂದು ನಡೆಯಲಿದೆ. ಎಪ್ರಿಲ್ 26ರಂದು ಎರಡನೇ ಹಂತ, ಮೇ 7ರಂದು ಮೂರನೇ ಹಂತ, ಮೇ 13ರಂದು ನಾಲ್ಕನೇ ಹಂತ, ಮೇ 20ರಂದು ಐದನೇ ಹಂತ, ಮೇ 25ರಂದು ಆರನೇ ಹಂತ ಹಾಗೂ ಜೂನ್ 1ರಂದು ಏಳನೇ ಹಂತದ ಚುನಾವಣೆ ನಡೆಯಲಿದೆ. ಕರ್ನಾಟಕ ದಲ್ಲಿ ಎಪ್ರಿಲ್ 26 ಹಾಗೂ ಮೇ 7ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಶನಿವಾರದಿಂದಲೇ ಜಾರಿಗೆ ಬಂದಿರುವುದಾಗಿ ಅವರು ತಿಳಿಸಿದರು. ಲೋಕಸಭೆಯ ಎಲ್ಲಾ 543 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 96.8 ಕೋಟಿ ಮಂದಿ ಮತದಾನಕ್ಕೆ ಅರ್ಹರಾಗಿದ್ದಾರೆಂದು ರಾಜೀವ್ ಕುಮಾರ್ ತಿಳಿಸಿದರು.

ಲೋಕಸಭಾ ಚುನಾವಣೆಗೆ ಮತದಾನಕ್ಕಾಗಿ ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಹಾಗೂ 1.5 ಕೋಟಿ ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. 55 ಲಕ್ಷ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಮತದಾನಕ್ಕೆ ಒದಗಿಸಲಾಗುವುದು ಹಾಗೂ 4 ಲಕ್ಷ ವಾಹನಗಳನ್ನು ನಿಯೋಜಿಸಲಾಗುವುದು ಎಂದವರು ಹೇಳಿದರು. 1.8 ಕೋಟಿ ಮಂದಿ ಚೊಚ್ಚಲ ಮತದಾರರಿದ್ದಾರೆ ಹಾಗೂ ಒಟ್ಟು ಮತದಾರರ ಪೈಕಿ 19.47 ಕೋಟಿ ಮಂದಿ 20ರಿಂದ 29 ವರ್ಷ ವಯಸ್ಸಿನೊಳಗಿನವರೆಂದು ರಾಜೀವ್ ಕುಮಾರ್ ತಿಳಿಸಿದ್ದಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...