ಪ್ರಸ್ತಾವಿತ ’ನಗರಸಭೆ’ ಪ್ರಸ್ತಾಪ ವಿರೋಧಿಸಿ ಜಾಲಿ ಪ.ಪಂ ಕಚೇರಿ ಮುತ್ತಿಗೆ ; ಮುಖ್ಯಾಧಿಕಾರಿಯನ್ನು ತರಾಟೆ ತೆಗೆದುಕೊಂಡ ಸ್ಥಳೀಯರು

Source: SOnews | By Staff Correspondent | Published on 15th February 2024, 4:10 PM | Coastal News |

ಭಟ್ಕಳ:  ಭಟ್ಕಳ ನಗರ, ಹೆಬಳೆ ಪಂಚಾಯತ್ ಹಾಗೂ ಜಾಲಿ ಪಟ್ಟಣ ಪಂಚಾಯತ್ ಸೇರಿ ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಿತ ಪ್ರಸ್ತಾವನೆಯ ವಿರುದ್ಧ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಿದ  ಸ್ಥಳೀಯರು ಜಾಲಿ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಮುಖ್ಯಾಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಬುಧವಾರ ಜಾಲಿ ಪ.ಪಂ ಕಚೇರಿಯಲ್ಲಿ ನಡೆದಿದೆ.

ಬುಧವಾರ ಬೆಳಗ್ಗೆ ಜಾಲಿಪಟ್ಟಣ ಪಂಚಾಯಿತಿಯ ಇಬ್ಬರು ಸದಸ್ಯರೊಂದಿಗೆ ಸ್ಥಳೀಯ ಜನರು ಕಚೇರಿ ಎದುರು ಜಮಾಯಿಸಿ ನಗರಸಭೆಯ ಪ್ರಸ್ತಾವನೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಾಲಿಪಟ್ಟಣ ಪಂಚಾಯಿತಿಯನ್ನು ಸಿಎಂಸಿ ವ್ಯಾಪ್ತಿಗೆ ಸೇರಿಸುವುದರಿಂದ ಸ್ಥಳೀಯ ನಿವಾಸಿಗಳ ಮೇಲೆ ತೆರಿಗೆ ಹೊರೆ ಹೆಚ್ಚುತ್ತದೆ ಎಂದು ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಏಳು ವರ್ಷಗಳ ಹಿಂದೆ ಜಾಲಿಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಪರಿವರ್ತಿಸಲಾಗಿದ್ದು, ಇದರಿಂದ ತೆರಿಗೆ ದರ ಮಾತ್ರ ಹೆಚ್ಚಿದ್ದು, ಸಾರ್ವಜನಿಕರಿಗೆ ಹೆಚ್ಚುವರಿ ಹೊರೆಯಾಗಿದೆ. ಇದರ ಹೊರತಾಗಿ, ಈ ಪ್ರದೇಶದಲ್ಲಿ ಅಭಿವೃದ್ಧಿ ಮತ್ತು ನಿರ್ಮಾಣ ಯೋಜನೆಗಳು ಅಥವಾ ಇತರ ಯಾವುದೇ ಪ್ರಯೋಜನಗಳು ಕಂಡುಬಂದಿಲ್ಲ. ಇದೀಗ ಪಟ್ಟಣ ಪಂಚಾಯಿತಿ ಸ್ಥಾನಮಾನವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಿ ಸಿಎಂಸಿ ವ್ಯಾಪ್ತಿಗೆ ತಂದರೆ ತೆರಿಗೆ ಪ್ರಮಾಣವೂ ಹೆಚ್ಚಾಗಲಿದ್ದು, ಇಲ್ಲಿನ ಶ್ರಮಜೀವಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ ಎಂಬುದು ಪ್ರತಿಭಟನಾಕಾರರ ವಾದ. ಆದ್ದರಿಂದ ಯಾವುದೇ ಕಾರಣಕ್ಕೂ ಪಟ್ಟಣ ಪಂಚಾಯಿತಿಯನ್ನು ಸಿಎಂಸಿಗೆ (ನಗರಸಭೆ) ಸೇರಿಸಬಾರದು ಎಂದು ಪ್ರತಿಭಟನಾಕಾರರು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.  

ತಹಸೀಲ್ದಾರ್ ಹಾಗೂ ಜಾಲಿ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ತಿಪ್ಪೆ ಸ್ವಾಮಿ ಸ್ಥಳಕ್ಕಾಗಮಿಸಿದಾಗ ಪ್ರತಿಭಟನಾಕಾರರು ತಮ್ಮ ಮಾತುಗಳನ್ನು ಮುಂದಿಟ್ಟು, ಜಾಲಿಪಟ್ಟಣ ಪಂಚಾಯಿತಿಯನ್ನು ಸಿಎಂಸಿಗೆ ಸೇರಿಸುವ ಪ್ರಸ್ತಾವನೆಯನ್ನು ಯಾವುದೇ ಬೆಲೆ ತೆತ್ತಾದರೂ ಅನುಷ್ಠಾನಗೊಳಿಸಬಾರದು ಎಂದು ಪಟ್ಟು ಹಿಡಿದರು. ಮತ್ತು ಜನರ ಅಭಿಪ್ರಾಯವನ್ನು ಕಡೆಗಣಿಸಿ ಈ ಪ್ರಸ್ತಾವನೆಯನ್ನು ಜಾರಿಗೆ ತರಲು ಪ್ರಯತ್ನಿಸಿದರೆ, ಅದರ ವಿರುದ್ಧ ತೀವ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಗೋಪಾಲಕೃಷ್ಣ, ಎಸ್.ಐ ಶಿವಾನಂದ, ಜಾಲಿ ಪಪಂ ಸದಸ್ಯರಾದ ದಯಾನಂದ ನಾಯ್ಕ, ಲೀಲಾವತಿ ಆಚಾರಿ, ಬಾಲಚಂದ್ರ ನಾಯ್ಕ, ಸುರೇಶ್ ನಾಯ್ಕ, ಶಿಲ್ಪಾ, ತಿಮ್ಮಪ್ಪ ನಾಯ್ಕ, ದೇವಿದಾಸ ಮೊಗೇರ್ ಜಾಲಿ, ಯೋಗೇಶ್ ಜಾಲಿಕೋಡಿ ಇದ್ದರು.

Read These Next