ಕೋಟ: ಕೊರಗರ ಮನೆಯ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರಿಂದ ಲಾಠಿ ಪ್ರಹಾರ; ಹಲವರಿಗೆ ಗಾಯ, ಕೋಟ ಪೊಲೀಸರ ವಿರುದ್ಧ ವ್ಯಾಪಕ ಆಕ್ರೋಶ

Source: S O News | By I.G. Bhatkali | Published on 29th December 2021, 12:02 PM | Coastal News | State News |

ಕೋಟ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ ನಿನ್ನೆ ರಾತ್ರಿ ನಡೆಯುತ್ತಿದ್ದ ಮೆಹೆಂದಿ ಕಾರ್ಯಕ್ರಮದ ವೇಳೆ ಸಾರ್ವಜನಿಕರೊಬ್ಬರು ನೀಡಿದ ದೂರಿನಂತೆ ಆಗಮಿಸಿದ ಕೋಟ ಪೊಲೀಸರು, ನೆರೆದವರ ಮೇಲೆ ಲಾಠಿ ಪ್ರಹಾರ ನಡೆಸಿ ದೌರ್ಜನ್ಯ ಎಸಗಿದ್ದು, ಹಲವರು ಗಾಯಗೊಂಡ ಘಟನೆ ನಡೆದಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹುಟ್ಟೂರಿನಲ್ಲೇ ನಡೆದ ಪೊಲೀಸರ ಈ ಅಮಾನುಷ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಕೊರಗ ಕಾಲನಿಯಲ್ಲಿ ರಾತ್ರಿ ಆಯೋಜಿಸಲಾದ ರಾಜೇಶ್ ಎನ್ನುವವರ ಮೆಹೆಂದಿ ಕಾರ್ಯಕ್ರಮದಲ್ಲಿ ಡಿಜೆ ಅಳವಡಿಸಲಾಗಿತ್ತು. ಪರಿಸರದ ವ್ಯಕ್ತಿಯೊಬ್ಬರು ಈ ಬಗ್ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಬಂದ ಕೋಟ ಪೊಲೀಸರು ಮೆಹೆಂದಿ ಕಾರ್ಯಕ್ರಮದ ಮನೆಗೆ ಬಂದು ಅಲ್ಲಿದ್ದ ಮಕ್ಕಳು, ಹೆಂಗಸರು ಎಂದು ನೋಡದೆ ಲಾಠಿಯಿಂದ ಬಡಿದಿದ್ದು, ಸುಮಾರು ಹತ್ತು ಮಂದಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಘಟನೆ ವಿವರ: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಉದ್ಯೋಗಿ  ಯಾಗಿರುವ ಕೊರಗ ಸಮುದಾಯದ ರಾಜೇಶ್ ಎಂಬವರ ಮದುವೆ ಡಿ.29ಕ್ಕೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ 27ರಂದು ರಾತ್ರಿ ಮೆಹೆಂದಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ತ್ತು. ಈ ಮನೆಯಲ್ಲಿ ದಶಕಗಳ ಬಳಿಕ ಮದುವೆ ಕಾರ್ಯಕ್ರಮ ನಡೆಯುತ್ತಿರುವುದರಿಂದ ಡಿಜೆಯನ್ನು ಅಳವಡಿಸಲಾಗಿತ್ತು. ಅಲ್ಲಿನ ಶಬ್ದದ ಕುರಿತು ಸಾರ್ವಜನಿಕರೊಬ್ಬರು ಕೋಟ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಶಬ್ದ ಕಡಿಮೆ ಮಾಡುವಂತೆ ತಿಳಿಸಿ ಹೋಗಿದ್ದರು. ಕೆಲಹೊತ್ತಿನ ಬಳಿಕ ಮತ್ತೊಮ್ಮೆ ದೂರು ಬಂದಿದ್ದು, ಕೋಟ ಠಾಣಾಧಿಕಾರಿ ಸಂತೋಷ್.ಬಿ.ಪಿ., ತಾವೇ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು.

ಈ ವೇಳೆ ಪೊಲೀಸರು ಹಾಗೂ ಮೆಹೆಂದಿಗೆ ಬಂದ ಜನರ ನಡುವೆ ವಾಗ್ವಾದ ನಡೆದಿದ್ದು, ಉಳಿದವರಿಗೆ ಅನ್ವಯಿಸದ ಕಾನೂನನ್ನು ನಮ್ಮ ಸಮುದಾಯಕ್ಕೆ ಮಾತ್ರ ಯಾಕೆ ಹೇರುತ್ತೀರಿ ಎಂದು ಪ್ರಶ್ನಿಸಿದಾಗ, ಪೊಲೀಸರು ಕಂಡಕಂಡವರ ಮೇಲೆಲ್ಲಾ ಲಾಠಿ ಪ್ರಹಾರ ನಡೆಸಲಾರಂಭಿಸಿದರು ಎಂದು ಸ್ಥಳದಲ್ಲಿದ್ದ ಮಹಿಳೆಯರು, ವೃದ್ಧೆಯರು ಅಳುತ್ತಾ ತಿಳಿಸಿದರು.

ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ ಸ್ಥಳದಲ್ಲಿದ್ದ ಮೂವರನ್ನು ವಶಕ್ಕೆ ಪಡೆದುಕೊಂಡರು. ಇದರಿಂದ ರೊಚ್ಚಿ ಗೆದ್ದ ಕೊರಗ ಸಮುದಾಯದವರು ರಾತ್ರಿ ಕೋಟ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡವರನ್ನು ಬಿಡುಗಡೆ ಮಾಡುವಂತೆ ಅಗ್ರಹಿಸಿದರು.

ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಬಾಸಿ ಹಾಗೂ ಇತರರು ಹಲವರೊಂದಿಗೆ ಮಾತುಕತೆ ನಡೆಸಿದಾಗ ಸಾರ್ವಜನಿಕ ಶಾಂತಿಭಂಗದ ಬಗ್ಗೆ ಕೇಸು ದಾಖಲಿಸಿ ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಿ ಪೊಲೀಸರು ಪ್ರಕರಣವನ್ನು ಇತ್ಯರ್ಥಗೊಳಿಸಿದರು ಎಂದು ತಿಳಿದುಬಂದಿದೆ.

ಲಾಠಿ ಚಾರ್ಜ್‌ನಿಂದ ಹಲವರಿಗೆ ಗಾಯವಾಗಿದ್ದು ಗಾಯಗೊಂಡವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಸಂದರ್ಭದಲ್ಲಿ ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಬಾಸಿ, ದಲಿತ ಮುಖಂಡ ಶಾಮ್ ಸುಂದರ್ ತೆಕ್ಕಟ್ಟೆ, ಕೋಟತಟ್ಟು ಗ್ರಾಪಂ ಸದಸ್ಯ ಪ್ರಮೋದ್ ಹಂದೆ, ಸತೀಶ್‌ಬಾರಿಕೆರೆ, ನಾಗೇಂದ್ರ ಪುತ್ರನ್ ಸ್ಥಳದಲ್ಲಿದ್ದರು.

ಮಹಿಳೆಯರಿಂದ ದೂರು: ಎಲ್ಲರೂ ಮೆಹೆಂದಿ ಸಂಭ್ರಮದಲ್ಲಿದ್ದಾಗ ಏಕಾಏಕಿ ಪೊಲೀಸರು ಬಂದು ಡಿಜೆ ಬಂದ್ ಮಾಡಿ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಹೇಳಿದರು. ವಿಷಯ ಕೇಳುವುದರೊಳಗೆ ಅಲ್ಲಿದ್ದ ಹೆಂಗಸರು ಮಕ್ಕಳನ್ನು ನೋಡದೆ ಎಲ್ಲರಿಗೂ ಲಾಠಿಯಿಂದ ಹೊಡೆಯಲು ಪ್ರಾರಂಭಿಸಿದರು.

ಅಷ್ಟೇ ಅಲ್ಲದೆ ಮದುಮಗನಿಗೂ ಸಹ ಹಲ್ಲೆ ಮಾಡಲಾಯಿತು. ಇದರಿಂದ ಮದುಮಗನ ಬೆರಳಿಗೆ ಗಂಭೀರ ಪೆಟ್ಟಾಗಿದೆ. ಹೆಂಗಸರಿಗೆ ಲಾಠಿಯಿಂದ ಹೊಡೆದು ಹಲ್ಲೆ ಮಾಡಲಾಗಿದೆ. ಯಾವುದೇ ಮಹಿಳಾ ಪೊಲೀಸ್ ಇಲ್ಲದೆ ಮನೆಗೆ ನುಗ್ಗಿದ್ದಾರೆ ಎಂದು ಸ್ಥಳದಲ್ಲಿದ್ದ ಮಹಿಳೆಯರು ಗಂಭೀರ ಆರೋಪ ಮಾಡಿದ್ದು, ನಮಗೆ ನ್ಯಾಯ ಬೇಕು ಎಂದು ಕೇಳಿಕೊಂಡರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬ್ರಹ್ಮಾವರ ವೃತ್ತನಿರೀಕ್ಷಕ ಅನಂತಪದ್ಮನಾಭ, ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಕೊರಗ ಸಮುದಾಯದವರಿಗೆ ನ್ಯಾಯ ಒದಗಿ ಸುತ್ತೇನೆ. ಅಲ್ಲದೆ ಯಾರು ತಪ್ಪಿತಸ್ಥರು ಇದ್ದಾರೆ ಅವರ ಮೇಲೆ ಕ್ರಮ ಕೈ ಗೊಳ್ಳುತ್ತೇನೆ ಎಂದರು.

ಕೋಟ ಠಾಣಾಧಿಕಾರಿ ಸಮರ್ಥನೆ ಘಟನೆ ಕುರಿತು ಪ್ರತಿಕ್ರಿಯಿಸಿದ ಠಾಣಾಧಿಕಾರಿ ಸಂತೋಷ್.ಬಿ.ಪಿ, ಮೆಹೆಂದಿ ಕಾರ್ಯಕ್ರಮಕ್ಕೆ ನಾವು ಅಡ್ಡಿ ಪಡಿಸಿಲ್ಲ. ಡಿಜೆ ಶಬ್ದದಿಂದ ತೊಂದರೆ ಆಗುತ್ತಿದೆ ಎಂದು ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ನಮ್ಮ ಸಿಬ್ಬಂದಿಯನ್ನು ಕಳಿಸಿ ಸಂಗೀತದ ಡಿಜೆಯ ಸೌಂಡ್ ಕಡಿಮೆ ಮಾಡಲು ಸೂಚಿಸಿದ್ದೇವೆ. ಅದಕ್ಕೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ನಾನು ಸಿಬ್ಬಂದಿಯೊಂದಿಗೆ ತೆರಳಿ ಡಿಜೆ ಬಂದ್‌ ಮಾಡಲು ವಿನಂತಿಸಿದ್ದೆ. ಅದಕ್ಕೆ ಕೆಲವರು ಉಡಾಫೆ ಉತ್ತರ ನೀಡಿದ್ದು, ಬಂದ್ ಮಾಡಲ್ಲ ಏನು ಬೇಕಾದ್ರು ಮಾಡಿಕೊಳ್ಳಿ ಅಂತ ಹೇಳಿದರು. ಅದಕ್ಕೆ ಅವರನ್ನು ವಶಕ್ಕೆ ಪಡೆಯುವಾಗ ಜನರು ತಳ್ಳಾಟ ಮಾಡಿದ್ದಾರೆ. ಅದು ಬಿಟ್ಟು ಯಾವುದೇ ಪೊಲೀಸ್ ದೌರ್ಜನ್ಯ ನಡೆದಿಲ್ಲ ಎಂದರು.

ಪೊಲೀಸರ ವಿರುದ್ಧ ಕ್ರಮಕ್ಕೆ ಸಚಿವ ಕೋಟ ಸೂಚನೆ:
ಬ್ರಹ್ಮಾವರ ತಾಲೂಕು ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗರ ಕಾಲನಿಯಲ್ಲಿ ನಿನ್ನೆ ರಾತ್ರಿ ನಡೆದ ಸಮಾರಂಭವೊಂದಕ್ಕೆ ಏಕಾಏಕಿ ದಾಳಿ ಮಾಡಿದ ಪೊಲೀಸರು, ಮದುಮಗನ ಸಹಿತ ಅಮಾಯಕ ಕೊರಗರ ಮೇಲೆ ಹಲ್ಲೆ ಮಾಡಿರುವುದನ್ನು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಬಲವಾಗಿ ಖಂಡಿಸಿದ್ದಾರೆ. ಘಟನೆಯ ಕುರಿತಂತೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಅವರು, ಈ ಕುಟುಂಬಗಳು ನನಗೆ ಪರಿಚಯವಿದ್ದು, ಅಲ್ಲಿರುವ 9ಕ್ಕೂ ಹೆಚ್ಚು ಕುಟುಂಬದವರು ಅಮಾಯಕರಾಗಿದ್ದಾರೆ. ಅವರ ಮೇಲೆ ವಿನಾಕಾರಣ ದೌರ್ಜನ್ಯ ಎಸಗಿರುವ ಪೊಲೀಸರ ಮೇಲೆ ತಕ್ಷಣ ಕಠಿಣ ಕ್ರಮ ಜರುಗಿಸಬೇಕೆಂದು ಸೂಚನೆ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಶ್ಚಿಮ ವಲಯ ಐಜಿಪಿ ಅವರಿಗೆ ದೂರವಾಣಿ ಮೂಲಕ ಮಾತನಾಡಿರುವ ಸಚಿವರು ಇಂತಹ ಚಟುವಟಿಕೆಗಳನ್ನು ಸರಕಾರ ಸಹಿಸುವುದಿಲ್ಲ. ಈಗಾಗಲೇ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳ ಮೇಲೆ ಕ್ರಮ ಜರುಗಿ ಸಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಘಟನೆಗೆ ಕಾರಣರಾದ ಪೊಲೀಸರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಹೇಳಿರುವುದಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲಿ ತಾನು ಭಾಗವಹಿಸಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ಮಾತನಾಡಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಕೋಟ ಪಿಎಸ್ಸಿ, 5 ಸಿಬ್ಬಂದಿ ಠಾಣೆಯಿಂದ ಸ್ಥಳಾಂತರ: ಎಸ್ಪಿ
ಕೋಟತಟ್ಟು ಬಾರಿಕೆರೆಯ ಕೊರಗ ಕಾಲನಿಯಲ್ಲಿ ಸೋಮವಾರ ರಾತ್ರಿ ಮೆಹೆಂದಿ ಕಾರ್ಯಕ್ರಮದ ವೇಳೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಕೋಟ ಠಾಣೆಯ ಠಾಣಾಧಿಕಾರಿ ಸಂತೋಷ್ ಬಿ.ಪಿ. ಹಾಗೂ ಐವರು ಸಿಬ್ಬಂದಿಯನ್ನು ಮುಂದಿನ ಆದೇಶದವರೆಗೆ ಠಾಣೆಯಿಂದ ಸ್ಥಳಾಂತರಿಸಲಾಗಿದೆ. ಇಡೀ ಘಟನೆಯ ಕುರಿತು ಉಡುಪಿ ಡಿವೈಎಸ್ಪಿಯವರಿಂದ ತನಿಖೆಗೆ ಆದೇಶಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.ಉಡುಪಿ ವಿಭಾಗ ಡಿವೈಎಸ್ಪಿ ಸುಧಾಕರ್ ಎಸ್. ನಾಯ್ಕ ಘಟನೆಯ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದು, ಬುಧವಾರ ಸಂಜೆಯೊಳಗೆ ವರದಿ ನೀಡುವಂತೆ ಅವರಿಗೆ ತಿಳಿಸಲಾಗಿದೆ. ಈ ವರದಿಯನ್ನು ತಾನು ಪಶ್ಚಿಮ ವಲಯ ಐಜಿಪಿಗೆ ಒಪ್ಪಿಸಲಿದ್ದು, ಅವರು ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದ್ದಾರೆ ಎಂದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...