ಮುಸ್ಲಿಮರ ಮೀಸಲಾತಿ ರದ್ದು ನಿರ್ಧಾರ; ಸಂಪೂರ್ಣ ತಪ್ಪುಕಲ್ಪನೆ ಆಧಾರಿತ; ಎ.18ರವರೆಗೆ ಪ್ರವೇಶ, ನೇಮಕಾತಿ ಇಲ್ಲ

Source: Vb | By I.G. Bhatkali | Published on 15th April 2023, 6:18 AM | State News |

ಹೊಸದಿಲ್ಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಸುಮಾರು ಮೂರು ದಶಕಗಳಿಂದಲೂ ಮುಸ್ಲಿಮರಿಗೆ ನೀಡಲಾಗುತ್ತಿದ್ದ 4 ಶೇ. ಮೀಸಲಾತಿಯನ್ನು ರದ್ದುಪಡಿಸಲು ಕರ್ನಾಟಕ ಸರಕಾರ ತೆಗೆದುಕೊಂಡಿರುವ ನಿರ್ಧಾರವು ಸಂಪೂರ್ಣ ತಪ್ಪು ಕಲ್ಪನೆ'ಯನ್ನು ಆಧರಿಸಿದೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಮ್. ಜೋಸೆಫ್ ಮತ್ತು ಬಿ.ವಿ. ನಾಗರತ್ನಾ ಅವರನ್ನೊಳಗೊಂಡ ನ್ಯಾಯ ಪೀಠವು, ಈ ವಿಷಯದಲ್ಲಿ ಕರ್ನಾಟಕ ಸರಕಾರಕ್ಕೆ ನೋಟಿಸನ್ನೂ ಜಾರಿಗೊಳಿಸಿದೆ.

ರಾಜಕೀಯ ಕಾರಣಗಳಿಗಾಗಿ ಮೀಸಲಾತಿಗಳಿರಬಾರದು ಎಂದು ಮುಸ್ಲಿಮ್ ಸಮುದಾಯದ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ದುಶ್ಯಂತ ದವೆ ವಾದಿಸಿದರು. ಕರ್ನಾಟಕದಲ್ಲಿ ಮುಸ್ಲಿಮರು ಹಿಂದುಳಿದ ಸಮುದಾಯವಾಗಿದ್ದಾರೆ ಹಾಗೂ ಅವರು ಮೀಸಲಾತಿಗೆ ಅರ್ಹರಾಗಿದ್ದಾರೆ ಎನ್ನುವುದು ಪ್ರಾಯೋಗಿಕ ಅಂಕಿಅಂಶಗಳು ಮತ್ತು ಪುರಾವೆಗಳಿಂದ ಸಾಬೀತಾಗಿದೆ ಎಂದು ದವೆ ಹೇಳಿದರು.

ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ, ಮುಸ್ಲಿಮರಿಗೆ ಅವರ ಧರ್ಮದ ಏಕೈಕ ಆಧಾರದಲ್ಲಿ ಮೀಸಲಾತಿಯನ್ನು ನೀಡಲಾಗಿದೆ ಹಾಗೂ ಅವರ ಮೀಸಲಾತಿಯನ್ನು ಸಮರ್ಥಿಸಲು ಪ್ರಾಯೋಗಿಕ ಅಂಕಿಸಂಖ್ಯೆಗಳಿಲ್ಲ ಎಂದು ಹೇಳಿಕೊಂಡರು.

ಬಳಿಕ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು ಎಪ್ರಿಲ್ 18ಕ್ಕೆ ನಿಗದಿಪಡಿಸಿತು. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರವು, ಇತರ ಹಿಂದುಳಿದ ವರ್ಗ (ಒಬಿಸಿ)ಗಳ ಮುಸ್ಲಿಮರ ನಾಲ್ಕು ಶೇ. ಮೀಸಲಾತಿಯನ್ನು ರದ್ದುಪಡಿಸಲು ನಿರ್ಧರಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಬದಲಿಗೆ, ಮುಸ್ಲಿಮರಿಗೆ ನೀಡಲಾಗುತ್ತಿದ್ದ 4 ಶೇ. ಮೀಸಲಾತಿಯನ್ನು ತಲಾ 2 ಶೇ.ದಂತೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ನೀಡುವ ತೀರ್ಮಾನವನ್ನು ಸರಕಾರ ತೆಗೆದುಕೊಂಡಿತ್ತು. ಜೊತೆಗೆ, ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ತಾತಿಗಳಿಗೆ ನೀಡಲಾಗುವ 10 ಶೇ. ಮೀಸಲಾತಿಯ ವ್ಯಾಪ್ತಿಯಲ್ಲಿ ಮೀಸಲಾತಿಗೆ ಅರ್ಹರಾಗಿರುವ ಮುಸ್ಲಿಮರನ್ನು ತರಲು ಅದು ನಿರ್ಧರಿಸಿತ್ತು.

ಎ.18ರವರೆಗೆ ಪ್ರವೇಶ, ನೇಮಕಾತಿ ಇಲ್ಲ: ಸುಪ್ರೀಂಗೆ ರಾಜ್ಯ ಸರಕಾರ ಭರವಸೆ:
ಇತರ ಹಿಂದುಳಿದ ವರ್ಗ (ಒಬಿಸಿ)ಗಳ ವಿಭಾಗದಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ 4 ಶೇ. ಮೀಸಲಾತಿಯನ್ನು ರದ್ದುಪಡಿಸುವ ಸರಕಾರದ ಆದೇಶದ ಆಧಾರದಲ್ಲಿ ಮುಂದಿನ ವಿಚಾರಣೆ ನಡೆಯಲಿರುವ ಎಪ್ರಿಲ್ 18ರವರೆಗೆ ಪ್ರವೇಶಗಳನ್ನು ನೀಡಲಾಗುವುದಿಲ್ಲ ಮತ್ತು ನೇಮಕಾತಿಗಳನ್ನು ನಡೆಸಲಾಗುವುದಿಲ್ಲ ಎಂದು ಕರ್ನಾಟಕ ಸರಕಾರವು ಗುರುವಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.

“ವಾಪಸ್ ಪಡೆಯಲಾಗ ದಂಥ ಯಾವುದನ್ನೂ ಇಂದು ಮತ್ತು ಎಪ್ರಿಲ್ 18ರ ನಡುವೆ ಮಾಡುವುದಿಲ್ಲ" ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಸಂಬಂಧಿತ ಸರಕಾರಿ ಆದೇಶಕ್ಕೆ ತಡೆಯಾಜ್ಞೆ ನೀಡುವ ಇಂಗಿತವನ್ನು ನ್ಯಾಯಪೀಠವು ವ್ಯಕ್ತಪಡಿಸಿದಾಗ ತುಷಾರ್ ಮೆಹ್ತಾ ಈ ಭರವಸೆಯನ್ನು ನೀಡಿದರು.

ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯ ಬುನಾದಿ 'ಅತ್ಯಂತ ಅಸ್ಥಿರವಾಗಿದೆ ಮತ್ತು ನ್ಯೂನತೆಗಳಿಂದ ಕೂಡಿದೆ" ಎನ್ನುವುದನ್ನು ಈ ಸರಕಾರಿ ಆದೇಶ ಸೂಚಿಸುತ್ತದೆ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ ಎಂದು ನ್ಯಾಯಪೀಠ ಹೇಳಿತು. ಕರ್ನಾಟಕ ರಾಜ್ಯ ಹಿಂದೂಲಿದ ವರ್ಗಗಳ ಆಯೋಗದ ಮಧ್ಯಂತರ ವರದಿಯ ಆಧಾರದಲ್ಲಿ ಕರ್ನಾಟಕ ಸರ್ಕಾರವು ಈ ಸರ್ಕಾರಿ ಆದೇಶವನ್ನು ಹೊರಡಿಸಿದೆ ಎನ್ನಲಾಗಿದೆ ರಾಜ್ಯದಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ನಿಲ್ಲಿಸುವ ಮೊದಲು ಆಯೋಗದ ಅಂತಿಮ ವರದಿಯವರೆಗೆ ಸರಕಾರ ಕಾಯ ಬಹುದಾಗಿತ್ತು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

“ಅದೂ ಅಲ್ಲದೆ, ಮುಸ್ಲಿಮರು ಈ ಸೌಲಭ್ಯವನ್ನು ತುಂಬಾ ಸಮಯ ದಿಂದ ಪಡೆಯುತ್ತಾ ಬಂದಿದ್ದಾರೆ. ಹಾಜರುಪಡಿಸಲಾದ ದಾಖಲೆಗಳ ಪ್ರಕಾರ, ಮುಸ್ಲಿಮರು ಹಿಂದುಳಿದವರು... ಮತ್ತು ಬಳಿಕ ಅದನ್ನು ದಿಢೀರ್ ಆಗಿ ಬದಲಾಯಿಸಲಾಗಿದೆ' ಎಂದು ನ್ಯಾ. ಜೋಸೆಫ್ ಹೇಳಿದರು.

“ಇದು ಶಾಲಾ ಪ್ರವೇಶ ಋತು. ಶಾಲೆಗಳು ಜೂನ್‌ನಲ್ಲಿ ಅಥವಾ ಅದಕ್ಕಿಂತಲೂ ಮೊದಲೇ ಆರಂಭಗೊಳ್ಳುತ್ತವೆ. ಈ ವರದಿಯ ಆಧಾರದಲ್ಲಿ ಶಾಲೆಗಳು ಪ್ರವೇಶ ನೀಡುತ್ತವೆಯೇ ಎನ್ನುವುದು ನಮಗೆ ತಿಳಿಯಬೇಕು' ಎಂದು ಅವರು ಹೇಳಿದರು. ಈ ವಿಷಯದಲ್ಲಿ ಎಪ್ರಿಲ್ 17ರ ಮೊದಲು ಅಫಿಡವಿಟ್ ಸಲ್ಲಿಸುವಂತೆ ನ್ಯಾಯಪೀಠವು ರಾಜ್ಯಕ್ಕೆ ಸೂಚಿಸಿತು. ಈ ಅವಧಿಯಲ್ಲಿ ಯಾವುದೇ ಪ್ರವೇಶಗಳನ್ನು ನೀಡಲಾಗುವುದಿಲ್ಲ ಅಥವಾ ನೇಮಕಾತಿಗಳನ್ನು ಮಾಡಲಾಗುವುದಿಲ್ಲ ಎಂಬ ಸಾಲಿಸಿಟರ್ ಜನರಲ್‌ ಹೇಳಿಕೆಯನ್ನು ನ್ಯಾಯಾಲಯವು ಗಣನೆಗೆ ತೆಗೆದುಕೊಂಡಿತು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...