ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜತೆಗೆ ಉದ್ಯೋಗ ಸೃಷ್ಟಿ ಕೃಷಿ, ನೀರಾವರಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಸಿರಿಧಾನ್ಯ ಬಳಕೆಗೆ ನಮ್ಮ ಮಿಲ್ಲೆಟ್, ಮೀನುಗಾರಿಕೆ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ., ಅಂಗನವಾಡಿ ಕಾರ್ಯಕರ್ತೆಯರಿಗೆ 90 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಫೋನ್, ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಆಹಾರಧಾನ್ಯ ನೀಡುವ ಅನ್ನ ಸುವಿಧಾ', ಮಾಜಿ ದೇವದಾಸಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ ಹೆಚ್ಚಳ ಸಹಿತ ಅಶಕ್ತ ವರ್ಗಗಳ ಜನರಿಗೆ ಭರಪೂರ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ 2024-25ನೇ ಸಾಲಿನ ಆಯವ್ಯಯ ಮಂಡಿಸಿದ ಸಿದ್ದರಾಮಯ್ಯ, ತೋಟಗಾರಿಕೆ ಕಾಲೇಜು ಸ್ಥಾಪನೆ, ಹಂದಿ-ಕೋಳಿ ಸಾಕಲು ತರಬೇತಿ, ನೀರಾವರಿ ಯೋಜನೆಗೆ ಪ್ರತ್ಯೇಕ ಯೋಜನಾ ವಿಭಾಗ, ಶಾಲಾ-ಕಾಲೇಜು ಕೊಠಡಿಗಳ ದುರಸ್ತಿಗೆ 850 ಕೋಟಿ ರೂ.ನೆರವು, 10 ಕೋಟಿ ರೂ.ವೆಚ್ಚದಲ್ಲಿ ನೀಟ್, ಸಿಇಟಿ, ಜಾವ ತರಬೇತಿ, 350 ಕೋಟಿ ರೂ.ವೆಚ್ಚದಲ್ಲಿ 25 ಪಿಎಚ್ ಸಿಗಳ ಉನ್ನತೀಕರಣ, 638 ಕೋಟಿ ರೂ. ವೆಚ್ಚದಲ್ಲಿ 29 ಹೊಸ ವಸತಿ ಶಾಲಾ ಸಂಕಿರ್ಣ ನಿರ್ಮಾಣ, 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆ ಪ್ರಾರಂಭ ಮಾಡಲಾಗುವುದು ಎಂದು ಘೋಷಣೆ ಮಾಡಿದರು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗ್ಗೆ ತಮ್ಮ ಶೈಲಿಯಲ್ಲೇ ರೇಷ್ಮೆ ಜುಬ್ಬ, ಪಂಚೆಯನ್ನುಟ್ಟು ತ್ರಿವರ್ಣದ ಶಾಲನ್ನು ಹೆಗಲಿಗೆ ಹಾಕಿಕೊಂಡು ಸಂಪುಟ ಸಹೋದ್ಯೋಗಿಗಳ ಜತೆಗೆ ತಮ್ಮ ನಿವಾಸದಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ, ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ ಪಡೆದುಕೊಂಡರು. ಆ ಬಳಿಕ ಬೆಳಗ್ಗೆ 10:15ರ ಸುಮಾರಿಗೆ ಸಚಿವರು, ಶಾಸಕರೊಂದಿಗೆ ವಿಧಾನಸಭೆಗೆ ಆಗಮಿಸಿದ ಅವರು, ಸುದೀರ್ಘ 3 ಗಂಟೆ 10 ನಿಮಿಷಗಳ ಕಾಲ 175 ಪುಟಗಳ ಬಜೆಟ್ ಭಾಷಣ ಓದಿದರು.
ಒಟ್ಟು 3,71,383 ಕೋಟಿ ರೂ. ಮೊತ್ತದ ಬೃಹತ್ ಗಾತ್ರದ ಆಯವ್ಯಯವನ್ನು ಮಂಡಿಸಿದ್ದು, ಒಟ್ಟು ಸ್ವೀಕೃತಿ 3,68,674 ಕೋಟಿ ರೂ., ರಾಜಸ್ವ ಸ್ವೀಕೃತಿ 2,63,178 ಕೋಟಿ ರೂ., ಸಾರ್ವಜನಿಕ ಋಣ -1,05,246 3 ಕೋಟೆ ರೂ. ಒಟ್ಟು ವೆಚ್ಚ 3,71,383 ಕೋಟಿ ರೂ. A., ರಾಜಸ್ವ ವೆಚ್ಚ-2,90,531 ಕೋಟಿ ರೂ., ಬಂಡವಾಳ ವೆಚ್ಚ-55,877 ಕೋಟಿ ರೂ.ಹಾಗೂ ಸಾಲ ಮರುಪಾವತಿ-24,794 ಕೋಟಿ ರೂ.ಗಳು ಎಂದು ಅವರು ಅಂಕಿ-ಅಂಶಗಳನ್ನು ಪ್ರಕಟಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕಲ್ಯಾಣಕ್ಕಾಗಿ ಎಸಿಎಸ್ಪಿ ಹಾಗೂ ಟಿಎಸ್ಪಿ ಅಡಿಯಲ್ಲಿ ಒಟ್ಟು 39,121 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಆಪೈಕಿ ಎಸ್‌ಸಿಎಸ್‌ಪಿ ಅಡಿ-27,674 ಕೋಟಿ ರೂ. ಹಾಗೂ ಟಿಎಸ್ಪಿ ಅಡಿಯಲ್ಲಿ 11,447 ಕೋಟಿ ರೂ.ಗಳನ್ನು ನೀಡಲಾಗಿದೆ ಮಹಿಳಾ ಆಯವ್ಯಯದಲ್ಲಿ 86,423 ಕೋಟಿ ರೂ. ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಜೀತಮುಕ್ತ ಕಾರ್ಮಿಕರ ಮಾಸಿಕ ಪ್ರೋತ್ಸಾಹ ಧನ ಹೆಚ್ಚಳ, ಈ ಸಾಲಿನಲ್ಲಿ ಕೆಶಿಪ್-4 ಯೋಜನೆಯಡಿ ರಸ್ತೆ ಅಭಿವೃದ್ದಿ ಜಾರಿ ಸೇರಿದಂತೆ ಮೂಲಸೌಕರ್ಯಗಳ ಪ್ರಗತಿ ಮೇಲ್ವಿಚಾರಣೆಗೆ ಪ್ರತ್ಯೇಕ ಘಟಕ ಸ್ಥಾಪನೆ, ಎಂಎಸ್‌ಐಎಲ್ ಚಿಟ್ ಫಂಡ್ ಗ್ರಾಮಾಂತರ ಭಾಗಗಳಿಗೂ ವಿಸ್ತರಣೆ, 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್ ಸ್ಥಾಪನೆ, ಬೆಂಗಳೂರಿನಲ್ಲಿ ವಿಜ್ಞಾನ ನಗರ ಸ್ಥಾಪನೆ, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ, ಹೊಸ ಪರಿಸ್ಥಿತ ಪ್ರವಾಸೋದ್ಯಮ ನೀತಿ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
2 ಲಕ್ಷ ಉದ್ಯೋಗ ಸೃಜನೆಯ ಹೊಸ ಜವಳಿ ನೀತಿ ಜಾರಿ, ಸಣ್ಣಮತ್ತು ಮಧ್ಯಮ ಕೈಗಾರಿಕೆಗಳ ಐಪಿಒ ಬಿಡುಗಡೆಗೆ ಸಹಾಯ ಧನ, ಬಂಡವಾಳ ಆಕರ್ಷಣೆಗೆ ಹೊಸ ಕೈಗಾರಿಕಾ ನೀತಿ, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಗೆ 20 ಸಾವಿರ ಕೋಟಿ ರೂ.ಯೋಜನೆ, ಪೌರ ಕಾರ್ಮಿಕರಸೇವೆ ಖಾಯಮಾತಿಗೆ ಕ್ರಮ, ಬೆಂಗಳೂರಿನ ಹೊರವಲಯದಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರವನ್ನು ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ಮೂಲಕ ಜಾಗತಿಕ ಮಟ್ಟದ ನಗರವಾಗಿ ಅಭಿವೃದ್ಧಿ, ಐಟಿಬಿಟಿ ಕೃತಕ ಬುದ್ಧಿಮತ್ತೆ ರೋಬೋಟಿಕ್ಸ್, ಸೆಮಿಕಂಡಕ್ಟರ್, ಆಟೋಮೊಬೈಲ್ ಮತ್ತು ಇತರ ಪ್ರವರ್ಧಮಾನಕ್ಕೆ ಬರುತ್ತಿರುವ ವಲಯಗಳ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು ಕ್ರಮ ಕೈಗೊಂಡು ಇಡೀ ದೇಶಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತೇವೆ. ಇದು ನಮ್ಮ ಕಾಯಕ ಎಂದು ಸಿದ್ದರಾಮಯ್ಯ ತಿಳಿಸಿದರು.
ವಕ್ಸ್ ಆಸ್ತಿ ಸಂರಕ್ಷಣೆಗೆ 100 ಕೋಟಿ ರೂ., ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ 10ಕೋಟಿ ರೂ. ನೆರವು, ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200ಕೋಟಿ ರೂ., 2024-25ನೇ ಸಾಲಿನಲ್ಲಿ 3ಲಕ್ಷ ಮನೆ ನಿರ್ಮಾಣ, ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಹೊಸ ವಿಧೇಯಕ ಜಾರಿ, ರಸ್ತೆ ಅಭಿವೃದ್ದಿಗೆ ಕಲ್ಯಾಣ ಪಥ ಯೋಜನೆ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.
ಪರಿಸ್ಥಿತ ಪ್ರವಾಸೋದ್ಯಮ ನೀತಿ ಜಾರಿ, ಸುಳ್ಳು ಸುದ್ದಿ ತಡೆಗೆ ಸತ್ಯ ತಪಾಸಣಾ ತಂಡ-ವಿಶೇಷ ಕೋಶ ಸ್ಥಾಪನೆ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಸಾಮಾಜಿಕ ಕೊಡುಗೆ ನೀಡುವ ಪತ್ರಕರ್ತರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದ ಅವರು, ಬಿಯರ್ ಮೇಲಿನ ಅಬಕಾರಿ ಶುಲ್ಕ ಹೆಚ್ಚಳವನ್ನು ಹೊರತುಪಡಿಸಿ, ಉಳಿದಂತೆ ಜನಸಾಮಾನ್ಯರ ಮೇಲೆ ಯಾವುದೇ ತೆರಿಗೆ ಹೊರೆ ಹೇರದೆ 'ಕರ್ನಾಟಕ ಮಾದರಿ ಅಭಿವೃದ್ಧಿ'ಯ ಮುನ್ನೋಟದ ಬಜೆಟ್ ಅನ್ನು ಪ್ರಕಟಿಸಿದರು.
'ಬಸ್ ಹತ್ತುವ ಮುನ್ನ ತಲೆಬಾಗಿ ನಮಸ್ಕರಿಸಿ ಮಹಿಳೆಯ ಮುಖದಲ್ಲಿದ್ದ ಸಂತೋಷ, ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಮಹಿಳೆಯರ ಪ್ರಾರ್ಥನೆ, ಯುವನಿಧಿ ನೆರವು ಪಡೆದ ನಿರುದ್ಯೋಗಿ ಯುವಕನ ಆನಂದಬಾಷೆ ಇವು ಗ್ಯಾರಂಟಿ ಯೋಜನೆಗಳ ಮೇಲಿನ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. 'ಅಭಿವೃದ್ಧಿಯ ಫಲವನ್ನು ಅದರ ಹಕ್ಕುದಾರರಾದ ಜನಸಾಮಾನ್ಯರಿಗೆ ಹಿಂದಿರುಗಿಸುವುದಲ್ಲಿ ಸಂತೃಪ್ತಿಯಿದೆ' ಎಂದಿರುವ ಸಿದ್ದರಾಮಯ್ಯ, 'ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿಭಾಗ್ಯಗಳೆಂದು ಹಂಗಿಸಿದ ಪ್ರತಿಪಕ್ಷಗಳು ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ(ಬಿಜೆಪಿ)ಗ್ಯಾರಂಟಿಗಳೆಂದು ನಂಬಿಸಲು ಹೆಣಗಾಡುತ್ತಿವೆ' ಎಂದು ತಿರುಗೇಟು ನೀಡಿದರು.