ಭಟ್ಕಳ: ಅಪೂರ್ಣಗೊಂಡಿರುವ ರಾಷ್ಟ್ರೀಯ ಹೆದ್ದಾರಿ; ಪ್ರತಿಭಟನೆಯ ಜೊತೆಗೆ ಕಾನೂನು ಹೋರಾಟಕ್ಕೂ ಸಿದ್ಧ-ಹೆದ್ದಾರಿ ಹೋರಾಟ ಸಮಿತಿ ನಿರ್ಧಾರ

Source: SOnews | By Staff Correspondent | Published on 9th February 2024, 6:36 PM | Coastal News |

ಭಟ್ಕಳ: ಕಳೆದ 10/12 ವರ್ಷಗಳ ಹಿಂದೆ ಆರಂಭಗೊಂಡಿರುವ ರಾ.ಹೆ.ಹೆದ್ದಾರಿ ೬೬ ರ ಕಾಮಗಾರಿ ಇದುವರೆಗೂ ಪೂರ್ಣಗೊಳ್ಳದೆ ಇಲ್ಲಿನ ನಾಗರೀಕರು ನರಕಯಾತನೆ ಅನುಭವಿಸುವಂತಹ ಸ್ಥಿತಿ ನಿರ್ಮಾಣ ಗೊಂಡಿದ್ದು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಜನರ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮೌನ ವಹಿಸಿದ್ದು ಇದರ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಕಾನೂನು ಹೋರಾಟಕ್ಕೆ ಹೆದ್ದಾರಿ ಅಭಿವೃದ್ಧಿ ಹೋರಾಟ ಸಮಿತಿ ಸಿದ್ದವಾಗಿದೆ.

ಈ ಕುರಿತಂತೆ ಗುರುವಾರ ಸಂಜೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಸರ್ಚಿಸಿದ ಸಮಿತಿ ಮುಖಂಡರು ಹೆದ್ದಾರಿ ಕುರಿತ ಮುಂದಿನ ಹೋರಾಟದ ಯೋಜನೆಯನ್ನು ರೂಪಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಹೆದ್ದಾರಿ ಆಗಲೀಕರಣ ಕಾಮಗಾರಿ ಸಮಸ್ಯೆಗೆ ಗುತ್ತಿಗೆದಾರ ಐಆರ್‌ಬಿ ಕಂಪನಿ ಕಿವಿಗೊಡುತ್ತಿಲ್ಲ. ಹೆದ್ದಾರಿ ಅಲೀಕರಣ ಕಾಮಗಾರಿ ಉದ್ಘಾಟನೆಗೊಂಡು 2 ವರ್ಷ ಕಳೆಯುತ್ತ ಬಂದರೂ ಕಾಮಗಾರಿ ಮುಗಿದಿಲ್ಲ. ಆದರೆ ಐಆ‌ಬಿ ಕಂಪನಿಯ ಟೋಲ್ ಸಂಗ್ರಹ ಕಾರ್ಯ ಯಾವುದೇ ಅಡೆತಡೆ ಇಲ್ಲದೇ ಮುಂದುವರೆದಿದೆ. ಇಷ್ಟೆಲ್ಲ ತೊಂದರೆಯಾಗುತ್ತಿದ್ದರೂ ಜಿಲ್ಲಾಡಳಿತ ಐಆರ್ಬಿ ಯಾವುದೇ ಕ್ರಮ ಜರುಗಿಸುತ್ತಿಲ್ಲ. ಸಂಸದರಂತೋ ಮಾತೇ ಆಡುತ್ತಿಲ್ಲ, ಜಿಲ್ಲಾ ಉಸ್ತುವಾರಿ  ಸಚಿವರು  ಆಗೊಮ್ಮೆ ಈಗೊಮ್ಮೆ ಐ.ಆರ್.ಬಿ ವಿರುದ್ಧ ಹೂಂಕರಿಸಿ ಸುಮ್ಮನಾಗಿದ್ದಾರೆ. ಈಗ ಪ್ರತಿಭಟನೆ ಮತ್ತು ಕಾನೂನು ಹೋರಾಟವೊಂದೇ ಇದಕ್ಕೆ ಇರುವ ಅಂತಿಮ ಮಾರ್ಗವಾಗಿದೆ. ಮುಂದಿನ ಒಂದು ವಾರದ ಒಳಗೆ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿರುವುದು ಏಕೆ? ಎಂಬುದರ ಕುರಿತು ಮಾಹಿತಿ ಕ್ರೂಢೀಕರಿಸಿ ಕಾನೂನೂ ತಜ್ಞರೊಂದಿಗೆ ಚರ್ಚಿಸಿ ಐ.ಆರ್.ಬಿಯ ಟೋಲ್ ಗೇಟ್ ಎದುರು ಬೃಹತ್ ಪ್ರತಿಭಟನೆ ನಡೆಸುವುದರ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಇನಾಯತುಲ್ಲಾ ಶಾಬಂದ್ರಿ, ಸತೀಶಕುಮಾರ್ ನಾಯ್ಕ, ರಾಜೇಶ್ ನಾಯಕ, ನ್ಯಾಯವಾದಿ ವಿಕ್ಟರ್ ಗೂಮ್ಸ್, ಮುಹಿದ್ದೀನ್ ರುಕ್ನುದ್ದೀನ್, ಇಮ್ರಾನ್ ಲಂಕಾ, ಕೃಷ್ಣನಾಯ್ಕ, ತೌಫೀಖ್ ಬ್ಯಾರಿ, ಅಶ್ಫಾಖ್ ಕೆ.ಎಂ., ಎಸ್,ಎಂ. ಸೈಯ್ಯದ್ ಪರ್ವೇಝ್ ಮುಂತಾದವರು ಇದ್ದರು.  

Read These Next