ಪಿಎಫ್ಐಗೆ 5 ವರ್ಷ ನಿಷೇಧ; ಆಸ್ತಿಗಳ ಮುಟ್ಟುಗೋಲು, ಬ್ಯಾಂಕ್ ಖಾತೆಗಳ ಸ್ತಂಭನ

Source: Vb | By I.G. Bhatkali | Published on 29th September 2022, 11:44 PM | National News |

ಹೊಸದಿಲ್ಲಿ: ಕೇಂದ್ರ ಸರಕಾರವು ಬುಧವಾರ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ(ಪಿಎಫ್‌ಐ) ಮತ್ತು ಅದರ ಹಲವು ಸಹ ಸಂಘಟನೆಗಳನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಈ ಸಂಘಟನೆಯು ಐಸಿಸ್ ಮುಂತಾದ ಜಾಗತಿಕ ಉಗ್ರವಾದಿ ಗುಂಪುಗಳೊಂದಿಗೆ ನಂಟು ಹೊಂದಿದೆ ಎಂದು ಸರಕಾರ ಆರೋಪಿಸಿದೆ.

ಮಂಗಳವಾರ ಏಳು ರಾಜ್ಯಗಳಲ್ಲಿ ನಡೆಸಲಾದ ದಾಳಿಗಳಲ್ಲಿ ಪಿಎಫ್ಐಯೊಂದಿಗೆ ನಂಟು ಹೊಂದಿದ್ದಾರೆನ್ನಲಾದ 150ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ಇದಕ್ಕಿಂತ ಐದು ದಿನಗಳ ಮೊದಲು, ದೇಶಾದ್ಯಂತ ನಡೆಸಲಾದ. ಇಂಥದೇ ದಾಳಿಗಳಲ್ಲಿ ನೂರಕ್ಕೂ ಅಧಿಕ ಪಿಎಫ್ ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಮತ್ತು ಹಲವು ಡಝನ್ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪಿಎಫ್ಐಯ ಕೆಲವು ಸ್ಥಾಪಕ ಸದಸ್ಯರು ನಿಷೇಧಿತ ಸೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ(ಸಿಮಿ)ದ ನಾಯಕರು ಮತ್ತು ಪಿಎಫ್‌ಐಯು ಜಮಾಅತುಲ್‌ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಮ್‌ಬಿ) ನೊಂದಿಗೆ ನಂಟು ಹೊಂದಿದೆ ಎನ್ನುವುದು ಪತ್ತೆಯಾಗಿದೆ ಎಂದು ಮಂಗ ಳವಾರ ತಡ ರಾತ್ರಿ ಹೊರಡಿಸಲಾದ ಅಧಿಸೂಚನೆ ಯಲ್ಲಿ ಕೇಂದ್ರ ಗೃಹಸಚಿವಾಲಯ ಹೇಳಿದೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯ (ಐಸಿಸ್) ಮುಂತಾದ ಜಾಗತಿಕ ಉಗ್ರವಾದಿ ಗುಂಪುಗಳೊಂದಿಗೆ ಪಿಎಫ್‌ಐ ನಂಟು ಹೊಂದಿರುವುದು ಪತ್ತೆಯಾಗಿದೆ ಎಂದು ಅದು ಹೇಳಿದೆ.

ದೇಶದಲ್ಲಿ ಅಭದ್ರತೆಯ ಭಾವನೆಯನ್ನು ಹುಟ್ಟು ಹಾಕುವ ಮೂಲಕ ಒಂದು ಸಮುದಾಯವನ್ನು ಹೆಚ್ಚೆಚ್ಚು ತೀವ್ರವಾದಿಯಾಗಿಸಲು ಪಿಎಫ್‌ಐ ಮತ್ತು ಅದರ ಸಹಸಂಘಟನೆಗಳು ಅಥವಾ ಅದರ ಪ್ರತಿನಿಧಿ ಸಂಘಟನೆಗಳು ಕೆಲಸಮಾಡುತ್ತಿವೆ. ಕೆಲವು ಪಿಎಫ್‌ಐ ಕಾರ್ಯಕರ್ತರು ಅಂತರ್‌ರಾಷ್ಟ್ರೀಯ ಉಗ್ರವಾದಿ ಸಂಘಟನೆಗಳಿಗೆ ಸೇರ್ಪಡೆಯಾಗಿರುವುದು ಇದನ್ನು ಸಾಬೀತುಪಡಿಸುತ್ತದೆ ಎಂದು ಅಧಿಸೂಚನೆ ತಿಳಿಸಿದೆ. “ಮೇಲಿನ ಸನ್ನಿವೇಶಗಳನ್ನು ಗಮನಿಸಿ, ಪಿಎಫ್‌ಐ ಮತ್ತು ಅದರ ಸಹ ಸಂಘಟನೆಗಳು ಮತ್ತು ಪ್ರತಿನಿಧಿ ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸುವುದು ಅಗತ್ಯವಾಗಿದೆ ಎಂಬ ದೃಢ ಅಭಿಪ್ರಾಯಕ್ಕೆ ಕೇಂದ್ರ ಸರಕಾರ ಬಂದಿದೆ. ಅದಕ್ಕೆ ಅನುಸಾರವಾಗಿ, ಯುಎಪಿಎಯ 3ನೇ ಪರಿಚ್ಛೇದದ (3)ನೇ ಉಪ ಪರಿಚ್ಛೇದದ ಅಡಿಯಲ್ಲಿ ಲಭ್ಯವಾಗುವ ಅಧಿಕಾರಗಳನ್ನು ಚಲಾಯಿಸಿ, ಪಿಎಫ್ ಇನ್ನು ಕಾನೂನುಬಾಹಿರ ಸಂಘಟನೆ ಎಂಬುದಾಗಿ ಘೋಷಿಸಲಾಗುತ್ತಿದೆ' ಎಂದು ಅಧಿಸೂಚನೆ ಹೇಳಿದೆ. ಪಿಎಫ್‌ಐಯನ್ನು ನಿಷೇಧಿಸುವಂತೆ ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್ ಸರಕಾ ರಗಳು ಶಿಫಾರಸು ಮಾಡಿದ್ದವು ಎಂದು ಗೃಹ ಸಚಿವಾಲಯ ತಿಳಿಸಿದೆ. ಪಿಎಫ್‌ಐ ಮತ್ತು ಅದರ ಸಹಸಂಘಟನೆಗಳು ಅಥವಾ ಅದರ ಪ್ರತಿನಿಧಿ ಸಂಘಟನೆಗಳು ದೇಶದಲ್ಲಿ ಭಯವನ್ನು ಸೃಷ್ಟಿಸುವ ಉದ್ದೇಶದಿಂದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿವೆ ಹಾಗೂ, ಆಮೂಲಕ ದೇಶದ ಭದ್ರತೆ ಮತ್ತು ಸಾರ್ವಜನಿಕ ವ್ಯವಸ್ಥೆಯನ್ನು ಅಪಾಯದಲ್ಲಿ ಗುರಿಪಡಿಸುತ್ತಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ಪಿಎಫ್‌ಐಯು ಭಯ ಆಧಾರಿತ ಪ್ರತಿಗಾಮಿ ವ್ಯವಸ್ಥೆಯೊಂದನ್ನು ಜಾರಿಗೊಳಿಸಲು ಯತ್ನಿಸುತ್ತಿದೆ ಮತ್ತು ಅದನ್ನು ಉತ್ತೇಜಿಸುತ್ತಿದೆ, ರಾಷ್ಟ್ರವಿರೋಧಿ ಭಾವನೆಗಳನ್ನು ಹರಡುತ್ತಿದೆ, ಸಮಾಜದ ನಿರ್ದಿಷ್ಟ ಭಾಗವೊಂದನ್ನು ತೀವ್ರವಾದಿಯಾಗಿಸಿ ದೇಶದ ವಿರುದ್ಧ ದ್ವೇಷವನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಿದೆ ಹಾಗೂ ದೇಶದ ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಮಾರಕವಾದ ಚಟುವಟಿಕೆಗಳನ್ನು ಹೆಚ್ಚಾಗಿ ನಡೆಸಿಕೊಂಡು ಬರುತ್ತಿದೆ ಎಂದು ಅಧಿಸೂಚನೆ ಹೇಳಿದೆ.

ಪಿಎಫ್‌ಐ ಮತ್ತು ಅದರ ಸಹ ಸಂಘಟನೆಗಳು ಅಥವಾ ಪ್ರತಿನಿಧಿ ಸಂಘಟನೆಗಳ ನಡುವೆ ನಂಟಿರುವುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

ರಿಹಾಬ್ ಇಂಡಿಯಾ ಫೌಂಡೇಶನ್ ಪಿಎಫ್‌ಐ ಸದಸ್ಯರ ಮೂಲಕ ನಿಧಿಗಳನ್ನು ಸಂಗ್ರಹಿಸುತ್ತದೆ ಎಂದು ಅಧಿಸೂಚನೆ ಹೇಳಿದೆ. ಕೆಲವು ಪಿಎಫ್‌ಐ ಸದಸ್ಯರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹಾಬ್ ಫೌಂಡೇಶನ್, ಕೇರಳದ ಸದಸ್ಯರೂ ಆಗಿದ್ದಾರೆ. ಜೂನಿಯರ್ ಫಂಟ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಶನಲ್ ಕಾಡರೇಶನ್ ಆಫ್ ಹೂಮನ್ ರೈಟ್ಸ್ ಆರ್ಗನೈಸೇಶನ್ ಮತ್ತು ನ್ಯಾಶನಲ್ ವಿಮೆನ್ಸ್ ಫಂಟ್‌ನ ಚಟುವಟಿಕೆಗಳನ್ನು ಪಿಎಫ್‌ಐ ನಾಯಕರು ಸಮನ್ವಯಗೊಳಿಸುತ್ತಿದ್ದಾರೆ ಎಂದು ಅದು ತಿಳಿಸಿದೆ.

ಆಸ್ತಿಗಳ ಮುಟ್ಟುಗೋಲು, ಬ್ಯಾಂಕ್ ಖಾತೆಗಳ ಸ್ತಂಭನ: ಪಾಪ್ಯಲರ್‌ ಫ್ರೆಂಟ್ ಆಫ್ ಇಂಡಿಯಾ(ಪಿಎಫ್‌ಐ) ಸಂಘಟನೆಯ ನಿಷೇಧದ ಬೆನ್ನಿಗೇ, ಅದರ ಆಸ್ತಿಗಳ ಮುಟ್ಟುಗೋಲು, ಬ್ಯಾಂಕ್ ಖಾತೆಗಳ ಸ್ತಂಭನ ಮತ್ತು ಅದರ ಸಾಮಾನ್ಯ ಚಟುವಟಿಕೆಗಳ ಸಂಪೂರ್ಣ ಪ್ರತಿಬಂಧ ಕಾರ್ಯಗಳು ನಡೆಯಲಿವೆ.

ಪಿಎಫ್‌ಐ ಸಂಘಟನೆಯನ್ನು ಕಾನೂನುಬಾಹಿರ ಎಂಬುದಾಗಿ ಘೋಷಿಸಲು ಸಾಕಷ್ಟು ಕಾರಣಗಳು ಇವೆಯೇ ಇಲ್ಲವೇ ಎನ್ನುವುದನ್ನು ತೀರ್ಮಾನಿಸುವಂತೆ ಕೋರಿ ಕೇಂದ್ರ ಸರಕಾರವು ನ್ಯಾಯಮಂಡಳಿಯೊಂದಕ್ಕೆ ಅರ್ಜಿ ಸಲ್ಲಿಸಲಿದೆ. ಸಂಘಟನೆಯನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 30 ದಿನಗಳ ಒಳಗೆ ಸರಕಾರ ನ್ಯಾಯಮಂಡಳಿಗೆ ಹೋಗಲಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, 1967 (ಯುಎಪಿಎ)ರ ಅನ್ವಯ, ನಿಷೇಧಿತ ಸಂಘಟನೆಯ ಯಾವುದೇ ಸದಸ್ಯನ ವಶದಲ್ಲಿ ಯಾವುದೇ ನಿಧಿ, ಶೇರುಗಳು ಅಥವಾ ಬೇರೆ ಯಾವುದಾದರೂ ಹಣ ಇದ್ದರೆ ಹಾಗೂ ಅದನ್ನು ಕಾನೂನುಬಾಹಿರ ಸಂಘಟನೆಗಾಗಿ ಬಳಸುತ್ತಿದ್ದರೆ ಅಥವಾ ಬಳಸುವ ಉದ್ದೇಶಕ್ಕಾಗಿ ಇರಿಸಲಾಗಿದ್ದರೆ, ಅಂಥ ವ್ಯಕ್ತಿಯು ಹಣ ಪಾವತಿ, ವರ್ಗಾವಣೆ ಸೇರಿದಂತೆ ಇಂಥ ನಿಧಿಗಳಿಗೆ ಸಂಬಂಧಿಸಿ ಯಾವುದೇ ವಿಧದಲ್ಲಿ ವ್ಯವಹರಿಸುವುದನ್ನು ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಬಹುದಾಗಿದೆ.

ಈ ಆದೇಶದಿಂದ ಯಾರಿಗಾದರೂ ಸಮಸ್ಯೆಯಾದರೆ, ಅವರು ಆದೇಶ ಹೊರಬಿದ್ದ 14 ದಿನಗಳಲ್ಲಿ ತನ್ನ ನಿವಾಸ ಅಥವಾ ಉದ್ಯಮವು ಒಳಪಡುವ ಜಿಲ್ಲಾ ನ್ಯಾಯಾಲಯದಲ್ಲಿ ಅದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಸರಕಾರ ಮುಟ್ಟುಗೋಲು ಹಾಕಿಕೊಳ್ಳಲು ಉದ್ದೇಶಿಸಿರುವ ಸೊತ್ತು ಅಥವಾ ನಿಧಿಗಳನ್ನು ನಿಷೇಧಿತ ಸಂಘಟನೆಗಾಗಿ ಬಳಸಲಾಗುತ್ತಿಲ್ಲ ಅಥವಾ ಬಳಸುವ ಉದ್ದೇಶವನ್ನು ಹೊಂದಿಲ್ಲ ಎನ್ನುವುದನ್ನು ಅವರು ನ್ಯಾಯಾಲಯದಲ್ಲಿ ನಿರೂಪಿಸಬಹುದಾಗಿದೆ.

ಆ ನ್ಯಾಯಾಲಯವು ಈ ವಿಷಯದಲ್ಲಿ ತೀರ್ಪು ನೀಡಲಿದೆ. ನಿಧಿ ಅಥವಾ ಸೊತ್ತನ್ನು ವ್ಯಕ್ತಿಯು ಅಕ್ರಮವಾಗಿ ಹೊಂದಿದ್ದಾರೆ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದರೆ, ಕೇಂದ್ರ ಸರಕಾರವು ಅಂಥ ನಿಧಿ ಅಥವಾ ಸ್ಥಳವನ್ನು ವಶಪಡಿಸಿಕೊಳ್ಳ ಬಹುದಾಗಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...