ರಾಮಮಂದಿರ ರಾಮಾನಂದ ಪಂಥಕ್ಕೆ ಸೇರಿದ್ದು; ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ

Source: Vartha Bharathi | By I.G. Bhatkali | Published on 11th January 2024, 12:52 PM | National News |

ಅಯೋಧ್ಯೆ: 'ಅಯೋಧ್ಯೆಯ ರಾಮ ಮಂದಿರವು ರಾಮಾನಂದ ಪಂಥಕ್ಕೆ ಸೇರಿದೆ, ಸನ್ಯಾಸಿಗಳು, ಶೈವರು ಅಥವಾ ಶಾಕ್ತರಿಗಲ್ಲ' ಎಂದು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಅವರ ಹೇಳಿಕೆಯು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.

“ಅಮರ ಉಜಾಲಾ' ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ನೂತನ ಮಂದಿರದಲ್ಲಿಯ ಪೂಜಾ ವಿಧಾನದ ಕುರಿತು ಕೇಳಿದ ಪ್ರಶ್ನೆಗೆ ರಾಯ್ ಈ ಉತ್ತರವನ್ನು ನೀಡಿದ್ದಾರೆ.

'ರಾಮ ಮಂದಿರ ನಿರ್ಮಾಣವನ್ನು ಪೂರ್ಣಗೊಳಿಸಲು ಯಾವುದೇ ಆತುರವಿಲ್ಲ, ಮೂರು ವರ್ಷಗಳಲ್ಲಿ ಮಂದಿರ ನಿರ್ಮಾಣವನ್ನು ಮೊದಲು ಯೋಚಿಸಲಾಗಿತ್ತು, ಆದರೆ ಬುನಾದಿಯನ್ನು ಪೂರ್ಣಗೊಳಿಸಲೇ 18 ತಿಂಗಳು ತೆಗೆದುಕೊಂಡಿತ್ತು. 2020 ಜುಲೈನಿಂದ ಆರಂಭಿಸಿದರೆ 2023ರ ವೇಳೆಗೆ ಮೂರೂವರೆ ವರ್ಷಗಳು ಕಳೆದುಹೋಗಿವೆ. ಇನ್ನೊಂದು ವರ್ಷದೊಳಗೆ ಅದು ಪೂರ್ಣಗೊಳ್ಳುತ್ತದೆ ಎಂದು ಈಗ ಯಾರಾದರೂ ನಿರ್ಧರಿಸಿದರೆ ಒಂದು ವರ್ಷದ ಬಳಿಕ ಅವರು ಇನ್ನೂ ಬಹಳಷ್ಟು ಕೆಲಸ ಬಾಕಿಯುಳಿದಿದೆ ಎನ್ನಬೇಕಾಗುತ್ತದೆ ' ಎಂದು ಚಂಪತ್ ರಾಯ್ ಸಂದರ್ಶನದಲ್ಲಿ ಹೇಳಿದ್ದಾರೆ.

ಜ.22ರಂದು ನಡೆಯಲಿರುವ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ತಾವು ಹೋಗುವುದಿಲ್ಲ ಎಂದು ದೃಢಪಡಿಸಿರುವ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ರಾಯ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಅಧಿಕಾರ ಸ್ಥಾನದಲ್ಲಿರುವಾಗ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ತಂದುಕೊಳ್ಳಬೇಡಿ ಎಂದು ಅವರು ರಾಯ್‌ಗೆ ಕಿವಿಮಾತು ಹೇಳಿದ್ದಾರೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯನ್ನು ಅದ್ದೂರಿ ಸಮಾರಂಭವಾಗಿಸುತ್ತಿ ರುವ ಬಗ್ಗೆ ತನಗೆ ಅಸಮಾಧಾನವಿದೆ ಎಂದು ಶಂಕರಾಚಾರ್ಯ ಹೇಳಿದ್ದರು.

ಇದನ್ನೊಂದು ರಾಜಕೀಯ ಪ್ರದರ್ಶನವಾಗಿ ಪರಿವರ್ತಿಸ ಲಾಗುತ್ತಿದೆ ಎಂದು ತಾನು ಭಾವಿಸಿದ್ದೇನೆ. ಮುಂಬರುವ ಸಾರ್ವತ್ರಿಕ ಚುನಾವಣೆಗಳ ಕಾರಣದಿಂದ ಕಾರ್ಯಕ್ರಮವನ್ನು ಇಷ್ಟೊಂದು ಅದ್ದೂರಿಯಾಗಿ ನಡೆಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಗ್ರಹವನ್ನು ಅನಾವರಣ ಗೊಳಿಸುವಾಗ ದೇವಸ್ಥಾನದ ಹೊರಗೆ ಕುಳಿತುಕೊಂಡು ಚಪ್ಪಾಳೆ ತಟ್ಟುವುದು ಸೂಕ್ತವಲ್ಲ ಎಂದು ಹೇಳಿದ ಅವರು, ನಮ್ಮ ಮಠವು ಜ.22ರ ಕಾರ್ಯಕ್ರಮಕ್ಕೆ ಆಹ್ವಾನವನ್ನು ಸ್ವೀಕರಿಸಿದೆ. ನಾನು ಅಯೋ ಧ್ಯೆಗೆ ಭೇಟಿ ನೀಡಲು ಬಯಸಿದರೆ ಗರಿಷ್ಠ ಓರ್ವ ವ್ಯಕ್ತಿಯೊಂದಿಗೆ ಬರಬಹುದು ಎಂದು ಅದರಲ್ಲಿ ತಿಳಿಸಲಾಗಿದೆ. ನೂರು ಜನರೊಂದಿಗೆ ಅಲ್ಲಿಗೆ ತೆರಳಲು ನನಗೆ ಅವಕಾಶ ನೀಡಿದ್ದರೂ ನಾನು ಅಂದು ಅಲ್ಲಿಗೆ ಹೋಗುತ್ತಿರಲಿಲ್ಲ' ಎಂದು ತಿಳಿಸಿದರು.

ತೀರ್ಥಕ್ಷೇತ್ರಗಳನ್ನು ಈಗ ಅಭಿವೃದ್ಧಿಯ ಹೆಸರಿನಲ್ಲಿ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ, ಅಂದರೆ ತೀರ್ಥಕ್ಷೇತ್ರಗಳು ಭೋಗ ಸ್ಥಳಗಳಾಗುತ್ತಿವೆ. ಬಹುಶಃ ಜನರೂ ಅಭಿವೃದ್ಧಿಯ ಹೆಸರಿನಲ್ಲಿ ಇದನ್ನೇ ಒಪ್ಪಿಕೊಳ್ಳುತ್ತಿದ್ದಾರೆ ಎಂದೂ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶಂಕರಾಚಾರ್ಯ ಹೇಳಿದರು. ನಾಲ್ವರು ಶಂಕರಾಚಾರ್ಯರು ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ ಎಂದು ಅವರು ತಿಳಿಸಿದರು.

ಇದು ರಾಜಕೀಯೇತರ ಕಾರ್ಯಕ್ರಮವಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿ ಪಾಲಿಗೆ ಇದು ರಾಜಕೀಯ ಕಾರ್ಯಕ್ರಮವಾಗಿದೆ ಎಂದು ಗ್ರಹಿಸಲಾಗಿದೆ ಎಂದು ಬೆಟ್ಟು ಮಾಡಿ ಮಾಡಿದ ಶಿಕ್ಷಣತಜ್ಞ, ಲೇಖಕ ಮತ್ತು ವಿಮರ್ಶಕ ಅಪೂರ್ವಾನಂದ ಅವರು, ಕಾಂಗ್ರೆಸ್ ಅಥವಾ ಇತರ ಪಕ್ಷಗಳಿಗೆ ನೇರವಾದ ಅಭಿಪ್ರಾಯವನ್ನು ವ್ಯಕ್ತಪಡಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

'ನಾವು ಮೋದಿ ವಿರೋಧಿಗಳಲ್ಲ, ಆದರೆ ನಾವು ಧರ್ಮಶಾಸ್ತ್ರ ವಿರೋಧಿಗಳಾಗಲೂ ಬಯಸಿಲ್ಲ' ಎಂದು ಹೇಳಿದ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತಶ್ವರಾನಂದ ಅವರು, 'ಶಾಸ್ತ್ರವಿಧಿಯನ್ನು ಪಾಲಿಸುವುದು ಮತ್ತು ಪಾಲನೆ ಮಾಡಿಸುವುದು ಶಂಕರಾಚಾರ್ಯರ ಕರ್ತವ್ಯವಾಗಿದೆ. ಈಗ ಅಲ್ಲಿ ಶಾಸ್ತ್ರವಿಧಿಯನ್ನು ಉಪೇಕ್ಷಿಸಲಾಗುತ್ತಿದೆ. ಮೊದಲನೆಯದಾಗಿ ಮಂದಿರ ನಿರ್ಮಾಣವೇ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಪ್ರತಿಷ್ಠೆಯನ್ನು ಮಾಡಲಾಗುತ್ತಿದೆ. ಪ್ರತಿಷ್ಠೆಯನ್ನು ದಿಢೀರ್ ನೆರವೇರಿಸಬೇಕಾದ ಯಾವುದೇ ಪರಿಸ್ಥಿತಿಯಿಲ್ಲ. ನೋಡಿ, ಯಾವುದೋ ಡಿ.22ರಂದು ರಾತ್ರಿ ಅಲ್ಲಿ ವಿಗ್ರಹಗಳನ್ನು ಇರಿಸಲಾಗಿತ್ತು. ಆಗ ಪರಿಸ್ಥಿತಿ ಹಾಗಿತ್ತು. ಕಟ್ಟಡ (ಬಾಬರಿ ಮಸೀದಿ) ಧ್ವಂಸಗೊಳಿಸಿದ ರಾತ್ರಿ ಯಾವುದೇ ಶಂಕರಾಚಾರ್ಯರು ಅದನ್ನು ಪ್ರಶ್ನಿಸಿರಲಿಲ್ಲ, ಏಕೆಂದರೆ ಆಗ ಪರಿಸ್ಥಿತಿ ಹಾಗಿತ್ತು. ಈಗ 22ರಂದೇ ಉದ್ಘಾಟನೆ ನಡೆಸಬೇಕು ಎನ್ನುವ ಪರಿಸ್ಥಿತಿಯಿಲ್ಲ. ಇಂದು ನಮ್ಮ ಬಳಿ ಸಮಯವಿದೆ. ನಾವು ಚೆನ್ನಾಗಿ ಪ್ರಾಣ ಪ್ರತಿಷ್ಠೆಯನ್ನು ನೆರವೇರಿಸಬಹುದು. ಆದರೂ ಅಪೂರ್ಣ ಮಂದಿರದಲ್ಲಿ ಪ್ರತಿಷ್ಠೆಯನ್ನು ನಡೆಸಲಾಗುತ್ತಿದೆ. ಇದನ್ನು ನಾವು ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.

ಮೀಡಿಯಾ ಸ್ವರಾಜ್ ವರದಿಯಂತೆ ಸ್ವಾಮಿ ಅವಿಮುಕ್ತಶ್ವರಾನಂದ ಅವರು, ಚಂಪತ್ ರಾಯ್ ಮತ್ತು ಟ್ರಸ್ಟನ ಎಲ್ಲ ಸದಸ್ಯರು ತಕ್ಷಣ ರಾಜೀನಾಮೆಯನ್ನು ನೀಡಬೇಕು ಮತ್ತು ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ರಾಮಾನಂದ ಪಂಥಕ್ಕೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಮಭಕ್ತರು ಮತ್ತು ಶಿವಭಕ್ತರನ್ನು ಪ್ರತ್ಯೇಕಿಸುವ ರಾಯ್ ಹೇಳಿಕೆ ಹಾಗೂ ಹಿಂದೂ ಸನಾತನ ಸಂಸ್ಥೆಗಳನ್ನು ಬದಿಗೊತ್ತುವ ಪ್ರಯತ್ನಗಳು, ರಾಮ ಮಂದಿರ ನಿರ್ಮಿಸುತ್ತಿರುವ ಟ್ರಸ್ಟ್‌ನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುವ ವಿಹಿಂಪ, ಆರೆಸ್ಸೆಸ್ ಮತ್ತು ಬಿಜೆಪಿ ಪ್ರಯತ್ನಗಳು; ಇವೆಲ್ಲ ಶಂಕರಾಚಾರ್ಯರನ್ನು ಕೆರಳಿಸಿರುವಂತೆ ಕಾಣುತ್ತಿದೆ ಎಂದೂ ಮೀಡಿಯಾ ಸ್ವರಾಜ್ ಹೇಳಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...