ಹಾಸ್ಟೆಲ್‌ಗೆ ನುಗ್ಗಿ ನಮಾಝ್ ನಿರತರ ಮೇಲೆ ಗೂಂಡಾಗಳಿಂದ ಹಲೆ; ವಿದೇಶಿ ವಿದ್ಯಾರ್ಥಿಗಳಿಗೆ ಗಾಯ

Source: Vb | By I.G. Bhatkali | Published on 18th March 2024, 7:47 AM | National News |

ಅಹ್ಮದಾಬಾದ್: ಇಲ್ಲಿನ ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ರಮಝಾನ್ ಪ್ರಯುಕ್ತ ರಾತ್ರಿ ಹೊತ್ತು ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಕೇಸರಿ ಶಾಲುಗಳನ್ನು ಧರಿಸಿದ್ದ ಗುಂಪೊಂದು ಅಮಾಯಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ದುಷ್ಕರ್ಮಿಗಳ ದಾಳಿಯಿಂದಾಗಿ ಕೆಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ೦ದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ 10:50ರ ವೇಳೆಗೆ 20ಕ್ಕೂ ಅಧಿಕ ಮಂದಿಯ ಗುಂಪೊಂದು ಗುಜರಾತ್ ವಿವಿ ಹಾಸ್ಟೆಲ್‌ನೊಳಗೆ ನುಗ್ಗಿತ್ತು. ಹಾಸ್ಟೆಲ್‌ ನಲ್ಲಿ ವಾಸ್ತವ್ಯವಿದ್ದ ಬಾಂಗ್ಲಾ, ಉಜ್ಜಿಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ನಮಾಝ್ ಸಲ್ಲಿಸುತ್ತಿರುವುದಕ್ಕೆ ದುಷ್ಕರ್ಮಿಗಳ ಗುಂಪು ಆಕ್ಷೇಪಿಸಿತು ಹಾಗೂ ಅವರ ಮೇಲೆ ದಾಳಿ ನಡೆಸಿತೆಂದು ಪೊಲೀಸ್ ಆಯುಕ್ತ ಜಿ.ಎಸ್‌. ಮಲಿಕ್ ತಿಳಿಸಿದ್ದಾರೆ.

“ವಿವಿಯ ಆವರಣದಲ್ಲಿ ಮಸೀದಿಯಿಲ್ಲದೆ ಇರುವುದರಿಂದ ರಮಝಾನ್ ತಿಂಗಳಲ್ಲಿ ರಾತ್ರಿ ಕಾಲದಲ್ಲಿ ಸಲ್ಲಿಸುವ ತರಾವೀಹ್ ಪ್ರಾರ್ಥನೆ ಸಲ್ಲಿಸಲು ತಾವು ಹಾಸ್ಟೆಲ್‌ನ ಒಳಗಡೆ ಒಟ್ಟುಗೂಡಿದ್ದೆವು. ಈ ಸಂದರ್ಭ ಗುಂಪೊಂದು ಧಾವಿಸಿ ಬಂದು, ಹಾಸ್ಟೆಲ್‌ನಲ್ಲಿ ನಮಾಝ್ ಸಲ್ಲಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು ಎಂದು ದಾಳಿಗೊಳಗಾದ ಅಫ್ಘಾನ್ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

“ಅವರು ನಮ್ಮ ಕೊಠಡಿಯೊಳಗೆಯೇ ನಮ್ಮ ಮೇಲೆ ಹಲ್ಲೆ ನಡೆಸಿದರು. ನಮ್ಮ ಲ್ಯಾಪ್ಟಾಪ್‌ಗಳನ್ನು, ಮೊಬೈಲ್ ಫೋನ್‌ಗಳನ್ನು ನಾಶಪಡಿಸಿದರು ಹಾಗೂ ಬೈಕ್‌ಗಳಿಗೆ ಹಾನಿಯುಂಟು ಮಾಡಿದರು. ಕಿಡಿಗೇಡಿಗಳ ದಾಳಿಯಿಂದ ಅಫ್ಘಾನಿಸ್ತಾನ, ಶ್ರೀಲಂಕಾ, ತುರ್ಕಮೆನಿಸ್ತಾನದ ತಲಾ ಓರ್ವ ಹಾಗೂ ಆಫ್ರಿಕನ್ ರಾಷ್ಟ್ರಗಳ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳನ್ನು ರಕ್ಷಿಸಲು ಹಾಸ್ಟೆಲ್‌ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಲು ಯತ್ನಿಸಿದ ಹೊರತಾಗಿಯೂ ದುಷ್ಕರ್ಮಿಗಳು ದಾಳಿಯನ್ನು ಮುಂದುವರಿಸಿದ್ದರು ಮತ್ತು ಕಲ್ಲುಗಳನ್ನು ಎಸೆಯುತ್ತಿದ್ದರು. ದಾಳಿಕೋರ ಗುಂಪು ಸ್ಥಳದಿಂದ ಪರಾರಿಯಾದ ಬಳಿಕವಷ್ಟೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆಂದು ಅಫ್ಘಾನ್ ವಿದ್ಯಾರ್ಥಿ ತಿಳಿಸಿದ್ದಾರೆ. “ನಾವು ಇಲ್ಲಿ ಸುರಕ್ಷಿತರಲ್ಲ. ಗುಜರಾತ್ ವಿಶ್ವವಿದ್ಯಾನಿಲಯವು ತಮ್ಮನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವಂತೆ ನಾವು ಕೋರುತ್ತೇವೆ' ಎಂದವರು ಹೇಳಿದ್ದಾರೆ.

ಗುಜರಾತ್‌ ವಿವಿಯಲ್ಲಿ ಪ್ರಸಕ್ತ ಅಫ್ಘಾನಿಸ್ತಾನ, ತಜಿಕಿಸ್ತಾನ, ಶ್ರೀಲಂಕಾ,ಬಾಂಗ್ಲಾ, ತುರ್ಕ್‌ಮೆನಿಸ್ತಾನ ಮತ್ತು ಆಫ್ರಿಕನ್ ರಾಷ್ಟ್ರಗಳವರು ಸೇರಿದಂತೆ ಸುಮಾರು 300 ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಶೇ.75ರಷ್ಟು ಮಂದಿ ದಾಳಿ ಘಟನೆ ನಡೆದ ಹಾಸ್ಟೆಲ್‌ನ 'ಎ' ಬ್ಲಾಕ್‌ನಲ್ಲಿ ವಾಸವಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಪೈಕಿ ಶ್ರೀಲಂಕಾ ಹಾಗೂ ತಜಿಕಿಸ್ತಾನದ ತಲಾ ಓರ್ವ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಹ್ಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸುಮಾರು 20-25 ಮಂದಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಹಾಗೂ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮಲಿಕ್ ತಿಳಿಸಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆಯೆಂದು ಅವರು ಹೇಳಿದ್ದಾರೆ.ಪ್ರಕರಣದ ತನಿಖೆ ನಡೆಸಲು ಕೈಂಬ್ರಾಂಚ್ ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡ 9 ತಂಡಗಳನ್ನು ರಚಿಸಲಾಗಿದೆ. ಜಂಟಿ ಪೊಲೀಸ್‌ ಆಯುಕ್ತ (ಅಪರಾಧ ದಳ) ಅವರು ಪ್ರಕರಣದ ತನಿಖೆಯ ಮೇಲೆ ನಿಗಾವಿರಿಸಲಿದ್ದಾರೆ.

ಈ ಮಧ್ಯೆ ಗುಜರಾತ್ ಗೃಹಸಚಿವ ಹರ್ಷ ಸಾಂಘಿ ಅವರು ದಾಳಿಕೋರರನ್ನು ತ್ವರಿತವಾಗಿ ಬಂಧಿಸುವಂತೆ ರಾಜ್ಯದ ಕಾನೂನು ಜಾರಿ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ ಮತ್ತು ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದೆಂದು ಅವರು ಭರವಸೆ ನೀಡಿದ್ದಾರೆ.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...