ಮೇ 7 ರಿಂದ ಜಿಲ್ಲೆಯಲ್ಲಿ ಸಾರ್ವಜನಿಕರ ವ್ಯಾಪಾರ- ವಹಿವಾಟಿಗೆ ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಅವಕಾಶ- ಸಚಿವ ಶಿವರಾಮ್ ಹೆಬ್ಬಾರ್

Source: SO News | By Laxmi Tanaya | Published on 6th May 2021, 9:40 PM | Coastal News |

ಕಾರವಾರ : ಕೋವಿಡ್-19 ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ವ್ಯಾಪಾರ-ವಹಿವಾಟಿಗೆ ಈ ಹಿಂದೆ ಮಾಡಲಾಗಿದ್ದ ಬೆಳಿಗ್ಗೆ 6 ರಿಂದ 12ರ ಸಮಯವನ್ನು ಮತ್ತೆ  ಮೇ. 7 ರಿಂದ ಪ್ರತಿದಿನ ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಅವಕಾಶ ಕಲ್ಪಿಸಿ ಜಿಲ್ಲೆಯಲ್ಲಿ  ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಕುರಿತು ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕೋವಿಡ್-19 ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಆಯಾ ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಆದ್ದರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಮಾಡಲು ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದೆ. ಆದರೆ ಸಾರ್ವಜನಿಕರ ವ್ಯಾಪಾರ-ವಹಿವಾಟಿಗೆ ಈ ಹಿಂದೆ ಸರಕಾರ ನಿಗದಿಪಡಿಸಿದ್ದ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರೆಗಿನ ಸಮಯದಲ್ಲಿ ಜನ ಸಂದಣಿ ಹೆಚ್ಚಾಗುತ್ತಿದ್ದು, ಈ ಸಂದರ್ಭದಲ್ಲಿ ಜನರ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ಕೋವಿಡ್-19 ಎರಡನೇ ಅಲೆಯ ಸಂಪೂರ್ಣ ನಿರ್ವಹಣೆಗೆ ಜಿಲ್ಲಾಡಳಿತದಿಂದ ಪೂರ್ವ ತಯಾರಿ ಮಾಡಿಕೊಂಡಿದ್ದು, ಕೋವಿಡ್ ತಡೆಯುವ ಶಕ್ತಿ, ಆಕ್ಸಿಜನ್ ನಿಯಂತ್ರಣ ಮತ್ತು ಸಂಗ್ರಹಿಸುವ ಶಕ್ತಿಯಿದೆ. ಹಿಗಾಗಿ ಇದೆಲ್ಲದರ ಆಧಾರದ ಮೇಲೆ ಜಿಲ್ಲೆಯಲ್ಲಿ ಮೇ. 7 ರಿಂದ ಪ್ರತಿದಿನ ಬೆಳಿಗ್ಗೆ 6 ರಿಂದ 10 ರವರೆಗೆ ಮಾತ್ರ ಸಾರ್ವಜನಿಕರಿಗೆ ವ್ಯಾಪಾರ-ವಹಿವಾಟ ಮಾಡಲು ಅವಕಾಶ ನೀಡಲಾಗಿದೆ. ಜನರು ಈ ನಿರ್ಣಯಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಿಸಬೇಕಾಗುತ್ತದೆ. ಜಿಲ್ಲೆಯ ಜನರು ಇದ್ಯಾವುದಕ್ಕೂ ಅವಕಾಶ ಕೊಡಬಾರದು. ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬಾರದು. ತಪ್ಪದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಧರಿಸುವ ಮೂಲಕ ಪ್ರತಿಯೊಬ್ಬರೂ ಕೈಗಳಿಗೆ ಸಾನಿಟೈಸರ್ ಮಾಡಿಕೊಳ್ಳಬೇಕು. ಈಗಾಗಲೇ ಕೋವಿಡ್ ಲಕ್ಷಣಗಳಿರುವವರು ಹಾಗೂ ಹೋಮ್ ಐಸೋಲೇಶನ್‍ನಲ್ಲಿ ಇರುವವರು ತಮ್ಮ ವೈದ್ಯಕೀಯ ಪರೀಕ್ಷೆಯ ವರದಿ ಬರುವವರೆಗೆ ಸ್ವಲ್ಪ ಸಮಯ ಕುಟುಂಬದ ಸದಸ್ಯರಿಂದ ದೂರವಿರಬೇಕು. ಈ ಮೂಲಕ ಜನರು ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಹಾಗೂ ಸರಕಾರದೊಂದಿಗೆ ಕೈ ಜೋಡಿಸಬೇಕು ಎಂದರು.

ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಉದ್ಭವಿಸಬಾರದು ಎಂಬ ಉದ್ದೇಶದಿಂದ ಜಿಲ್ಲೆಯ ಯಲ್ಲಾಪುರ, ಶಿರಸಿ, ಕುಮಟಾದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 561 ಆಕ್ಸಿಜನ್ ಬೆಡ್‍ಗಳಿವೆ. ಈ ಪೈಕಿ 272 ಬೆಡ್‍ಗಳು ಬಳಕೆಯಾಗುತ್ತಿದ್ದು, 289 ಬೆಡ್‍ಗಳು ಲಭ್ಯ ಇವೆ. ಜಿಲ್ಲೆಯಲ್ಲಿ ಒಟ್ಟಾರೆ 61 ವೆಂಟಿಲೇಟರ್‍ಗಳಿವೆ. ಈ ಪೈಕಿ 14 ಬಳಕೆಯಾಗುತ್ತಿದ್ದು, 47 ಲಭ್ಯ ಇವೆ. ಅದಲ್ಲದೇ 11 ಟನ್‍ಷ್ಟು ಆಕ್ಸಿಜನ್ ಸಂಗ್ರಹಣ ಮಾಡಿಕೊಳ್ಳವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಜಿಲ್ಲೆಯ ಜನರು ಆಕ್ಸಿಜನ್, ಬೆಡ್ ಹಾಗೂ ಔಷಧಿಯ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಕೋವಿಡ್ ನಿಯಂತ್ರನಕ್ಕಾಗಿ ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಕೋವಿಡ್ ತೀವ್ರತೆ ಇರುವವರನ್ನು ಮಾತ್ರ ಜಿಲ್ಲಾ ಕೇಂದ್ರ ಕಾರವಾರಕ್ಕೆ ಕಳುಹಿಸುವಂತೆ ಜಿಲ್ಲೆಯ ಎಲ್ಲ ತಾಲೂಕಾ ಆಸ್ಪತ್ರೆಯ ವೈದ್ಯರಿಗೂ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಧಿಕಾರಿ ಒಳಗೊಂಡಂತೆ ಒಂದು ತಂಡ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಒಳಗೊಂಡಂತೆ ಮತ್ತೊಂದು ತಂಡವನ್ನು ರಚಿಸಲಾಗಿದೆ. ಈ ಎರಡು ತಂಡಗಳು ಸಮನ್ವತೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲಿವೆ. ಆರೋಗ್ಯದ ಏನೆ ಸಮಸ್ಯೆಗಳಿದ್ದರು ಡಿಹೆಚ್‍ಒ ಅವರ ನೇತೃತ್ವದ ತಂಡ ಅಂತಿಮ ನಿರ್ಣಯ ಕೈಗೊಳ್ಳಲಿದೆ.  ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಕಾರ್ಯ ನಿರ್ವಹಿಸಲಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸಿಇಒ ಎಂ. ಪ್ರಿಯಾಂಗಾ, ಎಸ್‍ಪಿ ಶಿವಪ್ರಕಾಶ್ ದೇವರಾಜು, ಎಡಿಸಿ ಕೃಷ್ಣಮೂರ್ತಿ ಹೆಚ್.ಕೆ., ಡಿಹೆಚ್‍ಒ ಶರದ್ ನಾಯಕ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
 
ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ
ಮಾದ್ಯಮಗಳಲ್ಲಿ ವರದಿ ಆದಂತೆ ಜಿಲ್ಲೆಯಲ್ಲಿ ಒಂದೇ ದಿನ 15 ಕೋವಿಡ್ ಸೊಂಕಿತರ ಸಾವು ಸಂಭವಿಸಿಲ್ಲ. ಅವು ಮೇ. ಮೊದಲ ವಾರದಲ್ಲಿನ ಒಟ್ಟಾರೆ ಸಂಖ್ಯೆಯಾಗಿದೆ. ಜೊತೆಗೆ ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರ ಸಾವಿನ ಸಂಖ್ಯೆ ನಿಯಂತ್ರಣದಲ್ಲಿದೆ. ಹೀಗಾಗಿ ಜಿಲ್ಲೆಯ ಜನರು ಅನಗತ್ಯವಾಗಿ ಭಯ ಪಡಬೇಕಾಗಿಲ್ಲ. ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಜನರು ಸರಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಕೈ ಜೋಡಿಸಬೇಕೆಂದು 
ಶಿವರಾಮ್ ಹೆಬ್ಬಾರ ಹೇಳಿದರು

Read These Next

ಪ್ರಜಾಧ್ವನಿ ಸಮಾವೇಶ: ಭಟ್ಕಳದಿಂದ ಕುಮಟಾ ದ ವರೆಗೆ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನ

ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಪ್ರಜಾಧ್ವನಿ- 2 ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್ಯಾಲಿ ಮೂಲಕ ಕರಾವಳಿಯಲ್ಲಿ ...

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...