ಭಟ್ಕಳ ಮತಗಟ್ಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ; ಬಹಿರಂಗ ಪ್ರಚಾರ ಅಂತ್ಯ; ವಸತಿಗೃಹ, ಸಭಾಭವನಗಳ ಮೇಲೆ ನಿಗಾ

Source: S.O. News Service | By I.G. Bhatkali | Published on 22nd April 2019, 1:06 AM | Coastal News |

ಭಟ್ಕಳ: ಏ.23ರಂದು ನಡೆಯುವ ಮತದಾನದ ಹಿನ್ನೆಲೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ 248 ಮತಗಟ್ಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಭಟ್ಕಳ ಸಹಾಯಕ ಚುನಾವಣಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಅವರು ರವಿವಾರ ಬೆಳಿಗ್ಗೆ ತಹಸೀಲ್ದಾರ ಕಚೇರಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಚುನಾವಣೆಯಲ್ಲಿ 109741 ಗಂಡು ಹಾಗೂ 105699 ಮಹಿಳೆ ಸೇರಿದಂತೆ ಒಟ್ಟೂ 2,15,440 ಮತದಾರರು ಇರುವ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.

ಏ.21ರಂದು ಸಂಜೆ 6 ಗಂಟೆಗೆ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ನಂತರ ಧ್ವನಿವರ್ಧಕ ಬಳಸಿ ಮತ ಯಾಚನೆ ಮಾಡುವುದಕ್ಕೆ  ಅವಕಾಶ ನೀಡುವುದಿಲ್ಲ. ಬೇರೆ ಕ್ಷೇತ್ರಗಳ ರಾಜಕೀಯ ಮುಖಂಡರು ಈ ಕೂಡಲೇ ಉತ್ತರಕನ್ನಡ ಜಿಲ್ಲಾ ಮತಕ್ಷೇತ್ರವನ್ನು ತೊರೆಯಬೇಕು. ಈ ಸಂಬಂಧ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಇರುವ ವಸತಿಗೃಹಗಳು, ಮದುವೆ ಹಾಲ್‍ಗಳ ಮೇಲೆ ನಿಗಾ ಇಡಲಾಗಿದೆ. ಮದ್ಯ ಮಾರಾಟ ನಿಷೇಧಿಸಿ ಆದೇಶವನ್ನು ಹೊರಡಿಸಲಾಗಿದ್ದು, ಮದ್ಯದಂಗಡಿಗಳ ಮಾಲಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣೆ ಮುಗಿದು ಅರ್ಧ ಗಂಟೆ ಕಳೆಯುವವರೆಗೆ ಯಾವುದೇ ರೀತಿಯಿಂದ ಬಹಿರಂಗವಾಗಿ ಫಲಿತಾಂಶದ ಬಗ್ಗೆ ಸಮೀಕ್ಷೆ ಹೇಳಲು ಅವಕಾಶ ಇಲ್ಲ ಎಂದರು.

ಭಟ್ಕಳದಲ್ಲಿ 71 ಸೂಕ್ಷ್ಮ ಹಾಗೂ 23 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. 86 ಸೇವಾ ಮತದಾರರಿಗೆ ಈಗಾಗಲೇ ಮತ ಪತ್ರಗಳನ್ನು ಕಳುಹಿಸಿಕೊಡಲಾಗಿದೆ. ಈ ಬಾರಿ 7 ಸಖಿ ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ.

1096 ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. 24 ಬಸ್ಸು, 24 ಜೀಪು ಹಾಗೂ 41 ಮಿನಿ ಬಸ್ಸುಗಳನ್ನು ಚುನಾವಣಾ ಕೆಲಸಗಳಿಗೆ ಬಳಿಸಿಕೊಳ್ಳಲಾಗುತ್ತಿದೆ. 40 ಮತಕೇಂದ್ರಗಳಲ್ಲಿ ವಿವಿ ಪ್ಯಾಟ್ ಉಪಯೋಗಿಸಲಾಗುತ್ತಿದೆ. 20 ಹೆಚ್ಚುವರಿ ವಿವಿ ಪ್ಯಾಟ್‍ಗಳನ್ನು ಇಟ್ಟುಕೊಂಡಿದ್ದೇವೆ. ಇಬ್ಬರು ತಹಸೀಲ್ದಾರರ ವಾಹನ ಸೇರಿದಂತೆ ಒಟ್ಟೂ 33 ವಾಹನಗಳಲ್ಲಿ ಜಿಪಿಎಸ್ ಅಳವಡಿಸಲಾಗುತ್ತಿದೆ. 53 ಮತಗಟ್ಟೆಗಳಲ್ಲಿ ಮೈಕ್ರೋ ಆಬ್ಸರ್ವರ್, 5 ಮತಗಟ್ಟೆಗಳಲ್ಲಿ ವಿಡಿಯೋ ಗ್ರಾಫರ್ ಇರಲಿದ್ದಾರೆ ಎಂದು ವಿವರಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...