ಚುನಾವಣಾ ಬಾಂಡ್; ಚುನಾವಣಾ ಆಯೋಗದಿಂದ ಹೊಸ ಮಾಹಿತಿ ಬಹಿರಂಗ

Source: Vb | By I.G. Bhatkali | Published on 18th March 2024, 8:09 AM | National News |

ಹೊಸದಿಲ್ಲಿ: ಚುನಾವಣಾ ಆಯೋಗವು ತಾನು ಈ ಹಿಂದೆ ಮೊಹರು ಮಾಡಿದ ಲಕೋಟೆಗಳಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚುನಾವಣಾ ಬಾಂಡ್‌ಗಳ ಕುರಿತ ತಾಜಾ ವಿವರಗಳನ್ನು ರವಿವಾರ ಬಹಿರಂಗಗೊಳಿಸಿದೆ. ಈ ವಿವರಗಳನ್ನು ಸಾರ್ವಜನಿಕವಾಗಿ ಲಭ್ಯವಾಗಿಸುವಂತೆ ಸರ್ವೋಚ್ಚ ನ್ಯಾಯಾಲಯವು ಆಯೋಗಕ್ಕೆ ನಿರ್ದೇಶನ ನೀಡಿತ್ತು.

ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳ ಕುರಿತು ಸರ್ವೋಚ್ಚ ನ್ಯಾಯಾಲಯದಿಂದ ಡಿಜಿಟೈಸ್ಟ್ ರೂಪದಲ್ಲಿ ಸ್ವೀಕರಿಸಿದ ವಿವರಗಳನ್ನು ಇಂದು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ ಎಂದು ಆಯೋಗದ ಹೇಳಿಕೆಯು ತಿಳಿಸಿದೆ. ♡

ಈ ವಿವರಗಳು 2019,ಎ.12ಕ್ಕೆ ಮೊದಲಿನ ವಹಿವಾಟುಗಳಿಗೆ ಸಂಬಂಧಿಸಿವೆ. ಈ ದಿನಾಂಕದ ಬಳಿಕ ವಿತರಿಸಲಾಗಿದ್ದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗವು ಕಳೆದ ವಾರ ಬಹಿರಂಗಗೊಳಿಸಿತ್ತು.

ತಾಜಾ ವಿವರಗಳ ಪ್ರಕಾರ, ಡಿಎಂಕೆ ಲಾಟರಿ ಕಿಂಗ್ ಸ್ಯಾಂಟಿಯಾಗೋ ಮಾರ್ಟಿನ್ ಒಡೆತನದ ಪ್ಯೂಚ‌ರ್ ಗೇಮಿಂಗ್‌ನಿಂದ 509 ಕೋ.ರೂ. ಸೇರಿದಂತೆ ಚುನಾವಣಾ ಬಾಂಡ್‌ಗಳ ಮೂಲಕ 656.5 ಕೋ.ರೂ.ಗಳನ್ನು ಸ್ವೀಕರಿಸಿದೆ. ಬಿಜೆಪಿ 6,986.5 ಕೋ.ರೂ.ಗಳ ಬಾಂಡ್‌ಗಳನ್ನು ನಗದೀಕರಿಸಿದೆ. 2,555 ಕೋ.ರೂ.ಗಳ ಅತ್ಯಧಿಕ ಮೊತ್ತವನ್ನು ಬಿಜೆಪಿ 2019-20ರಲ್ಲಿ ಸ್ವೀಕರಿಸಿತ್ತು. ಕಾಂಗ್ರೆಸ್ 1,334.35 ಕೋ.ರೂ.ಗಳ ಚುನಾವಣಾ ಬಾಂಡ್‌ಗಳನ್ನು ನಗದೀಕರಿಸಿದೆ.

ಟಿಎಂಸಿ 1,397 ಕೋ.ರೂ., ಬಿಆರ್‌ಎಸ್ 1,322 ಕೋ.ರೂ., ಬಿಜೆಡಿ 944.50 ಕೋ.ರೂ., ವೈಎಸ್‌ಆರ್ ಕಾಂಗ್ರೆಸ್ 442.80 ಕೋ.ರೂ., ಟಿಡಿಪಿ 181.35 ಕೋ.ರೂ., ಎಸ್ಪಿ 14.05 ಕೋ.ರೂ., ಶಿರೋಮಣಿ ಅಕಾಲಿ ದಳ 7.26 ಕೋ. ರೂ., ಎಐಎಡಿಎಂಕೆ 6.05 ಕೋ.ರೂ., ನ್ಯಾಷನಲ್ ಕಾನ್‌ಫರೆನ್ಸ್ 50 ಲ. ರೂ.ಗಳನ್ನು ಸ್ವೀಕರಿಸಿವೆ. ಜೆಡಿಎಸ್ 89.75 ಕೋ.ರೂ.ಗಳನ್ನು ಸ್ವೀಕರಿಸಿದ್ದು, ಇದರಲ್ಲಿ ಎರಡನೇ ಅತಿ ದೊಡ್ಡ ದೇಣಿಗೆದಾರನಾಗಿರುವ ಮೇಘಾ ಇಂಜಿನಿಯರಿಂಗ್ ನೀಡಿದ 50 ಕೋ.ರೂ.ಗಳು ಸೇರಿವೆ. ಬಿಎಸ್‌ಪಿ,ಸಿಪಿಎಂ ಮತ್ತು ಸಿಪಿಐ ಈ ಅವಧಿಯಲ್ಲಿ ತಾವು ಯಾವುದೇ ದೇಣಿಗೆಗಳನ್ನು ಸ್ವೀಕರಿಸಿಲ್ಲ ಎಂದು ತಿಳಿಸಿವೆ. ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಈ ವಿವರಗಳನ್ನು ಒಳಗೊಂಡಿದ್ದ ಮೊಹರು ಮಾಡಲಾಗಿದ್ದ ಲಕೋಟೆಗಳನ್ನು ತೆರೆಯದೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆಯೋಗದ ಮನವಿಯ ಮೇರೆಗೆ ಶನಿವಾರ ಸಂಜೆ ಐದು ಗಂಟೆಯೊಳಗೆ ಈ ವಿವರಗಳನ್ನು ಡಿಜಿಟೈಸ್ಟ್ ರೂಪದಲ್ಲಿ ಅದಕ್ಕೆ ಮರಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ನ್ಯಾಯಾಂಗ ರಿಜಿಸ್ಟಾರ್‌ಗೆ ನಿರ್ದೇಶನ ನೀಡಿತ್ತು.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...