ಎಸ್‌ಬಿಐನಿಂದ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಿದ ಚುನಾವಣಾ ಆಯೋಗ

Source: Vb | By I.G. Bhatkali | Published on 15th March 2024, 2:32 PM | National News |

ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ದೇಣಿಗೆಗಳಲ್ಲಿ ಪಾರದರ್ಶಕತೆಯತ್ತ ಒಂದು ದೊಡ್ಡ ಹೆಜ್ಜೆಯಾಗಿ ಭಾರತೀಯ ಚುನಾವಣಾ ಆಯೋಗವು ಎಸ್‌ಬಿಐ ತನಗೆ ಸಲ್ಲಿಸಿರುವ ಚುನಾವಣಾ ಬಾಂಡ್ ಗಳ ವಿವರಗಳನ್ನು ಸರ್ವೋಚ್ಚ ನ್ಯಾಯಾಲಯವು ವಿಧಿಸಿದ್ದ ಗಡುವಿಗೆ ಒಂದು ದಿನ ಮೊದಲೇ ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಎಸ್‌ಬಿಐ ಮಂಗಳವಾರ ಸಂಜೆ ಈಗ ರದ್ದುಗೊಂಡಿರುವ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದ ಸಂಸ್ಥೆಗಳು ಮತ್ತು ಅವುಗಳನ್ನು ನಗದೀಕರಿಸಿದ್ದ ರಾಜಕೀಯ ಪಕ್ಷಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿತ್ತು. ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಆಯೋಗಕ್ಕೆಈ ವಿವರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಮಾ.15ರ ಸಂಜೆ ಐದು ಗಂಟೆಯವರೆಗೆ ಗಡುವನ್ನು ವಿಧಿಸಿತ್ತು. ಫೆ.15ರಂದು ಅನಾಮಧೇಯ ರಾಜಕೀಯ ದೇಣಿಗೆಗಳಿಗೆ ಅವಕಾಶ ಕಲ್ಪಿಸಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಬಣ್ಣಿಸಿ ಅದನ್ನು ರದ್ದುಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ದಾನಿಗಳ ಹೆಸರುಗಳು, ಅವರು ದೇಣಿಗೆ ನೀಡಿದ್ದ ಮೊತ್ತ ಮತ್ತು ಸ್ವೀಕರಿಸಿದ್ದ ಪಕ್ಷಗಳ ಹೆಸರುಗಳನ್ನು ಬಹಿರಂಗಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.

ವಿವರಗಳನ್ನು ಬಹಿರಂಗಗೊಳಿಸಲು ಜೂ.30ರವರೆಗೆ ಸಮಯಾವಕಾಶ ನೀಡುವಂತೆ ಎಸ್‌ಬಿಐ ಸಲ್ಲಿಸಿದ್ದ ಕೋರಿಕೆಯನ್ನು ತಿರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಕೆಲಸದ ಅವಧಿಯ ಅಂತ್ಯದೊಳಗೆ ಎಲ್ಲ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಆದೇಶಿಸಿತ್ತು.

ದತ್ತಾಂಶಗಳು 2019,ಎ.12ರಿಂದ ಒಂದು ಲ.ರೂ.,10 ಲ.ರೂ ಮತ್ತು ಒಂದು ಕೋ.ರೂ.ಗಳ ಮೂರು ಮುಖಬೆಲೆಗಳ ಬಾಂಡ್‌ ಗಳ ಖರೀದಿಗೆ ಸಂಬಂಧಿಸಿವೆ ಮತ್ತು ಕಂಪೆನಿಗಳು ಹಾಗೂ ವ್ಯಕ್ತಿಗಳು ಮಾಡಿರುವ ಚುನಾವಣಾ ಬಾಂಡ್‌ಗಳ ಖರೀದಿಗಳನ್ನು ಬಹಿರಂಗಗೊಳಿಸಿವೆ.

ಚುನಾವಣಾ ಆಯೋಗದ ವೆಬ್‌ ಸೈಟ್ ಎರಡು ಪಟ್ಟಿಗಳನ್ನು ಒಳಗೊಂಡಿದೆ. 337 ಪುಟಗಳ ಮೊದಲ ಪಟ್ಟಿಯು ಮುಖಬೆಲೆ ಮತ್ತು ದಿನಾಂಕಗಳೊಂದಿಗೆ ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ ಕಂಪೆನಿಗಳನ್ನು ಒಳಗೊಂಡಿದೆ. 426 ಪುಟಗಳ ಎರಡನೇ ಪಟ್ಟಿಯು ರಾಜಕೀಯ ಪಕ್ಷಗಳ ಹೆಸರುಗಳು, ಬಾಂಡ್ ಗಳ ಮುಖಬೆಲೆ ಮತ್ತು ಅವುಗಳನ್ನು ನಗದೀಕರಿಸಿದ ದಿನಾಂಕಗಳನ್ನು ಒಳಗೊಂಡಿದೆ. ಬಾಂಡ್ ನಂಬರ್ ಗಳನ್ನು ಒದಗಿಸಲಾಗಿಲ್ಲ. ಆದಾಗ್ಯೂ ಪಟ್ಟಿಗಳನ್ನು ಪರಸ್ಪರ ಸಂಬಂಧಿಸಲು ಮತ್ತು ಯಾವ ಕಂಪೆನಿಯು ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆಯನ್ನು ನೀಡಿದೆ ಎಂದು ಕಂಡುಕೊಳ್ಳುವ ಅವಕಾಶವಿಲ್ಲ.

ಯೋಜನೆಯ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಕಂಪೆನಿಗಳಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಟೊರೆಂಟ್ ಪವರ್,ಭಾರ್ತಿ ಏರ್ ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪಸ್ ೯,ವೇದಾಂತ ಲಿ.,ಅಪೋಲೊ ಟೈರ್ಸ್, ಲಕ್ಷ್ಮಿ ಮಿತ್ತಲ್ ,ಪಿವಿಆರ್,ಸನ್ ಫಾರ್ಮಾ ಸೇರಿವೆ.

ಆದರೆ ಎರಡು ಬೃಹತ್ ಉದ್ಯಮ ಸಮೂಹಗಳಾಗಿರುವ ಅದಾನಿ ಗ್ರೂಪ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ಗಳ ಉಲ್ಲೇಖವಿಲ್ಲ. ಈ ಬಾಂಡ್‌ಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಿರುವ ರಾಜಕೀಯ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ಟಿಎಂಸಿ, ಜೆಡಿಯು, ಆರ್‌ಜೆಡಿ, ಆಪ್ ಮತ್ತು ಎಸ್‌ಪಿ ಸೇರಿವೆ.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...