ತಾಂಡಾ ನಿವಾಸಿಗಳಿಗೆ ಸುಸ್ಥಿರ ನೆಲೆಗೆ ಹಕ್ಕು ಪತ್ರ ವಿತರಣೆ. ಬಂಜಾರ್ ನಗಾರ್ ವಾದನ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನರೇಂದ್ರ ಮೋದಿ

Source: SO News | By Laxmi Tanaya | Published on 19th January 2023, 9:20 PM | State News | Don't Miss |

ಕಲಬುರಗಿ :  ನೃಪತುಂಗನ ನಾಡು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಾಂಡಾ ನಿವಾಸಿಗಳಿಗೆ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಶಾಶ್ವತ ಸೂರಿನ ರೂಪದಲ್ಲಿ ಏಕಕಾಲದಲ್ಲಿ 52,072 ಜನರಿಗೆ ಗಿನ್ನೀಸ್ ದಾಖಲೆಯ ಪ್ರಮಾಣದಲ್ಲಿ ಹಕ್ಕು ಪತ್ರ ವಿತರಿಸಿದರು.

ಮಳಖೇಡ್ ಹೊರವಲಯದ 150 ಎಕರೆ ಪ್ರದೇಶದಲ್ಲಿ ಕಂದಾಯ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ "ಅಲೆಮಾರಿ ಸೂರಿನಿಂದ ಸುಸ್ಥಿರ ಊರಿನೆಡೆಗೆ ಕಾರ್ಯಕ್ರಮ"ದಲ್ಲಿ ಬಂಜಾರ್ ನಗಾರ್ ವಾದನ ಸುಮಾರು 40 ಸೆಕೆಂಡ್ ಬಾರಿಸುವುದರ ಜೊತೆಗೆ ರಿಮೋಟ್ ಬಟನ್ ಪ್ರೆಸ್ ಮಾಡುವ ಮೂಲಕ ಏಕಕಾಲದಲ್ಲಿ 52 ಸಾವಿರ ಜನರಿಗೆ ಹಕ್ಕು ಪತ್ರವನ್ನು ವಿತರಿಸಿದರು.

 ನಗಾರ್ ಬಾರಿಸುತ್ತಿದ್ದಂತೆ ವೇದಿಕೆ ಮುಂದಿನ ಜನಸಮೂಹ ಚಪ್ಪಾಳೆ ತಟ್ಟುವ ಮೂಲಕ ನಗಾರಿಗೆ ಸಾಥ್ ನೀಡಿದರು. ನಂತರ ಪ್ರಧಾನಿಗಳು ಸಾಂಕೇತಿಕವಾಗಿ 5 ಜನ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದಲ್ಲದೆ ಅವರೊಂದಿಗೆ ಕುಶಲೋಪರಿಯಾಗಿ ಮಾತನಾಡಿಸಿದರು.

ಜನರತ್ತ ಕೈಬೀಸುತ್ತಲೆ ವೇದಿಕೆಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲಂಬಾಣಿ ಸಮುದಾಯದ ಗೋರ ಬಂಜಾರಾ ಶಾಲು ಹಾಕಿ ಸ್ವಾಗತ ಕೋರಿದರು. ಕಂದಾಯ ಸಚಿವ ಆರ್.ಅಶೋಕ ಅವರು ಖ್ಯಾತ ಅಂತರಾಷ್ಟ್ರೀಯ ಕಲಾವಿದ ಜಿ.ಎಸ್.ಖಂಡೇರಾವವ ರಚಿಸಿದ 12ನೇ ಶತಮಾನದಲ್ಲಿಯೆ ವಿಶ್ವಕ್ಕೆ ಸಂಸತ್ತು ಪರಿಚಯಿಸಿದ ಬಸವಾದಿ ಶರಣರಾದ ಅಲ್ಲಮಪ್ರಭು, ಮಾತೆ ಅಕ್ಕಮಹಾದೇವಿ ಅವರಿದ್ದ ಅನುಭವ ಮಂಟಪದ ಕಲಾಕೃತಿಯನ್ನು ಪ್ರಧಾನಮಂತ್ರಿಗಳನ್ನು ಸ್ಮರಣಿಕೆಯಾಗಿ ನೀಡಿ ಸತ್ಕರಿಸಿದರು. 

ಪ್ರಧಾನಿ ಅವರು ವೇದಿಕೆ ಹತ್ತುತ್ತಿರುವಂತೆ ನೆರೆ
ದ ಜನಸಾಗರವು "ಮೋದಿ", " ಮೋದಿ" ಎಂದು ಘೋಷಣೆ ಕೂಗುತ್ತಾ ತಮ್ಮ ನೆಚ್ಚಿನ ನಾಯಕನನ್ನು ಕಂಡು ಸಂಭ್ರಮಿಸಿದರು.

ದೇಶದ ಇತಿಹಾಸದಲ್ಲಿಯೇ ಐತಿಹಾಸಿಕವಾಗಿ ರಾಜ್ಯದಾದ್ಯಂತ ಲಂಬಾಣಿ ತಾಂಡಾ, ಹಟ್ಟಿ, ಹಾಡಿ, ಗೊಲ್ಲರಹಟ್ಟಿ, ವಡ್ಡರ ಹಟ್ಟಿಯಲ್ಲಿರುವ ತಾಂಡಾ ಜನರಿಗೆ ಖಾಯಂ ಸೂರು ಒದಗಿಸುವ ದೃಷ್ಠಿಯಿಂದ ಇಂದಿಲ್ಲಿ ಕಲಬುರಗಿ-27,267, ಬೀದರ-7,500, ರಾಯಚೂರು-3,500, ಯಾದಗಿರಿ-11,200 ಹಾಗೂ ವಿಜಯಪುರ-2,605 ಸೇರಿದಂತೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಗೊಂಡ ಐದು ಜಿಲ್ಲೆಗಳ 342 ಕಂದಾಯ ಗ್ರಾಮಗಳ 52,072 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಯಿತು.

ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಈ ಐದು ಜಿಲ್ಲೆಗಳಲ್ಲಿ 772 ಗ್ರಾಮಗಳನ್ನು ಗುರುತಿಸಿದ್ದು, ಇದರಲ್ಲಿ 604 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಆರಂಭಿಕ ಅಧಿಸೂಚನೆ ಹೊರಡಿಸಲಾಗಿತ್ತು. ಇದೀಗ ಈ ಪೈಕಿ ಅಂತಿಮ ಅಧಿಸೂಚನೆ ಹೊರಬಿದ್ದ 342 ಗ್ರಾಮಗಳ 52,072 ಜನರಿಗೆ ಹಕ್ಕು ಪತ್ರ ನೀಡಲಾಯಿತು.

ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆಯಿಂದ ಮುಂದೆ ಈ ಗ್ರಾಮಗಳು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಳಪಟ್ಟು ಸಹಜವಾಗಿ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್, ಶಿಕ್ಷಣ, ಸಾರಿಗೆ ವ್ಯವಸ್ಥೆ ಹೀಗೆ ಅನೇಕ ಮೂಲಸೌಕರ್ಯ ಸೌಲಭ್ಯ ಲಭ್ಯವಾಗಲಿದೆ. ಶತಮಾನದಿಂದ ಸೂರು ವಂಚಿತರಾಗಿ ಅಲೆಮಾರಿಯಾಗಿ ಬದುಕು ಸಾಗಿಸುತ್ತಿದ್ದ ಸಮುದಾಯಕ್ಕೆ ರಾಜ್ಯ ಸರ್ಕಾರ ಈ ಮೂಲಕ ಶಾಶ್ವತ ಸೂರು ಕಲ್ಪಿಸುವ ಅವರ ಬದುಕಿಗೆ ಆಶ್ರಯವಾಗಿದೆ.

ಮಳಖೇಡದ ಕಾರ್ಯಕ್ರಮಕ್ಕೆ 5 ಜಿಲ್ಲೆಗಳ ಫಲಾನುಭವಿಗಳನ್ನು ಕರೆತರಲು 2,500ಕ್ಕೂ ಹೆಚ್ಚಿನ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದಲ್ಲದೆ ರಾಜ್ಯ ಹೆದ್ದಾರಿ-10ಕ್ಕೆ ಹತ್ತಿಕೊಂಡಂತೆ ಊಟದ ವ್ಯವಸ್ಥೆ ಮಾಡಲಾಗಿತ್ತು. 200 ಕೌಂಟರ್ ತೆರೆದಿದ್ದರಿಂದ ಸಾರ್ವಜನಿಕರು, ಫಲಾನುಭವಿಗಳ ಊಟಕ್ಕೆ ಯಾವುದೇ ತೊಂದರೆಯಾಗಲಿಲ್ಲ. ಕಲಬುರಗಿ-ಸೇಡಂ ರಸ್ತೆ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಿದ್ದರಿಂದ ಕಾರ್ಯಕ್ರಮ ಸುಗಮವಾಗಿ ನಡೆಯಿತು. ಎಲ್ಲಿಯೂ ಟ್ರಾಫಿಕ್ ಜನದಟ್ಟಣೆಯ ಬಿಸಿ ಕಾಣಲಿಲ್ಲ. ಎಲ್ಲೆಡೆ ಭದ್ರತೆಗೆ ಖಾಕಿ ಸರ್ಪಗಾವಲು ಹಾಕಲಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು. ಲಂಬಾಣಿ ವೇಷಭೂಷಣದೊಂದಿಗೆ ಎಲ್ಲರ ಗಮನ ಸೆಳೆದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ, ಕೆ.ಕೆ.ಆರ್.ಟಿ.ಸಿ ಮತ್ತು ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ, ಸಂಸದ ಡಾ.ಉಮೇಶ ಜಾಧವ ಅವರು ಪ್ರಧಾನಿ ಆಗಮನಕ್ಕು ಮುನ್ನ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಕಂದಾಯ ಸಚಿವ ಆರ್. ಅಶೋಕ್ ಅವರೇ ಖುದ್ದಾಗಿ ವೇದಿಕೆಯಲ್ಲಿ ನಿಂತು, ಇಡೀ ಸಮಾರಂಭದ ಆಯೋಜನೆಯ ನೇತೃತ್ವ ವಹಿಸಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿ, ಸಾರ್ವಜನಿಕರನ್ನು ಗ್ಯಾಲರಿಗಳಿಗೆ ಪ್ರವೇಶಕ್ಕೆ ಅವಕಾಶ ಮಾಡಿಸಿಕೊಟ್ಟರು. ಅಲ್ಲದೆ ನುಗ್ಗಿಬರುತ್ತಿದ್ದವರನ್ನು ಸಾವಧಾನವಾಗಿ ಬಂದು ಶಾಂತ ರೀತಿಯಲ್ಲಿ  ಆಸನಗಳಲ್ಲಿ ಕುಳಿತುಕೊಳ್ಳಲು ಆಗಾಗ್ಗೆ ಮೈಕ್ ಮೂಲಕ ಮಾರ್ಗದರ್ಶನ ನೀಡುತ್ತಿದ್ದರು.

ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರದ ರಾಸಾಯನಿಕ, ರಸಗೊಬ್ಬರ ಹಾಗೂ ಹೊಸ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಹಾಗೂ ಬೀದರ ಸಂಸದ ಭಗವಂತ ಖೂಬಾ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ಆರ್. ನಿರಾಣಿ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಲಕ್ಷಾಂತರ ಸಂಖ್ಯೆಯಲ್ಲಿ ಫಲಾನುಭವಿಗಳು, ಸಾರ್ವಜನಿಕರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಂದಾಯ ಸಚಿವ ಆರ್.ಅಶೋಕ ಸ್ವಾಗತಿಸಿದರು.

ಸೂರತ್-ಚೆನ್ನೈ ಗ್ರೀನ್ ಫೀಲ್ಡ್ ಹೈವೇ, ಕಲಬುರಗಿ ಕಾಮಗಾರಿಗೆ ಶಂಕುಸ್ಥಾಪನೆ: ಮಳಖೇಡಕ್ಕೆ ಬರುವ ಮುನ್ನ ಪ್ರಧಾನಮಂತ್ರಿ ನರೇಂದ್ರ ನೋದಿ ಅವರು ಯಾದಗಿರಿಯ ಕೊಡೇಕಲ್ ನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾರ್ಯಗಳ ಚಾಲನಾ ಕಾರ್ಯಕ್ರಮದಲ್ಲಿ ಪ್ರವೇಶ ನಿಯಂತ್ರಿತ ಸೂರತ್-ಚೆನ್ನೈ ಗ್ರೀನ್ ಫೀಲ್ಡ್ ಹೈವೇ ವ್ಯಾಪ್ತಿ ಪೈಕಿ ಕಲಬುರಗಿ ಜಿಲ್ಲೆಯಲ್ಲಿ ಹಾದುಹೋಗುವ ಕಿ.ಮೀ.26 ರಿಂದ ಕಿ.ಮೀ.91ರ ವರೆಗಿನ 2,110.52 ಕೋಟಿ ರೂ. ಮೊತ್ತದ ಒಟ್ಟು 71 ಕಿ.ಮೀ ಯೋಜನೆಗೆ ಶಂಕುಸ್ಥಾಒನೆ ನೆರವೇರಿಸಿದ್ದರು. ಮಹಾರಾಷ್ಟ್ರದ ಗಡಿಯಲ್ಲಿರುವ ಅಫಜಲಪೂರ ತಾಲೂಕಿನ ಬಡದಾಳ ಗ್ರಾಮದಿಂದ ಆರಂಭವಾಗುವ ಆರು ಪಥದ ಈ ರಾಷ್ಟ್ರೀಯ ಹೆದ್ದಾರಿ ಗಾಣಗಾಪೂರ-ಜೇವರ್ಗಿ-ಮರಡಗಿ ಎಸ್.ಆಂದೋಲಾ ಮಾರ್ಗವಾಗಿ ಯಾದಗಿರಿ ಜಿಲ್ಲೆಯ ಅಣಬಿಗೆ ಸಾಗಲಿದೆ.

ಈ ಯೋಜನೆ ಸಾಕಾರಗೊಂಡಲ್ಲಿ ಸೂರತ್-ಚೆನ್ನೈ ನಡುವೆ 330 ಕಿ.ಮೀ. ಪ್ರಯಾಣದ ಅಂತರ ಕಡಿಮೆ ಜೊತೆಗೆ 8 ಗಂಟೆ ಪ್ರಯಾಣ ಅವಧಿ ಸಹ ಕಡಿಮೆಯಾಗಲಿದೆ. ಆರು ಪಥದ ಈ ಹೆದ್ದಾರಿ ನಿರ್ಮಾಣದಿಂದ ಪ್ರದೇಶದ ಜಿಲ್ಲೆಗಳ ಕೃಷಿ, ಕೈಗಾರಿಕೆ ಹಾಗೂ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಅವಧಿ ಉಲ್ಲೇಖಿಸದೇ ಪ್ರಜ್ವಲ್ ರೇವಣ್ಣ ಜೆಡಿಎಸ್‌ನಿಂದ ಅಮಾನತು

ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಪ್ರಕರಣ ಸಂಬಂಧ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ರೇವಣ್ಣ, ಪ್ರಜ್ವಲ್ ಉಚ್ಚಾಟನೆಗೆ ಜೆಡಿಎಸ್ ಶಾಸಕರ ಪಟ್ಟು

ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತಹ ಕೆಲಸ ಮಾಡಿದವರನ್ನು ರಾಕ್ಷದಿಂದ ಉಚ್ಚಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ ಎಂದು ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ: ಕುಮಾರಸ್ವಾಮಿ

ಜೆಡಿಎಸ್ ಸಂಸದ ಪ್ರಜಿ ಕುಮಾರಸ್ವಾಮಿ ಡ್ರೈವ್ ಪ್ರಕರಣದಲ್ಲಿ ನನ್ನನ್ನು, ದೇವೇಗೌಡರನ್ನು ಎಳೆದು ತರಬೇಡಿ' ಎಂದು ಮಾಧ್ಯಮಗಳ ಮುಂದೆ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ: ಪರಮೇಶ್ವ‌ರ್

ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಿ, ವರದಿ ಸಲ್ಲಿಸುವಂತೆ ...