ಭಟ್ಕಳದಲ್ಲಿ ಮೊಗೇರರ ವಿರುದ್ಧ ದಲಿತ ಸಂಘಟನೆಗಳ ಮೆರವಣಿಗೆ; ಸಹಾಯಕ ಆಯುಕ್ತರ ಕಚೇರಿಯ ಮುಂದೆ ಕೋಲಾಹಲ 

Source: S O News | By V. D. Bhatkal | Published on 1st April 2022, 11:57 AM | Coastal News |

ಭಟ್ಕಳ: ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಸದಸ್ಯರು ಮೊಗೇರರ ಧರಣಿಗೆ ವಿರುದ್ಧ ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದು, ಸಹಾಯಕ ಆಯುಕ್ತರ ಕಚೇರಿಯ ಮುಂದೆ ಕೋಲಾಹಲ ಸೃಷ್ಟಿಯಾದ ಘಟನೆ ಗುರುವಾರ ಸಂಜೆ ನಡೆದಿದೆ.

ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ವಿರೋಧಿಸುತ್ತ ಬಂದಿರುವ ಕೆಲವು ದಲಿತ ಸಂಘಟನೆಗಳ ಸದಸ್ಯರು, ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ವಿಷಯದಲ್ಲಿ ವಿಧಾನಸಭೆಯಲ್ಲಿ ಸರಕಾರ ಉತ್ತರ ನೀಡಿದ ಮಾರನೆಯ ದಿನವೇ ಇಲ್ಲಿನ ದಂಡಿನ ದುರ್ಗಾ ದೇವಸ್ಥಾನದಿಂದ ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ಸಹಾಯಕ ಆಯುಕ್ತರ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರ, ವಾದ್ಯಘೋಷಗಳೊಂದಿಗೆ ಶಿಳ್ಳೆ ಹೊಡೆದು ಕುಣಿಯುತ್ತ, ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ತಿರುಗಿ ಬಿದ್ದ ಧರಣಿ ನಿರತ ಮೊಗೇರರು:
ಇತ್ತ ಮೊಗೇರರು ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸಿ ಸಹಾಯಕ ಆಯುಕ್ತರ ಕಚೇರಿಯ ಮುಂದೆ ಸತತ 9ನೇ ದಿನವೂ ಧರಣಿಯನ್ನು ಮುಂದುವರೆಸಿದರು.

ದಲಿತ ಸಂಘಟನೆಗಳ ಮೆರವಣಿಗೆ ಸಹಾಯಕ ಆಯುಕ್ತರ ಕಚೇರಿಯತ್ತ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಧರಣಿ ನಿರತ ಕೆಲ ಮೊಗೇರ ಯುವಕರು ಸಹಾಯಕ ಆಯುಕ್ತರ ಕಚೇರಿಗೆ ನುಗ್ಗಲು ಯತ್ನಿಸಿದರು.

ಒಂದು ಸಮುದಾಯದ ಧರಣಿ, ಪ್ರತಿಭಟನೆಗೆ ವಿರುದ್ಧವಾಗಿ ಇನ್ನೊಂದು ಸಮುದಾಯದವರ ಪ್ರತಿಭಟನೆ, ಮೆರವಣಿಗೆಗೆ ಅವಕಾಶ ಕೊಟ್ಟಿರುವುದು ಏಕೆ, ನಾವು ಯಾರ ಹಕ್ಕನ್ನೂ ಕಸಿದುಕೊಂಡಿಲ್ಲ, ನಮ್ಮ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ, ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದಂತೆ ಆಗ್ರಹಿಸಲು, ಅಧಿಕಾರಿಗಳ ಮೇಲೆ ಒತ್ತಡ ತರಲು ಇವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಸ್‍ಐ ಆನಂದಮೂರ್ತಿ, ಪಿಎಸ್‍ಐ ಶಶಿಕುಮಾರ್, ಕೆಎಸ್‍ಆರ್‍ಪಿ ಸಿಬ್ಬಂದಿಗಳು ಸಹಾಯಕ ಆಯುಕ್ತರ ಕಚೇರಿ ಆವರಣದ ದ್ವಾರದಲ್ಲಿ ನಿಂತು ಆಕ್ರೋಶಿತರನ್ನು ತಡೆಯಲು ಯತ್ನಿಸಿದರು. ನಾವು ಯಾರಿಗೂ ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡಿಲ್ಲ, ಆದರೆ ಯಾರೇ ಪ್ರತಿಭಟನೆ ನಡೆಸಿದರೆ, ಮನವಿ ನೀಡಲು ಬಂದರೆ ಅವರಿಗೆ ರಕ್ಷಣೆ ಒದಗಿಸಬೇಕಾಗಿರುವುದು ನಮ್ಮ ಕರ್ತವ್ಯ, ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಪರಿಪರಿಯಾಗಿ ವಿನಂತಿಸಿಕೊಂಡರು.

ಇನ್ನೊಂದು ಕಡೆ ಮೊಗೇರ ಸಮಾಜದ ಮುಖಂಡರು ಯುವರನ್ನು ಸಮಾಧಾನ ಪಡಿಸುವ ಯತ್ನ ಮುಂದುವರೆಸಿದರು. ಆದರೆ ಇದನ್ನು ಒಪ್ಪದ ಆಕ್ರೋಶಿತ ಮೊಗೇರ ಯುವಕರು, ಗೇಟ್ ತಳ್ಳಿಕೊಂಡು ಒಳ ನುಗ್ಗಲು ನಿರಂತರವಾಗಿ ಪ್ರಯತ್ನ ನಡೆಸಿದರು. ಒಂದು ಹಂತದಲ್ಲಿ ಪೊಲೀಸರು ಹಾಗೂ ಧರಣಿ ನಿರತರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈ ಮೀರುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಡಿವಾಯ್‍ಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ದಿವಾಕರ, ಎಸ್‍ಐ ಹನುಮಂತ ಕುಡಗುಂಟಿ, ಹೆಚ್ಚಿನ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಬಂದರು. ನಂತರ ದಲಿತ ಸಂಘಟನೆಗಳ ಸದಸ್ಯರು ಪೊಲೀಸ್ ಭದ್ರತೆಯೊಂದಿಗೆ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಇಲ್ಲಿನ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸದಂತೆ ಮನವಿ ಸಲ್ಲಿಸಿದರು. 

ಜಿಲ್ಲೆಯಾದ್ಯಂತ ಹೋರಾಟ ಎಚ್ಚರಿಕೆ: 
ಉತ್ತರಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ಪ್ರವರ್ಗ-1ಕ್ಕೆ ಸೇರಿದ್ದು, ಸರಕಾರವೇ ಮಾನವ ಶಾಸ್ತ್ರ ಅಧ್ಯಯನ ನಡೆಸಿ, ವರದಿಯ ಆಧಾರದ ಮೇಲೆ ಜಿಲ್ಲೆಯ ಮೊಗೇರರಿಗೆ ಕಳೆದ 12 ವರ್ಷಗಳಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿದೆ. ಇದೀಗ ಜಿಲ್ಲೆಯ ಮೊಗೇರರು ತಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಧರಣಿ ನಡೆಸುತ್ತಿರುವುದು ದಲಿತರಿಗೆ ಆತಂಕವನ್ನುಂಟು ಮಾಡಿದೆ. ನಮ್ಮ ಸಾಂವಿಧಾನ ಹಕ್ಕನ್ನು ಮೇಲ್ವರ್ಗದವರು ಈ ರೀತಿ ಕಬಳಿಸಲು ಯತ್ನಿಸಿದ್ದು, ನಮಗೆ ಜಿಲ್ಲಾಡಳಿತದಿಂದ ರಕ್ಷಣೆ ಸಿಗುತ್ತಿಲ್ಲ. ಸ್ವಾರ್ಥ ರಾಜಕಾರಣಿಗಳ ಸಹಕಾರದಿಂದಾಗಿ ನಮ್ಮ ಹಕ್ಕು ದರೋಡೆಗೆ ಒಳಗಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಜಿಲ್ಲೆಯಾದ್ಯಂತ ಹೋರಾಟ ಸಂಘಟಿಸಲಾಗುವುದು ಎಂದು ದಲಿತ ಸಂಘಟನೆಗಳ ಮುಖಂಡರು ಎಚ್ಚರಿಸಿದರು. ನಾರಾಯಣ ಶಿರೂರು, ಎನ್.ಆರ್.ಮುಕ್ರಿ, ತುಳಸಿದಾಸ ಪಾವಸ್ಕರ, ರವೀಂದ್ರ ಮಂಗಳ, ಮಾದೇವ ಬಾಕಡ್, ಕಿರಣ ಶಿರೂರು, ಮಾರುತಿ ಪಾವಸ್ಕರ್, ನರಸಿಂಹ ಶಿರಾಲಿಕರ, ಗಣೇಶ ಹಳ್ಳೇರ, ಸುಕ್ರ ಹಳ್ಳೇರ ಉಪಸ್ಥಿತರಿದ್ದರು.  

ನಮ್ಮ ಹೋರಾಟ ಉಗ್ರ ರೂಪ ತಳೆಯಲಿದೆ:
ಧರಣಿ ಸ್ಥಳದಲ್ಲಿ ಮಾತನಾಡಿದ ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಮ್.ಕರ್ಕಿ, ಮೊಗೇರರಾದ ನಾವೂ ನೈಜ್ಯ ಪರಿಶಿಷ್ಟರಾಗಿದ್ದೇವೆ, ಪರಿಶಿಷ್ಟ ಮೊಗೇರರನ್ನು ಪ್ರವರ್ಗ-1 ಪಟ್ಟಿಯಲ್ಲಿ ಸೇರಿಸಿರುವುದು ಸರಕಾರದ ತಪ್ಪೇ ಹೊರತು ನಮ್ಮದಲ್ಲ, ನಮ್ಮ ಸಮಾಜವನ್ನು ಹತ್ತಿಕ್ಕಲು, ಸಮಾಜದ ಮೇಲೆ ದಬ್ಬಾಳಿಕೆ ನಡೆಸಲು ಅಧಿಕಾರಿಗಳು ತೆಗೆದುಕೊಂಡ ನಿರ್ಧಾರವಾಗಿದೆ. ನಾವು ಈಗ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ. ಸರಕಾರ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸದೇ ಇದ್ದರೆ ಉಗ್ರ ಹೋರಾಟವನ್ನು ಸಂಘಟಿಸುತ್ತೇವೆ. ಮುಂದಾಗುವ ಎಲ್ಲ ಅನಾಹುತಕ್ಕೂ ಸರಕಾರವೇ ಹೊಣೆಯಾಗಲಿದೆ ಎಂದು ತಿಳಿಸಿದ್ದಾರೆ.

Read These Next

ಕಾರವಾರ: ವಿದ್ಯಾರ್ಥಿ ಜೀವನದಿಂದಲೇ ಶ್ರೇಷ್ಠ ಗುರಿ ಸಾಧನೆಗೆ ಪೂರ್ವ ತಯಾರಿ ಮಾಡಿಕೊಳ್ಳಿ- ಜಿಪಂ ಸಿಇಒ ಈಶ್ವರ ಕಾಂದೂ

ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಅತ್ಯುತ್ತಮ ಸಾಧನೆಯ ಮೂಲಕ ಹೆಸರಾಗಿರುವ ಡಾ. ಎಪಿಜಿ ಅಬ್ದುಲ್ ಕಲಾಂ, ಡಾ. ...

ಕಾರವಾರ:ಚುನಾವಣಾ ನೋಡೆಲ್ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ; ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ವಿವಿಧ ಕರ್ತವ್ಯಗಳ ನಿರ್ವಹಣೆಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿ ...