ಭಟ್ಕಳ ಮುರಿನಕಟ್ಟೆ ಮರು ನಿರ್ಮಾಣ ವಿವಾದ ಶಾಂತಿ ಸಭೆಯಲ್ಲಿ ತಾರಕಕ್ಕೇರಿದ ವಾದ, ಪ್ರತಿವಾದ

Source: S.O. News Service | By V. D. Bhatkal | Published on 17th January 2021, 3:43 PM | Coastal News |

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ತೆರವುಗೊಂಡ ಭಟ್ಕಳ ಮುರಿನಕಟ್ಟೆ ಮರುನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡೂ ಕೋಮುಗಳ ಮುಖಂಡರ ನಡುವಿನ ವಾದ, ಪ್ರತಿವಾದ ತಾರಕಕ್ಕೇರಿದ್ದು, ಶನಿವಾರ ಸಂಜೆ ಶಾಸಕ ಸುನಿಲ್ ನಾಯ್ಕ, ಭಟ್ಕಳ ಪುರಸಭಾ ಅಧ್ಯಕ್ಷ ಫರ್ವೇಜ್ ಕಾಶೀಮ್‍ಜಿ, ಭಟ್ಕಳ ಸಹಾಯಕ ಆಯುಕ್ತ ಭರತ್, ತಹಸೀಲ್ದಾರ ಎಸ್.ರವಿಚಂದ್ರ, ಸಿಪಿಐ ದಿವಾಕರ ಉಪಸ್ಥಿತಿಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಾಗದೇ ಸಭೆ ಅಂತ್ಯ ಕಂಡಿದೆ. 

ಮುರಿನ ಕಟ್ಟೆಯು ಅನಾದಿಕಾಲದಿಂದಲೂ ಹಿಂದೂ ಧರ್ಮೀಯರ ಪೂಜಾ ಸ್ಥಳವಾಗಿದ್ದು, ಮತ್ತೆ ಅಲ್ಲಿಯೇ ಪ್ರತಿಷ್ಠಾಪಿಸಬೇಕಾಗಿದೆ. ತೆರವುಗೊಂಡ ಮುರಿನಕಟ್ಟೆಯನ್ನು ಕಟ್ಟೆ ಇದ್ದ ಸ್ಥಳದ ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಳದಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ಭಟ್ಕಳ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮತ್ತಿತರರು ಪಟ್ಟು ಹಿಡಿದರು. ಇದಕ್ಕೆ ಇನ್ನೊಂದು ಕೋಮಿನ ಮುಖಂಡ ಹಾಸೀಮ್ ಮತ್ತಿತರರು, ಅಲ್ಲಿ ಕಟ್ಟೆ ಇರುವುದರ ಬಗ್ಗೆ ಯಾವುದೇ ಪುರಾವೆ ಇಲ್ಲ, ಯಾವುದೇ ಬೋರ್ಡು ಸಹ ಇಲ್ಲ, ಈಗ ಇನ್ನೊಂದು ಕೋಮಿನ ಜನರ ಮನೆಯ ಹತ್ತಿರ ಕಟ್ಟೆಯನ್ನು ಕಟ್ಟುವುದಕ್ಕೆ ನಮ್ಮ ವಿರೋಧ ಇದೆ ಎಂದರು.

ಇದರಿಂದಾಗಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ತಂಜೀಮ್ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ಮಾತನಾಡಿ, ಹೆದ್ದಾರಿಯಂಚಿನಲ್ಲಿ ಇನ್ನೊಂದು ಕೋಮಿನವರ ಮನೆ ಇದ್ದು, ಕಟ್ಟೆಯನ್ನು ಹೆದ್ದಾರಿಯ ನಡುವೆ ಡಿವೈಡರ್ ಇರುವ ಸ್ಥಳದಲ್ಲಿಯೇ ನಿರ್ಮಿಸಿದರೆ ಎಲ್ಲರಿಗೂ ಕ್ಷೇಮ. ಇದೇ ರೀತಿಯಲ್ಲಿ ಪಕ್ಕದ ಕುಮಟಾ ತಾಲೂಕಿನಲ್ಲಿ ಡಿವೈಡರ್ ಸ್ಥಳದಲ್ಲಿ ಕಟ್ಟೆಯನ್ನು ನಿರ್ಮಿಸಲಾಗಿದೆ. ಅದೇ ರೀತಿ ಇಲ್ಲಿಯೂ ಅಧಿಕಾರಿಗಳು

ಭಟ್ಕಳ ಮುರಿನಕಟ್ಟೆ ಪೂಜಾ ಸ್ಥಳವಾಗಿದ್ದು, ಹೆದ್ದಾರಿಯ ಬದಿಯಲ್ಲಿಯೇ ನಿಗದಿ ಪಡಿಸಿದ ಸ್ಥಳದಲ್ಲಿ ಮರು ನಿರ್ಮಾಣ ಮಾಡುತ್ತೇವೆ. ಯಾವುದೇ ವಿರೋಧ ಬಂದರೂ ಎದುರಿಸುತ್ತೇವೆ.
 
 - ಶಾಸಕ ಸುನಿಲ್ ನಾಯ್ಕ

ಮುರಿನಕಟ್ಟೆ ಮರು ನಿರ್ಮಾಣಕ್ಕೆ ನಮ್ಮ ತಕರಾರು ಏನೂ ಇಲ್ಲ. ಆದರೆ ಬೇರೆ ಕೋಮಿನ ಮನೆಗೆ ಹೊಂದಿಕೊಂಡು ಕಟ್ಟೆಯನ್ನು ನಿರ್ಮಿಸಬಾರದು ಎನ್ನುವುದಷ್ಟೇ ನಮ್ಮ ವಾದ. ಹೆದ್ದಾರಿ ಅಗಲೀಕರಣದಿಂದ ಭಟ್ಕಳ ರಂಗೀಕಟ್ಟೆಯೂ ತೆರವುಗೊಳ್ಳಲಿದೆ. ಅದನ್ನು ಎಲ್ಲಿ ನಿರ್ಮಿಸುತ್ತೀರಿ? ಪಕ್ಕದ ಕುಮಟಾ ತಾಲೂಕಿನ ಮಾದರಿಯಲ್ಲಿ ಭಟ್ಕಳ ಮುರಿನಕಟ್ಟೆಯನ್ನು ಡಿವೈಡರ್ ಇದ್ದ ಸ್ಥಳದಲ್ಲಿ ನಿರ್ಮಿಸಲಿ
 -
ಇನಾಯಿತುಲ್ಲಾ ಶಾಬಂದ್ರಿ, ತಂಜೀಮ್ ಮುಖಂಡರು

ವಿವಾದಿತ ಕಟ್ಟೆಯನ್ನು ಎಲ್ಲಿ ನಿರ್ಮಿಸಬೇಕು ಎನ್ನುವುದರ ಬಗ್ಗೆ ಸದ್ಯದಲ್ಲಿಯೇ ತೀರ್ಮಾನಿಸಲಾಗುವುದು. ಫ್ಲೈ ಓವರ್ ಎಲ್ಲಿ ಅಂತ್ಯವಾಗುತ್ತದೆ ನೋಡಿಕೊಂಡು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು
 
- ಭರತ್, ಸಹಾಯಕ ಆಯುಕ್ತರು, ಭಟ್ಕಳ 

ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇನಾಯಿತುಲ್ಲಾ ಪ್ರಸ್ತಾಪಕ್ಕೆ ಇನ್ನೊಂದು ಕೋಮಿನ ಮುಖಂಡರು ಒಪ್ಪಿಗೆ ಸೂಚಿಸಿದರು. ಆದರೆ ಕಟ್ಟೆಯನ್ನು 8 ಅಡಿ ಉದ್ದ, 8 ಅಡಿ ಅಗಲ ಅಳತೆಯಲ್ಲಿ ಕಟ್ಟಬೇಕಾಗಿದ್ದು, ಡಿವೈಡರ್ ಸ್ಥಳದಲ್ಲಿ ನಿರ್ಮಿಸುವುದು ಅಸಾಧ್ಯವಾಗಿದೆ. ಆದ್ದರಿಂದ ಹೆದ್ದಾರಿಯ ಬದಿಯಲ್ಲಿಯೇ ಎಲ್ಲಿಯಾದರೂ ಅವಕಾಶ ನೀಡಬೇಕು ಎಂದು ಕೃಷ್ಣ ನಾಯ್ಕ ಮತ್ತಿತರರು ಒತ್ತಾಯ ಮಾಡಿದರು. ಇದಕ್ಕೆ ಅವಕಾಶ ನೀಡಬಾರದು ಎಂದು ಇನ್ನೊಂದು ಕೋಮಿನ ಮುಖಂಡರು ಪ್ರತಿ ವಾದ ಹೂಡಿದರು.

ಸಭೆ ಮುಂದುವರೆಯುತ್ತಿದ್ದಂತೆಯೇ ವಾದ, ಪ್ರತಿವಾದ ತಾರಕಕ್ಕೇರಿತು. ಎರಡೂ ಕೋಮಿನ ಮುಖಂಡರುಗಳ ಗದ್ದಲದ ನಡುವೆ ಅಧಿಕಾರಿಗಳು ಮುದ್ದೆಯಂತಾಗಿ ಸುಮ್ಮನೇ ಕುಳಿತುಕೊಂಡರು. ನಂತರ ಶಾಸಕ ಸುನಿಲ್ ನಾಯ್ಕ, ಕೃಷ್ಣ ನಾಯ್ಕ, ಭಟ್ಕಳ ಬಿಜೆಪಿ ಅಧ್ಯಕ್ಷ ಸುಬ್ರಾಯ ದೇವಡಿಗ, ನ್ಯಾಯವಾದಿಗಳಾದ ರಾಜೇಶ ನಾಯ್ಕ, ದತ್ತಾತ್ರೇಯ ನಾಯ್ಕ, ಶ್ರೀಕಾಂತ ನಾಯ್ಕ, ಪ್ರಮೋದ ಜೋಷಿ, ರಮೇಶ ನಾಯ್ಕ ಮತ್ತಿತರರು ಕಟ್ಟೆಯನ್ನು ನಿಗದಿಪಡಿಸಿದ ಸ್ಥಳದಲ್ಲಿಯೇ ಮರು ನಿರ್ಮಾಣ ಮಾಡುವುದಾಗಿ ಗಟ್ಟಿ ಧ್ವನಿಯಲ್ಲಿ ಹೇಳುತ್ತ ಸಭೆಯಿಂದ ಹೊರ ಬಂದರು. ಮಜ್ಲಿಸೇ ಇಸ್ಲಾ ವ ತಂಜೀಮ್ ಅಧ್ಯಕ್ಷ ಎಸ್.ಎಮ್.ಫರ್ವೇಜ್, ಕಾರ್ಯದರ್ಶಿ ಅಬ್ದುರ್ರಕೀಬ್ ಎಮ್.ಜೆ., ಪುರಸಭೆ ಸದಸ್ಯ ಕೆ.ಎಮ್. ಆಶ್ಪಾಕ್, ಭಟ್ಕಳ ಮುಸ್ಲೀಮ್ ಯೂಥ್ ಫೆಡರೇಶನ್ನಿನ ಅಧ್ಯಕ್ಷ ಅಝೀಜುರೆಹ್ಮಾನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...