ಕೋಮುಗಲಭೆ ಮಟ್ಟ ಹಾಕಲು ಕಠಿಣ ಕಾನೂನು ರೂಪಿಸಲು ಚಿಂತನೆ; ಸಿಎಂ ಸಿದ್ದರಾಮಯ್ಯ

Source: sonews | By Staff Correspondent | Published on 7th January 2018, 10:09 PM | State News | Don't Miss |

ಪುತ್ತೂರು: ಪದೇ ಪದೇ ಕೋಮುಗಲಭೆಗಳನ್ನು ಸೃಷ್ಟಿಸುವುದರ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವವರನ್ನು ನಾನು ಸುಮ್ಮನೆ ಬಿಡುವುದಿಲ್ಲ. ಕೋಮು ಗಲಭೆಗಳನ್ನು ಸೃಷ್ಟಿಸುವವರನ್ನು ಮಟ್ಟ ಹಾಕಲು ಮುಂದಿನ ದಿನಗಳಲ್ಲಿ ಕಠಿಣ ಕಾನೂನು ರೂಪಿಸಲಾಗುದುವುದು. ಗಲಭೆಕೋರರು ಯಾರೆ ಆಗಲಿ ಅವರ ವಿರುದ್ಧ ಕಠಿಣ ಕಾನುನು ಕ್ರಮ ಜರಗಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಅವರು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ರವಿವಾರ ಸಂಜೆ ನಡೆದ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ‘ಉದ್ಘಾಟನೆ ಮತ್ತು ಶಂಕುಸ್ಥಾಪನೆ’ ನೆರವೇರಿಸಿ ಮಾತನಾಡಿದರು.

ಕರಾವಳಿಯ ಜನ ಬುದ್ಧಿವಂತರು, ಶಿಕ್ಷಣ ಉಳ್ಳವರು, ಸುಸಂಸ್ಕೃತರು ಆದರೆ ಈ ಜಿಲ್ಲೆಯಲ್ಲಿ ಪದೇ ಪದೇ ಧರ್ಮಗಳ ಹೆಸರಿನಲ್ಲಿ ಕೋಮು ಗಲಭೆಗಳು ನಡೆಯುತ್ತಿರುವುದು ವಿಷಾಧನೀಯವಾಗಿದೆ. ಜಾತಿ, ಧರ್ಮಗಳ ಆಧಾರದಲ್ಲಿ ಜನರ ಭಾವನೆಯನ್ನು ಕೆರಳಿಸಿ ಅಧಿಕಾರ ಪಡೆಯುವ ಬಿಜೆಪಿ ಮತ್ತಿತರ ಕೋಮು ಶಕ್ತಿಗಳು ಜಿಲ್ಲೆಯಲ್ಲಿ ಪ್ರಕ್ಷುಬ್ದ ವಾತಾವರಣವನ್ನು ಸೃಷ್ಟಿಮಾಡುತ್ತಿದೆ. ಪ್ರತೀ ಬಾರಿ ಗಲಭೆ ನಡೆದಾಗಲೂ ಸರಕಾರ ಅದನ್ನು ಮಟ್ಟ ಹಾಕಿದೆ. ಮುಂದಿನ ಎರಡು ತಿಂಗಳೊಳಗೆ ಹೊಸದಾದ ಕಾನೂನನ್ನು ಜಾರಿಗೆ ತರುವ ಮೂಲಕ ಯಾರು ಕೋಮುಗಲಭೆಯನ್ನು ನಡೆಸುವವರ ಮತ್ತು ಗಲಭೆಗೆ ಪ್ರಚೋಧನೆ ನೀಡುವವರ ವಿರುದ್ದ ಕಟ್ಟು ನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕಾನೂನು ರೂಪಿಸಲಾಗುವುದು. ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕೋಮುಗಲಭೆ ನಡೆಯಲು ನಾವು ಬಿಡುವುದಿಲ್ಲ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸರಕಾರದ ಸಾಧನಾ ಸಮಾವೇಶದಲ್ಲಿ ಮಾತನಾಡಿ ಕೆಲವರು ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ ನೀಡುತ್ತಾರೆ, ಮತ್ತೊಬ್ಬ ಸಚಿವರು ಸಂವಿಧಾನವನ್ನೇ ಬದಲಾವಣೆ ಮಾಡುವುದಾಗಿ ಹೇಳುತ್ತಾರೆ. ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸಿ ಗಲಭೆಯನ್ನು ಮಾಡುವಂತೆ ಹಿಂದುಳಿದವರ ಮಕ್ಕಳನ್ನು ಛೂ ಬಿಡುತ್ತಾರೆ. ತೆರೆಮರೆಯಲ್ಲಿ ಕುಳಿತು ಗಲಭೆ ನಡೆಸುವವರ ಮಕ್ಕಳು ಎಂದಿಗೂ ಜೈಲಿಗೆ ಹೋಗುವುದಿಲ್ಲ ಅವರು ಸಾಯಲೂ ಸಿದ್ಧರಿಲ್ಲ, ಬಡವರ ಮಕ್ಕಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಇವರು ಕೊಲ್ಲುತ್ತಿದ್ದಾರೆ. ಬಡವರನ್ನು, ಅಮಾಯಕರನ್ನು ಕೊಂದು ಇವರು ಅಧಿಕಾರ ಪಡೆಯುವ ಹುಚ್ಚು ಸಾಹಸವನ್ನು ಮಾಡುತ್ತಿದ್ದಾರೆ ಇದಕ್ಕೆ ಬುದ್ದಿವಂತ ಜಿಲ್ಲೆಯ ಜನರು ಕೈ ಜೋಡಿಸಬಾರದು. ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ ದ.ಕ ಜಿಲ್ಲೆಯ ಎಲ್ಲಾ ಜನರು ಒಂದೇ ತಾಯಿಯ ಮಕ್ಕಳಂತೆ ಬಾಳಿ ಬದುಕಬೇಕು. ಇದಕ್ಕಾಗಿ ನೀವು ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡಬೇಕು. ಕೋಮುವಾದಿಗಳಿಗೆ ತಕ್ಕ ಪಾಠ ಕಲಿಸುವ ಮೂಲಕ ನಾವು ಎಂದೆಂದೂ ಒಂದೇ ತಾಯಿಯ ಮಕ್ಕಳು ಎಂಬುದನ್ನು ಸಾಭೀತು ಮಾಡಬೇಕು ಎಂದು ಹೇಳಿದರು.

ಸರ್ಕಾರ ಟಿಪ್ಪು ಜಯಂತಿ ಮಾಡಿದಾಗ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ವಿರೋಧಿಸಿದ್ದರು. ಆದರೆ ಅವರು ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿ ಟಿಪ್ಪು ಟೋಪಿ ಹಾಕಿಕೊಂಡು ಟಿಪ್ಪು ಖಡ್ಕ ಹಿಡಿದುಕೊಂಡು ಪಕ್ಕದಲ್ಲಿ ಶೋಭಾ ಅವರನ್ನು ನಿಲ್ಲಿಸಿ ಫೋಸು ಕೊಟ್ಟಿದ್ದರು. ಟಿಪ್ಪು ದೇಶಪ್ರೇಮಿ, ಮಹಾಶೂರ ಎಂದು ಹೇಳಿಕೆ ನೀಡಿದ್ದರು. ಮತ್ತೆ ಬಿಜೆಪಿಗೆ ಹೋದಾಗ ಟಿಪ್ಪು ಮತಾಂಧ ಎನ್ನುತ್ತಾರೆ. ಇವರು ಗಳಿಗೆಗೊಮ್ಮೆ ಬಣ್ಣ ಬದಲಾಯಿಸುತ್ತಾರೆ. ಟಿಪ್ಪು ಹುಟ್ಟುವಾಗ ಮುಸ್ಲಿಂ ಆಗಿರಬಹುದು ಆದರೆ ಬ್ರಿಟೀಷರ ವಿರುದ್ಧ 4 ಬಾರಿ ಯುದ್ಧ ಸಾರಿದ್ದರು. ಒಮ್ಮೆ ಯುದ್ಧದಲ್ಲಿ ಸೋತಾಗ ತನ್ನ ಮಕ್ಕಳನ್ನೇ ಬ್ರಿಟಿಷರಲ್ಲಿ ಒತ್ತೆ ಇಟ್ಟು ದೇಶವನ್ನು ಕಾಪಾಡಿದ ದೇಶಪ್ರೇಮಿ. ಅವರ ಜಯಂತಿ ಮಾಡುವುದು ತಪ್ಪೇ ಎಂದು ಪ್ರಶ್ನಿಸಿದರು. ರಾಜ್ಯಕ್ಕೆ ಆಗಮಿಸಿದ ರಾಷ್ಟ್ರಪತಿಯವರೇ ಟಿಪ್ಪು ಸುಲ್ತಾನ್ ದೇಶಪ್ರೇಮಿ, ಇತಿಹಾಸ ಪ್ರಸಿದ್ಧ ಪರಾಕ್ರಮಿ ಎಂದು ಬಣ್ಣಿಸಿದ್ದರು. ಆದರೂ ಆರ್‌ಎಸ್‌ಎಸ್, ಬಜರಂಗದಳಕ್ಕೆ ಬುದ್ಧಿ ಬಂದಿಲ್ಲ. ಕಾಮಾಲೆ ಕಣ್ಣಿನಲ್ಲಿಯೇ ಎಲ್ಲವನ್ನೂ ನೋಡುವ ಇವರಿಗೆ ಕೋಮುವಾದ, ಮತಾಂಧತೆಯನ್ನು ಹೊರತುಪಡಿಸಿ ಬೇರೆ ಅಜೆಂಡಾವೇ ಇಲ್ಲ. ಬೇರೆ ಧರ್ಮಗಳನ್ನು ಧ್ವೇಷಿಸುವುದು, ಹಿಂದೂಗಳನ್ನು ಇತರ ಧರ್ಮಗಳ ವಿರುದ್ಧ ಎತ್ತಿಕಟ್ಟುವುದು, ಶವಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಇದಕ್ಕಿಂತ ಅವಾನವೀಯತೆ ಇನ್ನೊಂದಿಲ್ಲ ಎಂದರು.

ಸರ್ಕಾರವು ವಿವಿಧ ಭಾಗ್ಯಗಳ ಯೋಜನೆಯೊಂದಿಗೆ 22,27,506 ರೈತರ 8,165 ಕೋಟಿ ರೂ. ಸಾಲ ಮನ್ನಾ ಮಾಡಿದೆ. ಯಡಿಯೂರಪ್ಪ ಅಧಿಕಾರ ದಲ್ಲಿದ್ದಾಗ ರೈತರಿಗಾಗಿ ಏನೂ ಮಾಡದೆ ಈಗ ಅಧಿಕಾರ ಇಲ್ಲದೇ ಇದ್ದಾಗ ತನ್ನನ್ನು ಮುಖ್ಯಮಂತ್ರಿ ಮಾಡಿದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಾರೆ. ಹಿಂದೆ ಅಧಿಕಾರದಲ್ಲಿದ್ದಾಗ ಆ ಕೆಲಸವನ್ನು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಅವರು ಪ್ರಧಾನಿ ನರೇಂದ್ರ ಮೋದಿಯವರಲ್ಲಿಗೆ ಸಾಲ ಮನ್ನಾ ಮಾಡುವಂತೆ ನಾನು ಸಹಿತ ಸರ್ವ ಪಕ್ಷಗಳ ನಿಯೋಗ ಭೇಟಿ ನೀಡಿದಾಗ ಪ್ರಧಾನಿಯವರು ಸಾಲ ಮನ್ನಾ ಮಾಡಲು ಸಾಧ್ಯವೇ ಎಂದರು. ಈ ಸಂದರ್ಭದಲ್ಲಿ ಜೊತೆಗಿದ್ದ ಡಿವಿ, ಯಡಿಯೂರಪ್ಪ, ಶೆಟ್ಟರ್ ಏನೂ ಮಾತನಾಡಲಿಲ್ಲ, ಪ್ರಧಾನಿ ಎದುರು ಕೈ ಕಟ್ಟಿ ಕೂತಿದ್ದರು. ಇವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಅವರು ರೈತ ವಿರೋಧಿಗಳು ಎಂದ ಸಿಎಂ ಅವರಿಗೆ ತಾಖತ್ತು ಇದ್ದಲ್ಲಿ ಪ್ರಧಾನಿ ಬಳಿಗೆ ಹೋಗಿ ರೈತರ ಸಾಲ ಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಉಗ್ರಪ್ಪ ಅವರು ರೈತರ ಸಾಲ ಮನ್ನಾಗೊಳಿಸುವಂತೆ ಆಗ್ರಹಿಸಿದ್ದರು. ಆ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಾಲ ಮನ್ನಾಕ್ಕೆ ದುಡ್ಡು ಎಲ್ಲಿಂದ ತರಲಿ. ನಮ್ಮ ಸರ್ಕಾರದಲ್ಲಿ ನೋಟು ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದು ಹೇಳಿದ್ದರು. ಇದೀಗ ನಾನು ಮುಖ್ಯಮಂತ್ರಿ ಆದಲ್ಲಿ ರೈತರ ಸಾಲ ಮನ್ನಾ ಮಾಡ್ತೇನೆ ಎಂದರೆ ಜನ ಅವರನ್ನು ನಂಬುವುದಿಲ್ಲ ಎಂದರು.

ಕೋಮುವಾದಿಗಳಿಗೆ ವಿರೋಧ ಮಾಡಿದ ಕಾರಣಕ್ಕೆ ಸಚಿವ ರಮಾನಾಥ ರೈ, ಯು ಟಿ ಖಾದರ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳು ವಿರೋಧಿಗಳ ಕೋಪಕ್ಕೆ ಒಳಗಾಗಿದ್ದಾರೆ. ಯಾರು ಏನೇ ಮಾಡಿದರೂ, ಹೇಳಿದರೂ ನೀವು ಕೋಮುಗಲಭೆ ನಡೆಸುವ ಮತೀಯ ಸಂಘಟನೆಗಳ ವಿರುದ್ಧ ಜನರಿಗೆ ಮನವರಿಕೆ ಮಾಡುತ್ತಲೇ ಇರಿ ಎಂದು ದೈರ್ಯ ತುಂಬಿದರು.

ನಾನು ಸರ್ಕಾರಿ ವೆಚ್ಚದಲ್ಲಿ ರಾಜ್ಯದಲ್ಲಿ ಸುತ್ತಾಡುತ್ತಿದೇನೆ ಎಂದು ಬಿಜೆಪಿಗರು ಟೀಕಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿರುವ ನಾನು ಸರ್ಕಾರಿ ವೆಚ್ಚದಲ್ಲಿ ಅಲ್ಲದೆ ಇನ್ನು ಹೇಗೆ ಹೋಗ ಬೇಕು. ಪ್ರಧಾನಿ ಮೋದಿ ಗುಜರಾತ್‌ಗೆ ಮತ್ತು ವಿದೇಶಗಳಿಗೆ ಅವರ ಸ್ವಂತ ದುಡ್ಡಿನಲ್ಲಿ ಹೋಗುತ್ತಿದ್ದಾರೆಯೇ?. ಇದನ್ನು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ದೇಶದ ಪ್ರಧಾನಿ ಮಾಡುತ್ತಿದ್ದಾರೆ. ಆದರೆ ನಾನು ನಿರಂತರವಾಗಿ ಎಲ್ಲಾ ಜಿಲ್ಲೆಗಳಿಗೆ ಭೇಟಿ ಕೊಡುತ್ತಿರುವುದು. ಹೋದಲ್ಲಿ ಜನ ಸೇರುವುದು ಕಂಡು ವಿರೋಧ ಪಕ್ಷಗಳಿಗೆ ಅಸೂಯೆಯಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಮತ್ತು ಕರ್ನಾಟಕ ಗುರಿ ಎಂಬ ಹೇಳಿಕೆ ನೀಡುತ್ತಿದ್ದಾರೆ. ಆದರೆ ನಮ್ಮದು ಋಣ ಮುಕ್ತ ಭಾರತ ಮತ್ತು ಹಸಿವು ಮುಕ್ತ ಕರ್ನಾಟಕ ಎಂಬ ಗುರಿ ಹೊಂದಿದೆ. ಬಲಿಷ್ಠ ಜಾತ್ಯಾತೀತ ನಿಲುವಿನ ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳುವವರು ದೇಶದ ನಾಯಕರ ತ್ಯಾಗವನ್ನು ನೆನಪಿಸಿಕೊಳ್ಳಬೇಕು ಎಂದರು.

ಆಹಾರ ಮತ್ತು ನಾಗರಿಕ ಸಚಿವ ಯು.ಟಿ. ಖಾದರ್ ಮಾತನಾಡಿ ಗೋರಕ್ಷಣೆಯ ಹೆಸರಿನಲ್ಲಿ ರಾಜಕೀಯ ನಡೆಸಿದವರು ಗೋ ಸಂತತಿಯ ರಕ್ಷಣೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹಾಲಿಗೆ ಬೆಂಬಲ ಬೆಲೆ ಮತ್ತು ಪಶುಭಾಗ್ಯ ಯೋಜನೆಯ ಮೂಲಕ ಗೋ ಸಂತತಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ಉಚಿತ ಹಾಲು ನೀಡುವ ಮೂಲಕ ಹಾಲಿಗೆ ಮಾರುಕಟ್ಟೆಯ ವ್ಯವಸ್ಥೆಯನ್ನೂ ಮಾಡಿದ್ದಾರೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಸರ್ಕಾರ ಯೋಜನೆಯಾಗಿದೆ ಎಂದರು.

ಶಾಸಕಿ ಶಕುಂಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರದ ಮುಖ್ಯ ಸಚೇತಕ ಐವನ್ ಡಿಸೋಜ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಮಂಗಳೂರು ವಿವಿ ಕುಲಪತಿ ಬೈರಪ್ಪ, ರಾಜ್ಯ ಅರೆಭಾಷೆ ಅಕಾಡಮಿ ಅಧ್ಯಕ್ಷ ಪಿ.ಸಿ. ಜಯರಾಂ, ಪುತ್ತೂರು ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು, ಜಿ.ಪಂ. ಸದಸ್ಯರಾದ ಮಂಜುಳಾ ಮಾಧವ ಮಾವೆ, ಅನಿತಾ ಹೇಮನಾಥ ಶೆಟ್ಟಿ, ಪಿ.ಪಿ. ವರ್ಗೀಸ್, ಎಂ.ಎಸ್. ಮಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಸ್ವಾಗತಿಸಿದರು. ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಮೂಡುಬಿದಿರೆಯಲ್ಲಿ ಮುಖ್ಯಮಂತ್ರಿಗೆ ಕರಿಪತಾಕೆ ಪ್ರದರ್ಶನಕ್ಕೆ ಸಿದ್ಧತೆ: ಬಿಜೆಪಿ ನಾಯಕರ ಬಂಧನ, ಬಿಡುಗಡೆ

ಮೂಡುಬಿದಿರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಡುಬಿದಿರೆಗೆ ಆಗಮಿಸುವ ಸಂದರ್ಭ ಕರಿಪತಾಕೆ ಪ್ರದರ್ಶನಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ.

ಕರಿಪತಾಕೆ ಪ್ರದರ್ಶಿಸಲು ಸಿದ್ಧತೆ ನಡೆಸಿದ್ದ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಈಶ್ವರ ಕಟೀಲ್ ಸಹಿತ 15 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು ಎಂದು ತಿಳಿದುಬಂದಿದೆ.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ; ಬಿಜೆಪಿ ಮುಖಂಡನಿಗೆ ಪೆನ್‌ಡ್ರೈವ್ ನೀಡಿದ್ದೆ; ಪ್ರಜ್ವಲ್ ಕಾರು ಚಾಲಕನಿಂದ ಹೇಳಿಕೆ

ಪ್ರಜ್ವ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ಬಿಟ್ಟು ಬೇರೆ ಯಾರಿಗೂ ...