ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಮುಖ್ಯ ನ್ಯಾಯಾಧೀಶರು ಹೊರಕ್ಕೆ; ಕ್ಯಾಬಿನೆಟ್ ಸಚಿವ ಒಳಗೆ: ನೂತನ ಮಸೂದೆ ಮಂಡನೆ

Source: Vb | By I.G. Bhatkali | Published on 11th August 2023, 10:07 AM | National News |

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಮೂವರು ಸದಸ್ಯರ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರನ್ನು ಹೊರಗಿರಿಸುವ ಉದ್ದೇಶದ ಮಸೂದೆಯೊಂದನ್ನು ಸಂಸತ್‌ನಲ್ಲಿ ಮಂಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಪ್ರತಿನಿತ್ಯ ನ್ಯಾಯಾಂಗದೊಂದಿಗೆ ಸಂಘರ್ಷ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಅದರ ಈ ಕ್ರಮವು ಹಲವರ ಹುಬ್ಬೇರಿಸಿದೆ. ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ಮಸೂದೆ, 2023ನ್ನು ರಾಜ್ಯಸಭೆಯಲ್ಲಿ ಮಂಡನೆಗಾಗಿ ಪಟ್ಟಿ ಮಾಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳ ನೇಮಕಾತಿ ಮತ್ತು Qಸೇವಾ ಶರತ್ತುಗಳನ್ನು ಈ ಮಸೂದೆಯು ನಿಯಂತ್ರಿಸುತ್ತದೆ. ಚುನಾವಣಾ ಆಯೋಗ ನಡೆಸಬೇಕಾದ ಕಲಾಪಗಳ ವಿಧಾನವನ್ನೂ ಅದು ನಿರೂಪಿಸುತ್ತದೆ.

ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಪ್ರಧಾನಿ, ಲೋಕಸಭೆಯ ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯು ನೇಮಿಸಬೇಕೆಂದು ಮಾಚ್ ೯ನಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ನೂತನ ಮಸೂದೆಯು ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರಹಾಕಿ ಅವರ ಸ್ಥಾನದಲ್ಲಿ ಪ್ರಧಾನಿ ನೇಮಿಸುವ ಸಂಪುಟ ದರ್ಜೆಯ ಸಚಿವರೊಬ್ಬರನ್ನು ತರುತ್ತದೆ. ಇದರೊಂದಿಗೆ ಚುನಾವಣಾ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಸುಪ್ರೀಂ ಕೋಟ್ ೯ನ ಅತ್ಯಂತ ಮಹತ್ವದ ತೀರ್ಪನ್ನು ಕಡೆಗಣಿಸಲಾಗಿದೆ.

ಮಾರ್ಚ್‌ನಲ್ಲಿ, ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಕಾಪಾಡುವ ಉದ್ದೇಶದೊಂದಿಗೆ, ಪ್ರಧಾನಿ, ಲೋಕಸಭೆಯ ಪ್ರತಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯ ಸಲಹೆಯ ಆಧಾರದಲ್ಲಿ ಚುನಾವಣಾ ಆಯೋಗಕ್ಕೆ ನೇಮಕಾತಿಗಳನ್ನು ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆ ಬಗ್ಗೆ ಸಂಸತ್ತು ಕಾನೂನೊಂದನ್ನು ರೂಪಿಸುವವರೆಗೆ, ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದು ನ್ಯಾ. ಕೆ.ಎಮ್. ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವೊಂದು ಸರ್ವಾನುಮತದ ತೀರ್ಪಿನಲ್ಲಿ ಹೇಳಿತ್ತು.

“ಕಾನೂನಿನ ಆಡಳಿತ ಇರುವಂತೆ ನೋಡಿಕೊಳ್ಳದ ಚುನಾವಣಾ ಆಯೋಗವೊಂದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಚುನಾವಣಾ ಆಯೋಗಕ್ಕೆ ಅಪಾರ ಅಧಿಕಾರವಿದೆ. ಅದು ಕಾನೂನುಬಾಹಿರವಾಗಿ ಅಥವಾ ಅಸಾಂವಿಧಾನಿಕವಾಗಿ ಅಧಿಕಾರಗಳನ್ನು ಚಲಾಯಿಸಿದರೆ ಅದು ರಾಜಕೀಯ ಪಕ್ಷಗಳ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಚುನಾವಣಾ ಆಯೋಗವು ಸ್ವತಂತ್ರವಾಗಿರಬೇಕು; ತಾನು ಸ್ವತಂತ್ರ ಎಂದು ಹೇಳಿಕೊಂಡು ಏಕಪಕ್ಷೀಯವಾಗಿ ವರ್ತಿಸಬಾರದು. ಸರಕಾರದ ಋಣದಲ್ಲಿರುವ ವ್ಯಕ್ತಿಯೊಬ್ಬ ಸ್ವತಂತ್ರ ಮನೋಸ್ಥಿತಿಯನ್ನು ಹೊಂದಿರುವುದು ಸಾಧ್ಯವಿಲ್ಲ. ಸ್ವತಂತ್ರ ವ್ಯಕ್ತಿಯೊಬ್ಬ ಅಧಿಕಾರಸ್ಥರ ಅಡಿಯಾಳಾಗುವುದಿಲ್ಲ' ಎಂದು ನ್ಯಾ. ಜೋಸೆಫ್ ಹೇಳಿದ್ದರು.

ಸುಪ್ರೀಂ ಕೋರ್ಟ್‌ ತೀರ್ಪಿಗೂ ಮೊದಲು, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳನ್ನು ಸರಕಾರದ ಶಿಫಾರಸಿನಂತೆ ರಾಷ್ಟ್ರಪತಿ ನೇಮಿಸುತ್ತಿದ್ದರು.

ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಫೆಬ್ರವರಿ 14ರಂದು ನಿವೃತ್ತರಾಗಲಿದ್ದಾರೆ. ಆಗ ಅವರ ಸ್ಥಾನಕ್ಕೆ ನೇಮಕಾತಿ ನಡೆಸಬೇಕಾಗುತ್ತದೆ. ಸುಮಾರು ಅದೇ ಸಮಯದಲ್ಲಿ 2024ರ ಲೋಕಸಭಾ ಚುನಾವಣೆಯ ವೇಳಾಪಟ್ಟಿ ಹೊರಡಲಿದೆ ಹಾಗೂ ಚುನಾವಣೆಯ ಉಸ್ತುವಾರಿಯನ್ನು ಹಾಲಿ ಚುನಾವಣಾ ಆಯೋಗ ವಹಿಸಿಕೊಳ್ಳಲಿದೆ. ಇಂಥ ಮಹತ್ವದ ಸಂದರ್ಭಕ್ಕಾಗಿ ಕೇಂದ್ರ ಸರಕಾರ ಚುನಾವಣಾ ಆಯೋಗದ ಆಯುಕ್ತರ ನೇಮಕಾತಿಯನ್ನು ತನ್ನ ಕೈಗೆ ತೆಗೆದುಕೊಳ್ಳಲು ಮುಂದಾಗಿದೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...