ಸ್ಕಾರ್ಪಿಯೋ ಬೈಕ್‍ಗೆ ಡಿಕ್ಕಿ, ಬೈಕ್ ಸವಾರ ಸಾವು, ಸವಾರನ ಹೆಂಡತಿಗೆ ಗಂಭೀರ ಗಾಯ

Source: S O News Service | By I.G. Bhatkali | Published on 31st January 2019, 12:52 AM | Coastal News |

ಮುಂಡಗೋಡ: ಮುಂಡಗೋಡ ತಾಲೂಕಿನ ಶಿರಸಿ ರಸ್ತೆಯಲ್ಲಿರುವ ಶಿಂಗನಳ್ಳಿ ಗ್ರಾಮದ ರಸ್ತೆಯ ಸೇತುವೆ ಬಳಿ ಸ್ಕಾರ್ಪಿಯೋ ವಾಹನವೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಈತನ ಹೆಂಡತಿಗೆ ಗಂಭೀರ ಗಾಯಗಳಾದ ಘಟನೆ ಬುಧವಾರ ನಡೆದಿದೆ.

ಜೊಯಿಡಾ ತಾಲೂಕಿನ ಜಗಳಿಪೇಟೆಯ ಮುನಾಫ್ ಮಂಗಸೂಲೆ(25) ಮೃತಪಟ್ಟ ದುರ್ದೈವಿ. ಈತನ ಹೆಂಡತಿ ರಮೀಜಾ ಮಂಗಸೂಲೆ(19) ಗಂಭೀರ ಗಾಯಾಳು. ಇವರಿಬ್ಬರೂ ನವ ವಿವಾಹಿತರಾಗಿದ್ದು ತನ್ನ ಹೆಂಡತಿಯನ್ನು ತವರು ಮನೆಯ ಗ್ರಾಮ ಮಳಗಿಯಿಂದ ಜಗಳಿಪೇಟೆಗೆ ಕರೆದುಕೊಂಡು ಹೋಗುತ್ತಿರುವಾಗ ಶಿಂಗನಳ್ಳಿ ಸೇತುವೆಯ ಬಳಿ ತಮಿಳುನಾಡಿನ ನೋಂದಣಿ ಹೊಂದಿದ ಸ್ಕಾರ್ಪಿಯೋ ವಾಹನ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡು, ಬೈಕ್ ಸವಾರನ ಕಾಲು ತುಂಡಾಗಿ ಪಕ್ಕದ ಅರಣ್ಯ ಪ್ರದೇಶದಲ್ಲಿ ಬಿದ್ದಿದೆ. ಹಿಂಬದಿ ಕುಳಿತ ಈತನ ಹೆಂಡತಿಗೆ ಗಂಭೀರ ಗಾಯಗಳಾಗಿ ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಲ್ಲಿನ ತಾಲೂಕು ಆಸ್ಪತ್ರೆಯ ಬಳಿ ಈ ದಂಪತಿಗಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. 

Read These Next