ಭಟ್ಕಳಕ್ಕೆ ಬಂದ ಹೆಗಡೆಗೆ ಕಾರ್ಯಕರ್ತರ ನೇರ ಪ್ರಶ್ನೆ; ನಾಲ್ಕು ವರ್ಷ ಬಾರದವರು ಈಗೇಕೆ ಬಂದಿದ್ದೀರಿ ?

Source: VD Bhatkal/KM | Published on 14th January 2024, 12:07 AM | Coastal News |

ಭಟ್ಕಳ: ಕೆನರಾ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯನ್ನು ನಡೆಸಿದರು, ಆದರೆ ಮುಂಬರುವ ಲೋಕಸಭಾ ಚುನಾವಣಾ ಸಿದ್ಧತೆಯಲ್ಲಿರುವ  ಹೆಗಡೆಗೆ ಕಾರ್ಯಕರ್ತರ ಸಿಟ್ಟಿನ ಬಿಸಿ ತಗುಲಲು ಆರಂಭವಾಗಿದೆ.

ಶುಕ್ರವಾರ ಸಂಜೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲು ಇಲ್ಲಿನ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಂಸದರನ್ನು ಎದುರುಗೊಂಡ ಇಲ್ಲಿನ ಬಿಜೆಪಿ ಕಾರ್ಯಕರ್ತರಾದ ಹನುಮಾನ ನಗರದ ಶ್ರೀನಿವಾಸ ನಾಯ್ಕ, ವಸಂತ ನಾಯ್ಕ ಜಂಬೂರಮಠ ಮತ್ತಿತರರು, 2022ರಲ್ಲಿ ಇಡೀ ಭಟ್ಕಳ ನೆರೆ ಹಾವಳಿಗೆ ತುತ್ತಾಯಿತು. ಮುಠಳ್ಳಿಯಲ್ಲಿ ಗುಡ್ಡ ಕುಸಿದು 4 ಜನರು ಮೃತಪಟ್ಟರು. ಮುಖ್ಯಮಂತ್ರಿಗಳೇ ಭಟ್ಕಳಕ್ಕೆ ಬಂದರೂ ನೀವು ಮಾತ್ರ ಬರಲಿಲ್ಲ. ಬೈಪಾಸ್, ಫೈಓವರ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಯಾವ ಸಮಸ್ಯೆಗಳಿಗೂ ಇನ್ನೂ ಪರಿಹಾರ ಸಿಕ್ಕಿಲ್ಲ. ಚರಂಡಿ ಸಮಸ್ಯೆ ಹಾಗೆಯೇ ಉಳಿದುಕೊಂಡಿದೆ. ನಾಲ್ಕು ವರ್ಷ ಬಾರದವರು 'ಈಗೇಕೆ ಬಂದಿದ್ದೀರಿ?

ಈಗ ಚುನಾವಣೆಯ ಕಾರಣದಿಂದ ಭಟ್ಕಳಕ್ಕೆ ಬಂದಿದ್ದೀರಿ. ನೀವು ಇಷ್ಟು ವರ್ಷ ಸಂಸದರಾಗಿದ್ದೀರಿ. ಈ ಬಾರಿ ಹೊಸಬರಿಗೆ ಅವಕಾಶ ನೀಡಿ. ಹೊಸಬರನ್ನು ನೀವೇ ಸೂಚಿಸಿ ಎಂದು ಆಗ್ರಹಿಸಿದರು.

ಕಾರ್ಯಕರ್ತರ ಪ್ರಶ್ನೆಗೆ ಕೊಂಚ ಗಲಿಬಿಲಿಗೊಂಡರೂ ತೋರ್ಪಡಿಸಿಕೊಳ್ಳದ ಸಂಸದ ಅನಂತಕುಮಾರ ಹೆಗಡೆ, ಅನಾರೋ ಗ್ಯದ ಕಾರಣದಿಂದ ನನಗೆ ಇಲ್ಲಿ ಬರಲು ಆಗಿರಲಿಲ್ಲ. ಚುನಾವಣೆಗೆ ಸ್ಪರ್ಧಿಸುವುದಾದರೆ ನೀವೆ ಸ್ಪರ್ಧಿಸಿ, ಯಾರಿದ್ದಾರೆ ಹೇಳಿ ಎಂದು ತಿರುಗೇಟು ನೀಡಿರುವ ಬಗ್ಗೆ ತಿಳಿದು ಬಂದಿದೆ. ಈ ನಡುವೆ ಹೊಸಬರಿಗೆ ಅವಕಾಶ ನೀಡುವಂತೆ ಆಗ್ರಹಿಸಿ ಕಾರ್ಯಕರ್ತರು ಅನಂತಕುಮಾರ ಹೆಗಡೆಯವರಿಗೆ ನೀಡಲು ಮನವಿ ಪತ್ರವೊಂದನ್ನು ಸಿದ್ಧಪಡಿಸಿಕೊಂಡು ಬಂದಿದ್ದರಾದರೂ ಮಾತನಾಡಲು ಅವಕಾಶ ಸಿಕ್ಕ ಕಾರಣ ಮನವಿ ಪತ್ರ ನೀಡದೇ ವಾಪಸ್ಸು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ರಾಜ್ಯ ಸರಕಾರದ ಮೇಲೆ ಆರೋಪ:
ನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತಕುಮಾರ, ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರೈಓವ‌ರ್ ನಿರ್ಮಾಣ ಸಾಧ್ಯ ಇಲ್ಲ. ಮುಠಳ್ಳಿಯಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಯತ್ನ ನಡೆದಿದೆ. ಭಟ್ಕಳದ ಹಿತದೃಷ್ಟಿಯಿಂದ ಬೈಪಾಸ್ ರೋಡ್ ಅಗತ್ಯ ಇತ್ತು. ಅದಕ್ಕೆ ಪ್ರತ್ಯೇಕ ಯೋಜನೆಯನ್ನೂ ಸಿದ್ಧಪಡಿಸಲಾಗಿತ್ತು. ಆದರೆ ಆಗ ಇಲ್ಲಿನ ಜನರೇ ವಿರೋಧ ವ್ಯಕ್ತಪಡಿಸಿದರು. ಈಗ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಮಿತಿ ಮೀರಿದೆ. ಹೊನ್ನಾವರ ಬಂದರು ಅಭಿವೃದ್ಧಿ ಪೂರ್ಣಗೊಂಡ ನಂತರ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೇಳಲಾಗದಷ್ಟು ಏರಿಕೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಅಲ್ಲಲ್ಲಿ ಇನ್ನೂ ಬಾಕಿ ಇದೆ. ಜನರಿಗೆ ಅನುಕೂಲವಾಗುವಂತೆ ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡರೆ ಕಾಮಗಾರಿ ಶೀಘ್ರವಾಗಿ ಮುಗಿಯಲು ಸಾಧ್ಯ ಇಲ್ಲ. ಹೊನ್ನಾವರ ಬಂದರು ನಿರ್ಮಾಣದ ವಿಷಯವೂ ಅಷ್ಟೇ. ಅಂಕೋಲಾ ವಿಮಾನ ನಿಲ್ದಾಣದ ವಿಷಯದಲ್ಲಿ ಅಲ್ಲಿನ ಜನರು ಹೆಚ್ಚಿಗೆ ಪರಿಹಾರವನ್ನು ಕೇಳುತ್ತಿದ್ದಾರೆ. ಇದಕ್ಕಾಗಿ ಬೇಕಾಗಿರುವುದು 6 ಕೋಟಿ ರುಪಾಯಿ ಅಷ್ಟೇ. ರಾಜ್ಯ ಸರಕಾರ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕಾಗಿದೆ. ಇಲ್ಲಿನ ಸಮಸ್ಯೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗಿದೆ. ಆದರೆ ಅವರು ಮಾಡುತ್ತಾರೆ. ಎನ್ನಲು ಆಗುವುದಿಲ್ಲ. ಗ್ರಹಣ ಯಾವಾಗ ಹಿಡಿಯುತ್ತದೆ ಎಂದು ಹೇಳುವುದು ಕಷ್ಟ ಎಂದು ವ್ಯಂಗ್ಯವಾಡಿದರು.

ಮಾಜಿ ಶಾಸಕ ಸುನೀಲ ನಾಯ್ಕ, ಭಟ್ಕಳ ಬಿಜೆಪಿ ಮಂಡಳದ ಅಧ್ಯಕ್ಷ ಸುಬ್ರಾಯ ದೇವಡಿಗ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಚಂದ್ರು ಎಸಳೆ, ಗೋವಿಂದ . ನಾಯ್ಕ, ಶಿವಾನಿ ಶಾಂತಾರಾಮ, ಹೊನ್ನಾವರ ಬಿಜೆಪಿ ಮಂಡಲಾಧ್ಯಕ್ಷ ರಾಜು ಭಂಡಾರಿ, ಸುಭದ್ರಾ ದೇವಡಿಗ, ಭಟ್ಕಳ ಬಿಜೆಪಿ ಮಹಿಳಾ ಮಂಡಳದ ಅಧ್ಯಕ್ಷೆ ಕಾವೇರಿ ದೇವಡಿಗ, ವಿನೋದ ನಾಯ್ಕ ರಾಯಲಕೇರಿ, ಭಾಸ್ಕರ ದೈಮನೆ, ಮೋಹನ ನಾಯ್ಕ, ದೀಪಕ ನಾಯ್ಕ ಮಂಕಿ, ಎ.ಎನ್.ಪೈ, ಕಿಸಾನ್ ಬಲ್ಲೆ, ಮುಕುಂದ ನಾಯ್ಕ, ಸುರೇಶ ನಾಯ್ಕ ಕೋಣೆಮನೆ, ಗೋವರ್ಧನ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Read These Next