ಅಭಿವೃದ್ಧಿಯ ಬಹುದೊಡ್ಡಪಾಲು ಕರ್ನಾಟಕಕ್ಕೆ; ವಿವಿಧ ಯೋಜನೆಗಳ ಲೋಕಾರ್ಪಣೆ, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ

Source: Vb | By I.G. Bhatkali | Published on 3rd September 2022, 11:50 AM | National News |

ಮಂಗಳೂರು: ಕರಾವಳಿ ಕರ್ನಾಟಕದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ನವ ಭಾರತ ನಿರ್ಮಾಣ ಸರಕಾರದ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದ ಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕರಾ ವಳಿ ಅಭಿವೃದ್ಧಿಗೆ ಸಂಬಂಧಿಸಿದ 3,800 ಕೋಟಿ ರೂ. ಮೊತ್ತದ ಮೂರು ಯೋಜನೆಗಳ ಲೋಕಾ ರ್ಪಣೆ ಮತ್ತು ಐದು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಪ್ರಧಾನಿ ಮಾತನಾಡುತ್ತಿದ್ದರು.

ಕರ್ನಾಟಕದ ಡಬಲ್ ಇಂಜಿನ್ ಸರಕಾರ ಜನರ ಆಶಯದಂತೆ ಕಾರ್ಯನಿರ್ವಹಿಸುತ್ತಿದೆ ಎಂದ ಮೋದಿ, ಮೂಲ ಸೌಕರ್ಯ ಕ್ಷೇತ್ರದಲ್ಲಿ ಮಾಡಲಾಗಿರುವ ಪ್ರಗತಿಯಲ್ಲಿ ದೊಡ್ಡ ಪಾಲು ಕರ್ನಾಟಕಕ್ಕೆ ಲಭಿಸಿದೆ. ಸಾಗರಮಾಲಾ ಯೋಜನೆ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ರೈಲ್ವೆ ಹಳಿಗಳ ವಿದ್ಯುದ್ದೀಕರಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾಲ್ಕು ಪಟ್ಟು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿದೆ. ಜಲಜೀವನ್ ಮಿಷನ್‌ ಯೋಜನೆಯಡಿ ರಾಜ್ಯದಲ್ಲಿ 30 ಲಕ್ಷ ಮನೆಗಳಿಗೆ ನೇರವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಪ್ರಧಾನಮಂತ್ರಿ ಆಯುಷಾನ್ ಯೋಜನೆಯಡಿ 30 ಲಕ್ಷ ಫಲಾನುಭವಿಗಳಿಗೆ 4 ಸಾವಿರ ಕೋಟಿ ರೂ. ಮೊತ್ತದ ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು. 

ದೇಶದ ಪ್ರಥಮ ಸ್ವದೇಶಿ ಏರ್‌ಕ್ರಾಫ್ಟ್ ವಾಹಕ ನೌಕೆಯನ್ನು ಇಂದು ಕೊಚ್ಚಿಯಲ್ಲಿ ಲೋಕಾರ್ಪಣೆ ಮಾಡಲಾಗಿದ್ದು, ಕೇಂದ್ರ ಸರಕಾರ ದೇಶದ ಸೇನಾ ಸುರಕ್ಷತೆಗೆ ಹಾಗೂ ಆರ್ಥಿಕ ಸುರಕ್ಷತೆಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ನವ ಮಂಗಳೂರು ಬಂದರಿನಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ 3,800 ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಇದರಿಂದ ದೇಶದ ಆರ್ಥಿಕತೆಗೆ ಮಾತ್ರವಲ್ಲದೆ ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ ಸಾಧ್ಯವಾಗಲಿದೆ ಎಂದು ಪ್ರಧಾನಿ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಧುನಿಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿದ್ದು, ಮೆಟ್ರೋ ಮೂಲಕ ಜೋಡಣೆಯಾದ ನಗರಗಳ ಸಂಖ್ಯೆ ಕಳೆದ 8 ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ. ಕರ್ನಾಟಕದ ಕರಾವಳಿಗಳಲ್ಲಿ ಹಡಗಿನ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ ಎಂದು ಮೋದಿ ಹೇಳಿದರು.

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಸ್ಥಳೀಯ ಕೃಷಿಕರಿಗೆ ಹಾಗೂ ಮೀನುಗಾರರಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಸುಲಭವಾಗಲಿದೆ. ಕಡಿಮೆ ವೆಚ್ಚದಲ್ಲಿ ಉತ್ಪನ್ನಗಳ ರಫ್ತು ಸಾಧ್ಯವಾಗಲಿದ್ದು, ನವ ಮಂಗಳೂರು ಬಂದರಿನ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಅಬ್ಬಕ್ಕ ಮತ್ತು ರಾಣಿ ಚೆನ್ನಭೈರಾದೇವಿ ನಮಗೆ ಸ್ಪೂರ್ತಿಯಾಗಿದ್ದಾರೆ ಎಂದು ಪ್ರಧಾನಿ ನುಡಿದರು.

27 ನಿಮಿಷ ಮಾತನಾಡಿದ ಪ್ರಧಾನಿ ಮೋದಿ: ಕೊಚ್ಚಿಯಿಂದ ಮಧ್ಯಾಹ್ನ 1:20ಕ್ಕೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ 1:40ಕೆ ಹೆಲಿಕಾಪ್ಟರ್ ಮೂಲಕ ಎನ್ ಎಂಪಿಎಗೆ ಆಗಮಿಸಿದರು. ಅಲ್ಲಿಂದ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಅವರು 2:11ಕ್ಕೆ ಗೋಲ್ಡ್ ಫಿಂಚ್ ಮೈದಾನಕ್ಕೆ ಪ್ರವೇಶಿಸಿ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ಪಡೆದರು. 2:23ಕ್ಕೆ ವೇದಿಕೆಗೆ ಆಗಮಿಸಿದ ಪ್ರಧಾನಿಗೆ ಪೇಟ ತೊಡಿಸಿ ಶ್ರೀಕೃಷ್ಣ ಹಾಗೂ ಪರಶುರಾಮನ ಮೂರ್ತಿ ನೀಡಿ, ನೀಲಿ ಬಣ್ಣದ ಶಾಲು ಹೊದಿಸಿ ಮಲ್ಲಿಗೆ ಹಾರದೊಂದಿಗೆ ಸ್ವಾಗತಿಸಲಾಯಿತು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕೇಂದ್ರ ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಸ್ವಾಗತಿಸಿದರು. ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದ ಬಳಿಕ ವಿವಿಧ ಯೋಜನೆಗಳಿಗೆ ರಿಮೋಟ್ ಬಟನ್ ಪ್ರೆಸ್ ಮಾಡುವ ಮೂಲಕ ಚಾಲನೆ ನೀಡಿದ ಪ್ರಧಾನಿ ಮೋದಿ 27 ನಿಮಿಷಗಳ ಕಾಲ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಅಲ್ಲಿಂದ ನಿರ್ಗಮಿಸಿದರು. ಬಳಿಕ ಸುಮಾರು ಒಂದು ಗಂಟೆ ಕಾಲ ಎನ್‌ಎಂಪಿಯಲ್ಲಿ ನಡೆದ ಬಿಜೆಪಿ ಕೋರ್ ಸಮಿತಿಯ ಸಭೆಯಲ್ಲಿ ಭಾಗವಹಿಸಿದರು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳಿ 5:40ಕ್ಕೆ ಮಂಗಳೂರಿನಿಂದ ನಿರ್ಗಮಿಸಿದರು.

ಕರಾವಳಿಯ ಪಾಲಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ ಮುಖ್ಯಮಂತ್ರಿ: ಕರಾವಳಿಯ ಅಭಿವೃದ್ಧಿಗಾಗಿ 3,800 ಕೋ.ರೂ. ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸದ ಮೂಲಕ ಈ ದಿನ ಕರಾವಳಿಯ ಅಭಿವೃದ್ಧಿಯ ಬಗ್ಗೆ ಸುವರ್ಣಾಕ್ಷರಗಳಲ್ಲಿ ಬರೆ ದಿಡಬೇಕಾದ ದಿನ. ಇದು ಡಬಲ್ ಇಂಜಿನ್ ಸರಕಾರದ ಸಾಧನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.

ಡಬಲ್ ಇಂಜಿನ್ ಸರಕಾರದಿಂದಾಗಿ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಬಂದರಿನ ವಹಿವಾಟು ಸಾಮರ್ಥ್ಯ ನಾಲ್ಕು ಪಟ್ಟು ಹೆಚ್ಚಾಗಲಿದ್ದು, ದೇಶದ ಆರ್ಥಿಕತೆಗೆ ಬಲ ತುಂಬಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಕರಾವಳಿ ಮಾತ್ರವಲ್ಲದೆ, ರಾಜ್ಯದ ಅಭಿವೃದ್ಧಿಯೂ ಸಾಧ್ಯವಾಗಲಿದೆ. ನವಭಾರತದ ನಿರ್ಮಾಣದಲ್ಲಿ ಕರ್ನಾಟಕ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ರಾಜ್ಯದ ಸಿಆ‌ರಝಡ್ ಮಾಸ್ಟರ್ ಪ್ಲಾನ್‌ಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಕಳೆದ 30 ವರ್ಷಗಳ ಹೋರಾಟಕ್ಕೆ ಇದೀಗ ಫಲ ದೊರಕಿದೆ. ಇದರಿಂದ ಕರಾವಳಿಯ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಸಾಗರಮಾಲಾ ಯೋಜನೆಯಡಿ ಕಾರವಾರ ಬಂದರಿನಲ್ಲಿ 276 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅದೇರೀತಿ ಹೊನ್ನಾವರ ಮತ್ತು ಕುಮಟಾ ಬಂದರುಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಪಿಎಂ ಮತ್ವ ಸಂಪದ ಯೋಜನೆಯಡಿ ಆಳ ಮೀನುಗಾರಿಕೆಗೆ ಹೈಸ್ಪೀಡ್‌ ಬೋಟ್‌ಗಳನ್ನು ಖರೀದಿಸಲು ಕೇಂದ್ರ ಸರಕಾರ 40 ಶೇ. ಸಬ್ಸಿಡಿ ಒದಗಿಸಲಿದೆ ಎಂದು ಬೊಮ್ಮಾಯಿ ತಿಳಿಸಿದರು.

ಈ ಸಂದರ್ಭ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್, ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಷಿ, ಬಂದರು, ಹಡಗು, ಜಲಸಾರಿಗೆ ಹಾಗೂ ಆಯುಷ್‌ ಸಚಿವ ಸರ್ಬಾನಂದ ಸೋನೋವಾಲ್, ಬಂದರು, ಹಡಗು, ಜಲಸಾರಿಗೆ ರಾಜ್ಯ ಸಚಿವ ಶ್ರೀಪಾದ್ ಯೆಸ್ಟ್ ನಾಯಕ್, ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಬಂದರು, ಒಳನಾಡು ಜಲಸಾರಿಗೆ ಸಹಾಯಕ ಸಚಿವ ಶಂತನು ಠಾಕೂರ್, ಸಂಸದ ನಳಿನ್ ಕುಮಾರ್ ಕಟೀಲು, ದ.ಕ. ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಬಂದರು, ಮೀನುಗಾರಿಕೆ ಸಚಿವ ಎಸ್‌. 9 ಅಂಗಾರ, ಶಾಸಕರಾದ ಡಾ.ಭರತ್‌ ಶೆಟ್ಟಿ, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...