ಭಟ್ಕಳದಲ್ಲಿ ಮಿನಿ ವಿಧಾನಸೌಧಕ್ಕೆ ರು.10ಕೋ. ಮಂಜೂರು

Source: S O News Service | By I.G. Bhatkali | Published on 26th June 2016, 12:31 AM | Coastal News |

ಭಟ್ಕಳ: ತಾಲೂಕಿನಲ್ಲಿ ಬಹು ವರ್ಷಗಳ ಕನಸಾದ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ರಾಜ್ಯ ಸರಕಾರ 10 ಕೋಟಿ ರುಪಾಯಿ ಮಂಜೂರು ಮಾಡಿದೆ.

 ಸರಕಾರದ ಆದೇಶ ಈಗಾಗಲೇ ಜಿಲ್ಲಾಡಳಿತದ ಕೈ ಸೇರಿದೆ. ಭಟ್ಕಳ ಪಿಡಬ್ಲ್ಯೂಡಿ ಇಲಾಖೆ ಕಾಮಗಾರಿಯನ್ನು ನಿರ್ವಹಿಸಲಿದ್ದು, ತಾಲೂಕಿನ ಬಂದರ್ ರೋಡಿನ ಸರಕಾರಿ ಹಾಡಿ ಸರ್ವೇ ನಂಬರ್ 580ರಲ್ಲಿ ನೆಲಮಹಡಿ, ಮೊದಲ ಮಹಡಿ, ಎರಡನೆಯ ಮಹಡಿಗಳನ್ನೊಳಗೊಂಡ 3 ಅಂತಸ್ತಿನ ಮಿನಿ ವಿಧಾನಸೌಧವು ತಲೆ ಎತ್ತಲಿದೆ. ಎಲ್ಲ ಕೊಠಡಿಗಳಿಗೆ ವಾರ್ಡ ರೋಬ್, ಸ್ಟೋರೇಜ್ ಯೂನಿಟ್, ಪಾರ್ಟಿಶನ್ ಕುರ್ಚಿಗಳು, ಮೀಟಿಂಗ್ ಹಾಲ್ ಟೇಬಲ್‍ಗಳನ್ನು ಜೋಡಿಸಲಾಗುತ್ತದೆ. ಕಟ್ಟಡವು ಆಧುನಿಕ ಲಿಫ್ಟ್ ವ್ಯವಸ್ಥೆಯನ್ನು ಹೊಂದಲಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಮಿನಿ ವಿಧಾನಸೌಧ ಕಟ್ಟಡಕ್ಕೆ ಕಾಂಕ್ರೀಟ್ ಕೂಡುರಸ್ತೆ, ಬದಿಗಳಿಗೆ ಪೇವರ್ಸ್ ಕರ್ಬ ಸ್ಟೋನ್, ಬೀದಿದೀಪಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ತಾಲೂಕಿನ ಬಹುತೇಕ ಸರಕಾರಿ ಕಚೇರಿಗಳು ಒಂದೆಡೆ ಸಮ್ಮಿಳನಗೊಳ್ಳಲಿದ್ದು, ಸದ್ಯ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕ ಇಲಾಖೆ, ತಾಲೂಕಾ ಭೂಮಾಪನಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಉಪನೋಂದಣಿ ಕಚೇರಿ, ಜಲಾನಯನ ಇಲಾಖೆ, ಉಪಖಜಾನೆ ಇಲಾಖೆಗಳು ಒಂದೇ ಸೂರಿನಡಿಯಲ್ಲಿ ಬರಲಿವೆ. ತಹಸೀಲ್ದಾರ ಕಚೇರಿ, ಕೋರ್ಟ ಹಾಲ್, ನೆಮ್ಮದಿ ಕೇಂದ್ರ, ಚುನಾವಣಾ ದಾಖಲೆಗಳ ಕೊಠಡಿ, ಖಜಾನೆ ಇಲಾಖೆ ಸೇರಿದಂತೆ ವಿವಿಧ ಕಂದಾಯ ಇಲಾಖೆಗಳು ಮಿನಿವಿಧಾನ ಸೌಧದಲ್ಲಿ ಬಾಗಿಲನ್ನು ತೆರೆದುಕೊಳ್ಳಲಿವೆ. ಭಟ್ಕಳ ಉಪವಿಭಾಗಾಧಿಕಾರಿಗಳಿಗೂ ಒಂದು ಕೊಠಡಿಯನ್ನು ಮೀಸಲಾಗಿಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಶಾಸಕ ಮಂಕಾಳು ವೈದ್ಯರ ಪ್ರಯತ್ನದಿಂದಾಗಿ ಸರಕಾರ ಒಂದೇ ಹಂತದಲ್ಲಿ 10 ಕೋಟಿ ರುಪಾಯಿಯನ್ನು ಮಂಜೂರಿ ಮಾಡಿರುವುದು ಇಲ್ಲಿ ವಿಶೇಷವಾಗಿದೆ. ಈ ಕುರಿತು ಮಾತನಾಡಿರುವ ಶಾಸಕ ವೈದ್ಯ, ಜನರ ಅಲೆದಾಟವನ್ನು ತಪ್ಪಿಸುವುದು ಹಾಗೂ ಬಾಡಿಗೆಯ ಕಾರಣದಿಂದಾಗಿ ಸರಕಾರದ ಮೇಲೆ ಹೆಚ್ಚಿನ ಹೊರೆಯನ್ನು ತಪ್ಪಿಸಲು ಮಿನಿವಿಧಾನಸೌಧ ಸಹಕಾರಿಯಾಗಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
 

Read These Next