ಮುರುಡೇಶ್ವರದಲ್ಲಿ ಶಾಪವಾಗಿಯೇ ಉಳಿದಿದೆ `ಕಾರಿಹಳ್ಳ'

Source: Vasanth Devadiga | Published on 27th June 2016, 12:03 AM | Coastal News |

ಭಟ್ಕಳ: ಮಳೆಗಾಲದ ಕಾಟ ಮುರುಡೇಶ್ವರವನ್ನು ತೊರೆಯುತ್ತಿಲ್ಲ. ಪ್ರತಿ ವರ್ಷ ಕೋಟ್ಯಾಂತರ ಜನರಿಗೆ ಆಹ್ವಾನವನ್ನು ನೀಡುತ್ತಿರುವ ಮಹಾಶಿವನ ತಾಣಕ್ಕೆ ಊರಿನ ಮಧ್ಯೆ ಹಾದು ಹೋಗಿರುವ ಕಾರಿಹಳ್ಳವೇ ಶಾಪವಾಗಿ ಕಾಡುತ್ತಿದೆ. 

ದಿನಪೂರ್ತಿ ಬಿಡಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲ ಮಳೆ ಬಂದರೂ ಇಡೀ ಮುರುಡೇಶ್ವರ ಎನ್ನುವುದು ಚಿಂದಿ ಚಿತ್ರಾನ್ನವಾಗುತ್ತಿದೆ. ಈ ವರ್ಷ ಬಿದ್ದ ಮೊದಲ ಮೂರು ದಿನದ ಮಳೆಯಲ್ಲಿ ಮುಳುಗಿಹೋದ ಸಾವಿರರಾರು ಎಕರೆ ಕೃಷಿ ಭೂಮಿ ಇನ್ನೂ ಚೇತರಿಸಿಕೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯಿಂದ ಸಿಂಡಿಕೇಟ್ ಬ್ಯಾಂಕ್ ಮಾರ್ಗವಾಗಿ ಮುರುಡೇಶ್ವರಕ್ಕೆ ಬರಬೇಕೆಂದರೆ ಹೊಳೆಯಲ್ಲಿಯೇ ಇಳಿದು ಈಜಾಡಿದ ಅನುಭವ! ಸೈಕಲ್, ಸ್ಕೂಟರ್‍ಗಳಿಗೆ ನೀರಿನಲ್ಲಿ ತೇಲಾಡುವ ಕಂಪನ. ಯಾವುದೇ ಸಭೆ ಸಮಾರಂಭಗಳಿಗೆ ತೆರಳುವವರು ಈ ರಸ್ತೆಯಲ್ಲಿ ನಡೆದುಕೊಂಡು ಬರುವ ಹಾಗಿಲ್ಲ! ಶಾಲಾ ಮಕ್ಕಳು ನೀರಿನಲ್ಲಿ ನೆನೆದುಕೊಂಡೇ ಶಾಲೆಗೆ ಹೋಗಿ ಕುಳಿತುಕೊಳ್ಳಬೇಕು. ಗಂಡು ಮಕ್ಕಳಾದರೆ ರಸ್ತೆಯಲ್ಲಿಯೇ ಅದ್ದಿದ ಬಟ್ಟೆಯ ನೀರಿನ್ನು ಹಿಂಡಿ ಸಮಾಧಾನ ಪಟ್ಟುಕೊಂಡರೆ, ಬಾಲಕಿಯರದ್ದು ಹೇಳಲಾಗದ ಗೋಳು! ಅಕ್ಕಪಕ್ಕದ ಅಂಗಡಿಕಾರರು ಜಲಪ್ರಳಯಕ್ಕೆ ನಲುಗಿ ಹೋಗಿದ್ದಾರೆ. ಮುರುಡೇಶ್ವರದಲ್ಲಿ ಮಳೆಗಾಲ ಕಂಡ ಪ್ರವಾಸಿಗರಿಗೆ ಮಳೆ ನಿಂತು ಹೋದರೂ ಬೆದರಿಕೆ ಮಾಯವಾಗುತ್ತಿಲ್ಲ. ರಿಕ್ಷಾದವರಂತೂ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಬೈಯ್ದಾಡುತ್ತ ಮುಂದೆ ಸಾಗುತ್ತಿದ್ದಾರೆ. ಊರ ಜನರ ಬಾಯಿ ಕಟ್ಟಿ ಹೋಗಿದೆ. ಇದು ಕಾರಿಹಳ್ಳದ ಕಥೆ.  
 ಇದು ಮನುಷ್ಯನೇ ಮಾಡಿಕೊಂಡ ಮಹಾ ಎಡವಟ್ಟು ಎನ್ನಿಸದೇ ಇರದು. ಮುರುಡೇಶ್ವರ ನ್ಯಾಶನಲ್ ಕಾಲೋನಿ ಆಸುಪಾಸಿನಿಂದ ಶಿರಾಲಿ ಸಣಬಾವಿಯವರೆಗಿನ ಸರಿ ಸುಮಾರು 5-6ಕಿಮೀವರೆಗೆ ಮಳೆಗಾಲದ ನೀರು ಸುಲಭವಾಗಿ ಹರಿದು ಹೋಗಲು ದಾರಿ ಮಾಡಿ ಕೊಟ್ಟಿದ್ದ `ಕಾರಿಹಳ್ಳ' ಹೆಚ್ಚು ಕಡಿಮೆ ಸಂಪೂರ್ಣವಾಗಿ ಮುಚ್ಚಿಹೋಗಿದೆ. ದುರ್ದೈವವೆಂದರೆ ಕಾರಿಹಳ್ಳವನ್ನೇ ಅತಿಕ್ರಮಿಸಿ ನೂರಾರು ಕಂಪೌಂಡಗಳು, ಮನೆಗಳು ತಲೆ ಎತ್ತಿ ನಿಂತಿವೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಸ್ಥಳೀಯ ಪಂಚಾಯತ ಅಥವಾ ಕಂದಾಯ ಇಲಾಖೆಗೆ ಮುರುಡೇಶ್ವರದ ಬಗ್ಗೆ ಕಾಳಜಿ ಇದ್ದಂತಿಲ್ಲ. ಬಾಕಿ ಉಳಿದ ಹಳ್ಳ ಪ್ರದೇಶಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಹಳ್ಳದಲ್ಲಿ ಹರಿಯಬೇಕಾಗಿದ್ದ ಇಡೀ ಮುರುಡೇಶ್ವರ ಭಾಗದ ನೀರು ಅನಿವಾರ್ಯವಾಗಿ ಸೀದಾ ಮನೆ, ರಸ್ತೆಗೆ ನುಗ್ಗುತ್ತಿದೆ. ಮಳೆ ಬಂತೆಂದರೆ ಜಲಪ್ರಳಯವಾದಂತೆ ಭಾಸವಾಗುತ್ತಿದೆ. ಪ್ರಸ್ತುತ ಮುರುಡೇಶ್ವರಕ್ಕೆ ಆಧುನಿಕತೆಯ ಲೇಪವನ್ನು ನೀಡುವ ಪ್ರಕ್ರಿಯೆ ಆರಂಭವಾಗಿದೆ. ರಸ್ತೆ ಅಗಲೀಕಣಗೊಳಿಸಿ, ಅಲಂಕಾರಿಕ ವಿದ್ಯುದ್ದೀಪಗಳಿಂದ ಮುರುಡೇಶ್ವರವನ್ನು ಬೆಳಗಿಸಲು ಕಾಮಗಾರಿ ಅದಾಗಲೇ ಆರಂಭವಾಗಿ ಬಿಟ್ಟಿದೆ. ಆದರೆ ಮಳೆ ಬಂದಾಗ ಮಾತ್ರ ಒಳಗಿನ ಗಾಯ ಅರಿವಿಗೆ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಕಾರಿಹಳ್ಳದ ಸಮಸ್ಯೆ ಬಿಗಡಾಯಿಸುತ್ತಿದ್ದು, ಇಲ್ಲಿನ ಜನರು ವಿಶೇಷವಾಗಿ ರೈತರು ಸಂಕಟಕ್ಕೆ ಬಿದ್ದಿದ್ದಾರೆ. ಪ್ರತಿಭಟನೆಯೂ ನಡೆದು ಹೋಗಿದೆ. ಅರ್ಜಿ ಹಿಡಿದು ವಿವಿಧ ಇಲಾಖೆಗಳ ಕದ ತಟ್ಟುತ್ತಲೇ ಇದ್ದಾರೆ. ಆದರೂ ಪರಿಹಾರ ಕಾಣಿಸುತ್ತಿಲ್ಲ. ಕಾರಿಹಳ್ಳ ಸ್ವಚ್ಛವಾಗದ ಹೊರತೂ ಮುರುಡೇಶ್ವರಕ್ಕೆ ಮುಕ್ತಿ ಎನ್ನುವುದು ಕಾಣಿಸುತ್ತಿಲ್ಲ. 

      `ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ'
 ಕಾರಿಹಳ್ಳದ ಅವ್ಯವಸ್ಥೆಯಿಂದಾಗಿ ಮುರುಡೇಶ್ವರ ಬಹು ದೊಡ್ಡ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಿರುವುದು ನಿಜ. ಅನೇಕರಿಗೆ ಈಗ ತಮ್ಮ ತಪ್ಪಿನ ಅರಿವಾದಂತಿದೆ. ಕಾರಿಹಳ್ಳವನ್ನು ಅತಿಕ್ರಮಿಸಿ ಕಟ್ಟಿಕೊಂಡಿರುವ ಮನೆ, ಕಂಪೌಂಡಗಳನ್ನು ಒಂದೇ ಬಾರಿ ತೆರವುಗೊಳಿಸುವುದಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯ ಇಲ್ಲ. ಆದರೆ ರಸ್ತೆಯಲ್ಲಿ ನೀರು ತುಂಬಿಕೊಂಡು ಹದಗೆಟ್ಟಿರುವ ಸಂಚಾರ ವ್ಯವಸ್ಥೆಯನ್ನು ಸರಿಪಡಿಸಲು ಎಲ್ಲ ಪ್ರಯತ್ನ ನಡೆಸುತ್ತಿದ್ದೇನೆ. 1 ಕೋಟಿ ರುಪಾಯಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಿ, ರಸ್ತೆಯನ್ನು ಎತ್ತರಕ್ಕೇರಿಸುವ ಮೂಲಕ ರಸ್ತೆಯಲ್ಲಿ ನೀರು ನಿಲ್ಲದಂತೆ ಮಾಡುವ ಪ್ರಯತ್ನ ನಡೆದಿದೆ. ಕೇಂದ್ರ ಸರಕಾರದ ಯೋಜನೆಯಡಿ ಕಾಮಗಾರಿ ಈಗಾಗಲೇ ಸೇರ್ಪಡೆಗೊಂಡಿದ್ದು, ಅನುಮೋದನೆಯೊಂದೇ ಬಾಕಿ ಇದೆ.
                                - ಮಂಕಾಳು ವೈದ್ಯ, ಶಾಸಕರು ಭಟ್ಕಳ ವಿಧಾನಸಭಾ ಕ್ಷೇತ್ರ

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...