ಭಟ್ಕಳ; ಮೊಗೇರ ಸಮಾಜದವರ ವಿರುದ್ಧ ವ್ಯವಸ್ಥಿತ ಪಿತೂರಿ ತಡೆಗೆ; ಭಟ್ಕಳ ಮೊಗೇರ ವಿದ್ಯಾವರ್ಧಕ ಸಂಘ ಆಗ್ರಹ

Source: S O news | By I.G. Bhatkali | Published on 24th December 2021, 7:13 PM | Coastal News |

ಭಟ್ಕಳ: ಪರಿಶಿಷ್ಟ ಜಾತಿ ಮೀಸಲಾತಿಯ ವಿಷಯದಲ್ಲಿ ಮೊಗೇರ ಸಮಾಜದವರ ವಿರುದ್ಧ ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದ್ದು, ಜಾಲಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೊಗೇರ ಸಮಾಜದ ಅಭ್ಯರ್ಥಿಗಳ ಜಾತಿ ಪ್ರಮಾಣ ಪತ್ರ ರದ್ಧತಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಗುರುವಾರ ಭಟ್ಕಳ ಲಕ್ಷ್ಮೀ ಸರಸ್ವತಿ ಮೊಗೇರ ವಿದ್ಯಾವರ್ಧಕ ಸಂಘದ ವತಿಯಿಂದ ತಹಸೀಲ್ದಾರ ಕಚೇರಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

 ತಾಲೂಕಿನ ಅಂಜುಮನ್ ಕಾಲೇಜು ರಸ್ತೆಯ ಮೊಗೇರ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ಸಭೆ ಸೇರಿದ ಮೊಗೇರ ಸಮಾಜದ ಮುಖಂಡರು, ಅಲ್ಲಿಂದ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರರನ್ನು ಭೇಟಿ ಮಾಡಿ ಅಹವಾಲು ಮಂಡಿಸಿದರು. 1978ರಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದೇಶ, ನಿರ್ದೇಶನಗಳ ಅನುಗುಣವಾಗಿ ಉತ್ತರಕನ್ನಡ ಜಿಲ್ಲೆಯ ಮೊಗೇರ ಸಮುದಾಯದವರು ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯವನ್ನು ಪಡೆಯುತ್ತ ಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಮೊಗೇರ ಸಮಾದವರ ವಿರುದ್ಧ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಸಲ್ಲದ ದೂರನ್ನು ಸಲ್ಲಿಸಿ ಸಮಾಜದವರಿಗೆ ವಿನಾಕಾರಣ ತೊಂದರೆಯನ್ನು ನೀಡುತ್ತಿವೆ. ಇವರ ಕಿರುಕುಳದಿಂದ ಬೇಸತ್ತು ಈಗಾಗಲೇ ಕರ್ನಾಟಕ ಗೌರಾನ್ವಿತ ಉಚ್ಚ ನ್ಯಾಯಾಲಯ, ಭಾರತದ ಸರ್ವೋಚ್ಛ ನ್ಯಾಯಾಲಯ, ಭಾರತ ಸರಕಾರದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಆಯೋಗದ ಮೆಟ್ಟಿಲನ್ನು ಏರಿದ್ದು, ಅಲ್ಲಿಂದ ಬಂದಿರುವ ಆದೇಶ, ನಿರ್ದೇಶನಗಳು, ಮೊಗೇರ ಸಮಾಜದ ಪರವಾಗಿವೆ. ಆದರೂ ಮೊಗೇರ ಸಮಾಜದ ಜನರಿಗೆ ಪುನಃ ಅನ್ಯಾಯವೆಸಲಾಗುತ್ತಿದೆ. ಭಟ್ಕಳ ಜಾಲಿ ಪಟ್ಟಣ ಪಂಚಾಯಿತಿಗೆ ನಡೆಯುತ್ತಿರುವ ಚುನಾವಣೆಗೆ ಪರಿಶಿಷ್ಟ ಜಾತಿ ಮೀಸಲಾತಿಯಡಿಯಲ್ಲಿ ಮೊಗೇರ ಸಮಾಜದವರು ಉಮೇದುವಾರಿಕೆ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳ ಕಛೇರಿಯಿಂದ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ತಪ್ಪು ನಿರ್ಣಯವನ್ನು ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯವೂ ನ್ಯಾಯಾಲಯದ ಆದೇಶ, ನಿರ್ದೇಶನಗಳ ಅಂಶಗಳನ್ನು ಪರಿಗಣಿಸದೇ ತೆಗೆದುಕೊಂಡಿರುವ ತೀರ್ಮಾನ ನಮಗೆ ಆಘಾತ ಹಾಗೂ ಆಶ್ಚರ್ಯವನ್ನು ಉಂಟು ಮಾಡಿದೆ. ಜಿಲ್ಲಾಧಿಕಾರಿಗಳು ತಕ್ಷಣದಿಂದ ಜಾರಿ ಬರುವಂತೆ ಆದೇಶವನ್ನು ಹಿಂಪಡೆಯಬೇಕು, ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಮೊಗೇರ ಸಮಾಜದ ಜನರಿಗೆ ಆಗುತ್ತಿರುವ ಅನ್ಯಾಯ ಹಾಗೂ ಅವಮಾನವನ್ನು ಪ್ರತಿಭಟಿಸಿ ಬೃಹತ್ ಹೋರಾಟವನ್ನು ನಡೆಸುತ್ತೇವೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ತಹಸೀಲ್ದಾರ ಎಸ್ ರವಿಚಂದ್ರ ಮನವಿ ಪತ್ರವನ್ನು ಸ್ವೀಕರಿಸಿದರು.

ಭಟ್ಕಳ ಲಕ್ಷ್ಮೀ ಸರಸ್ವತಿ ಮೊಗೇರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಣ್ಣಪ್ಪ ಮಂಜಪ್ಪ ಮೊಗೇರ,  ಕಾರ್ಯದರ್ಶಿ ರವಿರಾಜ ಚೌಕಿ ಮನೆ, ದಾಸಿ ಮೊಗೇರ, ಭಾಸ್ಕರ ಗೋವಿಂದ ಮೊಗೇರ, ಜಟಗಾ ಮೊಗೇರ, ಫಕೀರ ಕೆ. ಮೊಗೇರ, ವಾಸು ಮೊಗೇರ, ಶ್ರೀಧರ ಮೊಗೇರ ಮುಂಡಳ್ಳಿ, ಭಾಸ್ಕರ ದೈಮನೆ, ಕುಮಾರ ಹೆಬಳೆ ಮೊದಲಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...