ಮಳೆಹಾನಿ ಸಂತ್ರಸ್ಥರಿಗೆ 24 ಗಂಟೆಗಳಲ್ಲಿ ಪರಿಹಾರ; ಭಟ್ಕಳದಲ್ಲಿ ಸಭೆ ನಡೆಸಿದ ಸಚಿವ ಕೋಟಾ ಶ್ರೀನಿವಾಸ

Source: S O News | By V. D. Bhatkal | Published on 17th July 2022, 12:49 AM | Coastal News |

ಭಟ್ಕಳ: ಮಳೆಹಾನಿ ಪರಿಶೀಲನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ ಮಟ್ಟದಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದ್ದು, ಹಾನಿ ಸಂಭವಿಸಿದ 24 ಗಂಟೆಗಳಲ್ಲಿ ಪರಿಹಾರ ದೊರಕಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕುಗಳ ಅಧಿಕಾರಿಗಳೊಂದಿಗೆ ಮಳೆಹಾನಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಭಟ್ಕಳ ಉಪವಿಭಾಗದ 38 ಗ್ರಾಮ ಪಂಚಾಯತ, 2 ಪಟ್ಟಣ ಪಂಚಾಯತ, 1 ಪುರಸಭೆ ಆಡಳಿತ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ಪೊಲೀಸರು, ಅಗ್ನಿಶಾಮಕ ದಳ ಒಂದು ತಂಡವಾಗಿ ಕೆಲಸ ಮಾಡುತ್ತಿದೆ. ಭಾಗಶಃ ಅಥವಾ ಪೂರ್ಣ ಮನೆಹಾನಿಯಾದರೆ ಪರಿಹಾರ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಹಾನಿ ಪ್ರಮಾಣ ಕಡಿತ ಗೊಳಿಸಿದ್ದಕ್ಕೆ ಶಾಸಕ ಅಸಮಾಧಾನ
  ಭಟ್ಕಳ ತಾಲೂಕಿನ ಶಿರಾಲಿ, ಮುಂಡಳ್ಳಿ ಸೇರಿದಂತೆ ಕೆಲವೆಡೆ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದರೂ ಅಧಿಕಾರಿಗಳು ಹಾನಿಪ್ರಮಾಣವನ್ನು ಕಡಿಮೆ ತೋರಿಸಿ ಪರಿಹಾರಕ್ಕೆ ಶಿಫಾರಸ್ಸು ಮಾಡಿರುವುದಕ್ಕೆ ಶಾಸಕ ಸುನಿಲ್ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಮನೆಯ ಮೇಲ್ಛಾವಣಿ ಕುಸಿದು, ದುರಸ್ತಿಗಾಗಿ ಸಂತ್ರಸ್ಥರು 30-40 ಸಾವಿರ ವ್ಯಯಿಸಬೇಕಾಗಿದೆ. ಆದರೂ ಅಧಿಕಾರಿಗಳು 10%, 15% ಹಾನಿ ಎಂದು ತೋರಿಸುತ್ತಾರೆ. 2 ಸಾವಿರ, 3 ಸಾವಿರ ರುಪಾಯಿ ತೆಗೆದುಕೊಂಡು ಅವರು ಏನು ಮಾಡಬೇಕು, ಕೂಡಲೇ ಇದನ್ನು ಸರಿ ಮಾಡಬೇಕು, ಇಲ್ಲದಿದ್ದರೆ ಸುಮ್ಮನಿರುವುದಿಲ್ಲ ಎಂದು ಶಾಸಕರು ಎಚ್ಚರಿಸಿದರು. 

ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಬಗ್ಗೆ ಮಾತನಾಡಿದ ಸಚಿವರು, ಚತುಷ್ಪಥ ಹೆದ್ದಾರಿ ಕಾಮಗಾರಿ ಲೋಪದ ಬಗ್ಗೆ ಸಂಸದ ಅನಂತಕುಮಾರ ಹೆಗಡೆ ಉಪಸ್ಥಿತಿಯಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಲಾಗಿದೆ. ಇಲ್ಲಿನ ಭೌಗೋಳಿಕ ಪರಿಸ್ಥಿತಿಯ ಅರಿವಿರದ ಎಲ್ಲಿಂದಲೋ ಬಂದ ಇಂಜಿನೀಯರುಗಳಿಂದ ಹೆದ್ದಾರಿಯಲ್ಲಿ ನೀರು ತುಂಬಿಕೊಳ್ಳುವಂತಹ ಅವಘಡ ಸಂಭವಿಸುತ್ತಿದೆ. ಇದಕ್ಕೆ ಸದ್ಯದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಮಳೆಹಾನಿ ವೀಕ್ಷಣೆ ಕಾರ್ಯಕ್ರಮ ರದ್ದಾದ ಬಗ್ಗೆ ಮಾತನಾಡಿದ ಸಚಿವರು, ಸಮಯದ ಅಭಾವದಿಂದ ಮುಖ್ಯಮಂತ್ರಿಗಳು ಬೆಂಗಳೂರಿಗೆ ಹೋಗಬೇಕಾದ ಕಾರಣ ಉತ್ತರಕನ್ನಡ ಜಿಲ್ಲೆಗೆ ಬರಲಾಗಿಲ್ಲ. ಒಂದು ವಾರ ಬಿಟ್ಟು ಜಿಲ್ಲೆಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರ ಸಿಗುವ ವಿಶ್ವಾಸ ಇದೆ ಎಂದರು. 

ಪರಿಹಾರದಲ್ಲಿ ಮಾನವೀಯತೆ ಇರಲಿ:
ಇದಕ್ಕೂ ಪೂರ್ವದಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕಿನ ಅಧಿಕಾರಿಗಳೊಂದಿಗೆ ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಮಳೆಹಾನಿ ಅಧಿಕಾರಿಗಳಿಂದ ಆಗುವುದಲ್ಲ, ಆದರೆ ಹಾನಿಗೆ ಪರಿಹಾರವನ್ನು ನಾವೇ ಒದಗಿಸಬೇಕು. ಮಳೆಹಾನಿಗೆ ಒಳಗಾದವರಿಗೆ 10 ಸಾವಿರ, 20 ಸಾವಿರ ರುಪಾಯಿ ನೀಡುವುದರಿಂದ ಸರಕಾರಕ್ಕೆ ಹೊರೆಯಾಗುವುದಿಲ್ಲ.

ಪರಿಹಾರ ಕೊಡುವಾಗ ಮಾನವೀಯತೆಯಿಂದ ಅಧಿಕಾರಿಗಳು ವರ್ತಿಸಬೇಕು ಎಂದರು. ಮನೆಗೆ ಮಳೆ ನೀರು ನುಗ್ಗಿ ಹಾನಿಯಾದರೆ ರು.10 ಸಾವಿರ ನೀಡಲು ಅವಕಾಶ ಇದೆ. ಆದರೂ ಸಂತ್ರಸ್ಥರಿಗೆ 1 ಸಾವಿರ, 2 ಸಾವಿರ ಕೊಟ್ಟು ಸುಮ್ಮನಿರುವುದು ಏಕೆ, ಹಾನಿ ಪ್ರದೇಶದ ಸರ್ವೇ ಮಾಡುವಾಗ ಸಂಬಂಧಪಟ್ಟ ಇಲಾಖೆಯ ಇಂಜಿನೀಯರುಗಳೊಂದಿಗೆ ಜಂಟಿ ಸರ್ವೇ ನಡೆಸಿ, ಗುಡ್ಡ ಕುಸಿತ ನಡೆದಲ್ಲಿ ಅಲ್ಲಿನ ನೊಡೆಲ್ ಅಧಿಕಾರಿಗಳು ತುರ್ತು ಕ್ರಮ ಜರುಗಿಸಬೇಕು, ಬಟ್ಟೆ ಬರೆ, ರಗ್ಗು ಇತ್ಯಾದಿ ಅಗತ್ಯ ಬಿದ್ದರೆ ಖರೀದಿಗೂ ಸೂಚಿಸಲಾಗಿದೆ.

ಕೆಲವು ಕಡೆ ಪ್ರವಾಹದ ಸಂದರ್ಭದಲ್ಲಿ ಜನರಿಗೆ ನೆರವಾಗಲು ದೋಣಿ ಬಿಟ್ಟು, ಅದರಿಂದಲೇ ಅನಾಹುತ ಸಂಭವಿಸಿದೆ. ಈ ಬಗ್ಗೆಯೂ ಅಧಿಕಾರಿಗಳು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು. ಶಾಸಕ ಸುನಿಲ್ ನಾಯ್ಕ, ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಉಪಸ್ಥಿತರಿದ್ದರು. 

Read These Next

ಕಾರವಾರ: 16.41 ಲಕ್ಷ ಮತದಾರರು: 1977 ಮತಗಟ್ಟೆಗಳು: 6939 ಸಿಬ್ಬಂದಿಗಳು; ಲೋಕಸಭಾ ಚುನಾವಣೆಗೆ ನಾವ್ ರೆಡಿ ಎಂದ ಜಿಲ್ಲಾಡಳಿತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬAಧಿಸಿದAತೆ, ಮುಕ್ತ, ಪಾರದರ್ಶಕ ಮತ್ತು ಶಾಂತಿಯುತ ಚುನಾವಣೆಗಾಗಿ ಜಿಲ್ಲೆಯಲ್ಲಿ ಸಕಲ ...