ಭಟ್ಕಳ: ಲಾಕ್‌ಡೌನ್ ನಿಯಮಗಳು ಸಾರ್ವಜನಿಕರಿಗೆ ಮಾತ್ರವೇ ಹೊರತು ಅಧಿಕಾರಿಗಳಿಗೆ ಅಲ್ಲವೇ?

Source: R K Bhat | Published on 26th April 2020, 5:45 PM | Coastal News |

ಭಟ್ಕಳ: ತಾಲೂಕಿನಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಒಂದಕ್ಕಿಳಿದಿದ್ದು ಜಿಲ್ಲಾಡಳಿತ ಹಾಗೂ ತಾಲೂಕಾ ಅಧಿಕಾರಿಗಳ ಶ್ರಮ ಸಾರ್ಥಕವಾಗಿದೆ.  ಭಟ್ಕಳ ತಾಲೂಕು ಕೊರೊನಾ ಸೊಂಕಿತರ ತಾಲೂಕೆನ್ನುವ ಕಳಂಕದಿಂದ ಇನ್ನೆರಡು ದಿನಗಳಲ್ಲಿ ಮುಕ್ತವಾಗಲಿದ್ದರೂ ಸಹ ಕಠಿನ ಕ್ರಮ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ ಎನ್ನುವ ಸೂಚನೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ನೀಡಿದ್ದಾರೆ.

ಭಟ್ಕಳ ತಾಲೂಕಿನಲ್ಲಿ ಕಳೆದ ಅನೇಕ ದಿನಗಳಿಂದ ಕಟ್ಟು ನಿಟ್ಟಿನ ಕ್ರಮದಿಂದಾಗಿ ಜನತೆ ಮನೆಯಲ್ಲಿಯೇ ಇದ್ದು ಸಹಕರಿಸಿದರು ಸಹ ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಸಹಾಯಕ ಆಯುಕ್ತರ ಕಚೇರಿಗೆ ಬರುತ್ತಾರೆ. ಆದರೆ ಅಧಿಕಾರಿಗಳು ಮಾತ್ರ ಕಚೇರಿಗೆ ಭೇಟಿ ಕೊಡುವವರ ಕುರಿತು ತಲೆಕೆಡಿಸಿಕೊಂಡಂತಿಲ್ಲ. ಬೆಳಿಗ್ಗೆ ಚಿಕ್ಕ ಮಾಹಿತಿಗಾಗಿ ಕಚೇರಿಗೆ ಬಂದವರು ಮಧ್ಯಾಹ್ನದ ತನಕವೂ ಕಾದು ಕುಳಿತು ನಂತರ ಮಾಹಿತಿ ಪಡೆದು ಮರಳುವ ಪ್ರಸಂಗ ಕೂಡಾ ಇದೆ. ಇನ್ನು ಕಚೇರಿಗೆ ಬರುವವರು ಹೊಗುವವರವಿವರವೇ ಇರುವುದಿಲ್ಲ. ಕಚೇರಿಯಲ್ಲಿ ಎಲ್ಲಿಯೂ ಸಹ ಅಂತರ ಕಾಯ್ದುಕೊಳ್ಳುವ ಕುರಿತು ಕಂಡು ಬರುತ್ತಿಲ್ಲ.  ಮಾಸ್ಕ ಹಾಕದವರೂ ಕೂಡಾ ಆರಾಮವಾಗಿ ಓಡಾಡುತ್ತಿರುತ್ತಿದ್ದರೆ ಕಚೇರಿಯಲ್ಲಿ ಕೆಲಸ ಮಾಡುವವರು ಭಯದಲ್ಲಿಯೇ ಕಾಲ ಕಳೆಯ ಬೇಕಾಗಿದೆ. ಕಚೇರಿಗೆ ಬಂದವರಿಂದ ಅಂತರ ಕಾಯ್ದುಕೊಳ್ಳುವುದೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ.  ಜನ ಸಾಮಾನ್ಯರಿಗೆ ಮಾಸ್ಕ್ ಹಾಕುವಂತೆ ಉಪದೇಶ ಮಾಡುವ ಅಧಿಕಾರಿಗಳೇ ಮಾಸ್ಕ ಹಾಕದಿದ್ದರೆ ಜನರಿಗೆ ಹೇಗೆ ಉಪದೇಶ ಮಾಡಬಹುದು.

ಹಲವಾರು ಸಂದರ್ಭಗಳಲ್ಲಿ ಆರೋಗ್ಯ ಸಂಬಂಧಿ ಪಾಸ್ ನೀಡುವಾಗ ಯಾವುದು ಮೊದಲು ಯಾವುದು ನಂತರ ಎನ್ನುವ ಕುರಿತು ತಿಳುವಳಿಕೆ ಇಲ್ಲದವರಂತೆ ವರ್ತಿಸುವ ಅಧಿಕಾರಿಗಳು ತಮ್ಮದೇ ದಾಟಿಯಲ್ಲಿ ಕೆಲಸ ಮಾಡುವುದು ಜನ ಸಾಮಾನ್ಯರಿಗೆ ತೊಂದರೆಗೆ ಸಿಲುಕಿಸಿದೆ.

ಮೆಡಿಕಲ್ ಪಾಸ್: ಸರಕಾರ ಆರೋಗ್ಯ ಸಂಬಂಧಿ ಪಾಸ್ ನೀಡುವುದನ್ನು ಆಯಾಯ ಡಿ.ಎಚ್.ಓ. ಗಳಿಗೆ ಇಲ್ಲವೇ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ನೀಡಬೇಕು ಎನ್ನುವ ಕೂಗು ಕೇಳಿ ಬಂದಿದೆ.  ವೈದ್ಯರಾದರೆ ಅವರಿಗೆ ಯಾವ ಕಾಯಿಲೆಗೆ ತುರ್ತು ಚಿಕಿತ್ಸೆ ಬೇಕು, ಯಾವುದಕ್ಕೆ ಸ್ವಲ್ಪ ತಡವಾದರೂ ಆಗುತ್ತದೆ ಎನ್ನುವ ಜ್ಞಾನ ಇರುತ್ತದೆ. ಇಲ್ಲಿ ರೆವೆನ್ಯೂ ಅಧಿಕಾರಿಗಳು ಪಾಸ್ ನೀಡುವುದರಿಂದ ಅವರಿಗೆ ಕಾಯಿಲೆಯ ಕುರಿತು ಮಾಹಿತಿ ಇಲ್ಲ. ಹೃದಯಾಘಾತದಂತಹ ಸಂದರ್ಭದಲ್ಲಿ ಪ್ರಥಮ ಒಂದು ಗಂಟೆಯ ಸಮಯವನ್ನು ವೈದ್ಯಕೀಯ ಭಾಷೆಯಲ್ಲಿ ಗೋಲ್ಡನ್ ಅವರ್ ಎನ್ನುತ್ತಾರೆ.  ಆಗ ಒಂದು ನಿಮಿಷ ತಡವಾದರೂ ರೋಗಿಗೆ ತೊಂದರೆಯಾಗುವ ಸಂಭವ ಹೆಚ್ಚು.  ಆದರೆ ಇಲ್ಲಿ ಸಹಿ ಮಾಡಲಿಕ್ಕೆ 20 ನಿಮಿಷ ಬಿಟ್ಟು ಬನ್ನಿ ಎನ್ನುವ ಅಧಿಕಾರಿಗಳಿಂದ  ರೋಗಿಗಳ ಮನೆಯವರು ಏನು ಬಯಸಬಹುದು ಎನ್ನುವುದನ್ನು ಸರಕಾರ ಚಿಂತನೆ ಮಾಡಬೇಕಾಗಿದೆ. ಮೊದಲೇ ಉಡುಪಿ ಜಿಲ್ಲೆಯ ಪ್ರವೇಶಕ್ಕೆ ನೂರೆಂಟು ಅಡ್ಡಿ ಆತಂಕ ಇರುವಾಗ ಪಾಸ್ ಪಡೆಯುವುದಕ್ಕೇ ಅರ್ಧ ಗಂಟೆಯಾದರೆ ರೋಗಿಯ ಪರಿಸ್ಥಿತಿ ಕಷ್ಟವಾಗಲಿದೆ.  ಸರಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ವೈದ್ಯಕೀಯ ಸಂಬಂಧಿ ಪಾಸ್ ವೈದ್ಯಾಧಿಕಾರಿಗಳೇ ನೀಡುವಂತೆ ವ್ಯವಸ್ಥೆ ಮಾಡಬೇಕಾಗಿದೆ.

ಹೆಲ್ಪ ಡೆಸ್ಕ್ ಸ್ಥಾಪಿಸಿ: ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬರುವವರಿಗೆ ಮಾಹಿತಿಯ ಕೊರತೆಯಿಂದ ತೊಂದರೆಯಾಗುತ್ತಿದೆ.  ಸಂಪೂರ್ಣ ಮಾಹಿತಿ ಕೊಡಲು ಒಂದು ಅಧಿಕಾರಿಗಳನ್ನು ನೇಮಿಸಿ.  ಸಣ್ಣಪುಟ್ಟ ಮಾಹಿತಿ, ಪಾಸ್‍ಗೆ ಅರ್ಜಿ ಸಲ್ಲಿಸುವುದು, ಪಾಸ್ ಪಡೆಯುವುದು ಇತ್ಯಾದಿಗಳು ಮಾಹಿತಿ ಡೆಸ್ಕ್‍ನಲ್ಲಿಯೇ ಆದರೆ ಕಚೇರಿಯ ಒಳಗಡೆ ನೂಕು ನುಗ್ಗಲು ತಪ್ಪುತ್ತದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

Read These Next

ಕಾರವಾರ: ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಮತದಾನ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಪ್ರಯುಕ್ತ , ಸಾರ್ವಜನಿಕರು ಹೆಚ್ಚಿನ ...