ಎಂ.ಆರ್.ಲಸಿಕೆ; ಜಿಲ್ಲಾಧಿಕಾರಿಯಿಂದ  ಅಂಜುಮನ್ ಸಂಸ್ಥೆಯಲ್ಲಿ ಪಾಲಕರ ಸಭೆ

Source: S O News service | By Staff Correspondent | Published on 25th February 2017, 6:48 PM | Coastal News | Don't Miss |

·    ಸಾವಿರಕ್ಕೂ ಹೆಚ್ಚು ಪಾಲಕರು ಸಭೆಯಲ್ಲಿ ಭಾಗಿ
ಭಟ್ಕಳ: ವಿದ್ಯಾರ್ಥಿಗಳ ಭವಿಷ್ಯದ ಆರೋಗ್ಯ ದೃಷ್ಟಿಯಿಂದ ಸರ್ಕಾರ ಹಮ್ಮಿಕೊಂಡಿದ್ದ ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಭಟ್ಕಳದ ಮುಸ್ಲಿಮ ಆಡಳಿತ ಮಂಡಳಿಯ ಶಾಲೆಗಳ ಪಾಲಕರಿಂದ ಭಾರಿ ವಿರೋಧ ಉಂಟಾದ ಹಿನ್ನೆಲೆಯಲ್ಲಿ ಶೇ.೪೦ಕ್ಕಿಂತ ಕಡಿಮೆ ಲಸಿಕೆಯನ್ನು ಹಾಕಿದ್ದು ಈ ನಿಟ್ಟಿನಲ್ಲಿ ಪಾಲಕರಲ್ಲಿ ತಿಳುವಳಿಕೆ ಮೂಡಿಸಲು ಹಾಗೂ ಲಸಿಕೆ ಕುರಿತಂತೆ ಉಂಟಾಗಿರುವ ಗೊಂದಲವನ್ನು ದೂರಗೊಳಿಸಲು ಶನಿವಾರ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಧ್ಯಕ್ಷತೆಯಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಗಳ ಪಾಲಕ ಸಭೆ ಜರಗಿತು. 

ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ, ಲಸಿಕೆ ಕುರಿತಂತೆ ವಾಟ್ಸಪ್ ಗಳಲ್ಲಿ ಬರುವ ವದಂತಿಗಳನ್ನು ನಂಬಿ ನಿಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದರೊಂದಿಗೆ ಬೇರೆ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ. ಮೊಬೈಲ್ ಬಳಕೆಯಿಂದ ಕ್ಯಾನ್ಸರ್ ಬರತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಅರಿತೂ ಇಡೀ ದಿನ ಮೊಬೈಲ್‌ಗಳಲ್ಲಿ ತಲ್ಲೀನರಾಗಿರುತ್ತೀರಿ. ಮುಬೈಲ್ ಗಳಿಂದಾಗಿ ಇಂದು ವಿದ್ಯಾರ್ಥಿ ಹಾಗೂ ಪಾಲಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದರು. ದಡಾರ ರುಬೆಲ್ಲಾ ಲಸಿಕೆ ೯ ತಿಂಗಳಿಂದ ೧೫ ವರ್ಷದ ಮಕ್ಕಳಿಗೆ ನೀಡುವುದು ಅವರ ಭವಿಷ್ಯದ ದೃಷ್ಟಿಯಿಂದ ಕಡ್ಡಾಯವಾಗಿದೆ ಸರ್ಕಾರ ಯುದ್ದೋಪಾದಿಯಲ್ಲಿ ಈ ರೋಗದಿಂದ ಹೋರಾಟ ನಡೆಸುತ್ತಿದೆ ಇದರಲ್ಲಿ ಪಾಲಕರು ಸಹಕರಿಸಬೇಕು ಎಂದರು. 


ಹಳಿಯಾಳದ ವೈದ್ಯ ಡಾ.ಸಲೀಮ್ ಇಲ್ಕಲ್ ಮಾತನಾಡಿ, ರುಬೆಲ್ಲ ಲಸಿಕೆ ಕುರಿತಂತೆ ಮುಸ್ಲಿಮ್ ಸಮುದಾಯದಲ್ಲಿ ಅನೇಕಾರು ತಪ್ಪುತಿಳುವಳಿಕೆಗಳು ಮನೆಮಾಡಿಕೊಂಡಿದ್ದು ಇದರಿಂದ ಹೊರಬರಬೇಕು ಇಲ್ಲವಾದದಲ್ಲಿ ನಮ್ಮನ್ನು ನಾವೇ ನಾಶ ಮಾಡಿಕೊಂಡಂತಾಗುತ್ತದೆ ಎಂದು ಪಾಲಕರ ಮನಮುಟ್ಟುವ ರೀತಿಯಲ್ಲಿ ತಮ್ಮ ಅನುಭವಗಳನ್ನು ವಿವರಿಸಿದರು. 

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ ಲಸಿಕೆ ಕುರಿತಂತೆ ಭಟ್ಕಳದ ಮುಸ್ಲಿಮರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿಕೊಳ್ಳುವಂತೆ ಪಾಲಕರಿಗೆ ಕರೆ ನೀಡಿದರು. 

ವೇದಿಕೆಯಲ್ಲಿ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ್, ತಹಸಿಲ್ದಾರ್ ವಿ.ಎನ.ಬಾಡ್ಕರ್, ಡಾ.ವಿನಾಯಕ, ತಾಲೂಕು ವೈದ್ಯಾಧಿಕಾರಿ ಡಾ. ಮೂರ್ತಿ ರಾಜ್ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ನೂರಾರು ಮಹಿಳೆಯರು ವೈದ್ಯರೊಂದಿಗೆ ತಮ್ಮಲ್ಲಿನ ಸಮಸ್ಯೆ ಹಾಗೂ ಗೊಂದಲಗಳನ್ನು ಪ್ರಶ್ನೆ ಕೇಳುವುದರ ಮೂಲಕ ಬಗೆಹರಿಸಿಕೊಂಡರು. ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಪಾಲಕರು ಸಭೆಯಲ್ಲಿ ಭಾಗವಹಿಸಿದ್ದು ಈ ಸಭೆಯ ನಂತರ ಬಹುತೇಕ ಪಾಲಕರಲ್ಲಿನ ಗೊಂದಗಳು ದೂರವಾದಂತೆ ಕಂಡು ಬಂತು. ಫೆ.೨೮ ರವರೆಗೆ ಲಸಿಕಾ ಅಭಿಯಾನವಿದ್ದು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಪಾಲಕರು ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸುತ್ತಾರೆ ಎಂಬ ವಿಶ್ವಾಸ ಸಭೆಯಲ್ಲಿ ವ್ಯಕ್ತವಾಯಿತು. 

Read These Next

ಬೀಫ್ ಎಕ್ಸ್‌ಪೋರ್ಟ್ ಕಂಪನಿ ಸೇರಿದಂತೆ ಪಾಕಿಸ್ತಾನಿ ಏಜೆನ್ಸಿಗಳಿಂದಲೂ ಬಿಜೆಪಿ ದೇಣಿಗೆ ತೆಗೆದುಕೊಂಡಿದೆ- ಭಟ್ಕಳದಲ್ಲಿ ಕಾಂಗ್ರೆಸ್ ಸುದ್ದಿಗೋಷ್ಠಿ

ಭಟ್ಕಳ:  ಗೋಹತ್ಯೆ ವಿರೋಧಿಸುವ ಬಿಜೆಪಿ ಬೀಫ್ ರಫ್ತು ಮಾಡುವ ಕಂಪನಿ ಸೇರಿದಂತೆ ಪಾಕಿಸ್ಥಾನಿ ಎಜೆನ್ಸಿಗಳಿಂದಲೂ ದೇಣಿಗೆ ...