ಇದು ಚುನಾವಣೆ ಸಯಮ; ಬಿಜೆಪಿ ಭಟ್ಕಳಕ್ಕೆ ಬೆಂಕಿ ಹಚ್ಚಲು ಯತ್ನಿಸುತ್ತಿದೆ- ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ಗಂಭೀರ ಆರೋಪ

Source: SOnews | By Staff Correspondent | Published on 2nd February 2024, 6:21 PM | Coastal News |

ಭಟ್ಕಳ: ಪ್ರತಿ ಚುನಾವಣೆಯಲ್ಲೋ  ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಬೇಳೆಬೇಯಿಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದ್ದು, ಮತ್ತೊಮ್ಮೆ ಭಟ್ಕಳಕ್ಕೆ ಬೆಂಕಿ ಹಚ್ಚಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೆಂಗಿನಗುಂಡಿಯಲ್ಲಿ ಅನಧಿಕೃತವಾಗಿ ಕಟ್ಟಿದ್ದ ವೀರಸಾವರ್ಕರ್ ದ್ವಜಕಟ್ಟೆ ತೆರವಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಫೆಬ್ರುವರಿ 5, 2022 ರಂದು ಹೆಬ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಸಾವರಕ್ ನಾಮಫಲಕ ಕಟ್ಟೆ ನಿರ್ಮಾಣಕ್ಕಾಗಿ ಸ್ಥಳೀಯ ನಿವಾಸಿಗಳು ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಜಾಮಿಯಾ ಕಾಲೋನಿ ಜುಮ್ಮಾ ಮಸೀದಿ ನಾಮಫಲಕ ಅಳವಡಿಕೆಗೂ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಹೆಬಳೆ ಗ್ರಾಮ ಪಂಚಾಯಿತಿ ಆಡಳಿತ ವೀರಸಾವರ್ಕರ್ ಕಟ್ಟೆ ನಿರ್ಮಾಣದ ಅರ್ಜಿಯನ್ನು ತಿರಸ್ಕರಿಸಿ ಜಾಮಿಯಾ ಕಾಲೋನಿ ನಾಮಫಲಕ ಅಳವಡಿಸಲು ಮುಸ್ಲಿಂ ಸಮುದಾಯಕ್ಕೆ ಅನುಮತಿ ನೀಡಿತ್ತು.

ಆಗ ಹೆಬ್ಳೆ ಗ್ರಾಮ ಪಂಚಾಯಿತಿ ಆಡಳಿತ ಬಿಜೆಪಿ ಬೆಂಬಲಿಗರದ್ದಾಗಿತ್ತು. ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷರು ಪಂಚಾಯಿತಿ ಸದಸ್ಯರಾಗಿದ್ದರು. ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದರು. ಸಂಸದರಾಗಿದ್ದವರು ಕೂಡ ಬಿಜೆಪಿಯವರು. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ನಡೆಸುತ್ತಿತ್ತು. ಹೀಗಿರುವಾಗ ಇಂತಹ ನಿರ್ಧಾರವನ್ನು ಏಕೆ ಮತ್ತು ಹೇಗೆ ತೆಗೆದುಕೊಂಡರು ಎಂಬುದನ್ನು ಬಿಜೆಪಿ ಹೇಳಬೇಕು ಎಂದು ಸವಾಲು ಹಾಕಿದ ವೆಂಕಟೇಶ್ ನಾಯ್ಕ, ಇದೀಗ ತೆಂಗಿನಗುಂಡಿ ವೀರಸಾವರ್ಕರ್ ಅವರ ಹೆಸರಿರುವ ಧ್ವಜದ ಕಟ್ಟೆ ತೆರವು ವಿಚಾರದಲ್ಲಿ ಗದ್ದಲ ಎಬ್ಬಿಸಲು ಬಿಜೆಪಿ ಯತ್ನಿಸಿದೆ ಎಂದು ಆರೋಪಿಸಿದರು.

ನಾವೆಲ್ಲರೂ ಭಗವದ್ವಜವನ್ನು ಗೌರವಿಸುತ್ತೇವೆ. ಆದರೆ ಬಿಜೆಪಿ ರಾಜ್ಯ ವಕ್ತಾರರು ತೆಂಗಿನಗುಂಡಿ ಕಟ್ಟೆ ತೆರವು ಮಾಡಿದರೆ ಎಲ್ಲ ವೃತ್ತಗಳಲ್ಲಿ ವೀರಸಾವರ್ಕರ್ ನಿರ್ಮಿಸುತ್ತೇವೆ  ಎಂಬ ಹೇಳಿಕೆ ನೀಡಿದ್ದಾರೆ. ಬಿಜೆಪಿ ರಾಜ್ಯ ವಕ್ತಾರರಷ್ಟೇ ಅಲ್ಲ, ಬಿಜೆಪಿಯ ಯಾರೇ ಆಗಲಿ ತಮ್ಮ ಮನೆ ಬಳಿ ಧ್ವಜಸ್ತಂಭ ನಿರ್ಮಿಸಲು ಬಯಸಿದ್ದಲ್ಲಿ ಯಾರೂ ತಕಾರಾರು ಮಾಡುವುದಿಲ್ಲ.   ಕಂಡಕಂಡಲ್ಲಿ ಭಗವಧ್ವಜ ಕಟ್ಟೆ ಕಟ್ಟಿ ಅದರ ಗೌರವಕ್ಕೆ ಚ್ಯುತಿ ತರುವುದೇ ನಿಮ್ಮ ಹಿಂದುತ್ವದ ಸಿದ್ಧಾಂತವಾಗಿದ್ದರೆ ಅದನ್ನು ನೀವು ಮಾಡಿಕೊಳ್ಳಿ ಆದರೆ ಭಗವ ಧ್ವಜಕ್ಕೆ ಅಪಮಾನ ಮಾಡಿದ್ದಲ್ಲಿ ಸಮಸ್ತ ಹಿಂದೂಗಳು ಇದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.  

ಡಾ.ಚಿತ್ತರಂಜನ್, ಪರೇಶಮೇಸ್ತ ಪ್ರಕರಣಗಳೆಲ್ಲ ಏನಾಯಿತು. ಅವರದ್ದೇ ಸರಕಾರದ ಅಧೀನದಲ್ಲಿರುವ ಸಿಬಿಐ ಪರೇಶ ಮೇಸ್ತ ಸಾವು ಸಹಜ ಸಾವು ಎಂದಿದೆ. ಚುನಾವಣೆಯ ಕಾರಣದಿಂದ ಪರೇಶ ಮೇಸ್ತ ಪ್ರಕರಣವನ್ನು ಇಟ್ಟುಕೊಂಡು ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದ್ದೀರಿ. ಪೊಲೀಸ್ ಹಿರಿಯ ಅಧಿಕಾರಿಗಳ ವಾಹನಕ್ಕೆ ಬೆಂಕಿ ಹಚ್ಚಲಾಯಿತು. ಬಡವರ ಮಕ್ಕಳು ಇಂದಿಗೂ ಕೋರ್ಟ, ಮನೆಗೆ ಅಲೆಯುತ್ತಿದ್ದಾರೆ. ಅವರ ಅಪ್ಪ, ಅಮ್ಮ ಸಾಲ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಬಿಜೆಪಿ ಬಡವರ ಮನೆಯ ಮಕ್ಕಳ ಜೀವನದೊಂದಿಗೆ ಆಟವಾಡುತ್ತಿದೆ.

ಬಿಜೆಪಿ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರವರೆಗೂ ಬೂಟಾಟಿಕೆ ರಾಜಕಾರಣ ಮಾಡುತ್ತಿದ್ದಾರೆ. ಮಾಜಿ ಶಾಸಕ ಸುನೀಲ ನಾಯ್ಕ ಮನೆಯಲ್ಲಿ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿ ಗೋಬಿ ತಿಂದಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ. ಕಾರ್ಕಳದಲ್ಲಿ ಬಿಜೆಪಿ ಶಾಸಕ ಸುನೀಲ್ಕುಮಾರ್ ಪರಶುರಾಮ ಮೂರ್ತಿ ನಿರ್ಮಾಣ ವಿಚಾರವಾಗಿ ಜನರಿಗೆ ಮೋಸ ಮಾಡಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಹೊರಗೆ ಮುಸ್ಲಿಮರ ವಿರುದ್ಧ ಕೂಗಾಡುತ್ತಾರೆ.

ತೆಂಗಿನ ಕಟ್ಟೆ ತೆಗೆಯುವ ವಿಷಯವಿರಲಿ, ನೀವು ಪಾಲಿಸಿಕೊಂಡು ಬಂದಿರುವ ಹಿಂದುತ್ವದ ವಿಷಯ ಇರಲಿ. ಬಹಿರಂಗ ಚರ್ಚೆಗೆ ಬನ್ನಿ. ಹಿಂದೂಗಳ ಪರ ಯಾರಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ. ಸಚಿವ ಮಾಂಕಾಳ, ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನ, ಮಠ ಕಟ್ಟಿಸಿದ್ದಾರೆ. ಹಿಂದುತ್ವದ ಹೆಸರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನೀವು ಎಷ್ಟಮಟ್ಟಿಗೆ  ಹಿಂದೂಗಳ ಪರವಾಗಿದ್ದೀರಿ ಎನ್ನುವುದು ಜನರಿಗೆ ತಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಬಿಜೆಪಿಯ ಕೆಟ್ಟ ರಾಜಕಾರಣವನ್ನು ಯಾರೂ ಸಹಿಸುವುದಿಲ್ಲ. ಕಾಂಗ್ರೆಸ್ 5 ಭರವಸೆಗಳನ್ನು ಜಾರಿಗೊಳಿಸಿದೆ. ನೀವು ಹೆಚ್ಚಿನ ಭರವಸೆಗಳನ್ನು ನೀಡಿ, ಅನುಷ್ಠಾನಗೊಳಿಸಿ ಮತ್ತು ಚುನಾವಣೆಗಳನ್ನು ಗೆಲ್ಲಿ, ನಮ್ಮ ಅಭ್ಯಂತರವಿಲ್ಲ. ಆದರೆ ಅದನ್ನು ಬಿಟ್ಟು ಊರಿಗೆ ಬೆಂಕಿ ಹಚ್ಚಬೇಡಿ ಎಂದರು.

ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಉಪಾಧ್ಯಕ್ಷೆ ರಾಮಾ ಮೊಗೇರ, ಭಟ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ತಾಪಂ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಗೋಪಾಲ ನಾಯ್ಕ, ಭಾಸ್ಕರ ನಾಯ್ಕ, ಜಿಲ್ಲಾ ಕಾರ್ಯದರ್ಶಿ ವಿಷ್ಣು ದೇವಾಡಿಗ, ಅಬ್ದುಲ್ ಮಜೀದ್, ನಾರಾಯಣ ನಾಯ್ಕ. ಯಲ್ವಡಿಕಾವೂರು, ದುರ್ಗಾದಾಸ ಮೊಗೇರ, ಗಣಪತಿ ನಾಯ್ಕ, ಜತ್ತಪ್ಪ ನಾಯ್ಕ, ರಾಜೇಶ ನಾಯ್ಕ, ವೆಂಕಟ್ರಮಣ ನಾಯ್ಕ, ರಮೇಶ ನಾಯ್ಕ, ಈಶ್ವರ ಮೊಗೇರ, ಕೃಷ್ಣಕುಮಾರ ನಾಯ್ಕ, ನಾಗೇಂದ್ರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

 

Read These Next