ಭಟ್ಕಳ ಬೆಳ್ನಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿವಾದ; ಸ್ಥಳಕ್ಕೆ ಎಸಿ ಮಮತಾ ಭೇಟಿ; ಪರ, ವಿರೋಧ ವಾಗ್ವಾದ

Source: S O News service | By I.G. Bhatkali | Published on 3rd September 2021, 6:15 PM | Coastal News |

ಭಟ್ಕಳ: ತಾಲೂಕಿನ ಮಾವಿನಕುರ್ವೆ ಗ್ರಾಪಂ ಬೆಳ್ನಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸ್ಥಳೀಯರ ವಿರೋಧಕ್ಕೆ ಸಂಬಂಧಿಸಿದಂತೆ ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ, ತಹಸೀಲ್ದಾರ ಎಸ್.ರವಿಚಂದ್ರ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ಯೂಸೂಫ್, ಮಂಜುನಾಥ ನಾಯ್ಕ, ಶ್ರೀಧರ ನಾಯ್ಕ ಮತ್ತಿತರರು, ಮಾವಿನಕುರ್ವೆ ಗ್ರಾಮ ಪಂಚಾಯತ ಆಡಳಿತ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮುಖ್ಯರಸ್ತೆಗೆ ಹೊಂದಿಕೊಂಡು ತ್ಯಾಜ್ಯವಿಲೇವಾರಿ ಘಟಕ ನಿರ್ಮಿಸಲು ಮುಂದಾಗಿದೆ. ಇಲ್ಲಿಯೇ ಪಕ್ಕದಲ್ಲಿ ಹೊಳೆ ಹರಿದು ಹೋಗುತ್ತಿದೆ, ಇದು ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ, ನಾವು ಯಾವುದೇ ಕಾರಣಕ್ಕೂ ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ಮಾವಿನಕುರ್ವೆ ಗ್ರಾಪಂ ಉಪಾಧ್ಯಕ್ಷ ದಾಸ ನಾಯ್ಕ, ಇಲ್ಲಿ ನಿರ್ಮಿಸಲಾಗುತ್ತಿರುವ ವಿಲೇವಾರಿ ಘಟಕದಲ್ಲಿ ಒಣ ಕಸವನ್ನು ಮಾತ್ರ ಸಂಗ್ರಹಿಸಲಾಗುತ್ತದೆ, ಜನರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗುವುದಿಲ್ಲ, ಈಗಾಗಲೇ ಜಿಲ್ಲಾಡಳಿತ ಘಟಕ ನಿರ್ಮಾಣಕ್ಕಾಗಿ 30 ಗುಂಟೆ ಜಾಗವನ್ನು ಕಳೆದ ಮೇ ತಿಂಗಳಿನಲ್ಲಿ ಮಂಜೂರು ಮಾಡಿದೆ, ಕಟ್ಟಡ ನಿರ್ಮಾಣಕ್ಕೆ ಹಣವನ್ನೂ ಒದಗಿಸಲಾಗಿದೆ, ಬೇಕಾದರೆ ಯಾರು ವಿರೋಧ ವ್ಯಕ್ತಪಡಿಸುತ್ತಾರೋ ಅವರನ್ನು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇರೆ ಕಸ ವಿಲೇವಾರಿ ಘಟಕಕ್ಕೆ ಕರೆದುಕೊಂಡು ಹೋಗುತ್ತೇವೆ, ಸಾಧಕ ಬಾಧಕಗಳನ್ನು ನೋಡಿಕೊಂಡು ನೀವೇ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

ಆದರೆ ಇದಕ್ಕೆ ಒಪ್ಪದ ಸ್ಥಳೀಯರು, ಈ ಘನ ತ್ಯಾಜ್ಯ ವಿಲೇವಾರಿ ಘಟಕ ಈ ಹಿಂದೆ ತಲಗೋಡಿಗೆ ಮಂಜೂರಾಗಿತ್ತು, ಅಲ್ಲಿನ ಜನರ ವಿರೋಧದಿಂದ ಸ್ಥಳಾಂತರಗೊಂಡಿದೆ, ಯಾರಿಗೆ ಏನೂ ತೊಂದರೆಯಾಗುವುದಿಲ್ಲವಾದರೆ ಅಲ್ಲಿಂದ ಸ್ಥಳಾಂತರಿಸಿದ್ದು ಏಕೆ ಎಂದು ತಿರುಗೇಟು ನೀಡಿದರು. ವಾದ, ಪ್ರತಿವಾದ ಸ್ಥಳದಲ್ಲಿ ಕೆಲ ಕಾಲ ಬಿಸಿ ವಾತಾವರಣವನ್ನು ಸೃಷ್ಟಿಸಿತು. ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷೆ ಸುಮಿತ್ರಾ ರಾಮಾ ಗೊಂಡ ಉಪಸ್ಥಿತರಿದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...