ಭಟ್ಕಳ ತೆಂಗಿನಗುಂಡಿ ಬೀಚ್ ಸಮೀಪ ಸಾವರ್ಕರ್ ಧ್ವಜದ ಕಟ್ಟೆಯಲ್ಲಿ ಹನುಮ ಧ್ವಜ ಹಾರಿಸಿ ಸಂಸದ ಅನಂತ

Source: SO News | By MV Bhatkal | Published on 5th March 2024, 12:45 AM | Coastal News |

 

 

ಭಟ್ಕಳ: ಲೋಕಸಭಾ ಚುನಾವಣಾ ಪೂರ್ವ ತಯಾರಿಯ ಹಿನ್ನೆಲೆ ಸೋಮವಾರದಂದು ಭಟ್ಕಳದ ಮಹಾಶಕ್ತಿ ಕೇಂದ್ರದಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ ಸಂಸದ ಅನಂತ ಕುಮಾರ ಹೆಗಡೆ ಬಳಿಕ ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಗಿನಗುಂಡಿ ಗ್ರಾಮದಲ್ಲಿ ಕಳೆದ ತಿಂಗಳು ಅಧಿಕಾರಿಗಳು ತೆರವು ಗೊಳಿಸಿ ವಿವಾದಕ್ಕೆ ಕಾರಣವಾಗಿದ್ದ ಸಾವರ್ಕರ್ ಧ್ವಜದ ಕಟ್ಟೆಯಲ್ಲಿ ಸಂಸದ ಅನಂತಕುಮಾ‌ರ ಹೆಗಡೆ ನೇತೃತ್ವದ ಬಿಜೆಪಿ ಕಾರ್ಯಕರ್ತರು ಹನುಮ ಧ್ವಜ ಹಾರಿಸಿ ಅಲ್ಲಿಯೇ ನಾಮಫಲಕ ಅಳವಡಿಸುವ ಮೂಲಕ ಮತ್ತೆ ಧ್ವಜ ದಂಗಲ್ ಕಿಡಿ ಹೊತ್ತಿಸಿದ್ದಾರೆ.

ಗ್ರಾಮ ಪಂಚಾಯತಿಯಲ್ಲಿ ಈ ಹಿಂದೆ ವೀರ ಸಾವರ್ಕರ್ ವೃತ್ತದ ಹೆಸರಿಡುವ ಸಂಬಂಧ ಗ್ರಾಮದ ಜನರು ಗ್ರಾಮ ಪಂಚಾಯತಗೆ ಅರ್ಜಿ ನೀಡಿದ್ದರು. ಜೊತೆಗೆ ಅನಧೀಕೃತ ನಾಮಫಲಕವನ್ನು ತೆರವುಗೊಳಿಸುವ ಕುರಿತು ಗ್ರಾಮ ಪಂಚಾಯತಿ ಸಭೆಯಲ್ಲಿ ಚರ್ಚೆ ನಡೆದಿತ್ತು. ಹೀಗಾಗಿ ಅನುಮತಿ ಇಲ್ಲ ಎಂಬ ಕಾರಣ ನೀಡಿ ಹಿಂದೂ ಸಂಘಟನೆಯ ಯುವಕರು ನಿರ್ಮಿಸಿದ ಕಟ್ಟೆಯನ್ನ ಪಂಚಾಯತ್‌ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಇನ್ನು ನಾಮಫಲಕ, ಭಗವಾ ಧ್ವಜ ತೆರವು ಮಾಡುವುದರ ಜೊತೆಗೆ ಕಟ್ಟೆಯನ್ನೂ ನೆಲಸಮ ಮಾಡಿದ್ದಕ್ಕೆ ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು, ಸ್ಥಳೀಯರು ಸ್ಥಳದಲ್ಲಿಯೇ ಪುನಃ ಧ್ವಜ ಕಟ್ಟೆ ನಿರ್ಮಿಸಿದ್ದಾರಲ್ಲದೇ ವೀರ ಸಾವರ್ಕರ್ ಹೆಸರಿನಲ್ಲಿ ಬಾವುಟ ಹಾರಿಸುವ ಪಣ ತೊಟ್ಟಿದ್ದರು. ಈ ಘಟನೆಯ ಬಳಿಕ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನ ನಿಯೋಜಿಸಿ ಧ್ವಜ ಹಾರಿಸದಂತೆ ತಡೆದಿದ್ದು ಸೋಮವಾರದಂದು ಭಟ್ಕಳಕ್ಕೆ ಚುನಾವಣಾ ಪೂರ್ವ ತಯಾರಿಯ ಹಿನ್ನೆಲೆ ಕಾರ್ಯಕರ್ತರ ಭೇಟಿಗೆ ಬಂದಿದ್ದ ಸಂಸದ ಅನಂತ ಕುಮಾರ ಹೆಗಡೆ ನೇತ್ರತ್ವದಲ್ಲಿ 
ಅವರ ಮಧ್ಯಸ್ಥಿಕೆಯಲ್ಲಿ ಹನುಮ ಧ್ವಜ ಹಾರಿಸುವುದರ ಜೊತೆಗೆ ವೋರ ಸಾವರ್ಕರ ಬೀಚ್ ಎಂಬ ನಾಮಫಲಕವನ್ನು ಹಾಕಲಾಯಿತು.

ಇದಕ್ಕೂ ಪೂರ್ವದಲ್ಲಿ ಮುಟ್ಟಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತ ಕುಮಾರ ಹೆಗಡೆ 

 

ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದೆ. ದೇಶ ಸುಭಿಕ್ಷ, ದೇಶದಲ್ಲಿ ಅಭಿವೃದ್ಧಿ, ದೇಶ ಸುಭದ್ರ ಮತ್ತು ದೇಶದಲ್ಲಿ ಧರ್ಮ ಇರಬೇಕಾದರೆ ಬಿಜೆಪಿ ಗೆಲ್ಲವುದು ಪ್ರಮುಖವಾಗಲಿದೆ. ಚುನಾವಣೆ ನಿಮಗೆಲ್ಲ ಹೊಸತಲ್ಲ ಆದರೆ ಈ‌ ಬಾರಿ ಬಿಜೆಪಿಯನ್ನು ಮರೆಯಬೇಡಿ. ರಾಜಕಾರಣದಲ್ಲಿ ಅಥವಾ ಸರಕಾರದ ಮಟ್ಟದಲ್ಲಿ ಶಾಸಕರ ಕಾರ್ಯಕ್ಕೂ ಸಂಸದ ಕಾರ್ಯಕ್ಕೂ ವ್ಯತ್ಯಾಸವಿದ್ದು, ಶಾಸಕರು ಮುಖ್ಯಮಂತ್ರಿ ಹತ್ತಿರ ಹೋಗಿ ನಮಗೆ ರಸ್ತೆ ಬೇಕು ನೀರು ಬೇಕು ಅಂತ ಬೇಡಿಕೆ ಇಡುತ್ತಾರೆ. ಆದರೆ ನಾವು ಸಂಸತ್ತಿನಲ್ಲಿ ಹಾಗೆ ಹೇಳಲು ಬರುವುದಿಲ್ಲ ಎಂದು ಸ್ಪಷಪಡಿಸಿದರು.

ಕಳೆದ 20 ವರ್ಷಗಳಿಂದ ಕರಾವಳಿಯ ಬಂದರು ಅಭಿವ್ರದ್ದಿಯ 
ಬಗ್ಗೆ ಪ್ರಯತ್ನ ನಡೆಯುತ್ತಿದ್ದು ರಾಷ್ಟ್ರೀಯತೆ ಚೌಕಟ್ಟಿನಲ್ಲಿ ತಂದಾಗ ಇಂತಹ ಅಭಿವೃದ್ಧಿಗಳ ಕಾರ್ಯಗಳು ನೆರವೇರುತ್ತದೆ. ಇದರಿಂದ 
ಕರಾವಳಿ ಅಭಿವೃದ್ಧಿಯಾಗುತ್ತದೆ. ಕರ್ನಾಟಕದ ಮುಂದಿನ ಆರ್ಥಿಕ ಕೇಂದ್ರ ಕರಾವಳಿಯಾಗಬೇಕು. ಕೋಸ್ಟಲ್ ಎಕಾನಮಿಯಲ್ಲಿ 
ಮಂಗಳೂರು ಬಿಟ್ಟರೆ ನಮ್ಮ ಕರಾವಳಿಯಲ್ಲಿ ಬಂದರುಗಳು ಇಲ್ಲ ಈ‌ ನಿಟ್ಟಿನಲ್ಲಿ ನಮ್ಮ ಸರಕಾರ ಇದ್ದರೆ ಇದೆಲ್ಲ ಸಾಧ್ಯ ಎಂದರು. 

ನಮಗೆಲ್ಲ ನಮ್ಮ ಹಿರಿಯರು ರಾಮಾಯಣ, ಮಹಾಭಾರತ ಪಾಠ ಹೇಳುತ್ತಿದ್ದರು. ಆದರೆ ಅದು ಈಗ ಬೋಧನೆ ಮಾಡುವ ಹಾಗಿಲ್ಲ. ಮುಸಲ್ಮಾನರು ಮತ್ತು ಕ್ರಿಶ್ಚನರು ಅವರ ಮಕ್ಕಳಿಗೆ ಅವರ ಧರ್ಮ ಬೋಧನೆ ಮಾಡಬಹುದು. ಇದರಿಂಎ ನಮ್ಮ ಸನಾತನ  ಸಂಸ್ಕೃತಿ ಹಾಳಾಗುತ್ತಿದೆ ಎಂದರು. 

ಪಾರ್ಲಿಮೆಂಟಿನಲ್ಲಿ ರಸ್ತೆ ಬಗ್ಗೆ ನೀರಿನ ಬಗ್ಗೆ ಚರ್ಚೆ ಮಾಡಲಾಗುವುದಿಲ್ಲ. ಬ್ರಿಟಿಷ್ ಕಾಲದ ಐಪಿಸಿಯನ್ನು ಪೂರ್ಣ ಬದಲಾಯಿಸುವ ಕೆಲಸ ಪಾರ್ಲಿಮೆಂಟ್ ಮಾಡಿದ್ದೇವೆ. ಪಾರ್ಲಿಮೆಂಟ್ ಕೆಲಸ ಏನಂತ ಯಾರಿಗೂ ಗೊತ್ತಾಗುವುದಿಲ್ಲ. 
ನಮ್ಮಲ್ಲಿ ಮಲ್ಟಿ ಸ್ಪೆಷಲಿ ಆಸ್ಪತ್ರೆ ಬೇಕು ಈ ದೇಶದಲ್ಲಿ ಕೇಂದ್ರ ಸರ್ಕಾರ ಎಲ್ಲಿಯಾದರೂ ಆಸ್ಪತ್ರೆ ಮಾಡಿದೆಯಾ ಇದನ್ನು ರಾಜ್ಯ ಸರ್ಕಾರ ಮಾಡೋದು ಅವರ ಕೆಲಸ ಕೇಂದ್ರ ಸರ್ಕಾರ ಹಣ ನೀಡಬಹುದು. ಪ್ರತಿ ಪಂಚಾಯತ್ ನಲ್ಲೂ ಕೇಂದ್ರದಿಂದ 80% ಅನುದಾನ ಹಂಚಿಕೆಯಾಗುತ್ತದೆ ಕೆಲವೊಂದು ಯೋಜನೆಗಳು ಕೇಂದ್ರ ಸರಕಾರದ್ದಾಗಿರುತ್ತದೆ ಈ ಬಗ್ಗೆ ಜನರಲ್ಲಿ ಮಾಹಿತಿ ತಲುಪಬೇಕಿದೆ. 


ಇಂದಿನ ಸೋಷಿಯಲ್ ಮೀಡಿಯಾದ ಬೆಳವಣಿಗೆಯಿಂದ ತುಂಬಾ ಎಂಎಲ್ಎಗಳು ಮಾಜಿಗಳಾಗಿದ್ದಾರೆ.  ಈ ಬಗ್ಗೆ ಪ್ರಜ್ಞಾವಂತ ಜನರಿಗೆ ಗೊತ್ತಿದೆ. ಸಾಮಾಜಿಕ ಜಾಲತಾಣದಿಂದ ಮೊದಲು ಹೊರ ಬಂದು ಕೆಲಸ ಮಾಡಬೇಕು. ನಾನು ರಾಜಕಾರಣಿಯಾಗಿ ಹುಟ್ಟಿಲ್ಲ ರಾಜಕಾರಣಿಯಾಗಿ ಸಾಯುವುದಿಲ್ಲ. ಯಾರಾದರೂ ಚುನಾವಣೆಗೆ ನಿಲ್ಲುವುದಿದ್ದರೆ ನಾನು ಬಿಟ್ಟುಕೊಡುತ್ತೇನೆ ಎಂದ ಅವರು ರಾಜಕಾರಣ ಅಷ್ಟು ಸುಲಭವಲ್ಲ ಎಂದು ಹೇಳಿದರು.

ಚುನಾವಣೆ ಸಮೀಪದಲ್ಲಿದ್ದು ಪ್ರತಿಯೊಬ್ಬನ ಒಂದು ವೋಟು ಸಹ ಮುಖ್ಯವಾಗಿರುತ್ತದೆ.

 ಅವನಲ್ಲಿ ಎಷ್ಟು ವೋಟ್ ಇದೆ ಅವನೇನು ಮಾಡುವ ಇವನೇನು ಮಾಡುವ ಅನ್ನುವದನ್ನು ಬಿಡಬೇಕು. ಉಡಾಫೆ ಮಾತುಗಳೇ ನಮ್ಮನ್ನು ಸೋಲಿಸಲಿಕ್ಕೆ ಕಾರಣ ಸಣ್ಣ ಮನಸ್ಸಿನ ವ್ಯಕ್ತಿ ದೊಡ್ಡವನಾಗಲಿಕ್ಕೆ ಆಗುವುದಿಲ್ಲ. ಜಾತಿಯೇ ದೊಡ್ಡದಲ್ಲ ಜಾತಿ ರಾಜಕಾರಣ ಮಾಡಬೇಡಿ. ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಜಾತಿ ಬದಿಗಿಟ್ಟು ಈ ಬಾರಿ ಶೇ. 90% ವೋಟು ಬಿಜೆಪಿಗೆ ಆಗಬೇಕು.

ದೇಶ ಉಳಿಯಬೇಕು ಅಂತಾದರೆ ಬಿಜೆಪಿಗೆ ವೋಟ್ ಹಾಕಬೇಕಲೇಬೇಕು. ಸಿರಸಿಯಲ್ಲಿರುವ ಸಿಪಿ ಬಜಾರ್ ಮಸೀದಿ ವೀರ ವಿಠಲ ದೇವಸ್ಥಾನ, ಭಟ್ಕಳದ ಚಿನ್ನದ ಪಳ್ಳಿ ಲಕ್ಷ್ಮಿ ಮಂದಿರವಾಗಿತ್ತು. ಮುಂದೆ ಇದೆಲ್ಲವೂ ನಮ್ಮದಾಗಬೇಕಾದರೆ ನಾವು ಬಿಜೆಪಿಗೆ ವೋಟ್ ಮಾಡಬೇಕು. ಮೋದಿ ಮತ್ತೊಮ್ಮೆ ಎಂಬ ನಾಮಧ್ಯೇಯದಿಂದ ನಾವು ಬಿಜೆಪಿಯನ್ನು ಗೆಲ್ಲಿಸಬೇಕು ಮೋದಿಯನ್ನು ಪ್ರಧಾನಿ ಮಾಡಬೇಕು ಎಂದರು.

ಒಂದು ಪಕ್ಷದ ಅಭಿವೃದ್ಧಿಯನ್ನು ನೋಡಬೇಕಾದರೆ ಅವರು ಚುನಾವಣೆ ಪೂರ್ವದಲ್ಲಿ ನೀಡಿದ ಪ್ರಣಾಳಿಕೆಯ ನಾವು ಅರಿಯಬೇಕಾಗಿದೆ. ಚುನಾವಣೆ ನಂತರ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವರು ನೀಡಿದ ಪ್ರಣಾಳಿಕೆ ಮತ್ತು ಅಭಿವೃದ್ಧಿ ಕಾರ್ಯಗಳ ತುಲನೆ ಮಾಡಿ ನೋಡಿದಾಗ ಮಾತ್ರ ನಮಗೆ ಅಭಿವೃದ್ಧಿಯ ಬಗ್ಗೆ ತಿಳಿಯುತ್ತದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭಾಗ್ಯ ಯೋಜನೆ ನೀಡಿದೆ. ಇದರಿಂದ ಸರ್ಕಾರ ದಿವಾಳಿಯಾಗಿದ್ದು ಆದರೂ ಸಹ ಸಿದ್ದರಾಮುಲ್ಲಾ ಖಾನ್ ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ನಾವು ಹೆಣ್ಣು ಮಕ್ಕಳನ್ನು ಫ್ರೀಯಾಗಿ ಬಸ್ ನಲ್ಲಿ ಕಳಿಸಿದ್ದೇವೆ ಎಂದು ಹೇಳುವ ಅವರ ಈ ಭಾಗ್ಯದಿಂದ ಸರ್ಕಾರ ದಿವಾಳಿಯಾಗಿದೆ.

ಸರ್ಕಾರಕ್ಕೆ ಇತರ ಅಭಿವೃದ್ಧಿ ಯೋಜನೆಗಳನ್ನು ಮಾಡಲು ಹಣವಿಲ್ಲ ಎಂಎಲ್ಎಗಳಿಗೆ ನೀಡುವ ಅನುದಾನವನ್ನು ನೀಡಲು ಹಣವಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲ ಹಾಗೂ ಗುತ್ತಿಗೆದಾರರಿಗೆ ಗುತ್ತಿಗೆದಾರರು ಹಾಕಿದ ಹಣವನ್ನು ನೀಡಲು ಸರ್ಕಾರದಲ್ಲಿ ಹಣವಿಲ್ಲ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ, ಮುಂದಿನ ಲೋಕಸಭೆ ಎಲೆಕ್ಷನ್ ಮುಗಿಯುವ ತನಕ ಮಾತ್ರ ನಂತರ ಗ್ಯಾರಂಟಿ ಯೋಜನೆ ಇರುವುದಿಲ್ಲ ಸರ್ಕಾರವು ಇರುವುದು ಅನುಮಾನ ಎಂದರು. 

ನಾನು ಬಿಜೆಪಿಯ ಟಿಕಟ್ ಕಿಸೆಯಲ್ಲಿ ಇಟ್ಟು ತಿರುಗಾಡುತ್ತಿಲ್ಲ. ಬಿಜೆಪಿ ಪಕ್ಷಕ್ಕಾಗಿ ಬಿಜೆಪಿ ಗೆಲುವುಗಾಗಿ ಮಾತ್ರ ಕೆಲಸ ಮಾಡುತ್ತಿದ್ದೇನೆ. ನನಗೆ ಟಿಕೆಟ್ ಕೊಟ್ಟರು ಸರಿ ಬೇರೆಯವರಿಗೆ ಟಿಕೆಟ್ ಕೊಟ್ಟರು ಸರಿ ಬಿಜೆಪಿ ಗೆಲ್ಲಬೇಕು. ಕೇಂದ್ರದಲ್ಲಿ ಮೋದಿಯವರ ಸರ್ಕಾರ ಇನ್ನೊಮ್ಮೆ ಬರಬೇಕು.

ಈ ಹಿಂದೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳಿಂದ ನಮ್ಮ ಅಧಿಕಾರವನ್ನು ಕಳೆದುಕೊಂಡಿದ್ದೇವೆ. ಅದಕ್ಕಾಗಿ ನಾವು ನಮ್ಮಿಂದ ಬಿಟ್ಟು ಹೋದವರನ್ನು ಸಂಪರ್ಕಿಸಿ ಅವರಿಗೆ ನಮ್ಮೊಂದಿಗೆ ಬರಲು ತಿಳಿಸಿ ಅವರನ್ನು ಕರೆದುಕೊಂಡು ಬರುವಂತಹ ಕೆಲಸ ಆಗಬೇಕು. ನನ್ನಿಂದ ತಪ್ಪಾದಲ್ಲಿ ನಾನು ಕ್ಷಮೆ ಯಾಚಿಸಲು ಸಿದ್ಧನಿದ್ದೇನೆ ನನಗೆ ಬಿಜೆಪಿ ಪಕ್ಷ ಗೆಲ್ಲಬೇಕು ಎಂದರು.


ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಭಟ್ಕಳ ಬಿಜೆಪಿ ಮಂಡಲದ ನೂತನ ಅಧ್ಯಕ್ಷ ಲಕ್ಷ್ಮೀ ನಾರಾಯಣ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಮಾಜಿ ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಸುರೇಶ ನಾಯ್ಕ ಕೋಣೆಮನೆ, ಶ್ರೀಕಾಂತ ನಾಯ್ಕ, ದೀಪಕ ನಾಯ್ಕ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಇದ್ದರು.

Read These Next

ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ರಾಸಾಯನಿಕ ಬಳಕೆ ಕುರಿತು ವ್ಯಾಪಕವಾಗಿ ಪರಿಶೀಲಿಸಿ : ಜಿಲ್ಲಾಧಿಕಾರಿ

ಕಾರವಾರ :ಜಿಲ್ಲೆಯಲ್ಲಿನ ಆಹಾರ ತಯಾರಿಕಾ ಘಟಕಗಳು, ಬೀದಿ ಬದಿ ವ್ಯಾಪಾರಿಗಳು ತಯಾರಿಸುವ ಆಹಾರ ಪದಾರ್ಥಗಳಲ್ಲಿ ಸಾರ್ವಜನಿಕರ ಆರೋಗ್ಯದ ...

ಮಳೆಗಾಲದಲ್ಲಿ ಮುನ್ನೆಚ್ಚರಿಕೆ; ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಲು ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ

ಮಳೆಗಾಲದಲ್ಲಿ ಕಂಡು ಬರಬಹುದಾದ ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ, ಮಿದುಳು ಜ್ವರ ಮತ್ತಿತರ ರೋಗಗಳ ಲಕ್ಷಣಗಳು, ಅವುಗಳ ಹರಡುವಿಕೆ ಹಾಗೂ ...

ಸರ್ಕಾರದಿಂದ ಕೋಟಿಗಟ್ಟಲೆ ಅನುದಾನ ಬಂದರೂ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಭಟ್ಕಳ ತಾಲೂಕು

ನೀರಿನ ಸಮಸ್ಯೆಯಿಂದಾಗಿ ಭಟ್ಕಳದ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಿವಾಸಿಗಳು ಟ್ಯಾಂಕರ್ ಮೂಲಕ ಸರಬರಾಜು ಮಾಡುವ ನೀರಿಗಾಗಿ ಸರತಿ ...