ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣ; ಆರ್ಯನ್‌ ಖಾನ್‌ಗೆ ಕ್ಲೀನ್‌ಚಿಟ್

Source: Vb | By I.G. Bhatkali | Published on 28th May 2022, 4:03 PM | National News |

ಹೊಸದಿಲ್ಲಿ: ಮಾದಕದ್ರವ್ಯಗಳ ನಿಯಂತ್ರಣ ಘಟಕ(ಎನ್‌ಸಿಬಿ)ವು ಕಳೆದ ವರ್ಷದ ಅ.2ರಂದು ಮುಂಬೈ ಕರಾವಳಿ ಯಾಚೆ 'ಕೊರ್ಡೆಲಿಯಾ' ಐಷಾರಾಮಿ ಹಡಗಿನ ಮೇಲೆ ನಡೆಸಿದ್ದ ದಾಳಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಮತ್ತು ಇತರ ಐವರನ್ನು ಶುಕ್ರವಾರ ಆರೋಪಮುಕ್ತಗೊಳಿಸಿದ್ದು, ಇತರ 14 ಆರೋಪಿ ಗಳ ವಿರುದ್ಧ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ.

ಆರ್ಯನ್‌ರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿರಬಹುದು ಮತ್ತು ಹಣವನ್ನು ಸುಲಿಗೆ ಮಾಡಲು ಪ್ರಯತ್ನಗಳು ನಡೆದಿರಬಹುದು ಎಂಬ ಆರೋಪಗಳು ಕೇಳಿ ಬಂದ ನಂತರ ರಚಿಲಾಗಿದ್ದ ಐಪಿಎಸ್ ಅಧಿಕಾರಿ ಸಂಜಯ್‌ ಕುಮಾರ್‌ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ (ಸಿಟ್)ವು ಪ್ರಕರಣದ ಪುನರ್‌ ಪರಿಶೀಲನೆಯನ್ನು ನಡೆಸಿದ್ದು, ಆರ್ಯನ್ ವಿರುದ್ಧ ಆರೋಪ ದೃಢಪಡಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.

ಸಿಟ್ ತನ್ನ ತನಿಖೆಯನ್ನು ವಸ್ತುನಿಷ್ಠ ರೀತಿಯಲ್ಲಿ ನಡೆಸಿದ್ದು, ಶಂಕಾತೀತ ಪುರಾವೆಗಾಗಿ ಸೂಕ್ಷ್ಮ ಪರಿಶೀಲನೆ ಯನ್ನು ನಡೆಸಲಾಗಿದೆ. ಸಿಟ್ ತನಿಖೆಯ ಆಧಾರದಲ್ಲಿ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಮ್‌ಗಳಡಿ 14 ಜನರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇತರ ಆರು ಜನರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಲಾಗಿಲ್ಲ ಎಂದು ಎನ್‌ಸಿಬಿಯು ಹೇಳಿಕೆಯಲ್ಲಿ ತಿಳಿಸಿದೆ. ದಾಳಿ ನಡೆದ ಸಂದರ್ಭದಲ್ಲಿ ಆರ್ಯನ್ ಮತ್ತು ಇನ್ನೋರ್ವ ವ್ಯಕ್ತಿಯನ್ನು ಹೊರತುಪಡಿಸಿ ಇತರರ ಬಳಿ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು ಎಂದು ಅದು ಹೇಳಿದೆ.

ತನ್ನ ಕಕ್ಷಿದಾರರ ಬಳಿ ಮಾದಕ ದ್ರವ್ಯ ಪತ್ತೆಯಾಗಿ ರದಿದ್ದರೂ ಅವರನ್ನು ಬಂಧಿಸಿದ್ದು ಮತ್ತು 26 ದಿನಗಳ ಕಾಲ ಬಂಧನದಲ್ಲಿ ಇರಿಸಿದ್ದು ನ್ಯಾಯಪರವಾಗಿರಲಿಲ್ಲ. ಮಾದಕ ದ್ರವ್ಯದ ಬಗ್ಗೆ ಯಾವುದೇ ಸಾಕ್ಷ್ಯಾಧಾರವಿರಲಿಲ್ಲ. ಎನ್ ಡಿಪಿಎಸ್ ಗಿಂತ ಕಡಿಮೆ ಕಾಯ್ದೆಯ ಯಾವುದೇ ಸ್ವರೂಪದ ಉಲ್ಲಂಘನೆಯ ಪುರಾವೆಗಳಿರಲಿಲ್ಲ. ಸಿಟ್ ವಸ್ತುನಿಷ್ಠ ರೀತಿಯಲ್ಲಿ ತನಿಖೆ ನಡೆಸಿದ್ದು ಮತ್ತು ಸಾಕ್ಷ್ಯಾಧಾರಗಳ ಕೊರತೆಯಿಂದ ತನ್ನ ಕಕ್ಷಿದಾರರ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸದಿರಲು ನಿರ್ಧರಿಸಿದ್ದು ಖುಷಿಯ ವಿಷಯವಾಗಿದೆ ಎಂದು ಆರ್ಯನ್ ಪರ ವಕೀಲ ಸತೀಶ್ ಮಾನ್‌ಹಿಂದೆ ಹೇಳಿದರು.

ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ ಎನ್ ಸಿಬಿಯ ಆಗಿನ ಮುಂಬೈ ವಲಯ ಘಟಕದ ನಿರ್ದೇಶಕ ಸಮೀರ್‌ ವಾಂಖೆಡೆ ನೇತೃತ್ವದ ತಂಡವು 13 ಗ್ರಾಂ ಕೊಕೇನ್, ಐದು ಗ್ರಾಂ ಮೆಫೆಡೋನ್,21 ಗ್ರಾಂ ಮರಿಜುವಾನಾ,22 ಎಂಡಿಎಂಎ ಮಾತ್ರೆಗಳು ಮತ್ತು 1.33 ಲ.ರೂ.ನಗದನ್ನು ವಶಪಡಿಸಿಕೊಂಡಿತ್ತು. ನಂತರದ ಬೆಳವಣಿಗೆಗಳಲ್ಲಿ ವಾಂಖೆಡೆಯವರನ್ನು ಅವರ ಮಾತೃ ಕೇಡರ್‌ಗೆ ವಾಪಸ್ ಕಳುಹಿಸಲಾಗಿತ್ತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...