ಸನ್ನಿ ಅಣೆಕಟ್ಟು ನಿರ್ಮಾಣ ಗುತ್ತಿಗೆಯ ಬೆನ್ನಲ್ಲೇ; 45 ಕೋಟಿ ರೂ.ಗಳ ಚು.ಬಾಂಡ್ ಖರೀದಿಸಿದ್ದ ಬಿಜೆಪಿ ಸಂಸದನ ಕಂಪೆನಿ

Source: Vb | By I.G. Bhatkali | Published on 18th March 2024, 8:32 AM | National News |

ಹೊಸದಿಲ್ಲಿ: ಆಂಧ್ರಪ್ರದೇಶದ ಬಿಜೆಪಿ ರಾಜ್ಯಸಭಾ ಸದಸ್ಯ ಸಿ.ಎಂ.ರಮೇಶ್ ಸ್ಥಾಪಿಸಿದ್ದ ರಿತ್ವಿಕ್ ಪ್ರೊಜೆಕ್ಟ್ ಪ್ರೈ.ಲಿ.(ಆರ್‌ಪಿಪಿಎಲ್) ಹಿಮಾಚಲ ಪ್ರದೇಶದಲ್ಲಿ ಸನ್ನಿ ವಿದ್ಯುತ್ ಯೋಜನೆಗಾಗಿ 1,098 ಕೋ.ರೂ. ಗಳ ಇಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ (ಇಪಿಸಿ) ಗುತ್ತಿಗೆಯನ್ನು ಪಡೆದ ಬಳಿಕ ಐದು ಕೋ.ರೂ.ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತ್ತು. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಗಳಿಗೆ ಕೆಲವೇ ದಿನಗಳ ಮೊದಲು ಈ ಬಾಂಡ್‌ಗಳನ್ನು ಖರೀದಿಸಲಾಗಿತ್ತು. ಎರಡು ತಿಂಗಳುಗಳ ಬಳಿಕ ಕಂಪೆನಿಯು ಮತ್ತೆ 40 ಕೋ.ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತ್ತು. 1999, ಮಾ.31ರಂದು ಹೈದರಾಬಾದ್‌ನಲ್ಲಿ ಸ್ಥಾಪನೆಗೊಂಡಿದ್ದ ಖಾಸಗಿ ಕಂಪೆನಿ ಆರ್‌ಪಿಪಿಎಲ್‌ಗೆ 2023,ಜ.14ರಂದು ಇಪಿಸಿ ಗುತ್ತಿಗೆಯನ್ನು ನೀಡಲಾಗಿತ್ತು. ಇದಕ್ಕೆ ಕೆಲವೇ ದಿನಗಳ ಮೊದಲು ಇದೇ ಕಂಪೆನಿಯು ಭಾಗಿಯಾಗಿದ್ದ ಉತ್ತರಾಖಂಡದ ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯು ಸಮೀಪದ ಜೋಶಿಮಠ ಪಟ್ಟಣದಲ್ಲಿ ರಸ್ತೆಗಳು ಮತ್ತು ಮನೆಗಳು ಕುಸಿದು ಬಿದ್ದ ಬಳಿಕ ಸಂಕಷ್ಟಕ್ಕೆ ಸಿಲುಕಿತ್ತು. ಹಲವಾರು ಇತರ ಕಾರಣಗಳ ಹೊರತಾಗಿ ಜೋಶಿಮಠದ ಕ್ರಮೇಣ ಕುಸಿತಕ್ಕೆ ಈ ಪರಿಸರ ಸೂಕ್ಷ್ಮ ಸ್ಥಳದಲ್ಲಿ ಭೂಗತ ಸುರಂಗ ಕೊರೆದಿದ್ದು ಕಾರಣವೆಂದು ಸ್ಥಳೀಯ ನಿವಾಸಿಗಳು ಮತ್ತು ಕೆಲವು ತಜ್ಞರು ದೂರಿದ್ದರು.

ಸುದ್ದಿಯು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ ದಿನಗಳ ಬಳಿಕ ಮತ್ತು ಸನ್ನಿ ಅಣೆಕಟ್ಟು ಗುತ್ತಿಗೆಯನ್ನು ಪಡೆದುಕೊಂಡ ನಂತರದ ಎರಡು ವಾರಗಳಿಗೂ ಕಡಿಮೆ ಅವಧಿಯಲ್ಲಿ ಆರ್‌ಪಿಪಿಎಲ್ 2023, ಜ.27ರಂದು ತಲಾ ಒಂದು ಕೋ.ರೂ.ಗಳ ಐದು ಚುನಾವಣಾ ಬಾಂಡ್‌ಗಳನ್ನು ಖರೀದಿಸಿತ್ತು. ಕರ್ನಾಟಕ ವಿಧಾನಸಭಾ ಚುನಾವಣೆಯ ಕೆಲವೇ ದಿನಗಳ ಮುನ್ನ 2023, ಎ.11ರಂದು ಕಂಪೆನಿಯು ತಲಾ ಒಂದು ಕೋಟಿ ರೂ.ಗಳ 40 ಬಾಂಡ್‌ಗಳನ್ನು ಖರೀದಿಸಿತ್ತು.

ಆರ್ಥಿಕ ವ್ಯವಹಾರಗಳ ಕುರಿತು ಸಂಪುಟ ಸಮಿತಿಯು 2023,ಜ.4ರಂದು 2,614 ಕೋ.ರೂ.ಗಳ ಸನ್ನಿ ಅಣೆಕಟ್ಟು ಜಲವಿದ್ಯುತ್ ಯೋಜನೆಗೆ ಅನುಮೋದನೆಯನ್ನು ನೀಡಿತ್ತು ಮತ್ತು 10 ದಿನಗಳ ಬಳಿಕ ಆರ್‌ಪಿಪಿಎಲ್ ನಿರ್ಮಾಣ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಆರ್‌ಪಿಪಿಎಲ್ ತನ್ನನ್ನು ಪ್ರಮುಖ ನಿರ್ಮಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪೆನಿ ಎಂದು ಬಣ್ಣಿಸಿಕೊಂಡಿದೆ.

2019ರವರೆಗೆ ಟಿಡಿಪಿಯಲ್ಲಿದ್ದ ರಮೇಶ 2014-18ರ ನಡುವೆ ತೆಲಂಗಾಣದಿಂದ ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದರು.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ನಿಕಟರಾಗಿದ್ದ ರಮೇಶರ ಕಂಪನಿಯು ರಾಜ್ಯಾದ್ಯಂತ ಹಲವಾರು ಪ್ರಮುಖ ನೀರಾವರಿ ಮತ್ತು ನಿರ್ಮಾಣ ಯೋಜನೆಗಳ ಗುತ್ತಿಗೆಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತ್ತು.

2018 ಅಕ್ಟೋಬರ್‌ನಲ್ಲಿ ರಮೇಶ ಇನ್ನೂ ಟಿಡಿಪಿ ಸಂಸದರಾಗಿ ದ್ದಾಗ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ 100 ಕೋ.ರೂ.ಗಳ ಶಂಕಾಸ್ಪದ ವಹಿವಾಟಿಗೆ ಸಂಬಂಧಿಸಿದಂತೆ ಕಡಪಾದಲ್ಲಿಯ ಅವರ ನಿವಾಸ ಮತ್ತು ಹೈದರಾಬಾದ್‌ನಲ್ಲಿಯ ಆರ್‌ಪಿಪಿಎಲ್ ಕಚೇರಿಗಳ ಮೇಲೆ ದಾಳಿ ನಡೆಸಿದ್ದವು. ತಿಂಗಳುಗಳ ಬಳಿಕ ಜೂನ್ 2019ರಲ್ಲಿ ರಮೇಶ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

Read These Next

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...