ವಾಷಿಂಗ್ಟನ್: ‘ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯಗಳಲ್ಲಿ ಈ ಸಮುದಾಯ ನಿರ್ಣಾಯಕವೆನಿಸಲಿದೆ’ ಎಂದು ಡೆಮಾಕ್ರೆಟಿಕ್ ಪಕ್ಷದ ಮುಖಂಡ ಥಾಮಸ್ ಪೆರೇಜ್ ಹೇಳಿದ್ದಾರೆ.
ಭಾರತೀಯ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಮಿಷಿಗನ್, ಪೆನ್ಸಿಲ್ವೇನಿಯಾ ಹಾಗೂ ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಎರಡೂ ಪಕ್ಷಗಳು ಈ ಸಮುದಾಯದವರನ್ನು ಒಲಿಸುವ ಪ್ರಯತ್ನಗಳನ್ನು ಮಾಡುತ್ತಿವೆ.
‘ಮಿಷಿಗನ್‌ನಲ್ಲಿ 1.25 ಲಕ್ಷ ಭಾರತೀಯ ಮೂಲದ ಅಮೆರಿಕನ್ ಮತದಾರರಿದ್ದಾರೆ. 2016ರಲ್ಲಿ ನಮ್ಮ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ಈ ರಾಜ್ಯದಲ್ಲಿ 10,700 ಮತಗಳಿಂದ ಸೋತಿದ್ದರು. ಪೆನ್ಸಿಲ್ವೇನಿಯಾದಲ್ಲಿ 1.56 ಲಕ್ಷ ಹಾಗೂ ವಿಸ್ಕಾನ್ಸಿನ್‌ನಲ್ಲಿ 37,000 ಮಂದಿ ಭಾರತೀಯ ಮೂಲದ ಮತದಾರರಿದ್ದಾರೆ. ಈ ರಾಜ್ಯಗಳಲ್ಲಿ ಕ್ರಮವಾಗಿ ನಾವು ಸುಮಾರು 43 ಸಾವಿರ ಹಾಗೂ 21 ಸಾವಿರ ಮತಗಳಿಂದ ಸೋತಿದ್ದೆವು’ ಎಂದು ಪೆರೇಜ್ ಹೇಳಿದರು.
2020ರ ಚುನಾವಣೆಯಲ್ಲಿ ಏಷ್ಯಾ ಅಮೆರಿಕನ್ನರು ಮತ್ತು ಪೆಸಿಫಿಕ್ ದ್ವೀಪರಾಷ್ಟ್ರ ಮೂಲದವರು ವಿಶೇಷವಾಗಿ ಭಾರತೀಯ ಮೂಲದ ಮತದಾರರು ದೊಡ್ಡ ವ್ಯತ್ಯಾಸ ಉಂಟುಮಾಡಬಲ್ಲರು ಎಂದು ಚುನಾವಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ತಿಳಿಸಿದರುI