ಭಟ್ಕಳದಲ್ಲಿ ಕಲ್ಲು ಕ್ವಾರಿಗಳ ಅಟ್ಟಹಾಸ; ಮಲ್ಲಾರಿಯಲ್ಲಿ ಕ್ವಾರಿಗೆ ನುಗ್ಗಿ ಸಾರ್ವಜನಿಕರಿಂದ ಪ್ರತಿಭಟನೆ

Source: S O News | By I.G. Bhatkali | Published on 23rd February 2024, 7:10 PM | Coastal News |

ಭಟ್ಕಳ: ಇಲ್ಲಿನ ಬೆಂಗ್ರೆ ಮಲ್ಲಾರಿಯನ್ನು ಸಂಪೂರ್ಣವಾಗಿ ನುಂಗಿರುವ ಶಿಲೆಕಲ್ಲು ಕ್ವಾರಿಗಳ ವಿರುದ್ಧ ಜನರ ಆಕ್ರೋಶ ಕಟ್ಟೆಯೊಡೆದಿದ್ದು, ಗುರುವಾರ ಸಂಜೆ ನೇರವಾಗಿ ಕ್ವಾರಿಗಳಿಗೆ ನುಗ್ಗಿರುವ ಸಾರ್ವಜನಿಕರು ಕ್ವಾರಿಗಳ ಸುತ್ತ ಅಳವಡಿಸಲಾದ ಬೇಲಿ ಕಂಬಗಳನ್ನು ಕಿತ್ತೆಸೆದು ಪ್ರತಿಭಟನೆ ನಡೆಸಿದ್ದಾರೆ.

 ಗುರುವಾರ ಸಂಜೆ ಬೆಂಗ್ರೆ ಪಂಚಾಯತ ಕಚೇರಿಗೆ ತೆರಳಿದ ಜನರು, ಮಲ್ಲಾರಿಯಲ್ಲಿ ಹೊಸದಾಗಿ ಕ್ವಾರಿಗಳಿಗೆ ಅನುಮತಿ ನೀಡಿರುವ ಕ್ರಮಗಳ ಬಗ್ಗೆ ಪಂಚಾಯತ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬೋರ್ಕರ್, ಮಲ್ಲಾರಿಯಲ್ಲಿ ಈಗ ಹೊಸದಾಗಿ ನಿರ್ಮಿಸುತ್ತಿರುವ ಕ್ವಾರಿ ಅಥವಾ ಕ್ರಶರ್‍ಗಳಿಗೆ ಪಂಚಾಯತನಿಂದ ನಾವು ಯಾವುದೇ ಅನುಮತಿ ನೀಡಿಲ್ಲ. ಈ ಬಗ್ಗೆ ಜಿಲ್ಲಾ ಭೂ ವಿಜ್ಞಾನ, ಗಣಿ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿದ್ದಾರೆಯೇ ಇಲ್ಲವೇ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ಪಂಚಾಯತ ಅನುಮತಿ ಪಡೆಯದೇ ಪಂಚಾಯತ ವ್ಯಾಪ್ತಿಯಲ್ಲಿ ಕ್ವಾರಿಗಳನ್ನು ನಿರ್ಮಿಸುತ್ತ ಹೋಗುವುದು ಹೇಗೆ, ಕಲ್ಲು ಒಡೆಯುವುದು ಅಥವಾ ಸ್ಪೋಟಿಸುವುದಾದರೂ ಹೇಗೆ, ಕ್ರಶರ್ ಯಂತ್ರ ಕೆಲಸ ಮಾಡುವುದಾರೂ ಹೇಗೆ, ಅರಣ್ಯ ಭೂಮಿಯಲ್ಲಿ ಬೇಲಿ ನಿರ್ಮಿಸಿಕೊಂಡರೆ, ರಸ್ತೆ ಮಾಡಿಕೊಂಡರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತನಾಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದರು. ನಂತರ ಅಲ್ಲಿಂದ ನೇರವಾಗಿ ಕ್ವಾರಿಗಳಿಗೆ ತೆರಳಿದ ಜನರು ಕ್ವಾರಿಗಳ ಸುತ್ತ ಅಳವಡಿಸಲಾದ ಬೇಲಿ ಕಂಬಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು.

ಕ್ವಾರಿಗಳಿಂದಾಗಿ ಜನಜೀವನ ಹಾಳಾಗಿದೆ: 

ಬೆಂಗ್ರೆ ಮಲ್ಲಾರಿಯಲ್ಲಿ ಒಂದರ ಹಿಂದೊಂದರಂತೆ ಕ್ವಾರಿಗಳು ಕಾಣಿಸಿಕೊಂಡ ಪರಿಣಾಮವಾಗಿ ಜನ ಜೀವನ ಸಂಪೂರ್ಣ ಹಾಳಾಗಿದೆ. ಶಿಲೆಕಲ್ಲು ಸ್ಪೋಟಕ್ಕೆ ಮನೆಯ ಗೋಡೆಗಳು ಕಂಪಿಸುತ್ತಿವೆ. ಮಕ್ಕಳು, ವಯೋವೃದ್ಧರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದಿನದೂಡುತ್ತಿದ್ದಾರೆ

ಬೆಂಗ್ರೆ ಮಲ್ಲಾರಿಯಲ್ಲಿ ಒಂದರ ಹಿಂದೊಂದರಂತೆ ಕ್ವಾರಿಗಳು ಕಾಣಿಸಿಕೊಂಡ ಪರಿಣಾಮವಾಗಿ ಜನ ಜೀವನ ಸಂಪೂರ್ಣ ಹಾಳಾಗಿದೆ. ಶಿಲೆಕಲ್ಲು ಸ್ಪೋಟಕ್ಕೆ ಮನೆಯ ಗೋಡೆಗಳು ಕಂಪಿಸುತ್ತಿವೆ. ಮಕ್ಕಳು, ವಯೋವೃದ್ಧರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದಿನದೂಡುತ್ತಿದ್ದಾರೆ. ಕ್ವಾರಿ, ಕ್ರಶರ್‍ಗಳ ಧೂಳು ಊರು, ಕೇರಿಯನ್ನು ಮುತ್ತಿಕೊಂಡ ಪರಿಣಾಮವಾಗಿ ದಿನದಿಂದ ದಿನಕ್ಕೆ  ಉಸಿರಾಡುವುದು ಕಷ್ಟವಾಗುತ್ತಿದೆ. ಧೂಳಿನ ಕಾರಣದಿಂದ ವಿವಿಧ ರೋಗ, ರುಜಿನಗಳು ಹೆಚ್ಚಾಗುತ್ತಿದ್ದು, ಜನರ ಧ್ವನಿ ಕಳೆದುಕೊಂಡಿದ್ದಾರೆ. ಗದ್ದೆಗಳಿಗೂ ಕ್ವಾರಿಯ ಧೂಳು ಬಂದು ಬೀಳುತ್ತಿದ್ದು, ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ದನ,ಕರುಗಳಿಗೆ ಮೇಯಲು ಜಾಗವೇ ಇಲ್ಲದಂತಾಗಿದ್ದು, ಈ ಕಾರಣದಿಂದ ದನ,ಕರುಗಳ ಸಾಕಾಣಿಕೆ ಕಷ್ಟ ಸಾಧ್ಯ ಎನ್ನುವಂತಾಗಿದೆ. ಕ್ವಾರಿಗಳಿಂದಾಗಿಯೇ ಊರಿನ ನಡುವೆ ಕೃತಕ ಕಂದಕ, ಹೊಳೆ ನಿರ್ಮಾಣವಾಗಿದ್ದು, ಅಂತರ್ಜಲ ಹರಿವಿನ ಬದಲಾವಣೆಯಿಂದ ಬಾವಿಯಲ್ಲಿ ನೀರಿಲ್ಲದಂತಾಗಿದೆ. ಚಳಿಗಾಲದಲ್ಲಿಯೂ ನೀರಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಐಆರ್‍ಬಿ ಕಂಪನಿ, ಮತ್ತಿತರರಿಂದ ನಿರ್ಮಾಣವಾದ ಕ್ವಾರಿಗಳಿಂದಾಗಿ ನಾವು ಸಾಕಷ್ಟು ಪಾಠವನ್ನು ಕಲಿತಿದ್ದು, ಈಗ ಮತ್ತೆ ಹೊಸದಾಗಿ ನಮ್ಮ ಊರಿನಲ್ಲಿ ಕ್ವಾರಿ, ಕ್ರಶರ್ ಅಳವಡಿಸುವುದೇ ಬೇಡ. ಕ್ವಾರಿಗಳನ್ನು ಬಂದ್ ಮಾಡದೇ ಇದ್ದರೆ ನಮ್ಮ ಜೀವವನ್ನು ಪಣಕ್ಕಿಟ್ಟಾದರೂ ಹೋರಾಟ ಮುಂದುವರೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಪಂಚಾಯತ ಅಧ್ಯಕ್ಷ ಪ್ರಮೀಳಾ ಡಿಕೋಸ್ತಾ, ಸದಸ್ಯರಾದ ಮೇಘನಾ ಕಾಮತ್, ಬೇಬಿ ನಾಯ್ಕ, ಶಿವರಾಮ ದೇವಡಿಗ, ಜಗದೀಶ ನಾಯ್ಕ, ಜಗದೀಶ ದೇವಡಿಗ, ಯಶ್ವಂತ, ಪಿಡಿಓ ಉದಯ ಬೋರ್ಕರ್ ಮತ್ತಿತರರು ಸ್ಥಳದಲ್ಲಿ ಉಪಸ್ಥಿತರಿದ್ದರು.

 

Read These Next