ತಾಂತ್ರಿಕ ದೋಷ: ಅಮೆರಿಕದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ; ಸೈಬರ್ ದಾಳಿಯಲ್ಲ, ಶ್ವೇತಭವನ ಸ್ಪಷ್ಟನೆ

Source: Vb | By I.G. Bhatkali | Published on 12th January 2023, 8:18 AM | Global News |

 ವಾಶಿಂಗ್ಟನ್: ಪ್ರಮುಖ ಪೈಲಟ್ ಅಧಿಸೂಚನೆಯ ವೈಫಲ್ಯದಿಂದಾಗಿ ಬುಧವಾರ ಬೆಳಗ್ಗೆ ಅಮೆರಿಕದಾದ್ಯಂತ ಎಲ್ಲಾ ವಿಮಾನಗಳೂ ಹಾರಾಟ ಸ್ಥಗಿತಗೊಳಿಸಿವೆ ಎಂದು ವರದಿಯಾಗಿದೆ. ಈ ಸಮಸ್ಯೆಗೆ ಸೈಬರ್ ದಾಳಿ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ನೋಟಿಸ್ ಟು ಏರ್ ಮಿಷನ್ಸ್ (ನೋಟಂ) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿರುವುದರಿಂದ ಎಲ್ಲಾ ವಿಮಾನಗಳೂ ಹಾರಾಟ ಸ್ಥಗಿತಗೊಳಿಸಿ ಕೆಳಗಿಳಿದಿವೆ. ವ್ಯವಸ್ಥೆಯ ಮರುಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಮೆರಿಕದ ಫೆಡರಲ್ ವಾಯುಯಾನ ಪ್ರಾಧಿಕಾರ ಹೇಳಿದೆ. ರನ್‌ವೇಯಲ್ಲಿ ಸಮಸ್ಯೆ ಇತ್ಯಾದಿಗಳ ಬಗ್ಗೆ ವಿಮಾನದ ಪೈಲಟ್‌ಗಳು ಮತ್ತು ಸಿಬ್ಬಂದಿಗೆ ಸಕಾಲಿಕ ಸಂದೇಶ ಮತ್ತು ಎಚ್ಚರಿಕೆಗಳನ್ನು ರವಾನಿಸಲು 'ನೋಟಂ' ವ್ಯವಸ್ಥೆ ಬಳಸಲಾಗುತ್ತದೆ. ಈ ವೈಫಲ್ಯದಿಂದಾಗಿ ದೇಶದಾದ್ಯಂತ ವಾಯುಯಾನ ವ್ಯವಸ್ಥೆಯಲ್ಲಿ ಏರುಪೇರಾಗಿದ್ದು ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತಿದೆ. ವಿಮಾನ ಹಾರಾಟ ಆರಂಭದ ಬಗ್ಗೆ ಪ್ರಯಾಣಿಕರು ವಿಮಾನಯಾನ ಸಂಸ್ಥೆಗಳ ಜತೆ ಸಂಪರ್ಕದಲ್ಲಿರುವಂತೆ 'ಫೆಡರಲ್ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್' (ಎಫ್ ಎಎ) ಸೂಚಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಬೆಳವಣಿಗೆಗಳು ಹೀಗಿವೆ:

ವಿಮಾನ ಮತ್ತು ಸುರಕ್ಷತೆಯ ಸಮಗ್ರ ಮಾಹಿತಿಯನ್ನು ಪರಿಶೀಲಿಸುವ ನಿಟ್ಟಿನಲ್ಲಿ ಎಲ್ಲಾ ದೇಶೀಯ ವಿಮಾನ ಹಾರಾಟವನ್ನು ಬೆಳಗ್ಗೆ 9 ಗಂಟೆಯವರೆಗೆ (ಈಸ್ಟರ್ನ್ ಸ್ಟಾಂಡರ್ಡ್ ಟೈಮ್) ಸ್ಥಗಿತ ಗೊಳಿಸಲು ಎಫ್ ಎಎ ಆದೇಶ, ನೋಟಂ ವ್ಯವಸ್ಥೆಯನ್ನು ಮರುಸ್ಥಾಪಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವುದಾಗಿ ಎಫ್‌ ಎಎ ಟ್ವಿಟ್ ಮಾಡಿದೆ. 

* ನೆವಾರ್ಕ್ ಲಿಬರ್ಟಿ ಅಂತ‌ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹಾರ್ಟ್ಸ್ಫೀಲ್ಡ್-ಜಾಕ್ಸನ್ ಅಟ್ಲಾಂಟಾ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ನಿರ್ಗಮನ ಆರಂಭವಾಗಿದೆ ಎಂದು ಎಫ್‌ ಎಎ ಹೇಳಿದೆ.

* ಅಮೆರಿಕಕ್ಕೆ ಬರುವ ಅಥವಾ ಅಮೆರಿಕದಿಂದ ನಿರ್ಗಮಿಸುವ ಒಟ್ಟು 2,512 ವಿಮಾನಗಳ ಪ್ರಯಾಣ ವಿಳಂಬವಾಗಿದೆ. ದೇಶದ ಒಳಗೆ ಅಥವಾ ಹೊರಗೆ 130 ವಿಮಾನಗಳ ಪ್ರಯಾಣ ರದ್ದಾಗಿದೆ ಎಂದು 'ಫ್ರೆಟ್ ಅವೇರ್' ವೆಬ್‌ ಸೈಟ್ ವರದಿ.

* ದೇಶದೊಳಗಿನ 193 ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ. ಅಮೆರಿಕದ ವಿಮಾನನಿಲ್ದಾಣಗಳಿಂದ ಬುಧವಾರ 21,464 ವಿಮಾನ ಸಂಚಾರ (ಸುಮಾರು 2.9 ದಶಲಕ್ಷ ಪ್ರಯಾಣಿಕರು) ನಿಗದಿಯಾಗಿತ್ತು. ಇದರಲ್ಲಿ ಅಮೆರಿಕನ್ ಏರ್ ಲೈನ್ಸ್‌ನ 4,829 ವಿಮಾನಗಳ ಸಂಚಾರ ಒಳಗೊಂಡಿದೆ.

* ಅಮೆರಿಕ ವಿಮಾನ ನಿಲ್ದಾಣಗಳಿಂದ ಸಂಚರಿಸುವ ಲುಫ್ರಾನ್ಸಾ ಮತ್ತು ಬ್ರಿಟಿಷ್ ಏರ್‌ವೇಸ್ ವಿಮಾನಗಳು ನಿಗದಿತ ರೀತಿಯಲ್ಲಿ ಹಾರಾಟ ನಡೆಸಿವೆ.

* ಸಾರಿಗೆ ಕಾರ್ಯದರ್ಶಿಯಿಂದ ತನಗೆ ಮಾಹಿತಿ ನೀಡಲಾಗಿದೆ. ವಿಮಾನಗಳು ಈಗಲೂ ಸುರಕ್ಷಿತವಾಗಿ ಲ್ಯಾಂಡ್ ಆಗಬಹುದು. ಆದರೆ ಸದ್ಯಕ್ಕೆ ಟೇಕ್ ಆಫ್ ಆಗಲು ಸಾಧ್ಯವಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

* ಸೈಬರ್ ದಾಳಿಯ ಬಗ್ಗೆ ಈ ಹಂತದಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಟ್ವಿಟ್ ಮಾಡಿದ್ದಾರೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...