ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ಪುನರುಜ್ಜೀವನಕ್ಕೆ ಕ್ರಮ. ವಿದ್ಯಾರ್ಥಿಗಳ ದಿನನಿತ್ಯದ ಪಾಠಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲು ಜಿಲ್ಲಾಡಳಿತಕ್ಕೆ ಸಚಿವ ಸಂತೋಷ ಲಾಡ್ ಸೂಚನೆ

Source: SO News | By Laxmi Tanaya | Published on 26th July 2023, 10:14 PM | State News | Don't Miss |

ಧಾರವಾಡ : ಸರ್ಕಾರಿ ಮಹಿಳಾ ಪದವಿ ಕಾಲೇಜು ನಡೆಯುತ್ತಿರುವ ಕಟ್ಟಡ ಸುಮಾರು 130 ವರ್ಷಗಳ ಐತಿಹಾಸಿಕ, ಸುಂದರ ಕಟ್ಟಡವಾಗಿದೆ. ಇದನ್ನು ಪುನರುಜ್ಜೀವನಗೊಳಿಸಲು ತಕ್ಷಣ ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಧಾರವಾಡ ಜಿಲ್ಲಾಡಳಿತಕ್ಕೆ ಇಂದು ಸಂಜೆ ನಿರ್ದೇಶನ ನೀಡಿದರು.

 ಅವರು ಬುಧವಾರ, ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದ ಹತ್ತಿರವಿರುವ ಸರ್ಕಾರಿ ಮಹಿಳಾ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ಕಟ್ಟಡ ಸೋರಿಕೆ ಹಾಗೂ ಮೂಲಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು. 

 ನಂತರ ಅವರು ಅಧಿಕಾರಿಗಳಿಗೆ ಮಾತನಾಡಿ, ಕಾಲೇಜಿಗೆ ನೂತನ ಕಟ್ಟಡದ ಕುರಿತು ಸರ್ಕಾರದ ಹಂತದಲ್ಲಿ ಚರ್ಚಿಸಿ ಅನುದಾನ ಪೂರೈಸಲು ಕ್ರಮವಹಿಸಲಾಗುವುದು. ಇದೊಂದು ಐತಿಹಾಸಿಕ ಕಟ್ಟಡವಾಗಿದ್ದು, ಕಾಲೇಜು ಕಟ್ಟಡದ ಸಧ್ಯದ ವಿನ್ಯಾಸ ಉಳಿಸಿಕೊಂಡು ಕಟ್ಟಡ ದುರಸ್ತಿ ಮಾಡಿ ಕಾಲೇಜು ಬಳಕೆಗೆ ನೀಡಲಾಗುವುದು. ರಾಜ್ಯ ಸರ್ಕಾರವು ಈಗಾಗಲೇ ಮಹಿಳಾ ಕಾಲೇಜು ನೂತನ ಕಟ್ಟಡಕ್ಕೆ ಸುಮಾರು 1 ಎಕರೆ ಭೂಮಿಯನ್ನು ಈ ಕಟ್ಟಡ ಸೇರಿ ಮಂಜೂರಿ ಮಾಡಿದೆ. ಕಟ್ಟಡ ಹೊರತಾದ ಜಾಗೆಯಲ್ಲಿ ನೂತನ ಕಟ್ಟಡವನ್ನು ನಿರ್ಮಿಸಲು ಸೂಕ್ತ ನೀಲನಕ್ಷೆ ನೀಡುವಂತೆ ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

 ಅತಿಯಾದ ಮಳೆಯಿಂದಾಗಿ ಮತ್ತು ಕಟ್ಟಡ ಹಳೆಯದಾಗಿರುವುದರಿಂದ ಸೋರಿಕೆಯಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವುದರಿಂದ ಈ ಕಟ್ಟಡದಲ್ಲಿ ಮಕ್ಕಳ ವರ್ಗಗಳನ್ನು ನಡೆಸದಂತೆ ಸಚಿವರು ಸೂಚಿಸಿದರು.

 ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಕರೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳ ದಿನನಿತ್ಯದ ಪಾಠ, ಪ್ರವಚನಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಡ, ಡಯಟ್ ದಲ್ಲಿ ಕ್ಲಾಸ್‍ರೂಮ್‌ಗಳ ವ್ಯವಸ್ಥೆ ಮಾಡಲಾಗಿದೆ ಮಳೆ ಕಡಿಮೆಯಾದ ತಕ್ಷಣ ಪ್ರಸ್ತುತ ಕಟ್ಟಡದ ಒಳಭಾಗದ ಕಟ್ಟಿಗೆ, ಹೆಂಚುಗಳನ್ನು ಬದಲಾಯಿಸಿ ದುರಸ್ತಿಮಾಡಲು ನಿರ್ಧರಿಸಲಾಗಿದೆ. ಮಂಜೂರಿಯಾಗಿರುವ ಜಾಗೆಗೆ ನೂತನ ಕಟ್ಟಡದ ನೀಲನಕ್ಷೆ ಸಿದ್ಧಗೊಳಿಸಲಾಗುವುದೆಂದು ತಿಳಿಸಿದರು.

 ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಜಂಟಿನಿರ್ದೇಶಕ ಪ್ರೋ. ಪಿ. ಬಿ. ಕಲ್ಯಾಣಶೆಟ್ಟರ, ಪ್ರಾಚಾರ್ಯ ಡಾ. ಸರಸ್ವತಿ ಕಳಸದ, ಉಪವಿಭಾಗಾಧಿಕಾರಿ ಅಶೋಕ ತೇಲಿ, ಮಹಾನಗರ ಪಾಲಿಕೆಯ ಸದಸ್ಯ ಡಾ.ಮಯೂರ ಮೊರೆ, ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ ಪಾಟೀಲ  ಸೇರಿದಂತೆ ಕಾಲೇಜು ಅಧ್ಯಾಪಕರು, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ರೇಪಿಷ್ಟ್ ಗಳ ಜೊತೆ ಬಿಜೆಪಿ ಹೊಂದಾಣಿಕೆ;  ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಅಂದರೆ ಇದೇನಾ? -ಸಿದ್ಧರಾಮಯ್ಯ

ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ...

ಮುಂಡಗೋಡ: ಮೋದಿ ಸುಳ್ಳುಗಳ ಸರದಾರ, ಬಿಜೆಪಿ ಸುಳ್ಳಿನ ಕಾರ್ಖಾನೆ: ಸಿದ್ದರಾಮಯ್ಯ ವಾಗ್ದಾಳಿ

ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿಯವರು ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು. ...

ಅತಿಕ್ರಮಣದಾರರ ವಿಚಾರದಲ್ಲೂ ಬಿಜೆಪಿಯಿಂದ ರಾಜಕೀಯ; ಮುಂಡಗೋಡದಲ್ಲಿ ಡಿಕೆಶಿ ವಾಗ್ದಾಳಿ

ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ...