ಕುಂತು ಕೆಲಸ ಮಾಡುವ ಹಕ್ಕಿನ ಕುರಿತು

Source: sonews | By Staff Correspondent | Published on 17th July 2018, 11:58 PM | National News | Special Report |

ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕಾರ್ಮಿಕರು ಕುಂತು ಕೆಲಸ ಮಾಡುವ ಹಕ್ಕನ್ನು ಎತ್ತಿಹಿಡಿದ ಕೇರಳ ಸರ್ಕಾರದ ಮಾದರಿಯನ್ನು ಇತರ ಸರ್ಕಾರಗಳೂ ಅನುಸರಿಸಬೇಕು.

 

ಸತತ ಏಳುವರ್ಷಗಳ ಹೋರಾಟದ ನಂತರ ಕೇರಳದ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸದ ಸಮಯದಲ್ಲಿ ಕುಂತುಕೊಳ್ಳುವ ಹಕ್ಕನ್ನು ಪಡೆದುಕೊಂಡಿದ್ದಾರೆ. ಭಾರತದ ಎಲ್ಲಾ ಕಡೆ ಇರುವಂತೆ ಕೇರಳದಲ್ಲೂ ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಪ್ರಧಾನವಾಗಿ ಮಹಿಳಾ ಕಾರ್ಮಿಕರೇ ಆಗಿದ್ದು ಸುಮಾರು ೧೨ ಗಂಟೆಗಳಷ್ಟು ದೀರ್ಘವಿರುವ ಕೆಲಸದ ಅವದಿಯುದ್ದಕ್ಕೂ ನಿಂತೇ ಕೆಲಸ ಮಾಡಬೇಕಿತ್ತು. ಹೆಚ್ಚೆಂದರೆ ದಿನಕ್ಕೆ ಎರಡು ಬಾರಿ ಶೌಚಕ್ಕೆ ಹೋಗಿ ಬರಲು ಗೊಣಗುಟ್ಟುತ್ತಲೇ ಅವಕಾಶವನ್ನು ನೀಡಲಾಗುತ್ತಿತ್ತು. ಕೇರಳ ರಾಜ್ಯದ ಸಂಪುಟವು ಇತ್ತೀಚೆಗ್ ಕೇರಳ ಅಂಗಡಿ ಮತ್ತು ವಾಣಿಜ್ಯ ಸಮುಚ್ಚಯಗಳ ಕಾಯಿದೆಗೆ ತಿದ್ದುಪಡಿಯೊಂದನು ತರಲು ಸಮ್ಮತಿಸಿದ್ದು ಅದರ ಪ್ರಕಾರ ಕಾಯಿದೆಯಡಿ ಬರುವ ಅಂಗಡಿ ಮತ್ತು ಸಂಕೀರ್ಣಗಳ ಮಾಲೀಕರು ತಮ್ಮ ಕಾರ್ಮಿಕರಿಗೆ ಕುಳಿತುಕೊಳ್ಳಲು ಸೌಲಭ್ಯವನ್ನು ಒದಗಿಸಬೇಕಲ್ಲದೆ ಕೆಲಸ ಸ್ಥಳದಲ್ಲಿ ಲೈಂಗಿಕ ಕಿರುಕುಳವಾಗದಂತೆಯೂ ನೋಡಿಕೊಳ್ಳಬೇಕು. ಮತ್ತು ರಾತ್ರಿ ಪಾಳಿಯಲ್ಲಿ ಕೆಲಸಮಾಡುವ ಮಹಿಳಾ ಕಾರ್ಮಿಕರಿಗೆ ಸಾರಿಗೆ ಮತ್ತು ಭದ್ರತಾ ಸೌಲಭ್ಯವನ್ನೂ ಒದಗಿಸಬೇಕಿರುತ್ತದೆ.

ಮಹಿಳಾ ಕಾರ್ಮಿಕರು ನಡೆಸುತ್ತಿದ್ದ ಹೋರಾಟವು ಎರಡು ಪ್ರಮುಖ ಅಂಶಗಳ ಬಗ್ಗೆ ಗಮನ ಸೆಳೆದಿದೆ: ಮೊದಲನೆಯದು ಭಾರತದಾದ್ಯಂತ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಅಸ್ಥಿತ್ವದಲ್ಲಿರುವ ಅಮಾನವೀಯ ಕೆಲಸದ ಪರಿಸ್ಥಿತಿಗಳು ಮತ್ತು ಎರಡನೆಯದು ಯಾವುದೇ ರಾಜಕೀಯ ಪಕ್ಷಗಳಿಗೆ ಅಥವಾ ಸ್ಥಾಪಿತ ಟ್ರೇಡ್ ಯೂನಿಯನ್ಗಳೊಂದಿಗೆ ಸಂಪರ್ಕವಿಲ್ಲದೆ ಸ್ವತಂತ್ರವಾಗಿ ತಲೆ ಎತ್ತುತ್ತಿರುವ ಅಸಂಘಟಿತ ಕ್ಷೇತ್ರದ ಮಹಿಳಾ ಕಾರ್ಮಿಕ ಸಂಘಟನೆಗಳು. ೨೦೧೦ರಲ್ಲಿ ಕೋಳಿಕ್ಕೋಡ್ ನಗರದ ವಾಣಿಜ್ಯ ಕೇಂದ್ರವಾದ ಎಸ್ಎಂ ರಸ್ತೆಯಲ್ಲಿದ್ದ ಚಿಲ್ಲರೆ ವ್ಯಾಪಾರದಂಗಡಿಗಳಲ್ಲಿ ಕೆಲಸಮಾಡುತ್ತಿದ್ದ  ಸೇಲ್ಸ್ಗರ್ಲ್ ಗಳು ಹಾಗೂ ಕಸ ಗುಡಿಸುವ ಮತ್ತು ನೈರ್ಮಲ್ಯ ಕೆಲಸ ನಿರ್ವಹಿಸುತ್ತಿದ್ದ ಮಹಿಳಾ ಕಾರ್ಮಿಕರು ಅಸಂಘಟಿತ ಮಹಿಳಾ ತೊಳಿಲಾಳಿ ಯೂನಿಯನ್ (ಎಎಂಟಿಯು) ನೇತೃತ್ವದಲ್ಲಿ  ಒಂದಾಗಿ ಶೌಚಾಲಯ ಸೌಲಭ್ಯಗಳನ್ನು ಆಗ್ರಹಿಸಿ ಮುಷ್ಕರ ಹೂಡಿದರು. ಮಹಿಳೆಯರು ಶೌಚಕ್ಕೆ ಹತಿರದಲ್ಲಿರುವ ಹೋಟೆಲ್ ಅಥವಾ ರೆಸ್ಟುರಾಂmಗಳಿಗೆ ಹೋಗಬೇಕಿತ್ತು. ಅಲ್ಲಿ ಅವರಿಗೆ ದಿನಕ್ಕೆ ಎರಡು ಬಾರಿ ಮಾತ್ರ ಅವಕಾಶ ಕೊಡಲಾಗುತ್ತಿತ್ತು ಮಾತ್ರವಲ್ಲದೆ ಹೋದಾಗಲೆಲ್ಲಾ ಅಲ್ಲಿನ ಪುರುಷ ಗ್ರಾಹಕರಿಂದ ಕೀಳು ಮಾತುಗಳನ್ನು ಕೇಳಬೇಕಾಗುತ್ತಿತ್ತು. ೨೦೧೪ರಲ್ಲಿ ತ್ರಿಚೂರಿನ ಕಲ್ಯಾಣ್ ಸ್ಯಾರಿಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರು ಕುಂತುಕೊಳ್ಳುವ ಹಕ್ಕನ್ನು ಆಗ್ರಹಿಸಿ ಮುಷ್ಕರ ಹೂಡಿ ದೇಶದ ಗಮನವನ್ನು ಸೆಳೆದಿದ್ದರು. ದೀರ್ಘಕಾಲ ನಿಂತೇ ಕೆಲಸ ಮಾಡುವುದರಿಂದ ಮತ್ತು ಶೌಚಾಲಯ ಸೌಲಭ್ಯ ಇಲ್ಲದಿರುವುದರಿಂದ ಮಹಿಳಾ ಕಾರ್ಮಿಕರು  ಸೊಂಟದ ನೋವಿಗೆ, ಕೀಲುಗಳ ನೋವಿಗೆ, ಬಾತುಕೊಳ್ಳುವ ಪಾದಗಳ ಯಾತನೆಗೆ, ಕಿಡ್ನಿ ಸಂಂಧೀ ಕಾಯಿಲೆಗಳಿಗೆ ಮತ್ತು ಕಾಲುಗಳಲ್ಲಿ ನರಗಳು ಸುರುಳಿಸುತ್ತುಕೊಳ್ಳುವುದರಿಂದ ಉಂಟಾಗುವ ನೋವುಗಳಿಗೆ ತುತ್ತಾಗುತ್ತಾರೆ. ಕಾರ್ಮಿಕರ ಹೋರಾಟದಿಂದ ಕೆಂಗಣ್ಣಾದ ಮಾಲೀಕರು ಯಾವುದೇ ಪೂರ್ವ ಸೂಚನೆಯನ್ನೂ ಕೊಡದೆ ಹಲವಾರು ಕಾರ್ಮಿಕರನ್ನು ವರ್ಗಾವಣೆ ಮಾಡಿದರಲ್ಲದೆ ಕುಂತು ಕೆಲಸ ಮಾಡಬೇಕೆಂದರೆ ಮನೆಯಲ್ಲೇ ಕೂತುಕೊಳ್ಳಬೇಕೆಂದು ಮುಖಕ್ಕೆ ರಾಚುವಂತೆ ಹೇಳಿಬಿಟ್ಟರು ಹೋರಾಟಕ್ಕೆ ಎಎಂಟಿಯು ಸಂಪೂರ್ಣ ಬೆಂಬಲವನ್ನು ನೀಡಿದ್ದು ಮಾತ್ರವಲ್ಲದೆ ಹೋರಾಟವನ್ನು ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ಗಮನಕ್ಕೂ ಮತ್ತು ಮಾಧ್ಯಮಗಳ ಗಮನಕ್ಕೂ ತಂದಿತು. ಅದೇ ಸಮಯದಲ್ಲಿ ಪಟ್ಟುಸಡಿಲಸದೆ ಬಿಗಿಯಾಗಿದ್ದ ಮಾಲೀಕರೊಡನೆಯೂ ಸಂಧಾನ ಮಾತುಕತೆಯನ್ನು ಪ್ರಾರಂಭಿಸಿತು.

 

ದೊಡ್ಡ ದೊಡ್ಡ ಮಾಲ್ಗಳನ್ನೂ ಒಳಗೊಂಡಂತೆ ಚಿಲ್ಲರೆ ವ್ಯಾಪಾರದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ದೇಶಾದ್ಯಂತ ಅತ್ಯಂತ ದುರ್ಭರ ಪರಿಸ್ಥಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಆನ್ಲೈನ್ ಶಾಪಿಂಗ್ ಹೆಚ್ಚುತ್ತಿದ್ದರೂ ಸಂಘಟಿತ ಚಿಲ್ಲರೆ ವ್ಯಾಪಾರ ಉದ್ಯಮವೂ ದೇಶದಲ್ಲಿ ಬೆಳೆಯುತ್ತಿದೆ. ಹೆಚ್ಚುತ್ತಿರುವ ಮಧ್ಯಮ ವರ್ಗ, ಹೆಚ್ಚುತ್ತಿರುವ ನಗರೀಕರಣ ಮತ್ತು ಈವರೆಗೆ ಸೆಳೆಯಲಾಗದ ಗ್ರಾಹಕರನ್ನು ಸೆಳೆಯಲು ಹೆಚ್ಚುತ್ತಿರುವ ಸ್ಪರ್ಧೆಗಳು ಒಂದು ಚಿಲ್ಲರೆ ವ್ಯಾಪಾರದ ಕ್ರಾಂತಿಗೆ ದಾರಿ ಮಾಡಿಕೊಟ್ಟಿದೆ.

ಚಿಲ್ಲರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರು ಬಹುಪಾಲು ಮಹಿಳೆಯರೇ ಆಗಿದ್ದು, ಕಡಿಮೆ ವಿದ್ಯಾಭ್ಯಾಸ ಮತ್ತು ಕಡಿಮೆ ಕೌಶಲ್ಯವನ್ನು ಹೊಂದಿರುತ್ತಾರೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಗ್ರಾಹಕರು ಬಂದಾಗ ಅವರನ್ನು ನಿಂತು ಎದುರುಗೊಳ್ಳುವುದು ಗೌರವಪೂರ್ವಕವಾದ ಅಭ್ಯಾಸವಾಗಿರುವುದರಿಂದ ಮುಂಗಟ್ಟೆಗಳಲ್ಲಿರುವ ತಮ್ಮ ಕಾರ್ಮಿಕರು ಸದಾ ನಿಂತೇ ಕೆಲಸ ಮಾಡಬೇಕೆಂದು ತಾವು ನಿರೀಕ್ಷಿಸುವುದಾಗಿ ವ್ಯಾಪಾರ ಮಳಿಗೆಗಳ ಮಾಲೀಕರು ಹೇಳುತ್ತಾರೆ. ಗ್ರಾಹಕರನ್ನು ಸೆಳೆಯುವ ಸ್ಪರ್ಧೆಯು ಹಲವು ಹೊಸಬಗೆಯ ವ್ಯಾಪಾರಿ ಮತ್ತು ಮಾರಾಟ ತಂತ್ರಗಳನ್ನು ಹುಟ್ಟುಹಾಕಿರುವುದರ ಜೊತೆಜೊತೆಗೆ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರುವಂತೆಯೂ ಮಾಡಿದೆ. ವಾಸ್ತವವಾಗಿ ಚಿಲ್ಲರೆ ವ್ಯಾಪಾರ ಕ್ಷೇತ್ರದ ಉದ್ಯಮಿಗಳು ಕ್ಷೇತ್ರದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸುತ್ತಿದ್ದು ಹಲವಾರು ರಾಜ್ಯ ಸರ್ಕಾರಗಳು ಅದಕ್ಕೆ ಸಮ್ಮತಿಯನ್ನು ವ್ಯಕ್ತಪಡಿಸಿವೆ. ಉದಾಹರಣೆಗೆ ಮಹಾರಾಷ್ಟ್ರ ಸರ್ಕಾರವು ಚಿಲ್ಲರೆ ವ್ಯಾಪಾರದ ಮುಂಗಟ್ಟೆಗಳು ವರ್ಷದ ೩೬೫ ದಿನಗಳು ಮತ್ತು ದಿನದ ೨೪ ಗಂಟೆಗಳು ತೆರೆದಿರಲು ಮತ್ತು ಕಾರ್ಮಿಕರು ಮೂರು ಪಾಳಿಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಮತ್ತು ಸಮಾಜದಲ್ಲಿ  ನಿರುದ್ಯೋಗಿ ಯುವಜನರ ದೊಡ್ಡ ಪಡೆಯೇ ಇರುವಾಗ ಕಾರ್ಮಿಕರಿಗೆ ಹೆಚ್ಚು ಚೌಕಾಶಿ ಮಾಡುವ ಶಕ್ತಿಯೂ ಇರುವುದಿಲ್ಲ ಮತ್ತು ಅವರು ಕಾರ್ಮಿಕ ಸಂಘಟನೆಗಳಿಗೆ ಸೇರುವುದಿರಲಿ ಕಾರ್ಮಿಕ ಕಲ್ಯಾಣ ಸಂಸ್ಥೆಗಳನ್ನು ಸೇರುವುದಕ್ಕೂ ಧೈರ್ಯ ಮಾಡುವುದಿಲ್ಲ

ಪುರುಷರೇ ಅಧಿಪತ್ಯ ಹೊಂದಿರುವ ಮತ್ತು ಸ್ಥಾಪಿತ ಕಾರ್ಮಿಕ ಸಂಘಟನೆಗಳನ್ನು ಅವಲಂಬಿಸುವುದರ ಬದಲಿಗೆ ತಾವೇ ಸಂಘಟಿತರಾಗಲು ಒಂದು ಸಣ್ಣ ರೀತಿಯಲ್ಲಿ ಮಹಿಳಾ ಕಾರ್ಮಿಕರು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಂಥಾ ಹೋರಾಟಕ್ಕೆ ಒಂದು ದೊಡ್ಡ ಉದಾಹರಣೆಯೆಂದರೆ ಉತ್ತಮ ಕೂಲಿ ಮತ್ತು ಕೆಲಸದ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಆಗ್ರಹಿಸಿ ಮೂನಾರ್ ಟೀ ಎಸ್ಟೇಟ್ ಮಹಿಳಾ ಕಾರ್ಮಿಕರು ನಡೆಸಿದ ಧೀರೋದ್ಧಾತ್ತ ಹೋರಾಟ. ಮತ್ತೊಂದು ಉದಾಹರಣೆಯೆಂದರೆ ಕೇಂದ್ರ ಸರ್ಕಾರವು ಕಾರ್ಮಿಕರ ಭವಿಷ್ಯನಿಧಿ ಕಾನೂನಿಗೆ ತಿದ್ದುಪಡಿ ತಂದು ಕಾರ್ಮಿಕರ ಬದುಕಿನ ಮೇಲೆ ನೇರ ಪ್ರಹಾರವನ್ನು ಮಾಡಲು ಹೊರಟಿದ್ದಾಗ ಬೆಂಗಳೂರಿನ ಮಹಿಳಾ ಗಾರ್ಮೆಂಟ್ ಕಾರ್ಮಿಕರು ಬೀದಿಗಿಳಿದು ನಡೆಸಿದ ಹೋರಾಟ. ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಉದ್ಯಮಗಳಲ್ಲಿರುವ ಇಂಥಾ ಸಂಘಟನೆಗಳನ್ನು ಎಎಂಟಿಯು ಒಂದೆಡೆಗೆ ತರಲು ಶ್ರಮಿಸುತ್ತಿದೆ.

ಕೇರಳದಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಎಎಂಟಿಯು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ತಿದ್ದುಪಡಿಯಾಗುತ್ತಿರುವ ಕಾಯಿದೆಯ ಭಾಷೆಯು ಗೊಂದಲಗಳಿಂದ ಕೂಡಿದ್ದು ಮಾಲೀಕರಿಗೆ ಅನೂಕೂಲಕಾರಿಯಾಗುವ ಸಾಧ್ಯತೆಯಿದೆಯೆಂದು ಅದು ಎಚ್ಚರಿಸಿದೆ. ಈಗಾಗಲೇ ಅಸ್ಥಿತ್ವದಲ್ಲಿರುವ ಕಾನೂನು ಸಹ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ವಿರಾಮವನ್ನು ಕೊಡಬೇಕೆಂಬ ನಿಯಮವನ್ನು ಹೊಂದಿದ್ದರೂ ಯಾರೂ ಅದನ್ನು ಪಾಲಿಸುತ್ತಿಲ್ಲ. ತಿದ್ದುಪಡಿಯಾದ ಕಾನೂನಿನಲ್ಲಿ ಮಹಿಳಾ ಕಾರ್ಮಿಕರು ಗ್ರಾಹಕರೊಂದಿಗೆ ವ್ಯವಹರಿಸದಿರುವ ಸಮಯದಲ್ಲೇ ಕೂತುಕೊಳ್ಳುವ ಅವಕಾಶವಿದೆಯೋ ಅಥವಾ ವಿರಾಮದ ಸಮಯದಲ್ಲೋ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಕೂತುಕೊಳ್ಳುವ ಹಕ್ಕಿಗಾಗಿ ಧೀರೋದ್ಧಾತ್ತವಾಗಿ ಹೋರಾಟ ಮಾಡಿರುವ ಮಹಿಳಾ ಕಾರ್ಮಿಕರು ಈಗ ಅದರ ಅನುಷ್ಠಾನವನ್ನು ಖಾತರಿ ಮಾಡಿಕೊಳ್ಳಬೇಕಿದೆ.

ಆರ್ಥಿಕ ಉದಾರೀಕರಣದ ಸಂದರ್ಭದಲ್ಲಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾದರೂ ಕಾರ್ಮಿಕ ಸಂಘಟನೆಗಳು ಹೊಸ ಸವಾಲುಗಳನ್ನು ಎದುರಿಸಬೇಕಿದೆ. ಎಲ್ಲಾ ಕೆಲಸಗಳು ಬಹುಮಾಡಿ ಅಸಂಘಟಿತ ಕ್ಷೇತ್ರದಲ್ಲೇ ಸೃಷ್ಟಿಯಾಗುತ್ತಿರುವುದರಿಂದ ಮತ್ತು ಕ್ಷೇತ್ರದಲ್ಲಿ ಸಾಮಾಜಿಕ ಮತ್ತು ಕೆಲಸದ ಭದ್ರತೆಗಳು ಮರೀಚಿಕೆಯಾಗಿರುವುದರಿಂದ ಹಾಗೂ ಇದರಲ್ಲಿನ ಚಿಲ್ಲರೆ ವ್ಯಾಪಾರದಂಥ ಕ್ಷೇತ್ರಗಳಲ್ಲಿ ಮಹಿಳಾ ಕಾರ್ಮಿಕರೇ ಹೆಚ್ಚಾಗಿರುವುದರಿಂದ ಸ್ಥಾಪಿತ ಕಾರ್ಮಿಕ ಸಂಘಟನೆಗಳು ತಮ್ಮ ಕಾರ್ಯತಂತ್ರಗಳನ್ನು ಮರುಪರಿಶೀಲಿಸಬೇಕಾಗಿದೆ. ಸಂಘಟನೆಗಳು ಬದಲಾಗುತ್ತಿರುವ ಕಾರ್ಮಿಕ ಶಕ್ತಿಯನ್ನು ಮತ್ತು ಕಾರ್ಮಿಕ ಹಿತಾಸಕ್ತಿಯನ್ನು ಬಲಿಗೊಟ್ಟು ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಯನ್ನು ತರಲು ಹೊರಟಿರುವ ಕುರುಡು ಸರ್ಕಾರವನ್ನು ಏಕಕಾಲದಲ್ಲಿ ನಿಭಾಯಿಸಬೇಕಿದೆ.

ಕೃಪೆ: Economic and Political Weekly       ಅನು: ಶಿವಸುಂದರ್ 

      

 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...