ಸಂಘಪರಿವಾರದ ಕುಮ್ಮಕ್ಕಿನಿಂದ ಹುಟ್ಟಿಕೊಂಡ ಕುಮಟಾ ತಾಲೂಕಿನ ಮಿರ್ಜಾನ್  ಖಬರಸ್ತಾನ ಭೂಮಿ ವಿವಾದ

Source: SOnews | By Staff Correspondent | Published on 12th December 2023, 7:27 PM | Coastal News |

 

ಇದು ೨೦೨೪ ಲೋಕಾಸಭೆ ಚುನಾವಣೆಯ ಸಿದ್ಧತೆ ಎಂದ  ಜಮಾತುಲ್ ಮುಸ್ಲಿಮೀನ್ ಅಧ್ಯಕ್ಷ ಇಬ್ರಾಹೀಮ್ ಶೇಕ್

ಕುಮಟಾ: ಕುಮಟಾ ತಾಲೂಕಿನ ಮಿರ್ಜಾನ್ ಪಂಚಾಯತ್ ವ್ಯಾಪ್ತಿಯಲ್ಲಿರುವ ಸರ್ವೆ ನಂ.238ರಲ್ಲಿನ  ೯.೧೨ ಎಕರೆ ಖಬರಸ್ತಾನ ಭೂಮಿಯ ಮೇಲೆ ಕಣ್ಣಿಟ್ಟಿರುವ ಸಂಘಪರಿವಾರ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮತ್ತು ಕೆಲ ಸಮಾಜಘಾತುಕ ಶಕ್ತಿಗಳನ್ನು ಛೂ ಬಿಟ್ಟು ಮುಸ್ಲಿಮರನ್ನು ಕೆಣಕುತ್ತಿದ್ದಾರೆ. ಇದು ಮುಂಬರುವ ಲೋಕಸಭೆ ಚುನಾವಣೆಯ ಪೂರ್ವಸಿದ್ಧತೆಯಂತೆ ಕಾಣುತ್ತಿದೆ ಎಂದು ಮಿರ್ಜಾನ್ ನ ಜಮಾಅತುಲ್ ಮುಸ್ಲಿಮೀನ್ ಅಧ್ಯಕ್ಷ ಇಬ್ರಾಹೀಮ್ ಬದ್ರದ್ದೀನ್ ಶೇಕ್ ಆರೋಪಿಸಿದ್ದಾರೆ.

ಇತ್ತಿಚೆಗೆ ಖಬರಸ್ತಾನ ಭೂಮಿಗೆ ಸಂಬಂಧಿಸಿದಂತೆ  ಮಿರ್ಜಾನ್ ಪಂಚಾಯತ್ ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಗಣೇಶ್ ಅಂಬಿಗ ಎನ್ನುವವರು ವಿವಾದವನ್ನು ಸೃಷ್ಟಿಸಿದ್ದು ಮುಸ್ಲಿಮರು ತಮ್ಮ ಸ್ಮಶಾನಕ್ಕಾಗಿ ಮಂಜೂರು ಮಾಡಿದ ಭೂಮಿಗಿಂತ ಹೆಚ್ಚಿನ ಸ್ಥಳವನ್ನು ಅತಿಕ್ರಮಿಸಿಕೊಂಡು ಸಮಾಧಿಗಳನ್ನು ಅಗೆಯಲಾಗುತ್ತಿದೆ, ಇದನ್ನು ಸಹಿಸುವುದಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಇದು ಹಿಂದು-ಮುಸ್ಲಿಮ್ ಘರ್ಷಣೆಗೆ ಕಾರಣವಾಗಿದ್ದು ಕೂಡಲೆ ಮಧ್ಯಪ್ರವೇಶಿಸಿದ ಕುಮಟಾ ತಹಸಿಲ್ದಾರ್ ಸತೀಶ್ ಗೌಡ ಎರಡೂ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ತಿಳಿ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಜಮಾಅತುಲ್ ಮುಸ್ಲಿಮೀನ್ ಅಧ್ಯಕ್ಷ ಇಬ್ರಾಹೀಮ್ ಬದ್ರುದ್ದೀನ್ ಶೇಕ್, ೧೯೩೨ ರಿಂದಲೂ ಸ.ನಂ ೩೨೮ ರಲ್ಲಿನ ೯ ಎಕರೆ ೧೨ ಗುಂಟೆ ಜಾಗದಲ್ಲಿ ಮುಸ್ಲಿಮರ ಸ್ಮಶಾನ ಹಾಗೂ ದರ್ಗಾ ಇದ್ದು ಅಲ್ಲಿ ಪ್ರತಿ ವರ್ಷ ಉರುಸು ಮತ್ತಿತರ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆ ಸಯಮದಲ್ಲಿ ಕಂದಾಯ ಅಧಿಕಾರಿಗಳು ಖಬಸ್ತಾನ ಬದಲು ’ಗೋರಸ್ತಾನ’ ಎಂಬ ಪದವನ್ನು ನಮೂದಿಸಿದ್ದಾರೆ. ೨೦೦೩ರಲ್ಲಿ ಆಗಿನ ಜಿಲ್ಲಾಧಿಕಾರಿಗಳು ಖಬಸ್ಥಾನಕ್ಕೆ ಸುತ್ತಲೂ ಕಂಪೌಂಡ್ ಕಟ್ಟಲು ಪರವಾನಿಗೆಯನ್ನು ನೀಡಿದ್ದಾರೆ. ಅಂದಿನಿಂದ ಇಲ್ಲಿಯ ತನಕ ಯಾವುದೇ ಸಮಸ್ಯೆ ಉಂಟಾಗಿದಿಲ್ಲ. ಕಳೆದ ಎರಡು ಮೂರು ವರ್ಷಗಳ ಹಿಂದೆ ಕೆಲ ಸಮಾಜಘಾತುಕರು ಗೋರಸ್ತಾನ ಅಂದರೆ ಗೋರಕ್ಷಣೆಯ ಸ್ಥಾನ ಎಂದು ಜನರಲ್ಲಿ ಬಿಂಬಿಸಿ ತಗಾದೆಯನ್ನು ತೆಗೆದು ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಅಧಿಕಾರಿಗಳು ೧೯೬೬ರ ಪೂರ್ವದಲ್ಲಿ ವಕ್ಫ್ ಬೋರ್ಡ್‌ನಲ್ಲಿ ಖಬರಸ್ಥಾನ ಎಂದು ನಮೂದಿಸಿದ್ದು ೧೯೭೬-೭೭ ರ ಗೆಜೆಟ್ ನಲ್ಲಿ ಇದು ಪ್ರಕಟಗೊಂಡಿದೆ ಎಂದು ತಿಳಿಸಿ ಇದು ಮುಸ್ಲಿಮರಿಗೆ ಸೇರಿದ ಸ್ಥಳವೆಂದು ಆದೇಶಿಸಿ ಅರ್ಜಿಯನ್ನು ವಜಾಗೊಳಿಸಿದ್ದರು. ಇದು ಸಕಾಕಾರದ ಜಮೀನು ಅಲ್ಲ. ಇದು ಮುಸ್ಲಿಮರ ಖಬರಸ್ಥಾನಕ್ಕೆ ಸೇರಿದ ಆಸ್ತಿ. ಇದರ ಕಂಪೌಂಡ್ ನಿರ್ಮಾಣಕ್ಕೆಂದು ೨ಲಕ್ಷ ರೂ ಕೂಡ ಬಿಡುಗಡೆಗೊಂಡಿದೆ.  ಆದರೆ ಈಗ ಲೋಕಸಭೆ ಚುನಾವಣೆಯ ಪೂರ್ವದಲ್ಲಿ ಇಂತಹ ವಿವಾದ ಹುಟ್ಟುಹಾಕಿ ರಾಜಕೀಯ ಲಾಭ ಪಡೆಯಲು ಸಂಘಪರಿವಾರ ಹುನ್ನಾರ ನಡೆಸಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕೆಳದ ಎರಡು ಮೂರು ದಿನಗಳ ಹಿಂದೆ ಗೋರಿಗಳನ್ನು ಅಗೆಯುವಾಗ ಬಿಜೆಪಿ ಸಂಘಪರಿವಾರದ ಮುಖಂಡರು ಜನರನ್ನು ಸೇರಿಸಿ ಇದನ್ನು ವಿರೋಧವ ವ್ಯಕ್ತಪಡಿಸಿ ಹಿಂದು-ಮುಸ್ಲಿಮ್ ಘರ್ಷಣೆಗೆ ಕಾರಣರಾಗಿದ್ದಾರೆ. ನಾವು ಎಲ್ಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಮತ್ತೇ ಮುಂದೆ ಇಂತಹ ಘರ್ಷಣೆಗೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಇಲ್ಲಿನ ಹಿಂದು-ಮುಸ್ಲಿಮರ ಸೌಹಾರ್ದತೆಗೆ ಧಕ್ಕೆ ತರುವಂತಹ ಸಮಾಜಘಾತುಕರಿಗೆ ತಕ್ಕ ಪಾಠ ಕಲಿಸಬೇಕೆಂದು ಇಬ್ರಾಹೀಮ್ ರವರು ತಿಳಿಸಿದ್ದಾರೆ.

ಈ ಕುರಿತಂತೆ ಕುಮಟಾ ತಹಸಿಲ್ದಾರ್ ಸತೀಶ್ ಗೌಡರನ್ನು ಸಂಪರ್ಕಿಸಿದ್ದು, ಅವರು ನೇರವಾಗಿ ಮಿರ್ಜಾನ್ ಖಬರಸ್ತಾನ್ ಭೂಮಿಯೂ  ಮುಸ್ಲಿಮರ ಅಧೀನಕ್ಕೊಳಪಟ್ಟಿದೆ. ಮೂಲ ದಾಖಲೆಗಳಲ್ಲಿ ಗೋರಸ್ತಾನ ಎಂದು ನಮೂದಾಗಿದೆ ಇದನ್ನು ವಿರೋಧಿಸುವವರು ಇದು ಗೋರಕ್ಷಣೆ ಸ್ಥಳ ಎಂದು ಹೇಳುತ್ತಿದ್ದಾರೆ. ಆದರೆ ಇದು ಸರಿಯಲ್ಲಿ ಗೋರಸ್ತಾನ ಎಂದರೆ ಖಬರಸ್ತಾನ ಎಂದು ಅರ್ಥ. ಮುಸ್ಲಿಮರು ಯಾವುದೇ ಅತಿಕ್ರಮಣ ಮಾಡಿಲ್ಲ. ವಕ್ಫ್ ಬೋರ್ಡ್‌ನಿಂದ ಮಂಜೂರಿಯಾಗಿರುವ ೯.೧೨ ಗುಂಟೆಯ ಒಳಗೆ ಇದ್ದಾರೆ. ಇದನ್ನು ಸರ್ವೆ ಮಾಡಿ ಗಡಿ ಗುರುತಿಸುವ ಕಾರ್ಯ ಆಗಬೇಕು. ಈಗ ಪ್ರಕರಣ ಕೋರ್ಟಿನಲ್ಲಿರುವುದರಿಂದ ವಿಳಂಬವಾಗಿದೆ. ಇಲ್ಲಿ ಯಾವುದೇ ಅತಿಕ್ರಮಣ ನಡೆದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

 

 

 

Read These Next