ಕೈರೋ: ನಿರಾಶ್ರಿತರಿದ್ದ ಹಡಗು ಮುಳುಗಡೆ - ಕನಿಷ್ಟ 43 ಜನರ ಸಾವು, 400 ಜನ ನಾಪತ್ತೆ

Source: vb | By Arshad Koppa | Published on 23rd September 2016, 12:21 PM | Global News |

ಕೈರೋ, ಸೆ. ೨೨: ಸುಮಾರು ೬೦೦ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಹಡಗೊಂದು ಈಜಿಪ್ಟ್ ಕರಾವಳಿ ಮೆಡಿಟರೇನಿಯನ್ ಸಮುದ್ರದಲ್ಲಿ ಬುಧವಾರ ಮುಳುಗಿದ್ದು, ಕನಿಷ್ಠ ೪೩ ಮಂದಿ ಮೃತಪಟ್ಟಿದ್ದಾರೆ.

ಈಜಿಪ್ಟ್‌ನ ಬೆಹೈರ ರಾಜ್ಯದ ಬುರ್ಗ್ ರಶೀದ್ ಎಂಬ ಗ್ರಾಮದ ಕರಾವಳಿಯಲ್ಲಿ ಹಡಗು ಮುಳುಗಿದೆ. ೪೩ ದೇಹಗಳನ್ನು ನೀರಿನಿಂದ ತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯಕರ್ತರು ಈವರೆಗೆ ೧೫೪ ಮಂದಿಯನ್ನು ಬದುಕಿಸಿದ್ದಾರೆ. ಅಂದರೆ, ೪೦೦ ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.  “ಹಡಗು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹೊತ್ತೊಯ್ದದ್ದು ಅದು ಮುಳುಗಲು ಕಾರಣ ಎಂಬುದಾಗಿ ಆರಂಭಿಕ ಮಾಹಿತಿ ತಿಳಿಸಿದೆ. ಹಡಗು ಒಂದು ಬದಿಗೆ ವಾಲಿತು ಹಾಗೂ ಜನರು ನೀರಿಗೆ ಬಿದ್ದರು" ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದರು. ಈಜಿಪ್ಟ್, ಎರಿಟ್ರಿಯ, ಸುಡಾನ್ ಮತ್ತು ಸೊಮಾಲಿ ನಿರಾಶ್ರಿತರನ್ನು ಹೊತ್ತುಕೊಂಡು ಹಡಗು ಯುರೋಪ್‌ನತ್ತ ಹೋಗುತ್ತಿತ್ತು. ಬುರ್ಗ್ ರಶೀದ್ ಗ್ರಾಮದಲ್ಲಿ ನೈಲ್ ನದಿಯು ಮೆಡಿಟರೇನಿಯನ್ ಸಮುದ್ರವನ್ನು ಸೇರುತ್ತದೆ. ಇಲ್ಲಿನ ತಟರಕ್ಷಣಾ ಪಡೆಯ ನಾಪತ್ತೆಯಾಗಿರುವ ಸಂಬಂಧಿಕರ ಸುದ್ದಿಗಾಗಿ ಡಝನ್‌ಗಟ್ಟಳೆ ಮಂದಿ ಕಾಯುತ್ತಿದ್ದರು. “ನನ್ನ ೧೬ ವರ್ಷದ ಸಹೋದರ ಮುಹಮ್ಮದ್‌ನನ್ನು ನೋಡದೆ ನಾನು ಇಲ್ಲಿಂದ ಹೋಗುವುದಿಲ್ಲ" ಎನ್ನುತ್ತಾ ರತಿಬಾ ಘೋನಿಮ್ ಎಂಬ ಮಹಿಳೆ ಅಳುತ್ತಿದ್ದರು. ಮುಹಮ್ಮದ್ ಅಲ್ಲೇ ಸಮೀಪದ ತನ್ನ ಬಡತನ ಪೀಡಿತ ಹಳ್ಳಿಯಿಂದ ಉತ್ತಮ ಬದುಕನ್ನು ಅರಸುತ್ತಾ ಯುರೋಪ್‌ಗೆ ಹೊರಟಿದ್ದರು. “ನಿನ್ನೆ ಮನೆಯಿಂದ ಹೊರಟವನು ಇಂದು ಶವವಾಗಿದ್ದಾನೆ. ಅವರು ಆತನ ಮೃತದೇಹವನ್ನು ಇನ್ನೂ ಪತ್ತೆಹಚ್ಚಿಲ್ಲ" ಎಂದು ಅವರು ಹೇಳಿದರು.

‘ರಕ್ಷಣಾ ಕಾರ್ಯಾಚರಣೆಗೆ ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಲಾಗುವುದು ಹಾಗೂ ದುರಂತಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಈಜಿಪ್ಟ್ ಪ್ರಧಾನಿ ಶರೀಫ್ ಇಸ್ಮಾಯೀಲ್ ಹೇಳಿದರು.
 

Read These Next